ಆನರ್‌ ಒಂಬತ್ತರ ಗಮ್ಮತ್ತು; ಹುವಾವೆ ಆನರ್‌ 9ಎಕ್ಸ್‌ ಫೋನು ಮಾರುಕಟ್ಟೆಗೆ…

Team Udayavani, Jan 20, 2020, 5:30 AM IST

ಹುವಾವೆಯ ಅಂಗ ಸಂಸ್ಥೆಯಾದ ಆನರ್‌ ಬ್ರ್ಯಾಂಡ್ ಅನೇಕ ತಿಂಗಳಿಂದ ಭಾರತದಲ್ಲಿ ಹೊಸ ಫೋನುಗಳನ್ನು ಬಿಡುಗಡೆ ಮಾಡಿರಲಿಲ್ಲ. ಹೊಸ ವರ್ಷದ ಮೊದಲ ತಿಂಗಳಲ್ಲಿ ಹೊಸದೊಂದು ಮೊಬೈಲ್‌ ಫೋನ್‌ ಬಿಡುಗಡೆ ಮಾಡಿದೆ. ಇದು ಮಿಡಲ್‌ ರೇಂಜ್‌ಗೆ ಸೇರಿದ್ದು, ಇದರ ಹೆಸರು ಆನರ್‌ 9ಎಕ್ಸ್‌.

ಹುವಾವೇ ಕಂಪೆನಿ ಆನರ್‌ ಬ್ರಾಂಡ್‌ನ‌ಡಿ ಆನ್‌ಲೈನ್‌ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡು ಫೋನ್‌ಗಳನ್ನು ತಯಾರಿಸುತ್ತಿದೆ. ಹುವಾವೇ ಮೊಬೈಲ್‌ಗ‌ಳು ಹೆಚ್ಚು ದರವನ್ನು ಹೊಂದಿದ್ದರೆ, ಆನರ್‌ ಮಧ್ಯಮ ವರ್ಗದವರ ಕೈಗೆಟುಕುವ ದರಕ್ಕೆ ಆರಂಭಿಕ, ಮಧ್ಯಮ ಮತ್ತು ಅತ್ಯುನ್ನತ ದರ್ಜೆಯ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದೆ. ಕಳೆದ ಅನೇಕ ತಿಂಗಳಿಂದ ಆನರ್‌ ಭಾರತಕ್ಕೆ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿರಲಿಲ್ಲ. ನೂತನ ವರ್ಷಾರಂಭದಲ್ಲಿ ಹೊಸ ಮಧ್ಯಮ ದರ್ಜೆಯ ಫೋನೊಂದನ್ನು ಇದೀಗ ಬಿಡುಗಡೆ ಮಾಡಿದೆ. ಇದರ ಹೆಸರು ಆನರ್‌ 9ಎಕ್ಸ್‌.

ಆನರ್‌ ಬ್ರಾಂಡ್‌ಗೆ ಹೆಸರು ತಂದುಕೊಟ್ಟದ್ದು ಎಕ್ಸ್‌ ಸರಣಿಯ ಫೋನುಗಳು ಎಂದರೆ ತಪ್ಪಾಗದು. ಅದರ ಆನರ್‌ 4ಎಕ್ಸ್‌ ಮೊಬೈಲ್‌ ಭಾರತದಲ್ಲಿ ಯಶಸ್ಸು ಕಂಡಿತು. ತದ ನಂತರ 5ಎಕ್ಸ್‌ ತನ್ನ ಭರ್ಜರಿ ರಕ್ಷಣಾತ್ಮಕ ಬಾಡಿಯ ಮೂಲಕ, 6ಎಕ್ಸ್‌ ಕ್ಯಾಮರಾ ಮೂಲಕ, 7ಎಕ್ಸ್‌ ಮತ್ತು 8ಎಕ್ಸ್‌ ಫೋನುಗಳು ಕ್ಯಾಮರಾ, ಪರದೆ, ಬ್ಯಾಟರಿ ಬಾಳಿಕೆ ಇತ್ಯಾದಿಗಳಿಂದಾಗಿ ಗ್ರಾಹಕರ ಮೆಚ್ಚುಗೆ ಗಳಿಸಿದ್ದವು. ಹೀಗಾಗಿಯೇ ಗ್ರಾಹಕರು 9ಎಕ್ಸ್‌ ಯಾವಾಗ ಬರುತ್ತದೆ ಎಂಬ ಪ್ರಶ್ನೆಯನ್ನು ಕಂಪೆನಿಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳುತ್ತಲೇ ಇದ್ದರು. ಇದಕ್ಕೆ ಉತ್ತರವಾಗಿ ಆನರ್‌ ಇದೀಗ 9 ಎಕ್ಸ್‌ ಅನ್ನು ಭಾರತಕ್ಕೆ ಪರಿಚಯಿಸಿದೆ. ಆರಂಭದಲ್ಲೇ ಇದರ ದರ ಹೇಳಿದರೆ ತಮ್ಮ ಬಜೆಟ್‌ಗೆ ಇದು ತಕ್ಕಧ್ದೋ ಇಲ್ಲವೋ ಎಂಬ ಗ್ರಾಹಕರ ಸಂದೇಹ ನಿವಾರಣೆಯಾಗುತ್ತದೆ.

ರೇಟ್‌ ಮತ್ತು ಆಫ‌ರ್‌
ಇದು ಎರಡು ಆವೃತ್ತಿಗಳನ್ನು ಹೊಂದಿದೆ. 4 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಒಂದು ಆವೃತ್ತಿ. 6 ಜಿಬಿ ರ್ಯಾಮ್‌ 128 ಜಿಬಿ ರ್ಯಾಮ್‌ನ ಇನ್ನೊಂದು ಆವೃತ್ತಿ. 4ಜಿಬಿ+128 ಜಿಬಿ ಆವೃತ್ತಿಯ ಬೆಲೆ 14 ಸಾವಿರ ರೂ. ಆದರೆ ಮೊದಲ ಮಾರಾಟದ ದಿನ ಅಂದರೆ ಜ.19ರಂದು 13 ಸಾವಿರಕ್ಕೆ ದೊರಕುತ್ತದೆ. ಅಲ್ಲದೇ ಅಂದು ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಅಥವಾ ಕೊಟ್ಯಾಕ್‌ ಬ್ಯಾಂಕಿನ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮೂಲಕ ಕೊಂಡರೆ ಮತ್ತೆ ಶೇ. 10ರಷ್ಟು ರಿಯಾಯಿತಿ ದೊರಕುತ್ತದೆ. ಮತ್ತೆ 6ಜಿಬಿ+128 ಜಿಬಿ ಆವೃತ್ತಿಯ ಬೆಲೆ 17 ಸಾವಿರ ರೂ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯ. ಇದು ಜ. 19ರಿಂದ ಮಾರಾಟಕ್ಕೆ ದೊರಕಲಿದೆ. 13 ಸಾವಿರ ರೂ. ದರಕ್ಕೆ 4 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ ನೀಡಿರುವುದು ಉತ್ತಮ ಅಂಶ ಎನ್ನಲಡ್ಡಿಯಿಲ್ಲ.

ಪಾಪ್‌ಅಪ್‌ ಕ್ಯಾಮರಾ ಸ್ಪೆಷಲ್‌
13 ಸಾವಿರ ರೂ. ದರದ ಫೋನಿನಲ್ಲಿ ಪಾಪ್‌ ಅಪ್‌ (ಮೇಲೆ ಚಿಮ್ಮುವ) ಕ್ಯಾಮರಾ ಇರುವುದು ಇದರ ವಿಶೇಷ. ಸಾಮಾನ್ಯವಾಗಿ ಸೆಲ್ಫಿà ಪಾಪ್‌ ಅಪ್‌ ಕ್ಯಾಮರಾ 20 ಸಾವಿರ ರೂ. ಮೇಲಿನ ಅಥವಾ ಆಸುಪಾಸಿನ ದರದ ಫೋನಿನಲ್ಲಿ ಇರುತ್ತದೆ. ಪಾಪ್‌ಅಪ್‌ ಕ್ಯಾಮರಾ ಇರುವುದರಿಂದ ಒಂದು ಅನುಕೂಲವೆಂದರೆ ಪರದೆಯ ಪೂರ್ತಿ ವೀಕ್ಷಣೆ ದೊರಕುತ್ತದೆ. ಮಧ್ಯದಲ್ಲಿ ಅಥವಾ ಅಂಚಿನಲ್ಲಿ ಮುಂಬದಿ ಕ್ಯಾಮರಾಕ್ಕಾಗಿ ಯಾವುದೇ ನಾಚ್‌ ಇರುವುದಿಲ್ಲ. ಇದರ ಸೆಲ್ಫಿà ಕ್ಯಾಮರಾ 16 ಮೆಗಾಪಿಕ್ಸಲ್‌ ಇದೆ.
ಹಿಂಬದಿಯಲ್ಲಿ ಮೂರು ಕ್ಯಾಮರಾ ಸೆಟಪ್‌ ಇದೆ. ಮುಖ್ಯ ಕ್ಯಾಮರಾ 48 ಮೆಗಾಪಿಕ್ಸಲ್‌ ಹೊಂದಿದೆ. 8 ಮೆಗಾಪಿಕ್ಸಲ್‌ ಅಲ್ಟ್ರಾ ವೈಡ್‌ ಕ್ಯಾಮರಾ, 2ಮೆ.ಪಿ. ಡೆಪ್ತ್ ಸೆನ್ಸರ್‌ ಕ್ಯಾಮರಾ ಇದೆ. ಇದರಲ್ಲಿರುವುದು ಹುವಾವೇ ಅವರದೇ ತಯಾರಿಕೆಯಾದ ಹೈಸಿಲಿಕಾನ್‌ ಕಿರಿನ್‌ 710ಎಫ್ ಎಂಟು ಕೋರ್‌ಗಳುಳ್ಳ ಪ್ರೊಸೆಸರ್‌. ಇದು 2.2 ಗಿ.ಹ. ವೇಗ ಹೊಂದಿದೆ. ಇದಕ್ಕೆ ಇಎಂಯುಐ 9.0 ಇಂಟರ್‌ಫೇಸ್‌ ನೀಡಲಾಗಿದೆ. ಇದರ ಪರದೆ 6.59 ಇಂಚಿದೆ. ಫ‌ುಲ್‌ ಎಚ್‌ಡಿ ಪ್ಲಸ್‌ ರೆಸಲ್ಯೂಷನ್‌ (1080ಗಿ2340) 391 ಪಿಪಿಐ ಹೊಂದಿದೆ. ಪರದೆ ಐಪಿಎಸ್‌ ಎಲ್‌ಸಿಡಿ ಹೊಂದಿದೆ. ಆನರ್‌ನ ಬಹುತೇಕ ಫೋನ್‌ಗಳಲ್ಲಿ ಅಮೋಲೆಡ್‌ ಪರದೆ ಇರುವುದಿಲ್ಲ. ಅದೊಂದು ಕೊರತೆ ಇದ್ದೇ ಇದೆ.

ಹೈಬ್ರಿಡ್‌ ಸಿಮ್‌ ಸ್ಲಾಟ್‌
ಇದು 4000 ಎಂಎಎಚ್‌ ಬ್ಯಾಟರಿ ಹೊಂದಿದೆ. ಯುಎಸ್‌ಬಿ ಟೈಪ್‌-ಸಿ ಪೋರ್ಟ್‌ ಹೊಂದಿದೆ. ಎರಡು ಸಿಮ್‌ ಹಾಕಿಕೊಳ್ಳಬಹುದಾಗಿದ್ದು, ಎರಡೂ ಸಿಮ್‌ ಸ್ಲಾಟ್‌ಗಳಲ್ಲಿ 4ಜಿ ವೋಲ್ಟ್ ಸೌಲಭ್ಯ ಇದೆ. ಇದರಲ್ಲಿ ಎರಡು ಸಿಮ್‌ ಕಾರ್ಡ್‌ ಮಾತ್ರ ಹಾಕಿಕೊಳ್ಳಬಹುದು. ಒಂದು ಸಿಮ್‌ ಹಾಕಿಕೊಂಡು ಇನ್ನೊಂದರಲ್ಲಿ ಮೆಮೊರಿ ಕಾರ್ಡ್‌ ಹಾಕಿಕೊಳ್ಳಬಹುದು. ಎರಡು ಸಿಮ್‌ ಹಾಕಿಕೊಂಡು, ಮೆಮೊರಿ ಕಾರ್ಡ್‌ ಅನ್ನೂ ಹಾಕಿಕೊಳ್ಳಲಾಗುವುದಿಲ್ಲ. ಮೊಬೈಲ್‌ ಫೋನ್‌ ಪರಿಭಾಷೆಯಲ್ಲಿ ಇದು ಹೈಬ್ರಿಡ್‌ ಸಿಮ್‌ ಸ್ಲಾಟ್‌. ಬೆರಳಚ್ಚು ಸ್ಕ್ಯಾನರ್‌ ಫೋನಿನ ಹಿಂಬದಿಯಲ್ಲಿದೆ.

ಇವೆಲ್ಲಾ ಇರಬೇಕಿತ್ತು
ಈ ಫೋನು ಭಾರತಕ್ಕೆ ಬಿಡುಗಡೆಯಾಗಿರುವುದು ಬಹಳ ತಡವೆಂದೇ ಹೇಳಬಹುದು. ಪಾಪ್‌ ಅಪ್‌ ಕ್ಯಾಮರಾ ಯಾಕೋ ಬೇಸರವಾಗಿ ದೊಡ್ಡ ಮೊಬೈಲ್‌ಗ‌ಳೇ (ಉದಾ: ಒನ್‌ಪ್ಲಸ್‌ 8) ಈಗ ಪಂಚ್‌ ಹೋಲ್‌ ಕ್ಯಾಮರಾದೊಂದಿಗೆ ಬರುತ್ತಿವೆ. ಈಗ ಆನರ್‌ 9ಎಕ್ಸ್‌ ಪಾಪ್‌ಅಪ್‌ ಕ್ಯಾಮರಾ ಎಂದು ಪ್ರಚಾರ ಮಾಡಿಕೊಳ್ಳುತ್ತಿದೆ. ಇನ್ನು ಇದರಲ್ಲಿ 48 ಮೆಗಾಪಿಕ್ಸಲ್‌ ಮೂರು ಲೆನ್ಸ್‌ಗಳ ಕ್ಯಾಮರಾ ಇದೆ. ರೆಡ್‌ಮಿ ನೋಟ್‌ 8 ಪ್ರೊ ಆಗಲೇ 64 ಮೆಗಾಪಿಕ್ಸಲ್‌ 4 ಲೆನ್ಸ್‌ಗಳ ಕ್ಯಾಮರಾ ಹೊರತಂದಿದೆ. ಸಾಮಾನ್ಯವಾಗಿ ಆನರ್‌ ಬ್ರಾಂಡಿನ ಮಧ್ಯಮ ದರ್ಜೆಯ ಫೋನ್‌ಗಳು ಲೋಹದ ದೇಹ ಅಥವಾ ಗಾಜಿನ ದೇಹ ಹೊಂದಿರುತ್ತಿದ್ದವು. ಆದರೆ ಇದರಲ್ಲಿ ಪ್ಲಾಸ್ಟಿಕ್‌ ದೇಹ ಇದೆ. ರಿಯಲ್‌ಮಿಯವರ ಚಾಳಿ ಆನರ್‌ಗೂ ಬೀಸಿದಂತಿದೆ. ಸ್ಯಾಮ್‌ಸಂಗ್‌ನ ಕಡಿಮೆ ದರದ ಫೋನುಗಳಲ್ಲೂ ಅಮೋಲೆಡ್‌ ಪರದೆ ಇರುತ್ತದೆ. ಇದರಲ್ಲಿ ಅಮೋಲೆಡ್‌ ಪರದೆ ಇಲ್ಲ. ಐಪಿಎಸ್‌ ಎಲ್‌ಸಿಡಿ ಪರದೆ ಇದೆ.

– ಕೆ.ಎಸ್‌.ಬನಶಂಕರ ಆರಾಧ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ