ನಂ.1 ಸ್ಯಾಮ್‌ಸಂಗ್‌ನ ಸನಿಹಕ್ಕೆ ಬಂದು ನಿಂತ ಹುವಾವೇ

ಮೊಬೈಲು ಸೀಮೆ

Team Udayavani, May 13, 2019, 6:30 AM IST

ಪ್ರಪಂಚದಾದ್ಯಂತ 2019ರ ಪ್ರಥಮ ತ್ತೈಮಾಸಿಕದಲ್ಲಿ ಸ್ಮಾರ್ಟ್‌ ಫೋನ್‌ಗಳ ಮಾರಾಟದಲ್ಲಿ ಉಂಟಾಗಿರುವ ಪ್ರಗತಿ, ಕುಸಿತದ ಅಂಕಿಅಂಶಗಳನ್ನು ಅಮೆರಿಕಾದ ಐಡಿಸಿ ಸಂಸ್ಥೆ ಬಿಡುಗಡೆಗೊಳಿಸಿದೆ. ಒಟ್ಟಾರೆ ಸ್ಮಾರ್ಟ್‌ಫೋನ್‌ ಮಾರಾಟ ಶೇ. 6.6 ರಷ್ಟು ಕುಸಿತ ಕಂಡಿದ್ದು, ಹುವಾವೇ ಶೇ. 50ರಷ್ಟು ಪ್ರಗತಿ ಸಾಧಿಸುವ ಮೂಲಕ ಮೊದಲ ಸ್ಥಾನದಲ್ಲಿರುವ ಸ್ಯಾಮ್‌ಸಂಗ್‌ನ ಸನಿಹಕ್ಕೆ ಬಂದು ನಿಂತಿದೆ. ಸ್ಯಾಮ್‌ ಸಂಗ್‌ ಶೇ. 8.1ರಷ್ಟು ಕುಸಿತ ಕಂಡಿದೆ.

ಎಲ್ಲ ಕ್ಷೇತ್ರಗಳಂತೆ ಮೊಬೈಲ್‌ ಫೋನ್‌ ಉದ್ಯಮದಲ್ಲೂ ಪ್ರತಿ ಮೂರು ತಿಂಗಳಿಗೊಮ್ಮೆ ವಿವಿಧ ಕಂಪೆನಿಗಳಲ್ಲಿ ಆಗುವ ಮಾರಾಟ ಪ್ರಮಾಣವನ್ನು ಅಳೆದು ಯಾವ ಕಂಪೆನಿ ಎಷ್ಟು ಪ್ರಮಾಣದ ಬೆಳವಣಿಗೆ ಸಾಧಿಸಿದೆ? ಯಾವುದರ ಮಾರಾಟ ಕುಗ್ಗಿದೆ? ಎಂಬುದನ್ನು ಕೆಲವು ಸಮೀಕ್ಷಾ ಸಂಸ್ಥೆಗಳು ಅಂಕಿ ಅಂಶಗಳ ಸಮೇತ ಪ್ರಕಟಿಸುತ್ತವೆ. ಅಂಥ ಸಂಸ್ಥೆಗಳಲ್ಲಿ ಪ್ರಮುಖವಾದುದು ಅಮೆರಿಕಾದ ಇಂಟರ್‌ ನ್ಯಾಷನಲ್‌ ಡಾಟಾ ಕಾರ್ಪೊರೇಷನ್‌ (ಐಡಿಸಿ). 1964ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಮಾಹಿತಿ ತಂತ್ರಜ್ಞಾನ, ಟೆಲಿಕಮ್ಯೂನಿಕೇಷನ್‌, ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯ ಅಂಕಿ ಅಂಶಗಳನ್ನು ವಿಶ್ಲೇಷಿಸುತ್ತದೆ.

ಜಗತ್ತಿನಾದ್ಯಂತ 110 ದೇಶಗಳಲ್ಲಿ 1,100 ವಿಶ್ಲೇಷಕರನ್ನು ಹೊಂದಿದೆ. ಈ ಸಂಸ್ಥೆ ಪ್ರತಿ ವರ್ಷದ ನಾಲ್ಕು ತ್ತೈಮಾಸಿಕಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಮಾರಾಟದಲ್ಲಾಗುವ ಬೆಳವಣಿಗೆಗಳನ್ನೂ ವಿಶ್ಲೇಷಿಸುತ್ತದೆ. ಜಗತ್ತಿನ ಮೊಬೈಲ್‌ ಮಾರಾಟದಲ್ಲಿ 2019ರ ಪ್ರಥಮ ತ್ತೈಮಾಸಿಕದಲ್ಲಿ ಕಂಪೆನಿಗಳ ಬೆಳವಣಿಗೆಯನ್ನು ಇದೀಗ ತಾನೇ ಪ್ರಕಟಿಸಿದೆ.

2019ನೇ ವರ್ಷದ ಪ್ರಥಮ ತ್ತೈಮಾಸಿಕದಲ್ಲಿ ವಿಶ್ವದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಮಾರಾಟ 2018ರ ಪ್ರಥಮ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ. 6.6 ರಷ್ಟು ಕುಸಿತ ಕಂಡಿದೆ. ನಾಲ್ಕು ಪ್ರಮುಖ ಕಂಪೆನಿಗಳ ಮಾರಾಟ ಸಹ ಕುಸಿತ ಕಂಡಿದ್ದು, ಹುವಾವೇ ಕಂಪೆನಿ ಮಾತ್ರ ಶೇ. 50ರಷ್ಟು ಗಣನೀಯ ಪ್ರಗತಿ ಸಾಧಿಸಿದೆ.

ಈಗಲೂ ಸ್ಯಾಮ್‌ ಸಂಗ್‌ ನಂ. 1 ಆದರೆ ಬೆಳವಣಿಗೆ ಕುಸಿತ: ಐಡಿಸಿಯ ವರದಿ ಪ್ರಕಾರ, ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುವ ಕೊರಿಯಾದ ಸ್ಯಾಮ್‌ಸಂಗ್‌ ಕಂಪೆನಿ 2019ರ ಪ್ರಥಮ ತ್ತೈಮಾಸಿಕದಲ್ಲೂ ಸಹ ನಂ. 1 ಸ್ಥಾನವನ್ನೇ ಕಾಯ್ದುಕೊಂಡಿದೆ. ಅದು ಈ ಮೂರು ತಿಂಗಳಲ್ಲಿ 71.9 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದ್ದು, ಶೇ. 23.1 ರಷ್ಟು ಮಾರುಕಟ್ಟೆ ಹೊಂದಿದೆ. ಆದರೆ, ಅದರ ಮಾರಾಟ ಶೇ. 8.1ರಷ್ಟು ಕುಸಿತ ಕಂಡಿದೆ. ಕಳೆದ 2018ರ ಪ್ರಥಮ ತ್ತೈಮಾಸಿಕದಲ್ಲಿ ಸ್ಯಾಮ್‌ಸಂಗ್‌ 78.2 ದಶಲಕ್ಷ ಸ್ಮಾರ್ಟ್‌ ಫೋನ್‌ಗಳನ್ನು ಮಾರಾಟ ಮಾಡಿದ್ದು, ಶೇ. 23.5ರಷ್ಟು ಮಾರುಕಟ್ಟೆ ಪಾಲು ಹೊಂದಿತ್ತು.

ಶೇ. 50ರಷ್ಟು ಬೆಳೆವಣಿಗೆ ದಾಖಲಿಸಿ 2ನೇ ಸ್ಥಾನದಲ್ಲಿ ಹುವಾವೇ: ಕಳೆದ ವರ್ಷ ಮೊಬೈಲ್‌ ಮಾರಾಟದಲ್ಲಿ ಆಪಲ್‌ ಕಂಪೆನಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಚೀನಾ ಮೂಲದ ಹುವಾವೇ 2ನೇ ಸ್ಥಾನವನ್ನು ಕಾಯ್ದುಕೊಳ್ಳು­ವುದರ ಜೊತೆಗೆ ಶೇ. 50ರಷ್ಟು ಪ್ರಗತಿ ಸಾಧಿಸಿದೆ. ಈ ವರ್ಷದ ಪ್ರಥಮ ಮೂರು ತಿಂಗಳಲ್ಲಿ ಅದು 59.1 ದಶಲಕ್ಷ ಫೋನ್‌ಗಳನ್ನು ಪ್ರಪಂಚಾದ್ಯಂತ ಮಾರಾಟ ಮಾಡಿದೆ.

ಅದರ ಮಾರುಕಟ್ಟೆ ಪಾಲು ಶೇ. 19. 2018ರ ಪ್ರಥಮ ತ್ತೈಮಾಸಿಕದಲ್ಲಿ ಹುವಾವೇ 39.3 ದಶಲಕ್ಷ ಫೋನ್‌ಗಳನ್ನು ಮಾರಿತ್ತು! ಮತ್ತು ಅದರ ಮಾರುಕಟ್ಟೆ ಪಾಲು ಆಗ ಶೇ. 11.8ರಷ್ಟಿತ್ತು! ಒಂದೇ ವರ್ಷದಲ್ಲಿ ಹುವಾವೇ ಶೇ. 50.3ರಷ್ಟು ಬೆಳವಣಿಗೆ ಸಾಧಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಸ್ಯಾಮ್‌ ಸಂಗ್‌ ಮತ್ತು ಹುವಾವೇ ನಡುವೆ ಮೊದಲ ಸ್ಥಾನಕ್ಕೆ ಈಗ ಶೇ. 4ರಷ್ಟು ಮಾತ್ರ ಅಂತರವಿದೆ!

ಇನ್ನು ಅಮೆರಿಕಾದ ಆಪಲ್‌ ಕಂಪೆನಿ ಮೂರನೇ ಸ್ಥಾನವನ್ನು ಕಾಯ್ದುಕೊಂಡಿದ್ದು, ಈ ವರ್ಷದ ಪ್ರಥಮ ತ್ತೈಮಾಸಿಕದಲ್ಲಿ 36.4 ದಶಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿದೆ. ಅದರ ಈಗಿನ ಮಾರುಕಟ್ಟೆ ಪಾಲು ಶೇ. 11.7 ಆಗಿದೆ. 2018ರ ಪ್ರಥಮ ತ್ತೈಮಾಸಿಕದಲ್ಲಿ ಅದು 52.2 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿತ್ತು. ಆಗ ಅದರ ಮಾರುಕಟ್ಟೆ ಪಾಲು ಶೇ. 15.7 ಆಗಿತ್ತು. ಆಪಲ್‌ ಫೋನ್‌ಗಳ ಮಾರಾಟ ಶೇ.30.2 ರಷ್ಟು ಕುಸಿತ ಕಂಡಿದೆ.

ನಾಲ್ಕನೇ ಸ್ಥಾನದಲ್ಲಿ ಚೀನಾ ಮೂಲದ ಶಿಯೋಮಿ ಇದ್ದು, ಈ ವರ್ಷದ ತ್ತೈಮಾಸಿಕದಲ್ಲಿ 25 ದಶಲಕ್ಷ ಫೋನ್‌ಗಳನ್ನು ಜಗತ್ತಿನಾದ್ಯಂತ ಮಾರಿದೆ. ಶೇ. 8ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಕಳೆದ ವರ್ಷದ ಪ್ರಥಮ ತ್ತೈಮಾಸಿಕದಲ್ಲಿ ಅದು 27.8 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿ, ಶೇ. 8.4 ಮಾರುಕಟ್ಟೆ ಪಾಲು ಹೊಂದಿತ್ತು. ಶಿಯೋಮಿ ಸಹ ಮಾರಾಟದಲ್ಲಿ ಶೇ. 10.2ರಷ್ಟು ಕುಸಿತ ಕಂಡಿದೆ.

ಚೀನಾದ ವಿವೋ ಕಂಪೆನಿ ಈ ವರ್ಷದ ಪ್ರಥಮ ಮೂರು ತಿಂಗಳಲ್ಲಿ 23.2 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದೆ, ಇದರ ಮಾರುಕಟ್ಟೆ ಪಾಲು ಶೇ. 7.5 ರಷ್ಟಿದೆ. ವಿವೋ ಸಹ ಉತ್ತಮ ಪ್ರಗತಿ ಸಾಧಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 18.7 ದಶಲಕ್ಷ ಫೋನ್‌ಗಳನ್ನು ಮಾರಿತ್ತು, ಶೇ. 5.6 ಮಾರುಕಟ್ಟೆ ಪಾಲು ಹೊಂದಿತ್ತು. ಅದು ಶೇ. 24ರಷ್ಟು ಪ್ರಗತಿ ದಾಖಲಿಸಿದೆ.

ವಿವೋದ ಸಹೋದರ ಕಂಪೆನಿ ಒಪ್ಪೋ ಶೇ. 6ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಅದು ಈ ವರ್ಷದ ಮೂರು ತಿಂಗಳಲ್ಲಿ 23.1 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿದೆ. ಮಾರುಕಟ್ಟೆ ಪಾಲು 7.4 ರಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 24.6 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿತ್ತು.

ಇನ್ನುಳಿದ ಎಲ್ಲ ಕಂಪೆನಿಗಳೂ ಸೇರಿ ಈ ವರ್ಷದ ಪ್ರಥಮ ಮೂರು ತಿಂಗಳಲ್ಲಿ 72.1 ದಶಲಕ್ಷ ಫೋನ್‌ಗಳನ್ನು ಮಾರಾಟ ಮಾಡಿ ಶೇ. 23ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 91.9 ದಶಲಕ್ಷ ಫೋನ್‌ಗಳನ್ನು ಮಾರಿದ್ದವು. ಶೇ. 27.6ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದವು. ಆ ಇತರೆ ಕಂಪೆನಿಗಳು ಶೇ. 21.5ರಷ್ಟು ಕುಸಿತ ಕಂಡಿವೆ.

ಒಟ್ಟಾರೆ, ಈ ವರ್ಷ ಪ್ರಥಮ ತ್ತೈಮಾಸಿಕದಲ್ಲಿ 310.8 ದಶಲಕ್ಷ ಸ್ಮಾರ್ಟ್‌ಫೋನ್‌ಗಳು ಪ್ರಪಂಚಾದ್ಯಂತ ಮಾರಾಟವಾಗಿವೆ. ಕಳೆದ ವರ್ಷದ ಪ್ರಥಮ ತ್ತೈಮಾಸಿಕದಲ್ಲಿ 332.7 ದಶಲಕ್ಷ ಫೊನ್‌ಗಳು ಮಾರಾಟವಾಗಿದ್ದವು. ಒಟ್ಟಾರೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆ 6.6ರಷ್ಟು ಕುಸಿತ ಕಂಡಿದೆ.

ಸ್ಯಾಮ್‌ ಸಂಗ್‌ ಹಿಂದಿಕ್ಕಿ ನಂ.1 ಸ್ಥಾನದತ್ತ ಧಾವಿಸುತ್ತಿರುವ ಹುವಾವೇ: ಮೊಬೈಲ್‌ ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ಸ್ಯಾಮ್‌ ಸಂಗ್‌ ಮತ್ತು ಎರಡನೇ ಸ್ಥಾನದಲ್ಲಿರುವ ಹುವಾವೇ ನಡುವೆ ಪ್ರಸ್ತುತ ಶೇ. 4ರಷ್ಟು ಮಾತ್ರ ಅಂತರವಿದೆ. ಹುವಾವೆಯೇ ಈ ಯಶಸ್ಸಿಗೆ ಹುವಾವೇಯ ಫ್ಲಾಗ್‌ ಶಿಪ್‌ ಫೋನ್‌ಗಳು ಮತ್ತು ಆನರ್‌ ಬ್ರಾಂಡ್‌ನ‌ಡಿ ಬರುವ ಮಿತವ್ಯಯ ದರದ ಸ್ಮಾರ್ಟ್‌ಫೋನ್‌ಗಳ ಯಶಸ್ಸು ಕಾರಣವಾಗಿದೆ ಎಂದು ಐಡಿಸಿ ಅಭಿಪ್ರಾಯಪಟ್ಟಿದೆ.

ಅಲ್ಲದೇ ಹುವಾವೇ ಫೋನ್‌ಗಳಲ್ಲಿ ಕ್ಯಾಮರಾ ವಿಭಾಗದಲ್ಲಿ ಪ್ರತಿ ಬಾರಿ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಅಲ್ಲದೇ ಅದರ ಎಮೋಷನ್‌ ಯುಐ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಉತ್ತಮ ಹೊಸ ಅಂಶಗಳನ್ನು ಅಳವಡಿಸುತ್ತಲೇ ಇದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಕಡಿಮೆ ರಿಪೇರಿಗೆ ಬರುವಂಥ ಫೋನ್‌ಗಳನ್ನು ಕೊಡುತ್ತಿರುವುದು ಜಗತ್ತಿನಾದ್ಯಂತ ಅದರ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾದಲ್ಲಿ ಮಾರಾಟ ನಿಷೇಧವಿದ್ದಾಗ್ಯೂ ಯಶಸ್ಸು!: ಹುವಾವೇ ಮೊಬೈಲ್‌ಗ‌ಳನ್ನು ಅಮೆರಿಕಾದಲ್ಲಿ ಮಾರಾಟ ಮಾಡದಂತೆ ಅಲ್ಲಿನ ಸರ್ಕಾರ ನಿರ್ಬಂಧ ವಿಧಿಸಿದೆ. ಆದರೂ ಯೂರೋಪ್‌, ಏಷ್ಯಾ, ಮಧ್ಯಪ್ರಾಚ್ಯ ಆಫ್ರಿಕಾ, ಲ್ಯಾಟಿನ್‌ ಅಮೆರಿಕಾ ಸೇರಿದಂತೆ ಜಗತ್ತಿನ 175 ದೇಶಗಳಲ್ಲಿ ವ್ಯಾಪಿಸಿರುವ ಮಾರಾಟದಿಂದಾಗಿ ಅದು ಈ ಯಶಸ್ಸು ಸಾಧಿಸಿದೆ. ಹುವಾವೇಯ ಈ ಯಶಸ್ಸು ಸ್ಯಾಮ್‌ಸಂಗ್‌ನ ನಿದ್ದೆಗೆಡಿಸಿರು­ವುದರಲ್ಲಿ ಯಾವುದೇ ಸಂಶಯವಿಲ್ಲ! ನಟರಿರಲಿ, ಕಂಪೆನಿಯಿರಲಿ, ರಾಜಕಾರಣಿ­ಯಿರಲಿ ನಂ. 1 ಸ್ಥಾನ ಉಳಿಸಿಕೊಳ್ಳುವುದು ಎಂದರೆ ಬಹಳ ಕಷ್ಟ ಕಷ್ಟ!

— ಕೆ.ಎಸ್‌. ಬನಶಂಕರ ಆರಾಧ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ