ಜಸ್ಟ್‌ ಕನ್ನಡ ಇದ್ದರೆ ಕನ್ನಡ ಟೈಪಿಂಗ್‌ ಸುಲಭ

Team Udayavani, Jun 23, 2019, 6:00 AM IST

ಫೇಸ್‌ಬುಕ್‌ನಲ್ಲಿ, ವಾಟ್ಸಪ್‌ನಲ್ಲಿ ಹಲವರು ಕನ್ನಡಿಗರು ಇಂಗ್ಲಿಷ್‌ನಲ್ಲೇ ತಮ್ಮ ಪೋಸ್ಟ್‌, ಕಾಮೆಂಟ್‌ ಹಾಕುವುದನ್ನು ನೋಡಿದ್ದೀರಿ. ಇದರಲ್ಲಿ ಕೆಲವರು ಕನ್ನಡದಲ್ಲಿ ಹಾಕಿದರೆ ತಮ್ಮ ಘನತೆಗೆ ಕುಂದು ಎಂದು ಪ್ರತಿಷ್ಠೆಗೆ ಇಂಗ್ಲಿಷ್‌ ಬಳಸುತ್ತಾರೆ. ಇನ್ನು ಕೆಲವರಿಗೆ ಕನ್ನಡ ಟೈಪ್‌ ಮಾಡಲು ಬರುವುದಿಲ್ಲ. ಅಂಥವರು ಇಂಗ್ಲಿಷ್‌ನಲ್ಲಿ ಅಥವಾ ಇಂಗ್ಲಿಷ್‌ ಅಕ್ಷರಗಳಲ್ಲಿಯೇ ಕನ್ನಡ ವಾಕ್ಯಗಳನ್ನು ಟೈಪ್‌ ಮಾಡುತ್ತಾರೆ. ಅದರ ಬದಲು ನಾಲ್ಕು ದಿನ ಶ್ರಮ ವಹಿಸಿದರೆ ಕನ್ನಡದಲ್ಲೇ ಟೈಪ್‌ ಮಾಡಬಹುದು.

ಕನ್ನಡದಲ್ಲಿ ಟೈಪ್‌ ಮಾಡಲು ಯಾವ ಆ್ಯಪ್‌ ಒಳ್ಳೆಯದು ಎಂಬ ಗೊಂದಲ ಹಲವರಿಗಿದೆ. ನಾನು ಎಲ್ಲರಿಗೂ ಶಿಫಾರಸು ಮಾಡುವುದು ಜಸ್ಟ್‌ ಕನ್ನಡ ಆ್ಯಪ್‌ ಬಳಸಿ ಎಂದು. ಎಲ್ಲ ರೀತಿಯ ಕನ್ನಡ ಆ್ಯಪ್‌ಗ್ಳಿಗೆ ಹೋಲಿಸಿದರೆ ಜಸ್ಟ್‌ ಕನ್ನಡದಲ್ಲಿ ಕಡಿಮೆ ಸ್ಟ್ರೋಕ್‌ಗಳನ್ನು (ಒತ್ತುವಿಕೆ) ಬಳಸಿ ಕನ್ನಡ ಟೈಪ್‌ ಮಾಡಬಹುದು.

ಈ ಆ್ಯಪ್‌ನಲ್ಲಿ ಕನ್ನಡ ಬೇಕಾದರೆ ಕನ್ನಡ, ಇಂಗ್ಲಿಷ್‌ ಬೇಕಾದರೆ ಇಂಗ್ಲಿಷ್‌ನಲ್ಲಿ ಒಂದೇ ಒಂದು ಕ್ಲಿಕ್‌ ಮಾಡುವ ಮೂಲಕ ಬದಲಿಸಿಕೊಳ್ಳಬಹುದು. ಇದುವರೆಗೆ 10 ಲಕ್ಷ ಜನರು ಇದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.

ಇದನ್ನು ಕನ್ನಡ ಟೈಪಿಂಗ್‌ ಕೀಲಿಮಣೆ (ಕೀಬೋರ್ಡ್‌) ಮಾದರಿಗೆ ಅತ್ಯಂತ ಸಮೀಪವಾಗಿ ವಿನ್ಯಾಸಗೊಳಿಸಲಾಗಿದೆ. ಕನ್ನಡ ಟೈಪಿಂಗ್‌ ಗೊತ್ತಿರುವವರಿಗೆ ಅಸಡಗ, ಲಕಜಹಜ ಚೆನ್ನಾಗಿ ಗೊತ್ತಿರುತ್ತದೆ! ಅದೇ ರೀತಿಯ ಕೀಲಿಮಣೆ (ಕೀಬೋರ್ಡ್‌) ವಿನ್ಯಾಸವನ್ನು ಜಸ್ಟ್‌ ಕನ್ನಡ ಹೊಂದಿದೆ. ಎರಡು ಕೈಯಲ್ಲಿ ಟೈಪ್‌ ಮಾಡುವುದನ್ನು ಈ ಆ್ಯಪ್‌ನಲ್ಲಿ ಅಭ್ಯಾಸ ಮಾಡಿಕೊಂಡರೆ ಬಹಳ ವೇಗವಾಗಿ ಟೈಪ್‌ ಮಾಡಬಹುದು. ಅಸದಗ ಭಾಗವನ್ನು ಎಡ ಕೈನ ಹೆಬ್ಬೆರಳಲ್ಲಿ, ಲಕಜಹಜ ಭಾಗವನ್ನು ಬಲ ಹೆಬ್ಬೆರಳಲ್ಲಿ ಟೈಪ್‌ ಮಾಡುವುದನ್ನು ಕೇವಲ ಒಂದು ವಾರ ಮಾಡಿದರೆ ನೀವು ಇದರಲ್ಲೇ ಲೇಖನ ಬರೆಯುವಷ್ಟು ಪರಿಣಿತರಾಗುತ್ತೀರಿ! ಅಸಡಗದ ಮೇಲಿನ ಸಾಲಿನಲ್ಲಿ ಟ ಡ ಎ ರ ತ, ಕೆಳಗಿನ ಸಾಲಿನಲ್ಲಿ ಣ ಷ ಚ ವ ಬ ಸೇರಿದಂತೆ ಒಟ್ಟು ಮೂರು ಸಾಲುಗಳಿದ್ದು ಮೂರು ಸಾಲುಗಳಿಗೂ ಇದೇ ಸೂತ್ರ ಅನ್ವಯವಾಗುತ್ತದೆ.

ಎಡಭಾಗದ ಕೊನೆಯಲ್ಲಿ ಣ ಅಕ್ಷರದ ಪಕ್ಕ ಇರುವ ಬಾಣದ ಗುರುತನ್ನು ಒತ್ತಿದರೆ ಮಹಾಪ್ರಾಣ ಅಕ್ಷರಗಳು ಕಾಣುತ್ತವೆ. ಉದಾ: ಆ ಶ ಧ ಘ ಝ ಖ ಇತ್ಯಾದಿ. ಬಾಣದ ಗುರುತನ್ನು ಒತ್ತದೇ ಅಲ್ಪಪ್ರಾಣ ಅಕ್ಷರದ ಮೇಲೆ ಎರಡು ಬಾರಿ ಒತ್ತಿದರೂ ಸಹ ಮಹಾಪ್ರಾಣಾಕ್ಷರಗಳು ಮೂಡುತ್ತವೆ. ಇದು ಜಸ್ಟ್‌ ಕನ್ನಡದ ವಿಶೇಷ. ಉದಾ: ಕ ಕೀಲಿಮಣೆಯ ಮೇಲೆ ಎರಡು ಬಾರಿ ಒತ್ತಿದರೆ ಖ ಅಕ್ಷರ ಟೈಪಾಗುತ್ತದೆ.

ಜಸ್ಟ್‌ ಕನ್ನಡದಲ್ಲಿ ಸಾವಿರಾರು ಪದಗಳನ್ನು ಈಗಾಗಲೇ ಪರಿಚಯಿಸಲಾಗಿದ್ದು, ನೀವು ಒತ್ತುವ ಪದಗಳನ್ನು ಹೋಲುವ ನಾಲ್ಕೈದು ಪದಗಳ ಪ್ರಿಡಿಕ್ಷನ್‌ ಸಹ ಮೂಡುತ್ತದೆ. ಬೆಂ ಎಂದು ಒತ್ತುತ್ತಿದ್ದಂತೆ ಬೆಂಬಲ, ಬೆಂಗಳೂರು ಇತ್ಯಾದಿ ಮೂಡುತ್ತದೆ. ಇಡೀ ಪದವನ್ನು ಒತ್ತುವ ಶ್ರಮವಿಲ್ಲದೆ ಕೀಲಿಮಣೆಯ ಮೇಲ್ಭಾಗದಲ್ಲಿ ಮೂಡುವ ಈ ಪದದ ಮೇಲೆ ಒತ್ತಿದರೆ ಸಾಕು ಅದು ನಿಮ್ಮ ಬರಹದಲ್ಲಿ ಸೇರಿಕೊಳ್ಳುತ್ತದೆ.

ಇಮೋಜಿಗಳು, ಶುಭಾಶಯಗಳು: ಜಸ್ಟ್‌ ಕನ್ನಡದಲ್ಲಿ ಇಮೋಜಿಗಳು, ಶುಭಾಶಯ ಸಂದೇಶಗಳು, ಸ್ಟಿಕರ್‌ಗಳನ್ನು ಸಹ ಸೇರಿಸಲಾಗಿದೆ. ವಾಟ್ಸಪ್‌ ಬಳಸಿದಾಗ ನಿಮಗೆ ವಾಟ್ಸಪ್‌ನದ್ದೇ ಇಮೋಜಿಗಳು ದೊರಕುತ್ತವೆ. ಶುಭೋದಯ, ಶುಭರಾತ್ರಿ, ಹಬ್ಬದ ಶುಭಾಶಯಗಳು, ಜನ್ಮ ದಿನದ ಶುಭಾಶಯಗಳ ಸ್ಟಿಕರ್‌ ಕೂಡ ಅದರಲ್ಲೇ ಇದೆ. ಕೆಳಗಿನ ಸಾಲಿನಲ್ಲಿ ಅಕ್ಷರಗಳ ಗುಂಡಿಗಳ ಪಕ್ಕ ಇದೆ. ಇದನ್ನು ಒತ್ತಿ ಹಾಗೇ ಹಿಡಿದರೆ ಇಮೋಜಿಗಳು ತೆರೆದುಕೊಳ್ಳುತ್ತವೆ.

ಜಸ್ಟ್‌ ಕನ್ನಡವನ್ನು ಅಳವಡಿಸಿಕೊಳ್ಳುವ ವಿಧಾನ: ಗೂಗಲ್‌ ಪ್ಲೇ ಸ್ಟೋರ್‌ ಗೆ ಹೋಗಿ ಜಸ್ಟ್‌ ಕನ್ನಡ ಕೀ ಬೋರ್ಡ್‌ ಎಂದು ಇಂಗ್ಲಿಷ್‌ನಲ್ಲಿ ಟೈಪ್‌ ಮಾಡಿ. ಜಸ್ಟ್‌ ಕನ್ನಡ ಆ್ಯಪ್‌ ಬರುತ್ತದೆ. ಇನ್‌ಸ್ಟಾಲ್‌ ಕೊಡಿ. ಡೌನ್‌ಲೋಡ್‌ ಮುಗಿದ ನಂತರ, ಸೆಟಪ್‌ ಬರುತ್ತದೆ. ನಂತರ ಎನೇಬಲ್‌ ಇನ್‌ ಸೆಟಿಂಗ್‌ ಬರುತ್ತದೆ. ಅಲ್ಲಿ ಜಸ್ಟ್‌ ಕನ್ನಡವನ್ನು ಎನೇಬಲ್‌ ಮಾಡಿ. ಓಕೆ ಕೊಡಿ. ಇನ್ನೆಲ್ಲ ಕೀಬೋರ್ಡ್‌ಗಳ ಆಯ್ಕೆ ಡಿಸೇಬಲ್‌ ಆಗಿರಲಿ. ನಂತರ ಸ್ವಿಚ್‌ ಇನ್‌ಪುಟ್‌ ಮೆಥೆಡ್‌ ಅಂತ ಇರುತ್ತದೆ. ಅದರಲ್ಲಿ ಜಸ್ಟ್‌ ಕನ್ನಡ ಆಯ್ಕೆ ಮಾಡಿಕೊಳ್ಳಿ. ಬಳಿಕ ಕಾನ್‌ಫಿಗರ್‌ ಲಾಂಗ್ವೇಜ್‌ ಅಂತ ಇರುತ್ತದೆ. ಅದಕ್ಕೆ ಹೋದಾಗ ಯೂಸ್‌ ಸಿಸ್ಟ್‌ಂ ಲಾಂಗ್ವೇಜ್‌ ಎಂಬುದು ಎನೇಬಲ್‌ ಆಗಿರುತ್ತದೆ. ಅದನ್ನು ಡಿಸೇಬಲ್‌ ಮಾಡಿ, ಬಳಿಕ ಇಂಗ್ಲಿಷ್‌, ಕನ್ನಡ, ಕನ್ನಡ ಮನವಲಸ, ಕನ್ನಡ ಲಿಪ್ಯಂತರಣ ಎಂಬ ಆಯ್ಕೆಗಳಿರುತ್ತವೆ. ಇದರಲ್ಲಿ ಇಂಗ್ಲಿಷ್‌ ಮತ್ತು ಕನ್ನಡ ಆಯ್ಕೆಗಳನ್ನು ಎನೇಬಲ್‌ ಮಾಡಿಕೊಳ್ಳಿ.

ನಿಮ್ಮ ಮೊಬೈಲ್‌ನ ಸೆಟ್ಟಿಂಗ್‌ ಗೆ ಹೋಗಿ. ಅಲ್ಲಿ ಲಾಂಗ್ವೇಜ್‌ ಅಂಡ್‌ ಇನ್‌ಪುಟ್‌ ಆಯ್ಕೆ ಮಾಡಿಕೊಳ್ಳಿ. ಡಿಫಾಲ್ಟ್ ಕೀ ಬೋರ್ಡ್‌ಗೆ ಹೋಗಿ, ಆಗ ಜಸ್ಟ್‌ ಕನ್ನಡ, ಜಿಬೋರ್ಡ್‌, ಸ್ವಿಫ್ಟ್ ಕೀ ಬೋರ್ಡ್‌ ಸೇರಿದಂತೆ ನಿಮ್ಮ ಮೊಬೈಲ್‌ನಲ್ಲಿರುವ ಇತರ ಕೀಬೋರ್ಡ್‌ಗಳ ಆಯ್ಕೆ ಬರುತ್ತದೆ. ಅದರಲ್ಲಿ ಜಸ್ಟ್‌ ಕನ್ನಡ ಆಯ್ದುಕೊಳ್ಳಿ. ಬೇರೆ ಕೀಬೋರ್ಡ್‌ಗಳನ್ನು ಡಿಸೇಬಲ್‌ ಮಾಡಿ.

ಗೂಗಲ್‌ ವಾಯ್ಸ ಟೈಪಿಂಗ್‌: ಜಸ್ಟ್‌ ಕನ್ನಡ ಮಾತ್ರವಲ್ಲದೆ ಅದಕ್ಕೆ ಗೂಗಲ್‌ ವಾಯ್ಸ ಟೈಪಿಂಗ್‌ ಅನ್ನು ಹೆಚ್ಚುವರಿಯಾಗಿ ಅಳವಡಿಸಿಕೊಂಡರೆ ಕನ್ನಡ ಟೈಪಿಂಗ್‌ ಇನ್ನೂ ಸರಾಗವಾಗುತ್ತದೆ. ಲಾಂಗ್ವೇಜ್‌ ಅಂಡ್‌ ಇನ್‌ಪುಟ್‌ ಸೆಟಿಂಗ್‌ಗೆ ಹೋದಾಗ ಜಸ್ಟ್‌ ಕನ್ನಡ ಆಯ್ಕೆ ಮೇಲೆ ಗೂಗಲ್‌ ವಾಯ್ಸ ಟೈಪಿಂಗ್‌ ಎಂಬ ಆಯ್ಕೆ ಇರುತ್ತದೆ. ಅದನ್ನು ಸಹ ಎನೇಬಲ್‌ ಮಾಡಿ. ಅದರ ಮೇಲೆ ಕ್ಲಿಕ್‌ ಮಾಡಿದರೆ ಲಾಂಗ್ವೇಜಸ್‌ ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಇಂಗ್ಲಿಷ್‌ ಭಾಷೆಯನ್ನು ಡಿಸೇಬಲ್‌ ಮಾಡಿ, ಕೆಳಗೆ ಕನ್ನಡ ಭಾಷೆಯ ಆಯ್ಕೆ ಇದೆ ಅದನ್ನು ಸೆಲೆಕ್ಟ್ ಮಾಡಿಕೊಂಡು ಸೇವ್‌ ಎಂಬ ಆಯ್ಕೆಯನ್ನು ಒತ್ತಿ. ಈಗ ಜಸ್ಟ್‌ ಕನ್ನಡ ಕೀಲಿಮಣೆಯ ಮೇಲ್ಭಾಗದಲ್ಲಿ ಮೈಕಿನ ಚಿಹ್ನೆ ಬರುತ್ತದೆ. ಮೈಕಿನ ಚಿಹ್ನೆ ಒತ್ತಿದರೆ ಟ್ಯಾಪ್‌ ಟು ಸ್ಪೀಕ್‌ ಎಂದು ತೋರಿಸುತ್ತದೆ. ಆಗ ಬರುವ ಮಧ್ಯಭಾಗದ ಮೈಕ್‌ ಚಿಹ್ನೆ ಒತ್ತಿದರೆ ನಿಮ್ಮ ಧ್ವನಿಯನ್ನು ಅದು ಅಕ್ಷರವಾಗಿಸಲು ಸಿದ್ಧವಾಗುತ್ತದೆ. ಈಗ ಫೋನನ್ನು ಹತ್ತಿರ ಇಟ್ಟುಕೊಂಡು ಮಾತನಾಡಿ, ನೀವು ಕನ್ನಡದಲ್ಲಿ ಮಾತನಾಡಿದ ಶಬ್ದಗಳು ಒಡಮೂಡುತ್ತವೆ!

ಗೂಗಲ್‌ನವರು ಎಷ್ಟು ಚೆನ್ನಾಗಿ ಇದನ್ನು ಸಿದ್ಧಪಡಿಸಿದ್ದಾರೆಂದರೆ ಕನ್ನಡದ ಶೇ. 95 ರಷ್ಟು ಪದಗಳು ನೀವು ಹೇಳಿದಂತೆ ಮೂಡುತ್ತವೆ. ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಇರಬೇಕಷ್ಟೆ. ಒಂದು ಸ್ಪಷ್ಟನೆ. ನೀವು ವಾಟ್ಸಪ್‌ನಲ್ಲಿ ಟೈಪ್‌ ಮಾಡುವಾಗ ಗೂಗಲ್‌ ವಾಯ್ಸ ಟೈಪಿಂಗ್‌ನ ಮೈಕ್‌ ಮಾತ್ರವಲ್ಲದೇ, ವಾಟ್ಸಪ್‌ ಮೈಕ್‌ ಸಹ ಕಾಣುತ್ತದೆ. ಅದು ವಾಟ್ಸಪ್‌ನ ವಾಯ್ಸ ರೆಕಾರ್ಡಿಂಗ್‌ ಮೈಕ್‌ ಎಂಬುದು ನೆನಪಿರಲಿ. ಗೂಗಲ್‌ ವಾಯ್ಸ ಮೈಕ್‌ ಚಿಹ್ನೆ ವಾಟ್ಸಪ್‌ ಮೈಕ್‌ ಚಿಹ್ನೆಗಿಂತ ಸಣ್ಣದಾಗಿರುತ್ತದೆ.

ಜಸ್ಟ್‌ ಕನ್ನಡದಲ್ಲಿ ಟೈಪ್‌ ಮಾಡುವ ಮೂಲಕವೇ ಸಂದೇಶಗಳನ್ನು ಬರೆಯಬಹುದು. ಗೂಗಲ್‌ ವಾಯ್ಸ ಟೈಪಿಂಗ್‌ ನಲ್ಲಿ ಟೈಪ್‌ ಮಾಡದೇ ಕನ್ನಡ ಸಂದೇಶಗಳನ್ನು ಬರೆಯಬಹುದು. ವಾಯ್ಸ ಟೈಪಿಂಗ್‌ ಮಾಡಿ ಮುಗಿದ ಬಳಿಕ ಒಂದೊಂದು ಪದ ತಪ್ಪಾಗಿದ್ದರೆ ಅದನ್ನು ಜಸ್ಟ್‌ ಕನ್ನಡದ ಕೀಬೋರ್ಡ್‌ ಬಳಸಿ ಸರಿ ಮಾಡಿಕೊಳ್ಳಬಹುದು.

ಕೆ.ಎಸ್‌. ಬನಶಂಕರ ಆರಾಧ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆಂಗ್ಲ ಭಾಷೆಯಲ್ಲಿ "ಹೆಕ್ಟರ್‌' ಎಂಬ ಪದಕ್ಕೆ ಅಬ್ಬರಿಸುವುದು ಎಂಬ ಅರ್ಥವಿದೆ. ಅದೇ ಹೆಸರಿನ ಈ ಎಸ್‌.ಯು.ವಿ ಕಾರು, ಹೆಸರಿಗೆ ತಕ್ಕಂತೆ ಸದ್ದು ಮಾಡುತ್ತಲೇ ಮಾರುಕಟ್ಟೆಗೆ...

  • ಬೆಂಗಳೂರು: ಪರಿಸರ ಕಾಳಜಿಗೆ ಒತ್ತು ನೀಡುತ್ತಿರುವ ಭಾರತದ ಜನತೆಯ ಅಭಿರುಚಿ ಅರಿತಿರುವ ಹ್ಯುಂಡೈ ಸಂಸ್ಥೆ, ಮೊದಲ ಬಾರಿಗೆ ವಿದ್ಯುತ್‌ ಚಾಲಿತ "ಕೋನಾ ಎಲೆಕ್ಟ್ರಿಕ್‌'...

  • ಭಾರತದಲ್ಲಿ ಕಡಿಮೆ ಬೆಲೆಗೆ ಉತ್ತಮ ಸವಲತ್ತುಗಳನ್ನು ನೀಡಿ ಜನಪ್ರಿಯತೆ ಗಳಿಸಿದ ಶಿಯೋಮಿ ಕಂಪೆನಿ, ರೆಡ್‌ಮಿ 7ಎ ಎಂಬ ಹೊಸ ಆರಂಭಿಕ ದರ್ಜೆಯ ಸ್ಮಾರ್ಟ್‌ಫೋನನ್ನು...

  • -ಆಟೋಮ್ಯಾಟಿಕ್‌ ಎ.ಸಿ- ತನ್ನಷ್ಟಕ್ಕೆ ತಾನೇ ಕಾರಿನೊಳಗಿನ ತಾಪಮಾನವನ್ನು ಗ್ರಹಿಸಿ ಸವಾರರಿಗೆ ಹಿತವೆನಿಸುವ ತಾಪಮಾನಕ್ಕೆ ಹೊಂದಿಕೆಯಾಗುತ್ತದೆ. ಬೇಕೆಂದರೆ ಈ...

  • ಕಾರುಗಳಲ್ಲಿ ಅಟೋಮ್ಯಾಟಿಕ್‌ ಮತ್ತು ಮ್ಯಾನುವಲ್‌ ಟ್ರಾನ್ಸ್‌ ಮಿಷನ್‌ (ಗಿಯರ್‌) ವ್ಯವಸ್ಥೆ ಇರುವುದು ಸಾಮಾನ್ಯ. ಮ್ಯಾನುವಲ್‌ ಟ್ರಾನ್ಸ್‌ಮಿಷನ್‌ಗಳನ್ನು ಬಳಸುವ...

ಹೊಸ ಸೇರ್ಪಡೆ