ಎಂ ಫಾರ್ ಮಧ್ಯಮ

Team Udayavani, Sep 30, 2019, 3:09 AM IST

ಕಳೆದ ಒಂದು ವರ್ಷದಿಂದೀಚೆಗೆ ಸ್ಯಾಮ್‌ಸಂಗ್‌, ಉತ್ತಮ ತಾಂತ್ರಿಕ ಅಂಶಗಳನ್ನೊಳಗೊಂಡ ಫೋನ್‌ಗಳನ್ನು ಎಂ ಸರಣಿಯಡಿ ಮಿತವ್ಯಯದ ದರಕ್ಕೆ ನೀಡುತ್ತಿದೆ. ಇದೀಗ, ಸಂಸ್ಥೆ ಭಾರತದಲ್ಲಿ ಬಿಡುಗಡೆ ಮಾಡಿರುವ ಗೆಲಾಕ್ಸಿ ಎಂ30ಎಸ್‌ ಸಹ ಅಂಥದ್ದೊಂದು ಫೋನ್‌.

ಸ್ಯಾಮ್‌ಸಂಗ್‌, ಮೊಬೈಲ್‌ ಫೋನ್‌ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕಂಪೆನಿ. ಎಲ್ಲರಿಗೂ ತಿಳಿದಿರುವಂತೆ ಮೊಬೈಲ್‌ ಫೋನ್‌ ಮಾರಾಟದಲ್ಲಿ ಜಗತ್ತಿನಲ್ಲಿ ನಂ.1 ಸ್ಥಾನ ಅಲಂಕರಿಸಿದೆ. ಈ ಮೊದಲು ಆನ್‌ಲೈನ್‌ಗಿಂತ ಆಫ್ಲೈನ್‌ (ಅಂಗಡಿ) ಮಾರಾಟಕ್ಕೆ ಸ್ಯಾಮ್‌ಸಂಗ್‌ ಒತ್ತು ನೀಡಿತ್ತು. ಸ್ಯಾಮ್‌ಸಂಗ್‌ ಫೋನ್‌ಗಳ ಹೆಚ್ಚಿನ ದರದಿಂದ ಗ್ರಾಹಕರು, ಶಿಯೋಮಿ, ರಿಯಲ್‌ಮಿ, ಆನರ್‌, ಆಸುಸ್‌ನಂಥ ಬ್ರಾಂಡ್‌ಗಳ ಮೊರೆ ಹೋದರು. ಸಹಜ­ ವಾಗೇ ಇದು ಸ್ಯಾಮ್‌ಸಂಗ್‌ ಮಾರಾಟದ ಪ್ರಮಾಣವನ್ನು ಕಡಿಮೆ ಮಾಡಿತು.

(ಆದಾಗ್ಯೂ ಸ್ಯಾಮ್‌ಸಂಗ್‌ ತನ್ನ ಮೊದಲ ಸ್ಥಾನ ಉಳಿಸಿಕೊಂಡಿದೆ.) ಇದರಿಂದ ಎಚ್ಚೆತ್ತ ಸ್ಯಾಮ್‌ಸಂಗ್‌ ಕಳೆದ ಒಂದು ವರ್ಷದಿಂದೀಚೆಗೆ, ಆನ್‌ಲೈನ್‌ನಲ್ಲಿ ಉತ್ತಮ ತಾಂತ್ರಿಕ ಅಂಶಗಳನ್ನು ಒಳಗೊಂಡ ಫೋನ್‌ಗಳನ್ನು ಮಿತವ್ಯಯದ ದರಕ್ಕೆ ನೀಡುತ್ತಿದೆ. ಅದರ ಎಂ ಸರಣಿಯ ಫೋನ್‌ಗಳು, ಗ್ರಾಹಕನ ಹಣಕ್ಕೆ ಉತ್ತಮ ಮೌಲ್ಯ ನೀಡುವ ವರ್ಗಕ್ಕೆ ಸೇರಿವೆ. ಇದರಿಂದ ಉತ್ತೇಜಿತವಾದ, ಸ್ಯಾಮ್‌ಸಂಗ್‌ ಎಂ ಸರಣಿಯಲ್ಲಿ ಹೊಸ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇದೀಗ ಭಾರತದಲ್ಲಿ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ30 ಎಸ್‌ ಸಹ ಅಂಥದ್ದೊಂದು ಫೋನ್‌.

6000 ಎಂಎಎಚ್‌ ಬ್ಯಾಟರಿ: ಇದು ಮಧ್ಯಮ ವರ್ಗದಲ್ಲಿ ಬರುವ ಫೋನ್‌. ಈ ಫೋನ್‌ನ ಪ್ರಮುಖ ಆಕರ್ಷಣೆ, ಇದರ ಬ್ಯಾಟರಿ. ಅನೇಕರು ಫೋನ್‌ನಲ್ಲಿ ಬೇರೆ ಅಂಶ ಕಡಿಮೆಯಿದ್ದರೂ ಚಿಂತೆಯಿಲ್ಲ. ಬ್ಯಾಟರಿ ಚೆನ್ನಾಗಿರಬೇಕು ನೋಡಿ ಅಂತಾರೆ. ಬ್ಯಾಟರಿ ಎರಡು ಮೂರು ದಿನ ಬರಬೇಕು ಅಂತ ಸ್ಮಾರ್ಟ್‌ಫೋನ್‌ ಜೊತೆ ಒಂದು ಕೀಪ್ಯಾಡ್‌ ಫೋನ್‌ ಇಟ್ಟುಕೊಂಡಿರುವ ಅನೇಕರುಂಟು. ಅಂಥವರಿಗೆ ಹೇಳಿ ಮಾಡಿಸಿದ್ದು ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ30 ಎಸ್‌. ಇದರ ಬ್ಯಾಟರಿ ಸಾಮರ್ಥ್ಯ 6000 (ಆರು ಸಾವಿರ) ಎಂಎಎಚ್‌! ಕೇವಲ ಬ್ಯಾಟರಿ ಹೆಚ್ಚಿರುವುದು ಮಾತ್ರವಲ್ಲ. ಇದಕ್ಕೆ 15 ವ್ಯಾಟ್ಸ್‌ ವೇಗದ ಚಾರ್ಜರ್‌, ಟೈಪ್‌ ಸಿ ಪೋರ್ಟ್‌ ನೀಡಲಾಗಿದೆ. ಬ್ಯಾಟರಿ ಹೆಚ್ಚಿರುವ ಫೋನ್‌ಗಳಿಗೆ ವೇಗದ ಚಾರ್ಜರ್‌ ನೀಡದಿದ್ದರೆ ಅದರ ಮಾಲೀಕರು ಸಾಮಾನ್ಯ ಚಾರ್ಜರಿನಲ್ಲಿ ಗಂಟೆಗಟ್ಟಲೆ ಚಾರ್ಜ್‌ ಮಾಡುತ್ತಾ ಕೂರಬೇಕಾಗು­ತ್ತದಷ್ಟೇ!

48 ಮೆ.ಪಿ. ಕ್ಯಾಮರಾ: ಬ್ಯಾಟರಿ ಮಾತ್ರವಲ್ಲ, ಈ ಫೋನಿಗೆ ಉತ್ತಮ ಕ್ಯಾಮರಾ ಕೂಡ ಇದೆ. ಈಗಿನ ಟ್ರೆಂಡ್‌ ಆಗಿರುವ 48 ಮೆ.ಪಿ. ಹಿಂಬದಿ ಕ್ಯಾಮರಾವನ್ನು ಒಳಗೊಂಡಿದೆ. ಇದರ ಜೊತೆಗೆ 8 ಮೆಗಾಪಿಕ್ಸಲ್‌ ಅಲ್ಟ್ರಾ ವೈಡ್‌ (ಕಡಿಮೆ ಅಂತರದಲ್ಲಿ ಗ್ರೂಪ್‌ ಫೋಟೋಗಾಗಿ), 5 ಮೆಗಾಪಿಕ್ಸಲ್‌ ಡೆಪ್ತ್ ಸೆನ್ಸರ್‌ (ಹಿನ್ನೆಲೆಯನ್ನು ಮಸುಕು ಮಾಡಲು) ಕ್ಯಾಮರಾ ಇದೆ. ಅಲ್ಲಿಗೆ ಇದು ಹಿಂಬದಿಯಲ್ಲೇ ಮೂರು ಲೆನ್ಸ್‌ ಕ್ಯಾಮರಾ ಹೊಂದಿದೆ. ಸೆಲ್ಫಿಗಾಗಿ 16 ಮೆ.ಪಿ. ಕ್ಯಾಮರಾ ಇದೆ. 4ಕೆ ವಿಡಿಯೋ ರೆಕಾರ್ಡಿಂಗ್‌ ಸೌಲಭ್ಯ ಇದೆ. ಸೂಪರ್‌ ಸ್ಲೋಮೋಷನ್‌ ವಿಡಿಯೋ ಕೂಡ ತೆಗೆಯಬಹುದು.

ಸೂಪರ್‌ ಅಮೋಲೆಡ್‌ ಪರದೆ: ಇದರ ಪರದೆ ಸೂಪರ್‌ ಅಮೋ ಎಲ್‌ಇಡಿ ಹೊಂದಿದೆ. ಇದರಿಂದ ಫೋನಿನ ಚಿತ್ರಗಳು, ವಿಡಿಯೋಗಳು ಚೆನ್ನಾಗಿ ಮೂಡಿಬರುತ್ತವೆ. ಈ ದರದಲ್ಲಿ ಸೂಪರ್‌ ಅಮೋಲೆಡ್‌ ಪರದೆ ನೀಡಿರುವುದು ಇದರ ಪ್ಲಸ್‌ ಪಾಯಿಂಟ್‌ಗಳಲ್ಲಿ ಒಂದು. ಇದು 6.4 ಇಂಚಿನ ಫ‌ುಲ್‌ಎಚ್‌ಡಿ ಪ್ಲಸ್‌, ಉತ್ತಮ ಡಿಸ್‌ಪ್ಲೇ ಹೊಂದಿದೆ. ಶೇ. 91ರಷ್ಟು ಪರದೆ ಮತ್ತು ದೇಹದ ಅನುಪಾತ ಹೊಂದಿದೆ.

ಎಕ್ಸಿನಾಸ್‌ 9611 ಪ್ರೊಸೆಸರ್‌: ಇದರಲ್ಲಿ ಸ್ಯಾಮ್‌ಸಂಗ್‌ ತಾನೇ ಅಭಿವೃದ್ದಿ ಪಡಿಸಿದ ಎಕ್ಸಿನಾಸ್‌ 9611 ಎಂಟು ಕೋರ್‌ಗಳ ಪ್ರೊಸೆಸರ್‌ ಇದೆ. ಇದು ಮಧ್ಯಮ ವರ್ಗದಲ್ಲಿ ಒಂದು ಹಂತಕ್ಕೆ ಶಕ್ತಿಶಾಲಿಯಾಗಿದೆ. (ನಾಲ್ಕು ಕೋರ್‌ಗಳು 2.3 ಗಿ.ಹ. ಮತ್ತು ನಾಲ್ಕು ಕೋರ್‌ಗಳು 1.7 ಗಿ.ಹ.) ಇದಕ್ಕೆ ಮಾಲಿ ಜಿ72 ಎಂಪಿ3 ಗ್ರಾಫಿಕ್ಸ್‌ ಪ್ರೊಸೆಸರ್‌ ಇದೆ. ಗೇಮ್‌ಗಳು ಸುಗಮವಾಗಿ ನಡೆಯಲು ಇದು ಸಹಾಯಕ ಎಂದು ಕಂಪೆನಿ ಹೇಳಿಕೊಂಡಿದೆ.

ಎರಡು ಸಿಮ್‌ ಕಾರ್ಡ್‌, ಎರಡಕ್ಕೂ 4ಜಿ ವೋಲ್ಟ್ ಇದೆ. ಮತ್ತು 512 ಜಿಬಿವರೆಗೂ ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಪ್ರತ್ಯೇಕ ಸ್ಲಾಟ್‌ ಅನ್ನು ಮೊಬೈಲ್‌ ಹೊಂದಿದೆ. ಈ ಫೋನಿನಲ್ಲಿ ತಕ್ಕ ಮಟ್ಟಿಗೆ ಎಲ್ಲ ಅಂಶಗಳೂ ಚೆನ್ನಾಗಿವೆ. ಆದರೆ, ಮಧ್ಯಮ ವರ್ಗದ ಫೋನ್‌ಗಳಲ್ಲಿ ಈ ದರಕ್ಕೆ ಲೋಹದ ದೇಹ
ಇರುತ್ತದೆ. ಸ್ಯಾಮ್‌ಸಂಗ್‌ ಇದಕ್ಕೆ ಪ್ಲಾಸ್ಟಿಕ್‌ ಬಾಡಿ ನೀಡಿದೆ. ಲೋಹದ ದೇಹ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

ಇದರ ವೈಶಿಷ್ಟ್ಯ
-4 ಜಿಬಿ ರ್ಯಾಮ್‌, 64 ಜಿಬಿ

-ಆಂತರಿಕ ಸಂಗ್ರಹ: 14000 ರೂ. 6 ಜಿಬಿ ರ್ಯಾಮ್‌, 128 ಜಿಬಿ ಆಂತರಿಕ ಸಂಗ್ರಹ: 17000 ರೂ.

-6.4 ಪರದೆ. ಸೂಪರ್‌ ಅಮೋ ಲೆಡ್‌ ಎಫ್ಎಚ್‌ಡಿಪ್ಲಸ್‌ ಡಿಸ್‌ಪ್ಲೇ

-ಬ್ಯಾಟರಿ ಸಾಮರ್ಥ್ಯ 6000 ಎಂಎಎಚ್‌

-ವೇಗದ ಚಾರ್ಜರ್‌, ಟೈಪ್‌ ಸಿ ಕೇಬಲ್‌

-ಸ್ಯಾಮ್‌ಸಂಗ್‌ ಎಕ್ಸಿನಾಸ್‌ 9611 ಪ್ರೊಸೆಸರ್‌

-48 ಮೆ.ಪಿ. ಮುಖ್ಯ ಕ್ಯಾಮರಾ, 5 ಮೆ.ಪಿ. ಡೆಪ್ತ್ ಸೆನ್ಸರ್‌, 8 ಎಂಪಿ. ಅಲ್ಟ್ರಾ ವೈಡ್‌ ಸೆನ್ಸಾರ್‌

-ಮುಂಬದಿ 16 ಮೆ.ಪಿ. ಕ್ಯಾಮರಾ

* ಕೆ.ಎಸ್‌. ಬನಶಂಕರ ಆರಾಧ್ಯ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ