ಸಮೀಕ್ಷೆಯಲ್ಲಿ ನಂಬರ್ ಒನ್ ಸ್ಥಾನ ಪಡೆದ ಮೊಬೈಲ್ ಫೋನ್ ಯಾವುದು ಗೊತ್ತಾ ?

ಇಲ್ಲಿದೆ ಸಂಪೂರ್ಣ ಮಾಹಿತಿ

Team Udayavani, Aug 28, 2019, 8:00 PM IST

ನವದೆಹಲಿ: ಇತ್ತೀಚಿಗೆ ನೆಟ್ ಪ್ರಮೋಟರ್ ಸ್ಕೋರ್ (NPS) ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ, ಚೀನಾ ಮೂಲದ ಒಪ್ಪೋ ಮೊಬೈಲ್ ಫೋನ್ ನಂಬರ್ ಒನ್  ಸ್ಥಾನವನ್ನು ಪಡೆದಿದ್ದು, ನಂತರದ ಸ್ಥಾನವನ್ನು ಒನ್ ಪ್ಲಸ್ ಮತ್ತು ಹುವಾಯಿ ಪಡೆದುಕೊಂಡಿದೆ.

ಭಾರತದ ಮಾರುಕಟ್ಟೆ ಸಮೀಕ್ಷಾ ಸಂಸ್ಥೆಯಾದ ನುಮರ್ ರೀಸರ್ಚ್ ನಡೆಸಿದ ಅಧ್ಯಯನದ ಪ್ರಕಾರ ಅತೀ ಹೆಚ್ಚು ಮಾರಾಟವಾಗುವ ಮೊಬೈಲ್ ಫೋನ್ ಗಳಾದ ಶಿಯೋಮಿ, ಸ್ಯಾಮ್ ಸಂಗ್ ಮತ್ತು ವಿವೋ ಈ ಬಾರಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದು, ಅತ್ಯುತ್ತಮ ಫೀಚರ್ ಅನ್ನು ಒಳಗೊಂಡ ಒಪ್ಪೋ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ.

25ರಿಂದ60 ವರ್ಷದೊಳಗಿನ 500 ವ್ಯಕ್ತಿಗಳ ಅಭಿಪ್ರಾಯಗಳನ್ನು ಆಧರಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದ್ದು,  ಒಪ್ಪೋ ಎಲ್ಲರಿಗೂ ಒಪ್ಪುವಂತಹ ಫೋನ್ ಆಗಿದೆ ಎಂಬುದೇ ಸಮೀಕ್ಷೆಯಿಂದ ದೃಢಪಟ್ಟಿದೆ.

ಸಮೀಕ್ಷೆಯಲ್ಲಿ ಪ್ರತಿಯೊಬ್ಬರಿಗೂ ಒಂದೇ ಪ್ರಶ್ನೆಯನ್ನು ಕೇಳಲಾಗಿತ್ತು.  ಯಾವ ಮೊಬೈಲ್ ಫೋನ್ ಅನ್ನು ನೀವು ನಿಮ್ಮ ಕುಟುಂಬ, ಸ್ನೇಹಿತರಿಗೆ ಅಥವಾ ಸಹೋದ್ಯೋಗಿಗಳಿಗೆ ಕೊಡಲು ಇಚ್ಛಿಸುತ್ತೀರಾ ಎಂಬುದಕ್ಕೆ 10 ರಲ್ಲಿ 5 ರಷ್ಷು ಜನ  ಒಪ್ಪೋವನ್ನು ಸಲಹೆ ಮಾಡಿದ್ದರು. ಉಳಿದ 4 % ಜನ ಹುವಾಯಿ ಮತ್ತು ಒನ್ ಪ್ಲಸ್ ಗೆ ಆದ್ಯತೆ ನೀಡಿದರೇ, ಶೇ 1ರಷ್ಟು  ಜನ ಇತರೆ ಫೋನ್ ಗಳ ಬಗ್ಗೆ ಆಸಕ್ತಿ ತೋರಿದ್ದರು.

ನೆಟ್ ಪ್ರಮೋಟರ್ ಸ್ಕೋರ್ (NPS)  ಪ್ರಕಾರ ಗ್ರಾಹಕರು ಒಪ್ಪೋ ಮೊಬೈಲ್ ಫೋನ್ ಕಡೆ ಹೆಚ್ಚು ಆಕರ್ಷಿತರಾಗಿದ್ದು, ಅದರ ಫೀಚರ್ ಹಾಗೂ ಇತರ ವಿಶೇಷತೆಗಳಿಗೆ ಹೆಚ್ಚು ಮಾರುಹೋಗಿದ್ದಾರೆ.

ಮೊದಲ ಮೂರು ಸ್ಥಾನವನ್ನು ಒಪ್ಪೋ, ಒನ್ ಪ್ಲಸ್, ಹುವಾಯಿ ಪಡೆದುಕೊಂಡರೆ, ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ ಗಳಾದ ಆ್ಯಪಲ್ 68ನೇ ಸ್ಥಾನ, ಶಿಯೋಮಿ 66ನೇ ಸ್ಥಾನ, ಲೆನೋವೋ 64ನೇ ಸ್ಥಾನ,  ಸ್ಯಾಮ್ ಸಂಗ್ 63 ನೇ ಸ್ಥಾನವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಶೇ. 52 ರಷ್ಟು ಜನರ ಬಳಿ ಒಂದು ಮೊಬೈಲ್ ಇದ್ದರೆ, ಶೇ. 42 ರಷ್ಟು ಜನರು ಎರೆಡೆರಡು ಮೊಬೈಲ್ ಅನ್ನು ಇರಿಸಿಕೊಂಡಿದ್ದಾರೆ. 5% ಜನರಲ್ಲಿ ಮೂರಕ್ಕಿಂತ ಹೆಚ್ಚು , ಹಾಗೆಯೇ 1% ಜನರಲ್ಲಿ ನಾಲ್ಕು ಮತ್ತು ಅದಕ್ಕಿಂತ ಹೆಚ್ಚು ಮೊಬೈಲ್ ಫೋನ್ ಗಳಿವೆ ಎಂದು ಸಮೀಕ್ಷೆ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ