ಪೈಪೋಟಿಗೆ ನಿಂತ ಸ್ಯಾಮ್‌ಸಂಗ್‌

ಇದೀಗ ಬಂದಿದೆ ಹೊಸ ಗೆಲಾಕ್ಸಿ ಎಂ 40

Team Udayavani, Jun 17, 2019, 5:00 AM IST

ಸ್ಯಾಮ್‌ ಸಂಗ್‌ ಪ್ರಿಯರಿಗಾಗಿ ಮಧ್ಯಮ ದರ್ಜೆಯಲ್ಲಿ ಗೆಲಾಕ್ಸಿ ಎಂ 40 ಎಂಬ ಹೊಸ ಮಾಡೆಲ್‌ ಅನ್ನು ಬಿಡುಗಡೆ ಮಾಡಲಾಗಿದೆ. ಎಂ 10, ಎಂ 20, ಎಂ. 30 ಮಾಡೆಲ್‌ಗ‌ಳಲ್ಲಿ ಯಶ ಕಂಡ ಸ್ಯಾಮ್‌ಸಂಗ್‌ ಅದರ ಮುಂದುವರಿಕೆಯಾಗಿ ಎಂ 40 ತಂದಿದೆ. 20 ಸಾವಿರದೊಳಗಿನ ದರ ಪಟ್ಟಿಯಲ್ಲಿ ಇದು ಗಮನಿಸಬಹುದಾದ ಫೋನ್‌.

ಮೊಬೈಲ್‌ ಕೊಳ್ಳಬೇಕೆಂದರೆ ಕೆಲವರು ಸ್ಯಾಮ್‌ ಸಂಗ್‌ ಅನ್ನೇ ಮೊದಲ ಆಯ್ಕೆಯಾಗಿ ಪರಿಗಣಿಸುತ್ತಾರೆ. ಅಂಥವರ ಆಯ್ಕೆಗೆ ಇನ್ನೊಂದು ಹೊಸ ಮಾಡೆಲ್‌ ಅನ್ನು ಕಂಪೆನಿ ತಾಜಾ ಆಗಿ ಬಿಡುಗಡೆ ಮಾಡಿದೆ. ನೋಕಿಯಾ ಕೀಪ್ಯಾಡ್‌ ಮೊಬೈಲ್‌ಗ‌ಳು ಉಚ್ಛಾ†ಯ ಸ್ಥಿತಿಯಲ್ಲಿದ್ದ ಕಾಲದಲ್ಲಿ, ಸ್ಯಾಮ್‌ ಸಂಗ್‌ ಹೆಸರು ಹೇಳಿದರೆ ಅಷ್ಟು ಆಸಕ್ತಿ ವಹಿಸುತ್ತಿರಲಿಲ್ಲ. ನೋಕಿಯಾನೇ ಬೇಕು ಎಂದು ಬಹಳಷ್ಟು ಜನ ಹೇಳುತ್ತಿದ್ದರು. ಸ್ಮಾರ್ಟ್‌ಫೋನ್‌ ಜಮಾನಾ ಶುರುವಾದಾಗ, ಸ್ಯಾಮ್‌ ಸಂಗ್‌ ಆಂಡ್ರಾಯ್ಡ ಕಾರ್ಯಾಚರಣಾ ವ್ಯವಸ್ಥೆಯನ್ನು ಆಯ್ದುಕೊಂಡಿತು. ನೋಕಿಯಾ ವಿಂಡೋಸ್‌ ಅನ್ನೇ ನೆಚ್ಚಿಕೊಂಡು ಕುಳಿತಿತು. ಬಳಕೆದಾರನಿಗೆ ಅತೀವ ಸ್ವಾತಂತ್ರ್ಯ, ನಾನಾ ನಮೂನೆಯ ಅಪ್ಲಿಕೇಷನ್‌ಗಳ ಉಚಿತ ಡೌನ್‌ಲೋಡಿಂಗ್‌, ಶೀಘ್ರ ಅಪ್‌ಡೇಟ್‌ ವ್ಯವಸ್ಥೆ, ಅಂಡ್ರಾಯ್ಡ ಎಲ್ಲರ ಪ್ರೀತಿ ಮತ್ತು ಮೆಚ್ಚುಗೆಗೆ ಪಾತ್ರವಾಯಿತು. ಅದನ್ನು ಅಳವಡಿಸಿಕೊಂಡ ಸ್ಯಾಮ್‌ಸಂಗ್‌ ಬಹುಬೇಗನೆ ಜನಪ್ರಿಯತೆಯ ತುಟ್ಟತುದಿಗೇರಿತು.

ಈ ರೀತಿಯಾಗಿ ಮೇಲೆ ಬಂದ ಸ್ಯಾಮ್‌ಸಂಗ್‌, ಏಕಚಕ್ರಾಧಿಪತ್ಯ ಸ್ಥಾಪಿಸಿ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿತ್ತು. 512 ಎಂಬಿ (1 ಜಿಬಿಯೂ ಅಲ್ಲ!) ರ್ಯಾಮ್‌, 8 ಜಿಬಿ ಆಂತರಿಕ ಮೆಮೊರಿ 4.5 ಇಂಚಿನ ಪರದೆಯಂಥ ಕಡಿಮೆ ತಾಂತ್ರಿಕತೆ ಉಳ್ಳ ಮೊಬೈಲ್‌ಗ‌ಳಿಗೇ 12-14 ಸಾವಿರ ರೂ. ದರ ಇಡುತ್ತಿತ್ತು. ಇಂಥ ಸಮಯದಲ್ಲಿ ಅಸ್ತಿತ್ವಕ್ಕೆ ಬಂದ ಹುವಾವೇ, ಆನರ್‌, ಶಿಯೋಮಿ, ಒನ್‌ಪ್ಲಸ್‌, ಆಸುಸ್‌, ಲ ಎಕೋ, ಒಪ್ಪೋ, ವಿವೋ, ರಿಯಲ್‌ಮಿ ಯಂಥ ಕಂಪೆನಿಗಳು ಸ್ಯಾಮ್‌ಸಂಗ್‌ಗೆ ತೀವ್ರ ಪೈಪೋಟಿ ನೀಡಿದವು. ಭಾರತದಲ್ಲಿ ಸ್ಯಾಮ್‌ಸಂಗ್‌ನ ನಂ. 1 ಸ್ಥಾನವನ್ನು ಶಿಯೋಮಿ ಕಸಿದುಕೊಂಡಿತು. ಇದರಿಂದ ಎಚ್ಚೆತ್ತುಕೊಂಡ ಸ್ಯಾಮ್‌ಸಂಗ್‌ ಕಳೆದ ಆರೇಳು ತಿಂಗಳಿಂದ ತೀರಾ ಕಡಿಮೆಯಲ್ಲದಿದ್ದರೂ, ಒಂದು ಮಟ್ಟಿಗೆ, ಹಣಕ್ಕೆ ತಕ್ಕ ಮೌಲ್ಯ ನೀಡುವ ಮಾಡೆಲ್‌ಗ‌ಳನ್ನು ಬಿಡುಗಡೆ ಮಾಡುತ್ತಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ ಸರಣಿಯ ಫೋನ್‌ಗಳು ಕುಸಿಯುತ್ತಿದ್ದ ಸ್ಯಾಮ್‌ಸಂಗ್‌ ಮಾರುಕಟ್ಟೆಯನ್ನು ಎತ್ತಿ ನಿಲ್ಲಿಸಲು ಸಹಾಯಕವಾಗಿವೆ. ಜೊತೆಗೆ ಕೆಲವು ಮಾಡೆಲ್‌ಗ‌ಳನ್ನು ಆನ್‌ಲೈನ್‌ ಮಾತ್ರ ಮಾರಾಟ ಮಾಡಿದ್ದರಿಂದ ಕೈಗೆಟಕುವ ಬೆಲೆಗೆ ದೊರೆತವು. ಹೀಗಾಗಿ ಎಂ 10, ಎಂ 20, ಎಂ 30 ಮಾಡೆಲ್‌ಗ‌ಳು ಚೆನ್ನಾಗಿ ಮಾರಾಟವಾದವು. ಇದರಿಂದ ಉತ್ತೇಜಿತವಾದ ಸ್ಯಾಮ್‌ಸಂಗ್‌, ಗೆಲಾಕ್ಸಿ ಎಂ 40 ಮೊಬೈಲನ್ನು ಭಾರತಕ್ಕೆ ಇದೀಗ ಬಿಡುಗಡೆ ಮಾಡಿದೆ. ಇದು ನಾಳೆಯಿಂದ ಅಂದರೆ ಜೂನ್‌ 18 ರಿಂದ ಅಮೆಜಾನ್‌ ಮತ್ತು ಸ್ಯಾಮ್‌ಸಂಗ್‌ ಆನ್‌ಲೈನ್‌ ಶಾಪ್‌ನಲ್ಲಿ ಲಭ್ಯವಾಗಲಿದೆ. ಇದರ ಬೆಲೆ 19,990 ರೂ. ಇದು ಕೇವಲ ಒಂದೇ ಆವೃತ್ತಿ ಹೊಂದಿದೆ.

ಇನ್‌ಫಿನಿಟಿ ಪಂಚ್‌ಹೊàಲ್‌ ಡಿಸ್‌ಪ್ಲೇ: ಇದರ ವಿಶೇಷವೆಂದರೆ ಇದು ಇನ್‌ಫಿನಿಟಿ ಡಿಸ್‌ಪ್ಲೇ ಹೊಂದಿದೆ. ಅಂದರೆ ಮೇಲೆ, ಕೆಳಗೆ, ಎಡ, ಬಲ ತೀರಾ ಸಣ್ಣ ಅಂಚು ಪಟ್ಟಿ ಇರುತ್ತದೆ. ಮೊಬೈಲ್‌ನ ಮುಂಭಾಗ ಪೂರ್ತಿ ಡಿಸ್‌ಪ್ಲೇ ಇರುತ್ತದೆ. ಈ ದರ ಶ್ರೇಣಿಯಲ್ಲಿ ಇದೇ ಮೊದಲ ಬಾರಿಗೆ ಪರದೆಯ ಒಳಗೇ ಸೆಲ್ಫಿà ಕ್ಯಾಮರಾ ಇರುತ್ತದೆ. ಪಂಚ್‌ ಹೋಲ್‌ ( ಎಡಭಾಗದ ಮೂಲೆಯಲ್ಲಿ ತೂತು ಮಾಡಿದಂತೆ) ಡಿಸ್‌ಪ್ಲೇ ಎಂದು ಕರೆಯಲಾಗುವ ಈ ವಿಶೇಷವನ್ನು ಉನ್ನತ ದರ್ಜೆಯ ಮಾಡೆಲ್‌ ಆದ ಗೆಲಾಕ್ಸಿ ಎಸ್‌10ನಲ್ಲಿ ಮೊದಲ ಬಾರಿಗೆ ನೀಡಲಾಗಿತ್ತು. 6.3 ಇಂಚಿನ ಎಫ್ಎಚ್‌ಡಿ ಪ್ಲಸ್‌ ಎಲ್‌ಸಿಡಿ ಪರದೆ ಹೊಂದಿದೆ. ಇದಕ್ಕೆ ಕಾರ್ನಿಂಗ್‌ ಗೊರಿಲ್ಲಾ ಗಾಜಿನ ರಕ್ಷಣೆಯಿದೆ.

ಸ್ನಾಪ್‌ಡ್ರಾಗನ್‌ 675 ಪ್ರೊಸೆಸರ್‌: ಸಾಮಾನ್ಯವಾಗಿ ತನ್ನ ಸ್ವಂತ ತಯಾರಿಕೆಯ ಎಕ್ಸಿನಾಸ್‌ ಪ್ರೊಸೆಸರ್‌ ಬಳಸುವ ಸ್ಯಾಮ್‌ಸಂಗ್‌ ಇದಕ್ಕೆ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 675 ಪ್ರೊಸೆಸರ್‌ ಹಾಕಿದೆ. ಎಂ10,20,30 ಗಳಿಗೆ ಎಕ್ಸಿನಾಸ್‌ ಇತ್ತು. ಎಂ 40ಗೆ ಸ್ನಾಪ್‌ಡ್ರಾಗನ್‌ ಬಳಸಿರುವುದು ವಿಶೇಷ. ಇದು ಮಧ್ಯಮ ವರ್ಗಕ್ಕೆ ಸೇರಿದ, ಗೇಮಿಂಗ್‌ಗೆ ಸೂಕ್ತವಾದ ಪ್ರೊಸೆಸರ್‌. 2 ಗಿ.ಹ. ಎಂಟು ಕೋರ್‌ಗಳ ಪ್ರೊಸೆಸರ್‌. ಇದೇ ಪ್ರೊಸೆಸರ್‌ ಅನ್ನು ರೆಡ್‌ಮಿ ನೋಟ್‌ 7 ಪ್ರೊ.ಗೆ ಹಾಕಲಾಗಿದೆ! ಈ ದರಕ್ಕೆ ಉತ್ತಮ ಪ್ರೊಸೆಸರ್‌ ಅನ್ನೇ ಸ್ಯಾಮ್‌ಸಂಗ್‌ ನೀಡಿದೆ. ಗೇಮಿಂಗ್‌ಗಾಗಿ ಕ್ವಾಲ್‌ಕಾಂ ಅಡ್ರೆನೋ 612 ಜಿಪಿಯು ಇದೆ.

6+128 ಜಿಬಿ!: ಇದು 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ! ಮಾರುಕಟ್ಟೆ ಪೈಪೋಟಿ ಎದುರಿಸಲು ಸ್ಯಾಮ್‌ಸಂಗ್‌ ದೊಡ್ಡ ಮನಸ್ಸು ಮಾಡಿದೆ ಎಂದೇ ಹೇಳಬೇಕು. ಹೈಬ್ರಿಡ್‌ ಸಿಮ್‌ ಸ್ಲಾಟ್‌ ಹೊಂದಿದೆ. ಅಂದರೆ ಎರಡು ಸಿಮ್‌ ಕಾರ್ಡ್‌ ಹಾಕಿಕೊಳ್ಳಬಹುದು. ಇಲ್ಲವೇ ಒಂದು ಸಿಮ್‌ ಒಂದು ಮೆಮೊರಿ ಕಾರ್ಡ್‌ ಬಳಸಬಹುದು. 128 ಜಿಬಿ ಮೆಮೊರಿ ಇರುವುದರಿಂದ ಹೆಚ್ಚುವರಿ ಮೆಮೊರಿ ಕಾರ್ಡ್‌ ಅವಶ್ಯಕತೆಯಿಲ್ಲ.

ಕ್ಯಾಮರಾ ತ್ರಯ: ಕ್ಯಾಮರಾ ವಿಭಾಗದಲ್ಲೂ ಎಂ 40 ಗಮನ ಸೆಳೆಯುತ್ತದೆ. ಹಿಂಬದಿ ಕ್ಯಾಮರಾ ಮೂರು ಲೆನ್ಸ್‌ ಹೊಂದಿದೆ. 32 ಮೆಗಾಪಿಕ್ಸಲ್‌ ಮುಖ್ಯ ಕ್ಯಾಮರಾ (ಎಫ್/1.7 ಅಪಾರ್ಚರ್‌), 8 ಮೆಗಾಪಿಕ್ಸಲ್‌ ಅಲ್ಟ್ರಾ ವೈಡ್‌ ಆ್ಯಂಗಲ್‌ ಕ್ಯಾಮರಾ ಮತ್ತು 5 ಮೆಗಾಪಿಕ್ಸಲ್‌ ಡೆಪ್ತ್ ಸೆನ್ಸರ್‌ ಹೊಂದಿದೆ. ಮುಂಬದಿಯ ಸೆಲ್ಫಿàಗೆ 16 ಮೆಗಾಪಿಕ್ಸಲ್‌ ಒಂಟಿ ಕ್ಯಾಮರಾ ಹೊಂದಿದೆ.

ಬ್ಯಾಟರಿ: 3500 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿಯನ್ನು ಇದು ಹೊಂದಿದೆ. ಇದಕ್ಕೆ 15 ವ್ಯಾಟ್‌ ಟೈಪ್‌ ಸಿ ವೇಗದ ಚಾರ್ಜರ್‌ ನೀಡಲಾಗಿದೆ. ಫಾಸ್ಟ್‌ ಚಾರ್ಜರ್‌ ಇಂದಿನ ಮುಖ್ಯ ಅಗತ್ಯವಾಗಿದೆ. ಬ್ಯಾಟರಿ 500 ಎಂಎಚ್‌ ಕಡಿಮೆ ಇದ್ದರೂ ಪರವಾಗಿಲ್ಲ ಆದರೆ ಅದಕ್ಕೆ ವೇಗದ ಚಾರ್ಜರ್‌ ಇರಬೇಕು. 4000 ಎಂಎಎಚ್‌ ಬ್ಯಾಟರಿ ಕೊಟ್ಟು ಫಾಸ್ಟ್‌ ಚಾರ್ಜರ್‌ ಸೌಲಭ್ಯ ಇರದಿದ್ದರೆ, ಅಂಥ ಮೊಬೈಲ್‌ಗ‌ಳನ್ನು 3 ಗಂಟೆಗೂ ಹೆಚ್ಚು ಕಾಲ ಚಾರ್ಜ್‌ ಮಾಡುತ್ತಲೇ ಇರಬೇಕಾಗುತ್ತದೆ!

ಮೊದಲೇ ಹೇಳಿದಂತೆ 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹದ ಒಂದೇ ಆವೃತ್ತಿಯಲ್ಲಿ ಈ ಮೊಬೈಲ್‌ ಲಭ್ಯ. ಗಾಢ ನೀಲಿ ಮತ್ತು ತೆಳು ನೀಲಿ ಎರಡು ಬಣ್ಣದಲ್ಲಿ ಎಂ 40 ದೊರಕುತ್ತದೆ.

ಎಲ್ಲ ಜಾಣ ತುಸು ಕೋಣ ಎಂಬಂತೆ, ಈ ಮೊಬೈಲ್‌ನಲ್ಲಿ ಪ್ಲಾಸ್ಟಿಕ್‌ ಕವಚ ಅಳವಡಿಸಲಾಗಿದೆ. ಇದಕ್ಕೆ ಗಾಜಿನ ಫಿನಿಶ್‌ ಬರುವಂತೆ ಮಾಡಲಾಗಿದೆ. ಸ್ಯಾಮ್‌ಸಂಗ್‌ ಮತ್ತು ರಿಯಲ್‌ಮಿ ಬ್ರಾಂಡ್‌ಗಳು ಮಧ್ಯಮ ದರ್ಜೆಯ ಮಾಡೆಲ್‌ಗ‌ಳಿಗೆ ಇನ್ನೂ ಲೋಹದ ಅಥವಾ ಗಾಜಿನ ಕವಚ ನೀಡುತ್ತಿಲ್ಲ. ಇದು ಒಂದು ದೊಡ್ಡ ಕೊರತೆ ಎಂದೇ ಹೇಳಬಹುದು. 20 ಸಾವಿರ ರೂ. ನೀಡಿಯೂ ಪ್ಲಾಸ್ಟಿಕ್‌ ಕವಚದ ಮೊಬೈಲ್‌ ಹಿಡಿದುಕೊಳ್ಳಬೇಕೆಂದರೆ…!

ಸೂಪರ್‌ ಸ್ಲೋ ಮೋಷನ್‌ ವಿಡಿಯೊ
ಇದು ಗೆಲಾಕ್ಸಿ ಎಂ ಸರಣಿಯಲ್ಲಿ ಅಂಡ್ರಾಯ್ಡ 9 ಪೀ ಜೊತೆ ಬರುತ್ತಿರುವ ಮೊದಲ ಫೋನ್‌! ಇದಕ್ಕೆ ಸ್ಯಾಮ್‌ಸಂಗ್‌ನ ಒನ್‌ ಯುಐ ಹೆಚ್ಚುವರಿ ಹೊದಿಕೆ ಇರುತ್ತದೆ. 4ಕೆ ವಿಡಿಯೋ ರೆಕಾರ್ಡಿಂಗ್‌ ಸೌಲಭ್ಯ ಇದೆ. ಸೂಪರ್‌ ಸ್ಲೋ ಮೋಷನ್‌ ವಿಡಿಯೋಗಳನ್ನು ತೆಗೆಯಬಹುದು. ಸಂಗೀತ ಪ್ರಿಯರಿಗಾಗಿ ಡೋಲ್ಬಿ ಆಟ್‌ಮೋಸ್‌ 360 ಸರೌಂಡ್‌ ಸೌಂಡ್‌ ಸೌಲಭ್ಯ ಕಲ್ಪಿಸಲಾಗಿದೆ. ಬಾಕ್ಸ್‌ ಜೊತೆ ಯುಎಸ್‌ಬಿ ಟೈಪ್‌ ಸಿ ಕೇಬಲ್‌ ಹೊಂದಿರುವ ಇಯರ್‌ಫೋನ್‌ ನೀಡಲಾಗಿದೆ.

-ಕೆ.ಎಸ್‌. ಬನಶಂಕರ ಆರಾಧ್ಯ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ