ಮಡಿಕೇರಿ ದಸರಾ ಪ್ರಮುಖ ಆಕರ್ಷಣೆ ಕರಗ, ಏನಿದರ ಹಿನ್ನಲೆ ?

Team Udayavani, Sep 28, 2019, 1:18 PM IST

ಇತಿಹಾಸ ಪ್ರಸಿದ್ದ ಮಡಿಕೇರಿ ಕರಗ ಉತ್ಸವ ಪ್ರತಿ ವರ್ಷ ಮಹಾಲಯ ಅಮವಾಸ್ಯೆಯ ಮಾರನೇಯ ದಿನ ಪ್ರಾರಂಭವಾಗುತ್ತದೆ. ನವರಾತ್ರಿಯ ಮೊದಲ ದಿನ ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾಗೆ ಚಾಲನೆ ನೀಡಿದರೆ, ಮಡಿಕೇರಿ ದಸರಾಗೆ ನಾಲ್ಕು ಶಕ್ತಿದೇವತೆಗಳ ಕರಗ ಹೊರಡುವುದರೊಂದಿಗೆ ಚಾಲನೆ ನೀಡಲಾಗುತ್ತದೆ. ಮಡಿಕೇರಿಯಲ್ಲಿ ರಾಜರಕಾಲದಲ್ಲಿ ನಿರ್ಮಿಸಲ್ಪಟ್ಟ ಕುಂದುರುಮೊಟ್ಟೆ ಚಾಮುಂಡೇಶ್ವರಿ, ಕೋಟೆಮಾರಿಯಮ್ಮ, ದಂಡಿನಮಾರಿಯಮ್ಮ, ಕಂಚಿ ಕಾಮಾಕ್ಷಿ, ಈ ನಾಲ್ಕು ದೇವಾಲಯಗಳ ವೃತಧಾರಿ ಅರ್ಚಕರು ಕೇಶಮುಂಡನ ಮಾಡಿಸಿಕೊಂಡು ಮೈಗೆಲ್ಲ ಹಳದಿ ಹಚ್ಚಿಕೊಂಡು, ಹಳದಿ ಕಚ್ಚೆ ಪಂಚೆಯನ್ನು ಧರಿಸಿ, ಕರಗ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಮಡಿಕೇರಿಯಲ್ಲಿರುವ ರಾಜರ ಸಮಾಧಿ ಗದ್ದುಗೆಯ ಬಳಿ ಇರುವ ಪಂಪಿನ ಕೆರೆಯ ಹತ್ತಿರ ಶಕ್ತಿದೇವತೆಯನ್ನು ಪೂಜಿಸುತ್ತಾರೆ. ಈ ವೇಳೆ ದಸರಾ ಸಮಿತಿಯಿಂದ ಸಾಂಪ್ರದಾಯಿಕ ಪೂಜೆಸಲ್ಲಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳಲಾಗುತ್ತದೆ. ನಂತರ ತಾಮ್ರದ ಬಿಂದಿಗೆಯ ಮೇಲೆ ಕರಗವನ್ನು ದೇವಿಯ ಬೆಳ್ಳಿಯ ವಿಗ್ರಹ ಅಳವಡಿಸಿ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಹೂವುಗಳಿಂದ ಅಲಂಕರಿಸಿ ಕರಗವನ್ನು ತಲೆಯ ಮೇಲೆ ಇಟ್ಟುಕೊಳ್ಳುತ್ತಾರೆ.

ಒಂದು ಕೈಯಲ್ಲಿ ಕಠಾರಿ, ಇನ್ನೊಂದು ಕೈಯಲ್ಲಿ ಬೆಳ್ಳಿ ಹಿಡಿಕೆಯ ಬೆತ್ತವನ್ನು ಹಿಡಿದು ತಲೆಯ ಮೇಲಿರುವ ಕರಗವನ್ನು ಕೈಯಲ್ಲಿ ಮುಟ್ಟದೆ ಕೊಡಗಿನ ವಾದ್ಯ, ಓಲಗದ ಧ್ವನಿಗೆ ತಕ್ಕಂತೆ ಹೆಜ್ಜೆಯನ್ನಿಟ್ಟು ನೃತ್ಯಮಾಡಿಕೊಂಡು ಮಡಿಕೇರಿಯ ಮುಖ್ಯ ಬೀದಿಗಳಲ್ಲಿ ನಾಲ್ಕು ಕರಗಗಳು ಮೆರವಣಿಗೆಯಲ್ಲಿ ಬಂದು ಪೇಟೆ ಶ್ರೀರಾಮಮಂದಿರದಲ್ಲಿ ಪ್ರಥಮ ಪೂಜೆಯನ್ನು ಸಲ್ಲಿಸಿ ನಂತರ ಮನೆಮನೆಗಳಿಗೆ ತೆರಳಿ ಪೂಜೆಯನ್ನು ಸ್ವೀಕರಿಸುತ್ತಾರೆ.

ನವರಾತ್ರಿಯ ಆಯುಧ ಪೂಜೆಯವರೆಗೆ ಮಡಿಕೇರಿ ನಗರದ ಎಲ್ಲಾ ಮನೆಗಳಿಗೆ ಕರಗ ಉತ್ಸವದ ಮೆರವಣಿಗೆ ಹೋಗುತ್ತಿರುತ್ತದೆ. ಮನೆಯ ಅಂಗಳವನ್ನು ಶುಚಿಗೊಳಿಸಿ, ರಂಗೋಲಿ ಹಾಕಿ ಮನೆಯ ಮಂದಿಯೆಲ್ಲರೂ ಕರಗವನ್ನು ಬರಮಾಡಿಕೊಳ್ಳುತ್ತಾರೆ. ಕರಗ ಹೊತ್ತ ಅರ್ಚಕರನ್ನು ಒಂದು ಮಣೆಯ ಮೇಲೆ ನಿಲ್ಲಿಸಿ ಕಾಲು ತೊಳೆದು ಪಾದ ಪೂಜೆ ಮಾಡಿ ನಂತರ ಹಣ್ಣು ಕಾಯಿ ಸಮರ್ಪಿಸಿ, ದೇವಿಗೆ ಮಂಗಳಾರತಿಯನ್ನು ಮಾಡಿ, ಪ್ರಾರ್ಥನೆ ಸಲ್ಲಿಸಿ ಕರಗವನ್ನು ಬೀಳ್ಕೊಡುತ್ತಾರೆ.

ಮಡಿಕೇರಿ ದಸರಾದ ಹಿನ್ನಲೆ ಗಮನಿಸುವುದಾದರೆ,  ಕರಗ ಆಚರಣೆ ಜಾರಿ ಬರುವ ಮೂಲಕ ದಸರಾ ಆಚರಣೆ ಅಧಿಕೃತವಾಗಿ ಆರಂಭವಾಯಿತು. ಸುಮಾರು 189 ವರ್ಷಗಳ ಹಿಂದೆ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತು. ಆ ಸಂದರ್ಭ ರೋಗ ಹರಡಲು ಕಾರಣ ಹುಡುಕಿಕೊಂಡು ಧಾರ್ಮಿಕ ಮುಖಂಡರು ದೇವರ ಮೊರೆಹೋದರು. ಆಗ ಮಹಾಮಾರಿರೋಗಕ್ಕೆ ದುಷ್ಟಶಕ್ತಿಗಳು ಕಾರಣವಾಗಿದ್ದು, ಅದಕ್ಕೆ ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು ನವರಾತ್ರಿಯ ಸಂದರ್ಭ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಿದರೆ ನಗರದಲ್ಲಿ ತಲೆದೋರಿರುವ ಸಾಂಕ್ರಾಮಿಕರೋಗ ನಿವಾರಣೆಯಾಗುವುದಾಗಿ ತಿಳಿದುಬಂತಂತೆ. ಅದರಂತೆ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಹೊರಡಿಸಿ ಪೂಜೆಸಲ್ಲಿಸುವ ಕಾರ್ಯ ಆರಂಭಿಸಲಾಯಿತು.

ನಾಲ್ಕು ಶಕ್ತಿದೇವತೆಗಳು ಈ ಕರಗ ಹೊರಡಿಸುವ ಸಂದರ್ಭ ಪೌರಾಣಿಕ ಹಿನ್ನಲೆಯಲ್ಲಿ ಧಾರ್ಮಿಕ ಸಂಪ್ರದಾಯವನ್ನು ಕೂಡ ಆಚರಣೆಗೆ ತರಲಾಯಿತು. ಅದೇನೆಂದರೆ ಹಿಂದೆ ಪಾರ್ವತಿಯು ದುಷ್ಟರಾಕ್ಷಸರ ಸಂಹಾರಕ್ಕೆ ಹೊರಡುವ ಮುನ್ನ ಅಣ್ಣ ಮಹಾವಿಷ್ಣುವಿನ ಬಳಿಗೆ ತೆರಳಿದಳು. ಆಗ ವಿಷ್ಣು ತನ್ನ ಅಸ್ತ್ರಗಳಾದ ಶಂಕ, ಚಕ್ರ, ಗಧೆ, ಪದ್ಮ ಸೇರಿದಂತೆ ಆಯುಧಗಳನ್ನು ಆಕೆಗೆ ದಯಪಾಲಿಸಿದ. ಆ ನಂತರ ಪಾರ್ವತಿ ವಿವಿಧ ದೇವಿಯರ ಅವತಾರಗಳಲ್ಲಿ ತೆರಳಿ ದುಷ್ಟರಾಕ್ಷಸರನ್ನು ಸಂಹರಿಸಿದಳು ಎಂಬ ಪ್ರತೀತಿಯಿದೆ. ಹಾಗಾಗಿಯೇ ಪಾರ್ವತಿ ಅವತಾರದ ನಾಲ್ಕು ಶಕ್ತಿದೇವತೆಗಳು ಊರೊಳಗೆ ಅಂದರೆ ಮಹಾವಿಷ್ಣುವಿನ ಸ್ಥಾನಕ್ಕೆ ಬರುವ ಸಂಪ್ರದಾಯ ಜಾರಿಗೆ ತರಲಾಯಿತು ಎನ್ನಲಾಗಿದೆ.

ದಸರಾ ದಿನದಂದು ನಡೆಯುವ ಮೆರವಣಿಗೆಯಲ್ಲಿಯೂ ಕರಗಗಳು ಪ್ರಮುಖ ಪಾತ್ರವಹಿಸುತ್ತಿದ್ದು, ತಮ್ಮದೇ ಆದ ಧಾರ್ಮಿಕ ವಿಧಿವಿಧಾನಗಳೂ ಮೆರವಣಿಗೆಯಲ್ಲಿ ಕಂಡುಬರುತ್ತದೆ. ಶ್ರೀಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಯಾವಮಂಟಪವಾಗಲೀ ಇತರ ಕರಗಗಳಾಗಲೀ ಮೆರವಣಿಗೆಗೆ ಬರುವಂತಿಲ್ಲ. ಎಲ್ಲಾಕರಗಗಳೂ, ಮಂಟಪಗಳೂ ದಂಡಿನಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದನಂತರ ಮೆರವಣಿಗೆಯಲ್ಲಿ ತೆರಳಿ ನಗರದ ಗದ್ದಿಗೆ ಬಳಿಬನ್ನಿ ಕಡಿಯಬೇಕೆಂಬ ನಿಯಮವಿದೆ. ಅಂದಿನಿಂದ ಇಂದಿನವರೆಗೂ ಅದೇ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

-ಸಂಗ್ರಹ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ