ನಾಡಿನ ವಿವಿಧ ದೇಗುಲಗಳಲ್ಲಿ ಶರನ್ನವರಾತ್ರಿ ಸಂಭ್ರಮ


Team Udayavani, Sep 26, 2022, 5:50 AM IST

ನಾಡಿನ ವಿವಿಧ ದೇಗುಲಗಳಲ್ಲಿ ಶರನ್ನವರಾತ್ರಿ ಸಂಭ್ರಮ

ನಾಡಿನ ವಿವಿಧ ದೇಗುಲಗಳಲ್ಲಿ ನವರಾತ್ರಿ ಸಂಭ್ರಮ ಕಳೆ ಕಟ್ಟಿದೆ. ಶುಭಕೃತ್‌ ಸಂವತ್ಸರದ ಶರನ್ನವರಾತ್ರಿ ಉತ್ಸವ ಇಂದಿನಿಂದ(ಸೋಮವಾರ) ಆರಂಭವಾಗಲಿದೆ. ಈ ಸಂದರ್ಭದಲ್ಲಿ ದುರ್ಗೆಯನ್ನು ಒಂದೊಂದು ದಿನ ಒಂದೊಂದು ರೂಪದಲ್ಲಿ ಪೂಜಿಸಲಾಗುತ್ತದೆ. ಈ ಪ್ರಯುಕ್ತ ದೇಗುಲಗಳಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರಮುಖ ದೇಗುಲಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ..

9 ದಿನವೂ ವಿಶಿಷ್ಟ ಅಲಂಕಾರ
ಮೈಸೂರು:
ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ 9 ದಿನವೂ ವಿಶಿಷ್ಟ ಅಲಂಕಾರ ಮಾಡಲಾಗುವುದು. ಮೊದಲ ದಿನ ಬ್ರಾಹ್ಮಿ ಅಲಂಕಾರ, ಸೆ. 27ರಂದು ಮಹೇಶ್ವರಿ ಅಲಂಕಾರ, ಸೆ. 28ರಂದು ಕೌಮಾರಿ ಅಲಂಕಾರ, ಸೆ. 29ರಂದು ವೈಷ್ಣವಿ ಅಲಂಕಾರ, ಸೆ.30ರಂದು ವಾರಾಹಿ ಅಲಂಕಾರ, ಅ. 1ರಂದು ಇಂದ್ರಾಣಿ ಅಲಂಕಾರ, ಅ. 2ರಂದು ಸರಸ್ವತಿ ಅಲಂಕಾರ, ಅ.3ರ ದುರ್ಗಾ ಅಲಂಕಾರ, ಅ.4ರಂದು ವಿಶೇಷ ಮಹಾಲಕ್ಷ್ಮೀ ಅಲಂಕಾರ, ಅ.5ರ ವಿಜಯ ದಶಮಿ ದಿನದಂದು ಅಶ್ವಾರೋಹಣ ಅಲಂಕಾರ ಮಾಡಲಾಗುತ್ತದೆ. ಉತ್ಸವ ಮೂರ್ತಿಗೆ ಉದ್ಘಾಟನೆ ದಿನ ಪುಷ್ಪಾರ್ಚನೆ ಮಾಡಿ ಅನಂತರ 9 ದಿನಗಳ ಕಾಲ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ 10ನೇ ದಿನ ಅರಮನೆಗೆ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಸಲ್ಲಿಸಿ, ಚಿನ್ನದ ಅಂಬಾರಿ ಮೇಲೆರಿಸಿ ಜಂಬೂಸವಾರಿಯ ದಿನ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ಪ್ರಧಾನ ಅರ್ಚಕ ಡಾ| ಶಶಿಶೇಖರ್‌ ದೀಕ್ಷಿತ್‌ ತಿಳಿಸಿದರು.

ಶೃಂಗೇರಿಯಲ್ಲಿ ನವರಾತ್ರಿ ಸಡಗರ
ಶೃಂಗೇರಿ: ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಸೆ.25ರಿಂದ ಆ.6ರವರೆಗೂ ಶರನ್ನವರಾತ್ರಿ ಉತ್ಸವ ಜರುಗಲಿದೆ. ಶ್ರೀಶಾರದಾಂಬೆ ಮಹಾಭಿಷೇಕ, ಜಗನ್ಮಾತೆ ಜಗತ ಸೂತಿ ಅಲಂಕಾರ, ಹಂಸ ವಾಹನ ಅಲಂಕಾರ, ಬ್ರಾಹ್ಮಿà ಅಲಂಕಾರ, ಮಹೇಶ್ವರಿ, ಮಯೂರ ವಾಹನ ಅಲಂಕಾರ, ಗರುಡ ವಾಹನ ಅಲಂಕಾರ, ಶತಚಂಡಿಯಾಗ, ಶಾಲಾಪ್ರವೇಶ, ಪುರಶ್ಚರಣಾರಂಭ, ಮೋಹಿನಿ ಅಲಂಕಾರ, ಸರಸ್ವತ್ಯಾ ವಾಹನ, ವೀಣಾಶಾರದಾ ಅಲಂಕಾರ, ರಾಜರಾಜೇಶ್ವರಿ ಅಲಂಕಾರ, ಮಹಾನವಮಿ, ಸಿಂಹವಾಹನ ಅಲಂಕಾರ, ಶತಚಂಡಿಯಾಗ ಪೂರ್ಣಾಹುತಿ, ಗಜಾಶ್ವಪೂಜೆ, ವಿಜಯದಶಮಿ, ಗಜಲಕ್ಷ್ಮೀ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ, ಸ್ವರ್ಗ ಪರಾಯಣ, ವಿಜಯೋತ್ಸವ, ಶಮೀಪೂಜೆ ನಡೆಯಲಿದೆ. ಗಜಲಕ್ಷ್ಮೀ ಅಲಂಕಾರ ಹೀಗೆ ಪ್ರತಿನಿತ್ಯ ವಿವಿಧ ಅಲಂಕಾರಗಳಲ್ಲಿ ದೇವಿ ಕಂಗೊಳಿಸಲಿದ್ದಾಳೆ.

ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಪ್ರತಿದಿನ ಶ್ರೀಮಠದಲ್ಲಿ ವೇದಪುರಾಣ ಇತಿಹಾಸ, ಪ್ರಸ್ಥಾನತ್ರಯಭಾಷ್ಯ, ಪಾರಾಯಣಗಳು, ಉಭಯ ಶ್ರೀಗಳಿಂದ ಶಾರದಾಂಬೆ ವಿಶೇಷ ಪೂಜೆ, ಮಹಾದೀಪೋತ್ಸವ, ಬೀದಿ ಉತ್ಸವ, ಬಂಗಾರದಿಂಡಿ ಉತ್ಸವ, ದರ್ಬಾರ್‌ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಹೊರನಾಡು ಶ್ರೀಅನ್ನಪೂರ್ಣೇಶ್ವರಿ
ಹೊರನಾಡು: ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ದಸರಾವನ್ನು ಸೆ.9 ರಿಂದ ಅ.7ರವರೆಗೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಶರನ್ನವರಾತ್ರಿ ಮಹೋತ್ಸವ, ಮಹಾಚಂಡಿಕಾ ಹೋಮ, ಧರ್ಮಕರ್ತರ ಪಟ್ಟಾಭಿಷೇಕೋತ್ಸವ ದಿನ ಅಂಗವಾಗಿ ಜೀವಭಾವ ಕಾರ್ಯಕ್ರಮ ನಡೆಯಲಿದೆ. ದೇವಿಯು ಹಂಸರೂಢಾ ಸರಸ್ವತೀ, ಗಜಾರೂಢಾ ಬ್ರಹ್ಮಚಾರಿಣೀ, ಸಿಂಹರೂಢಾ ಚಂದ್ರಘಂಟಾ, ಮೃಗಾರೂಢಾ ಕೂಷ್ಮಾಂಡ, ಮಕರಾರೂಢಾ ಸ್ಕಂದಮಾತಾ, ಮಯೂರಾರೂಢಾ ಕಾತ್ಯಾಯಿನೀ, ಅಶ್ವಾರೂಢಾ ಗೌರೀ, ವೃಷಭಾರೂಢ ತ್ರಿಮೂರ್ತಿ, ಸಿಂಹಾರೂಢಾ ಸಿದ್ಧಿಧಾತ್ರೀ ಅಲಂಕಾರದಲ್ಲಿ ಕಂಗೊಳಿಸಲಿದ್ದು, ವಿಜಯದಶಮಿ ನೆರವೇರಲಿದೆ. ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷ ಪೂಜಾ ಕಾರ್ಯಕ್ರಮ
ಶ್ರೀಹರಿಹರಪುರ ಮಠದಲ್ಲಿ ನವರಾತ್ರಿ ದಸರಾ ಮಹೋತ್ಸವ ಜರುಗಲಿದೆ. ಬಾಳೆಹೊನ್ನೂರು ರಂಭಾಪುರೀ ಮಠದಿಂದ ಈ ವರ್ಷದ ದಸರಾ ದರ್ಬಾರ್‌ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಆಯೋಜಿಸಲಾಗಿದ್ದು, ಮಠದಲ್ಲಿ ನವರಾತ್ರಿ ದಿನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.

ಸುಕ್ಷೇತ್ರ ಶ್ರೀ ಬನಶಂಕರಿ
ಬಾದಾಮಿ: ಸುಕ್ಷೇತ್ರ ಶ್ರೀಬನಶಂಕರಿ ದೇವಸ್ಥಾನದಲ್ಲಿ 2022ನೇ ಸಾಲಿನ ಶುಭಕೃತ್‌ ನಾಮ ಸಂವತ್ಸರ ಅಶ್ವಿ‌àಜ ಮಾಸದ ಶರನ್ನವರಾತ್ರಿ ಕಾರ್ಯಕ್ರಮಗಳು ಸೆ.26 ರಿಂದ ಅ.4ರವರೆಗೆ ಜರುಗಲಿವೆ.

ಸೆ.26ರಂದು ಸೋಮವಾರ ಘಟಸ್ಥಾಪನೆ, 30ರಂದು ಶುಕ್ರವಾರ ಲಲಿತಾ ಪಂಚಮಿ(ಉಪಾಂಗ ಲಲಿತಾವೃತಂ), ಅ.3ರ ಸೋಮವಾರ ದುರ್ಗಾಷ್ಟಮಿ, ಅ.4 ಮಂಗಳವಾರ ಮಹಾನವಮಿ ನವಚಂಡಿ ಹವನದ ಪೂರ್ಣಾಹುತಿ ಸೂರ್ಯೋದಯಕ್ಕೆ(ನಂತರ ನವಚಂಡಿ ಹವನ ಸಮಾಪ್ತಿಯಾಗುವುದು)ಖಂಡೇಪೂಜೆ ಹಾಗೂ ಆಯುಧ ಪೂಜೆ, ವಿಜಯದಶಮಿ/ದಸರಾ/ಅಪರಾಜಿತಾ ಶಮೀಪೂಜನಂ, ಸಂಜೆ ಸೀಮೋಲ್ಲಂಘನ(ಬನ್ನಿ ಮುಡಿಯುವುದು)ಅ.9 ರಂದು ಭಾನುವಾರ ಸೀಗೆಹುಣ್ಣಿಮೆ ಹೀಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್‌ ಕಮಿಟಿ ಚೇರಮನ್‌ ಎಂ.ಎಸ್‌.ಪೂಜಾರ ತಿಳಿಸಿದ್ದಾರೆ.

ಸಿಗಂದೂರಲ್ಲಿ ದೀಪೋತ್ಸವ, ಯಕ್ಷಗಾನ
ಸಾಗರ: ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಧರ್ಮದರ್ಶಿ ರಾಮಪ್ಪ ಅವರ ನೇತೃತ್ವದಲ್ಲಿ ಈ ಬಾರಿಯ ನವರಾತ್ರಿ ಉತ್ಸವ ಸೆ.26ರಿಂದ ಅ.5ರವರೆಗೆ ನಡೆಯಲಿದೆ.ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ ದೀಪೋತ್ಸವ, ಯಕ್ಷಗಾನ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಸೆ.26ರಂದು ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದತೀರ್ಥ ಸ್ವಾಮೀಜಿ, 27ರಂದು ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, 28ರಂದು ತಾಳಗುಪ್ಪದ ಕೂಡ್ಲಿಮಠದ ಸಿದ್ಧವೀರ ಸ್ವಾಮೀಜಿ, 30ರಂದು ಸೊರಬ ಜಡೆ ಮುರುಘಾಮಠದ ಡಾ| ಮಹಾಂತ ಸ್ವಾಮೀಜಿ, ಅ.1ರಂದು ಕಲಬುರಗಿ ಚಿತ್ತಾಪುರದ ಕರದಾಳದ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ, 3ರಂದು ಸೋಲೂರು ಗುರುಮಠದ ವಿಖ್ಯಾತಾನಂದ ಸ್ವಾಮೀಜಿ, 5ರಂದು ಹೊಸನಗರದ ಸಾರಗನಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಸ್ವಾಮೀಜಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ದೀಪದ ಎಣ್ಣೆ ಮೂಲಕ ದೇವಿ ಆರಾಧನೆ
ಬೆಳಗಾವಿ: ಏಳುಕೊಳ್ಳದ ಸವದತ್ತಿ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ನವರಾತ್ರಿ ಹಬ್ಬಕ್ಕಾಗಿ ವಿಶೇಷ ಅಲಂಕಾರಗೊಂಡಿದೆ. ಸೆ.26ರಂದು ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಘಟಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. 10 ದಿನಗಳ ಕಾಲ ಶ್ರೀ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತದೆ. ನಿತ್ಯವೂ ದೀಪದ ಎಣ್ಣೆ ಮೂಲಕ ದೇವಿಯನ್ನು ಆರಾಧಿ ಸಲಾಗುತ್ತದೆ. ನಿತ್ಯ ಪಲ್ಲಕ್ಕಿ ಉತ್ಸವ, ಮಂಗಳವಾರ, ಶುಕ್ರವಾರ ಎರಡು ಹೊತ್ತು ಪಲ್ಲಕ್ಕಿ ಉತ್ಸವ ನೆರವೇರುತ್ತದೆ. 9ನೇ ದಿನ ಆಯುಧ ಪೂಜೆ ನಡೆಸಲಾಗುತ್ತದೆ. ಉಗರಗೋಳ ವ್ಯಾಪ್ತಿಯಲ್ಲಿ ಅಂತರದಲ್ಲಿರುವ ಬನ್ನಿಕಟ್ಟೆಯಲ್ಲಿ ವಿಜಯದಶಮಿಯಂದು ಬನ್ನಿ ಮುಡಿಯುವ ಕಾರ್ಯಕ್ರಮದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನ ಕಾರ್ಯ ನಿರ್ವಾಹಕ ಅ ಧಿಕಾರಿ ಎಸ್‌.ಪಿ.ಜೀರಗಾಳ ತಿಳಿಸಿದ್ದಾರೆ.

ಚಿಂಚಲಿ ಶ್ರೀ ಮಾಯಕ್ಕಾ ದೇವಿ
ರಾಯಬಾಗ: ತಾಲೂಕಿನ ಚಿಂಚಲಿ ಶ್ರೀ ಮಾಯಕ್ಕಾ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ದೇವಿಗೆ ವಿಶೇಷ ಪೂಜೆ-ವಿಶೇಷ ಅಲಂಕಾರ ಮಾಡಲಾಗುತ್ತದೆ.

ಸೆ. 26ರಂದು ಘಟಸ್ಥಾಪನೆಯೊಂದಿಗೆ ಎಣ್ಣೆ ದೀಪ ಹಚ್ಚಿ ಕಾರ್ಯಕ್ರಮ ಆರಂಭಗೊಳ್ಳುತ್ತದೆ. ನಿತ್ಯವೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದು ದೇವಿ ದರ್ಶನ ಪಡೆಯುತ್ತಾರೆ. ನವರಾತ್ರಿ 9ನೇ ದಿನದಂದು ಆಯುಧ ಪೂಜೆ ಮಾಡಿ, ಅಂದು ಜಾಗರಣೆ ಇರುತ್ತದೆ. 10ನೇ ದಿನದಂದು ವಿಜಯದಶಮಿಗೆ ಬನ್ನಿ ಮುಡಿಯುವ ಸಂಪ್ರದಾಯದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

ಶಿರಸಿಯ ಶ್ರೀ ಮಾರಿಕಾಂಬಾ
ಶಿರಸಿ: ಕರ್ನಾಟಕದ ಶಕ್ತಿ ದೇವತೆ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಕಳೆ ಕಟ್ಟಿದೆ. ಪ್ರತಿನಿತ್ಯ ಬೆಳಗ್ಗೆ-ಮಧ್ಯಾಹ್ನ ಚದುರಂಗ, ಕರಕುಶಲ, ಸಾಮಾನ್ಯ ಜ್ಞಾನ, ಜಾನಪದ ಹಾಡು, ನೃತ್ಯ, ಭಗವದ್ಗೀತಾ, ಚಿತ್ರಕಲೆ ಸೇರಿ ವಿವಿಧ ಸ್ಪರ್ಧೆ, ಸಂಜೆ 7ರಿಂದ ವಿವಿಧ ವಿದ್ವಾಂಸರಿಂದ ಪ್ರವಚನ, ಅ. 6, 7, 8ರಂದು ಸಂಜೆ 5ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನವರಾತ್ರಿಯಲ್ಲಿ ಬೆಳಗ್ಗೆ 6ರಿಂದ ಮಾರಿಕಾಂಬಾ ಭಜನಾ ಮಂಡಳಿಯಿಂದ ಭಜನೆ, 8ರಿಂದ ಸಪ್ತಶತಿ ಪಾರಾಯಣ, ಪಲ್ಲವ ಪಾರಾಯಣ ನಡೆಯಲಿವೆ. ಅ.5ರಂದು ಸೀಮೋಲ್ಲಂಘನ, ಕಲಶ ವಿಸರ್ಜನೆ ನಡೆಯಲಿದೆ. ನವರಾತ್ರಿ ಉತ್ಸವವನ್ನು ಧಾರ್ಮಿಕ ಆಚರಣೆಯ ಜತೆ ಸಾಂಸ್ಕೃತಿಕ, ಕ್ರೀಡೆ ಹಾಗೂ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸುವ ಮೂಲಕ ಭಕ್ತಾದಿಗಳಲ್ಲಿ ಹೊಸ ಹರುಷ ಮೂಡಿಸುತ್ತಿದೆ.

ಸುಳೇಭಾವಿ-ಶಿರಸಂಗಿಯಲ್ಲಿ ಸಂಭ್ರಮ
ಬೆಳಗಾವಿ: ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 9 ದಿನಗಳ ಕಾಲ ನವರಾತ್ರಿಯಲ್ಲಿ ವಿಶೇಷ ಪೂಜೆ, ಅಲಂಕಾರ ನೆರವೇರುತ್ತದೆ. ಸೆ. 26ರಂದು ಘಟಸ್ಥಾಪನೆಯೊಂದಿಗೆ ದೀಪ ಹಚ್ಚಿ ನವರಾತ್ರಿ ಉತ್ಸವಕ್ಕೆ ಚಾಲನೆ ಸಿಗಲಿದೆ. 9 ದಿನಗಳ ಕಾಲ ದಿನಾಲೂ ರಾತ್ರಿ ದೇವಿ ಪುರಾಣ, ಭಜನೆ, ಕೀರ್ತನೆ ಇರುತ್ತದೆ. 9ನೇ ದಿನ ಆಯುಧಪೂಜೆ ನಡೆಯಲಿದ್ದು, ಮರುದಿನ ವಿಜಯದಶಮಿಯಂದು ಪಲ್ಲಕ್ಕಿ ಉತ್ಸವದೊಂದಿಗೆ ಸೀಮೆಗೆ ಹೋಗಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುತ್ತದೆ. ಅದೇ ದಿನ ಗ್ರಾಮದೆಲ್ಲೆಡೆ ಪಲ್ಲಕ್ಕಿ ಉತ್ಸವ ನೆರವೇರುತ್ತದೆ ಎಂದು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್‌ ಕಮಿಟಿ ಹಾಗೂ ಅರ್ಚಕರು ತಿಳಿಸಿದ್ದಾರೆ.

ಶಿರಸಂಗಿಯ ಶ್ರೀ ಕಾಳಿಕಾ ದೇವಿ
ಬೆಳಗಾವಿ: ವಿಶ್ವಕರ್ಮ ಬ್ರಾಹ್ಮಣರ ಕುಲದೇವತೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಸೆ.26ರಂದು ಘಟಸ್ಥಾಪನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. 9 ದಿನಗಳ ಕಾಲ ದೇವಿಗೆ ನವದುರ್ಗೆಯರ ರೂಪದ ಅಲಂಕಾರ ಇರುತ್ತದೆ. ದೇವಸ್ಥಾನದ ಧರ್ಮಾ ಧಿಕಾರಿಗಳಿಂದ ದೇವಿ ಪುರಾಣ ಪಠಣ ಇರುತ್ತದೆ. ದಿನಾಲೂ ದೇವಿಗೆ ನೈವೇದ್ಯ, ಮಹಾಪೂಜೆ, ಮಹಾ ಅಲಂಕಾರ ಇರುತ್ತದೆ. 9ನೇ ದಿನ ಪಲ್ಲಕ್ಕಿ ಉತ್ಸವ, ಆಯುಧ ಪೂಜೆ ಮಾಡಲಾಗುತ್ತದೆ. ವಿಜಯದಶಮಿಯಂದು ಬನ್ನಿ ಮುಡಿಯುವ ಕಾರ್ಯಕ್ರಮ ಇರಲಿದೆ ಎಂದು ಶ್ರೀ ಕ್ಷೇತ್ರದ ಧರ್ಮಾಧಿ ಕಾರಿ ಶ್ರೀ ಮೌನೇಶ ಆಚಾರ್ಯ ಬಾಳಾಚಾರ್ಯ ಪೂಜಾರ ತಿಳಿಸಿದ್ದಾರೆ.

ಹುಲಗಿಯಲ್ಲಿ ನವರಾತ್ರಿ ಸಂಭ್ರಮ
ಕೊಪ್ಪಳ: ನಾಡಿನ ಪ್ರಸಿದ್ದ ಹುಲಿಗೆಮ್ಮ ದೇವಸ್ಥಾನದಲ್ಲಿ ಸೆ.26ರಿಂದ ನವರಾತ್ರಿ ಆರಂಭವಾಗಲಿದೆ. ಈ ಬಾರಿ ಪ್ರತಿ ದಿನವೂ ಚಂಡಿಕಾ ಹೋಮ ಹಮ್ಮಿಕೊಳ್ಳಲು ದೇವಸ್ಥಾನದ ಆಡಳಿತ ಮಂಡಳಿ ಸಿದ್ಧವಾಗಿದೆ. ದೇವಿಗೆ ಪ್ರತಿ ದಿನವೂ ಒಂದೊಂದು ಅಲಂಕಾರ ಮಾಡಿ, ಫಲಪುಷ್ಪ  ಸೇರಿ ನೈವೇದ್ಯ ಅರ್ಪಿಸಲಾಗುತ್ತಿದೆ. ಬೆಳಗಿನ ಜಾವ ಮೂಲ ವಿಗ್ರಹಕ್ಕೆ ಪವಿತ್ರ ಜಲದಿಂದ ಅಭಿಷೇಕ, ಪುಷ್ಪಾಲಂಕಾರ ಮಾಡಿ ಮಂತ್ರ ಪಠಿಸಲಾಗುತ್ತದೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸೆ.26 ಶಹನಾಯಿ, 28 ರಂದು ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ಹುಲಿಗೆಮ್ಮ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುಟುಗುಂದಿ ತಿಳಿಸಿದ್ದಾರೆ.

ಮಂಗಳಾದೇವಿ ನವರಾತ್ರಿ ಮಹೋತ್ಸವ
ಮಂಗಳೂರು: ಮಂಗಳೂರಿಗೆ ಆ ಹೆಸರು ಬರುವುದಕ್ಕೆ ಕಾರಣವಾಗಿದ್ದು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ. ಇಲ್ಲಿನ ನವರಾತ್ರಿ ಆಚರಣೆ ಬಹಳ ವಿಶೇಷ. ಸೆ.26ರಿಂದ ಅ.6ರ ವರೆಗೆ ಈ ವರ್ಷದ ನವರಾತ್ರಿ ಮಹೋತ್ಸವ ನಡೆಯಲಿದೆ. ಪುರಾತನ ಕಾಲದ ಬಿಂಬರೂಪದ ಲಿಂಗ ಸ್ತ್ರೀರೂಪವನ್ನು ಹೋಲುವ ಕಾರಣ ಶಿವಶಕ್ತಿರೂಪದ ಲಿಂಗವೆಂದು ಆರಾಧಿಸಲ್ಪಡುತ್ತದೆ. ಇಲ್ಲಿ ವಿಜಯದಶಮಿಯಂದು 500ಕ್ಕೂ ಮಿಕ್ಕಿ ಮಕ್ಕಳಿಗೆ ವಿದ್ಯಾರಂಭ ಮಾಡಿಸಲಾಗುತ್ತದೆ. ಮಹಾನವಮಿಗೆ ಚಂಡಿಕಾ ಹೋಮ, 10 ಸಾವಿರಕ್ಕೂ ಅಧಿಕ ವಾಹನಪೂಜೆ, ರಾತ್ರಿ ದೊಡ್ಡ ವಿಶೇಷ ರಂಗಪೂಜೆ, ಸಣ್ಣ ರಥೋತ್ಸವ ನಡೆಯುತ್ತದೆ. ಈ ಬಾರಿ ಮಂಗಳಾದೇವಿಗೆ ಸುವರ್ಣಪಾದುಕೆ ಮತ್ತು ಬಲಿಮೂರ್ತಿಯ ಪುಷ್ಪಕನ್ನಡಿಗೆ ಬೆಳ್ಳಿಯ ಹೊದಿಕೆಯನ್ನು (1.25 ಕೋರೂ.ವೆಚ್ಚ) ಸಮರ್ಪಣೆ ಮಾಡಲಾಗುತ್ತದೆ. ಹಬ್ಬದ 10 ದಿನವೂ ವಿವಿಧ ವರ್ಣದ ಸೀರೆಗಳಿಂದ ದೇವಿಯನ್ನು ಅಲಂಕರಿಸಲಾಗುತ್ತದೆ.

ಹರಕೆಯ ಚಂಡಿಕಾ ಹೋಮ
ಬಂಟ್ವಾಳ: ತಾಲೂಕಿನಲ್ಲಿರುವ ಪ್ರಸಿದ್ಧ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ. ಸ್ಥಳೀಯವಾಗಿ ಪುರಲ್‌ ಎಂದು ಈ ಸ್ಥಳ ಕರೆಯಲ್ಪಡುತ್ತದೆ, ದೇವಿಯನ್ನು ಪೊರಳ ದೇವಿಯೆನ್ನಲಾಗುತ್ತದೆ. ಈ ಬಾರಿ ಸೆ.26ರಿಂದ ಅ.3ರವರೆಗೆ ನವರಾತ್ರಿ ಮಹೋತ್ಸವ ಜರುಗಲಿದೆ. ಪ್ರತಿ ದಿನ ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ ಭಕ್ತಾಧಿಗಳಿಂದ ಹರಕೆಯ ಚಂಡಿಕಾ ಹೋಮ, ಅ.3ರಂದು ಮಹಾನವಮಿ ಪಯುಕ್ತ ದೇವಳದ ವತಿಯಿಂದ ಚಂಡಿಕಾಹೋಮ ನಡೆಯಲಿದೆ. ಪ್ರತಿ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಸೆ.30ರಂದು ಲಲಿತಾ ಪಂಚಮಿ ದಿನದಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.

ಪ್ರತಿ ನಿತ್ಯ ವಿಶೇಷ ರಂಗ ಪೂಜೆ
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಸೆ.26ರಿಂದ ಅ. 5ರ ತನಕ ನವರಾತ್ರಿ ಮಹೋತ್ಸವವು 10 ದಿನಗಳ ಕಾಲ ಪ್ರತಿ ನಿತ್ಯ ವಿಶೇಷ ರಂಗ ಪೂಜೆ, ಸುವಾಸಿನಿ ಪೂಜೆ ಹಾಗೂ ಅನ್ನ ಸಂತರ್ಪಣೆಯೊಂದಿಗೆ ನಡೆಯಲಿದೆ ಎಂದು ದೇಗುಲದ ಆಡಳಿತೆ ಮೊಕ್ತೇಸರ ಎನ್‌.ಎಸ್‌. ಮನೋಹರ್‌ ಶೆಟ್ಟಿ, ಆನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಹಾಗೂ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ. ತಿಳಿಸಿದ್ದಾರೆ. ಪ್ರತಿ ನಿತ್ಯ ವಿವಿಧ ಸೇವಾರ್ಥಿಗಳಿಂದ ಚಂಡಿಕಾ ಯಾಗ ನಡೆಯಲಿದ್ದು 10ನೇ ದಿನ ದಶಮಿಯಂದು ದೇಗುಲ ವತಿಯಿಂದ ಮಹಾ ಚಂಡಿಕಾಯಾಗ ಜರುಗಲಿದೆ. ಉತ್ಸವದ ವೇಳೆ ಪ್ರತಿದಿನವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.

ಕಟೀಲಲ್ಲಿ ಭಜನೆ, ಯಕ್ಷಗಾನ ಬಯಲಾಟ ಪ್ರದರ್ಶನ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸೆ.26ರಿಂದ ಅ. 5ರ ವರೆಗೆ ಜರುಗಲಿದ್ದು ಪ್ರತಿ ದಿನ ಬೆಳಗ್ಗೆ 9.30ರಿಂದ ಸರಸ್ವತಿ ಸದನದಲ್ಲಿ ಭಜನೆ, ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 7.30ರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಜರುಗಲಿದೆ. ಸೆ.26ರಿಂದ ಅ. 5ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀಕೃಷ್ಣನಿಗೆ ದೇವಿ ಅಲಂಕಾರಾಧನೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಆರಾಧ್ಯ ದೇವನಾದರೂ ಪ್ರತಿ ಶುಕ್ರವಾರ ಮತ್ತು ನವರಾತ್ರಿಯ ಎಲ್ಲ ದಿನಗಳಲ್ಲೂ ದೇವಿಯ ಅಲಂಕಾರವನ್ನು ನಡೆಸಿ ಪೂಜಿಸಲಾಗುತ್ತದೆ. ದೇವಿಗೆ ಸಂಬಂಧಿಸಿದ ಹೋಮ ಹವನಾದಿಗಳೂ ನಡೆಯುತ್ತವೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ
ಬೈಂದೂರು: ತಾಲೂಕಿನಲ್ಲಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೆ.26ರಿಂದ ಅ.5ರವರೆಗೆ ಮಹಾನವರಾತ್ರಿ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಪ್ರತಿ ದಿನ ಮಧ್ಯಾಹ್ನ 2ರಿಂದ ರಾತ್ರಿ 11 ಗಂಟೆಯವರೆಗೂ ಆಹ್ವಾನಿತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.4 ಮಹಾನವಮಿಯಂದು ಬೆಳಗ್ಗೆ 11.30ಕ್ಕೆ ಚಂಡಿಕಾಯಾಗ, ಮಧ್ಯಾಹ್ನ 1.05ಕ್ಕೆ ರಥೋತ್ಸವ, ಅ.5ರ ವಿಜಯದಶಮಿಯಂದು ವಿದ್ಯಾರಂಭ ನವಾನ್ನಪ್ರಾಶನ ನಡೆಯಲಿದೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ
ಕಾಪು: ತಾಲೂಕಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೆ.26ರಿಂದ ಅ. 5ರ ವರೆಗೆ ಜರಗಲಿರುವ ನವರಾತ್ರಿ ಉತ್ಸವವನ್ನು “ಉಚ್ಚಿಲ ದಸರಾ ಉತ್ಸವ-2022’ವಾಗಿ ಆಚರಿಸಲಾಗುತ್ತಿದೆ. ಮೈಸೂರು, ಮಂಗಳೂರು, ಮಡಿಕೇರಿ ದಸರಾ ಮಾದರಿಯಲ್ಲೇ ವೈಭವದಿಂದ ಆಚರಿಸಲಾಗುವುದು. ಉಡುಪಿ ಜಿಲ್ಲೆಗೆ ಇದೊಂದು ವಿಶೇಷ. ನವದುರ್ಗೆ ಯರ ಪ್ರತಿಷ್ಠೆ, ಪ್ರತೀದಿನ ಚಂಡಿಕಾ ಹೋಮ, ಸಾಂಸ್ಕೃ ತಿಕ ಕಾರ್ಯ ಕ್ರಮ ನಡೆಯಲಿದೆ. ಉಚ್ಚಿಲ – ಪಡುಬಿದ್ರಿ – ಹೆಜಮಾಡಿ ಟೋಲ್‌ಗೇಟ್‌ – ಪಡುಬಿದ್ರಿ -ಕೊಪ್ಪಲಂಗಡಿ ಕ್ರಾಸ್‌ ವರೆಗೆ (26ಕಿ.ಮೀ.) ಶೋಭಾಯಾತ್ರೆ ನಡೆಯಲಿದೆ. ಇದರಲ್ಲಿ ಹುಲಿವೇಷ, ಭಜನ ತಂಡಗಳು ಸಹಿತ 65ಕ್ಕೂ ಹೆಚ್ಚಿನ ಟ್ಯಾಬ್ಲೋಗಳಿರಲಿವೆ.

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ
ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆಪ್ಟಂಬರ್‌ 26ರಿಂದ ಅಕ್ಟೋಬರ್‌ 5ರ ವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ.ಅ. 2ರಂದು ಚಂಡಿಕಾ ಯಾಗ, ವಿಜಯ ದಶಮಿಯಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟನೆ ತಿಳಿಸಿದೆ.

ಕೋಟ ಶ್ರೀ ಅಮೃತೇಶ್ವರೀ ದೇವಸ್ಥಾನ
ಕೋಟ: ಕೋಟ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಸೆ. 26ರಿಂದ ಅ.5ರ ತನಕ ನವರಾತ್ರಿಯ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ, ವಿಶೇಷ ಅವತಾರದಲ್ಲಿ ಪೂಜೆ ನಡೆಯಲಿದೆ ಮತ್ತು ಪ್ರತೀ ದಿನ ಚಂಡಿಕಾ ಸಪ್ತಶತಿ ಪಾರಾಯಣ, ದುರ್ಗಾಹೋಮ, ಅಪರಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್‌, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ
ಕಾಪು: ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸೆ. 26ರಿಂದ ಅ. 5ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ಜರಗಲಿದ್ದು ಅ. 4ರಂದು ಚಂಡಿಕಾಯಾಗ ಪೂರ್ಣಾಹುತಿ ಮತ್ತು ಮಹಾಅನ್ನಸಂತರ್ಪಣೆ ನಡೆಯಲಿದೆ. ಸೆ. 26ರಿಂದ ಅ. 5ರ ವರೆಗೆ ಪ್ರತೀ ದಿನ ಮಂಗಳ ವಾದ್ಯ, ಉಷಃಕಾಲ ಪೂಜೆ, ಗಣಪತಿ ಯಾಗ, ಶಕ್ತಿ ಯಾಗ, ಲಲಿತಾರ್ಚನೆ, ಸುವಾಸಿನಿ ಪೂಜೆ, ರಾತ್ರಿ ಪೂಜೆ ಮತ್ತು ಏಕಾಂತ ಸೇವೆ ನಡೆಯಲಿದೆ. ಸೆ. 27ರಂದು ಕದಿರು ಕಟ್ಟುವುದು, ಮಧ್ಯಾಹ್ನ ದೇವಿ ದರ್ಶನ, ಅ. 4ರಂದು ಪೂರ್ವಾಹ್ನ 11.30ಕ್ಕೆ ಚಂಡಿಕಾ ಯಾಗ, ಮಧ್ಯಾಹ್ನ ಸಾಮೂಹಿಕ ಅನ್ನಸಂತರ್ಪಣೆ, ಸಂಜೆ 4 ಗಂಟೆಗೆ ಶ್ರೀ ದೇವಿ ದರ್ಶನ, ಕವಾಟ ಪೂರಣ, ಅ. 5ರಂದು ಸಮಷ್ಠಿ ಪೂಜೆ, ಮಂಗಳ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್‌ ಹೆಗ್ಡೆ ಮತ್ತು ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ಸಂಭ್ರಮದ ಶರನ್ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ನವಮಿಯ ಆಯುಧ ಪೂಜೆಯೂ, ದಶಮಿಯ ವಿಜಯವೂ…

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ಜಗನ್ಮಾತೆಯ ಜ್ಞಾನಪೂರ್ವಕ ಆರಾಧನೆಯಿಂದ ಲೋಕಕಲ್ಯಾಣ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಕೋಟಿ ಸೂರ್ಯನಷ್ಟೇ ಪ್ರಕಾಶಮಾನಳು ಸಿದ್ಧಿ ಧಾತ್ರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

ನವರಾತ್ರಿ ಇಂದಿನ ಆರಾಧನೆ; ಘೋರ ತಪಸ್ಸಿನಿಂದ ಪರಶಿವನನ್ನು ಪಡೆದ ಮಹಾಗೌರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.