ಚುನಾವಣಾ ಬಾಂಡ್‌: ಏನಿದೆ, ಏನಿಲ್ಲ?

Team Udayavani, Apr 13, 2019, 6:00 AM IST

ಚುನಾವಣಾ ವೆಚ್ಚ ನಿಭಾವಣೆಗಾಗಿ ಅಗತ್ಯವಿರುವ ವೆಚ್ಚಕ್ಕಾಗಿ ಚುನಾವಣಾ ಬಾಂಡ್‌ ಜಾರಿಗೊಳಿಸಲಾಗಿದೆ. ಜನಪ್ರತಿನಿಧಿಗಳನ್ನು ಆಯ್ಕೆಗೊಳಿಸುವ ಪ್ರಕ್ರಿಯೆಯಲ್ಲಿ ತೋಳ್ಬಲ, ಹಣಬಲದ ಪ್ರಭಾವ ತಗ್ಗಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ ಅದರ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವಂತೆಯೇ ಸುಪ್ರೀಂಕೋರ್ಟ್‌ ಶುಕ್ರವಾರ ನೀಡಿದ ತೀರ್ಪು ಗಮನಾರ್ಹವಾಗಿದೆ.

ಸುಪ್ರೀಂಕೋರ್ಟ್‌ ಹೇಳಿದ್ದೇನು?
ಅಲ್ಪ ಕಾಲದ ವಿಚಾರಣೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.
ಮೇ 31ರ ಒಳಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಮೊಹರು ಮಾಡಿದ ಲಕೋಟೆಯಲ್ಲಿ ಚುನಾವಣಾ ಬಾಂಡ್‌ ಮೂಲಕ ಸ್ವೀಕರಿಸಿದ ದೇಣಿಗೆ ವಿವರ ಸಲ್ಲಿಸಬೇಕು.
ವ್ಯಕ್ತಿಗಳಿಂದ, ಕೈಗಾರಿಕೋದ್ಯಮಿಗಳಿಂದ, ಕಾರ್ಪೊರೇಟ್‌ ಸಂಸ್ಥೆಗಳಿಂದ ಯಾವ ರೀತಿಯಲ್ಲಿ ದೇಣಿಗೆ ಸಂಗ್ರಹವಾಗಿದೆ ಎಂಬುದರ ಬಗ್ಗೆ ಮಾಹಿತಿ ಅದರಲ್ಲಿ ಒಳಗೊಂಡಿರಬೇಕು.

ಎಲ್ಲಿ ಸಿಗುತ್ತದೆ ಬಾಂಡ್‌?
ಎಸ್‌ಬಿಐನ ಆಯ್ದ ಬ್ರಾಂಚ್‌ಗಳಲ್ಲಿ ಚುನಾವಣಾ ಬಾಂಡ್‌ ಮಾರಲಾಗುತ್ತದೆ.

ತೆರಿಗೆ ವಿನಾಯಿತಿ
ಪಕ್ಷಗಳಿಗೆ ನೀಡಿದ ದೇಣಿಗೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.
2018ರ ಮಾರ್ಚ್‌ನಲ್ಲಿ ಜನ ಪ್ರಾತಿನಿಧ್ಯ ಕಾಯ್ದೆ (ಆರ್‌.ಪಿ. ಆ್ಯಕ್ಟ್)ಗೆ ತಿದ್ದುಪಡಿ ತರಲಾಗಿತ್ತು. ಅದರ ಪ್ರಕಾರ ಬಾಂಡ್‌ಗಳ ಮೂಲಕ 2 ಸಾವಿರ ರೂ.ಗಳಿಗಿಂತ ಮೇಲ್ಪಟ್ಟ ದೇಣಿಗೆ ಪಡೆದುಕೊಂಡರೆ ಚುನಾವಣಾ
ಆಯೋಗಕ್ಕೆ ಮಾಹಿತಿ ನೀಡಬೇಕಾಗಿಲ್ಲ.

ಪ್ರಜೆಗಳಿಗೆ ಆಗುವ ಅನುಕೂಲವೇನು?
ರಾಜಕೀಯ ಪಕ್ಷಗಳಿಗೆ ಯಾವ ಮೂಲದಿಂದ ಹಣ ಅಥವಾ ಆರ್ಥಿಕ ನೆರವು ಸಿಗುತ್ತದೆ ಎನ್ನುವುದು ಗೊತ್ತಾಗುತ್ತದೆ.
ಶುಕ್ರವಾರ (ಏ.12) ಸುಪ್ರೀಂಕೋರ್ಟ್‌ ಆದೇಶ ಈ ನಿಟ್ಟಿನಲ್ಲಿ ಮಹತ್ವದ ಕ್ರಮ.

ಸುಪ್ರೀಂಕೋರ್ಟಲ್ಲಿ ಅರ್ಜಿದಾರರ ವಾದ
ಸದ್ಯ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಹಣಕಾಸು ಕಾಯ್ದೆ 2016 ಮತ್ತು 2017ರ ಮೂಲಕ ಕಂಪನಿ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ಜನ ಪ್ರಾತಿನಿಧ್ಯ ಕಾಯ್ದೆ, ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆ, ಆರ್‌ಬಿಐ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ.

ಹಣದ ಮೂಲದ ಬಗ್ಗೆ ಬಹಿರಂಗವಾಗದೇ ಇದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಎನ್ನುವುದು ಅರ್ಜಿದಾರರ ವಾದ. ಈ ಬಗ್ಗೆ ಮೊದಲು ಆಕ್ಷೇಪಿಸಿ ಕೋರ್ಟ್‌ ಮೆಟ್ಟಿಲೇರಿದ್ದು ಸಿಪಿಎಂ.

ಖಾಸಗಿ ಸಂಸ್ಥೆಯ ಅರ್ಜಿಯ ಪ್ರಕಾರ ಕಾಯ್ದೆಗಳಲ್ಲಿನ ತಿದ್ದುಪಡಿಯಿಂದ ನಿಯಂತ್ರಣವಿಲ್ಲದ ರೀತಿಯಲ್ಲಿ ದೇಶಿಯ ಮತ್ತು ವಿದೇಶಿ ಮೂಲಗಳಿಂದ ದೇಣಿಗೆ ಬರುತ್ತದೆ.

ಚುನಾವಣಾ ಬಾಂಡ್‌ ಎಂದರೇನು?
ನಿಗದಿತ ಬ್ಯಾಂಕ್‌ಗಳಿಂದ (ಸದ್ಯಕ್ಕೆ ಎಸ್‌ಬಿಐ ಮಾತ್ರ) ನೀಡುವ ಬಡ್ಡಿ ರಹಿತ ಬಾಂಡ್‌. ಅದನ್ನು ಪ್ರಾಮಿಸರಿ ನೋಟ್‌ಗಳ ಮೂಲಕವೂ ನೀಡಬಹುದು. ಆರ್‌ಬಿಐ ಮತ್ತು ರಾಜಕೀಯ ಪಕ್ಷ ಮಧ್ಯವರ್ತಿಯಂತೆ ಇದರಲ್ಲಿ ವರ್ತಿಸುತ್ತವೆ. 2017ರ ಹಣಕಾಸು ವಿಧೇಯಕದಲ್ಲಿ ಅದನ್ನು ಜಾರಿಗೊಳಿಸಲಾಯಿತು.

ಜಾರಿಯಾಗುವ ವಿಧಾನ
2018ರ ಜ.2ರಂದು ಕೇಂದ್ರ ಸರ್ಕಾರ ಈ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಭಾರತೀಯ ಪ್ರಜೆ ಅಥವಾ ಭಾರತದಲ್ಲಿನ ಸಂಸ್ಥೆ ಅದನ್ನು ಖರೀದಿಸಲು
ಅವಕಾಶ.

ದೇಣಿಗೆ ನೀಡಿದವರ ಗುರುತು ಬ್ಯಾಂಕ್‌ಗಳ ಬಳಿ ಮಾತ್ರ ಇರುತ್ತದೆ.
ಚುನಾವಣಾ ಬಾಂಡ್‌ ಮೌಲ್ಯ (ರೂ.ಗಳಲ್ಲಿ)
1 ಸಾವಿರ, 10 ಸಾವಿರ, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ
ಬಾಂಡ್‌ ಖರೀದಿಸುವ ವ್ಯಕ್ತಿ ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ)ಅರ್ಜಿ ಭರ್ತಿ ಮಾಡಬೇಕು.

ಚುನಾವಣಾ ಬಾಂಡ್‌ಗಳಿಗೆ ಇರುವ ಇತರ ನಿಯಮಗಳು
ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 29ಎ ಪ್ರಕಾರ ರಾಜಕೀಯ ಪಕ್ಷ ನೋಂದಣಿಯಾಗಿರಬೇಕು. ರಾಜ್ಯ ವಿಧಾನಸಭೆ ಅಥವಾ ಲೋಕಸಭೆಗೆ ನಡೆದ ಇತ್ತೀಚಿನ ಚುನಾವಣೆಯಲ್ಲಿ ಒಟ್ಟು ಚಲಾವಣೆಗೊಂಡ ಮತಗಳ ಪೈಕಿ ಶೇ.1ರಷ್ಟು ಮತಗಳನ್ನು ಪಡೆದಿರಬೇಕು.

ಬಾಂಡ್‌ ಮೂಲಕ ಆದಾಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಪಕ್ಷಕ್ಕೆ ಚುನಾವಣಾ ಆಯೋಗ ದೃಢೀಕರಿಸಿದ ಬ್ಯಾಂಕ್‌ ಖಾತೆ ಇರಬೇಕು. ಆಯೋಗ ಬಾಂಡ್‌ಗಳ ಮೂಲಕ ಬಂದ ಮೊತ್ತದ ಮೇಲೆ ನಿಗಾ ಇರಿಸುತ್ತದೆ.

ನಿಗದಿತ ರಾಜಕೀಯ ಪಕ್ಷದ ಅಧಿಕೃತ ಬ್ಯಾಂಕ್‌ ಖಾತೆಯಲ್ಲಿ 15 ದಿನಗಳ ಒಳಗಾಗಿ ನಗದು ಮಾಡಿಸಿಕೊಳ್ಳಬೇಕು. ಇಲ್ಲದೇ ಇದ್ದರೆ ಖರೀದಿಸಿದ ಬಾಂಡ್‌ನ‌ ಮಾನ್ಯತೆ ತನ್ನಿಂದ ತಾನೆ ರದ್ದಾಗುತ್ತದೆ.

ಪ್ರತಿ ತ್ತೈಮಾಸಿಕದ ಮೊದಲ ಹತ್ತು ದಿನಗಳಲ್ಲಿ ಮಾತ್ರ ಅದನ್ನು ಖರೀದಿಸಲು ಅವಕಾಶ. ಅದಕ್ಕೆ ಸಂಬಂಧಿಸಿದ ದಿನಾಂಕಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ.

ಕೇಂದ್ರ ಸರಕಾರದ ಸಮರ್ಥನೆ
ಬ್ಯಾಂಕ್‌ಗಳು ಬಾಂಡ್‌ಗಳನ್ನು ಯಾರು ಖರೀದಿ ಮಾಡುತ್ತಾರೆ ಅಂಥವರ ವಿವರ ಸಂಗ್ರಹಿಸುತ್ತವೆ. ಅದಕ್ಕಾಗಿಯೇ ಕೆವೈಸಿ ಪ್ರಕ್ರಿಯೆ ಪೂರ್ತಿ ಮಾಡಬೇಕು ಎಂಬ ನಿಯಮ ಜಾರಿ ಮಾಡಲಾಗಿದೆ.

ಚುನಾವಣಾ ವ್ಯವಸ್ಥೆಯ ನಿರ್ವಹಣೆಗೆ ಸರಿಯಾದ ಮಾರ್ಗದಿಂದ ಬಂದ ಮೊತ್ತ ವಿನಿಯೋಗವಾಗುತ್ತದೆ. ಇದರ ಜತೆಗೆ ದಾನಿಯ ಮಾಹಿತಿಯನ್ನೂ ರಕ್ಷಿಸಿದಂತಾಗುತ್ತದೆ.

ದಾನಿಗಳ ವಿವರ ಬಹಿರಂಗವಾಗುವುದರಿಂದ ಅವರನ್ನು ರಾಜಕೀಯ ಪಕ್ಷಗಳು ದುರುಪಯೋಗ ಮಾಡುವ ಸಾಧ್ಯತೆ ಇದೆ.

ಹಾಲಿ ಚುನಾವಣೆಗೆ ಸಂಬಂಧಿಸಿದಂತೆ ಬಾಂಡ್‌ ಬಗ್ಗೆ ಸೂಚನೆ ಹೊರಡಿಸಿದ್ದು ಯಾವಾಗ?
ಫೆ.28ರಂದು ಕೇಂದ್ರ ವಿತ್ತ ಸಚಿವಾಲಯ ಎಸ್‌ಬಿಐನ 29 ಅಧಿಕೃತ ಶಾಖೆಗಳ ಮೂಲಕ ಮಾರ್ಚ್‌ 1-20,
ಏ.1-20, ಮೇ 6-15ರ ಒಳಗಾಗಿ ಬಾಂಡ್‌ಗಳನ್ನು ನಗದೀಕರಿಸಲು ಪ್ರಕಟಣೆ ಹೊರಡಿಸಿತ್ತು.

ಆಯೋಗ ಮತ್ತು ಅರ್ಜಿದಾರರ ನಿಲುವು
ಚುನಾವಣಾ ಆಯೋಗ ಮತ್ತು ಅರ್ಜಿದಾರರು ವಾದಿಸುವ ಪ್ರಕಾರ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ವ್ಯವಸ್ಥೆ ಪಾರದರ್ಶಕವಾಗಿಲ್ಲ.
ಯಾರು, ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಪ್ರಮಾಣದಲ್ಲಿ ದೇಣಿಗೆ ನೀಡಿದ್ದಾರೆ ಎಂಬ ವಿಚಾರ ಬಹಿರಂಗವಾಗುವುದಿಲ್ಲ.
ಬಾಂಡ್‌ಗಳನ್ನು ಖರೀದಿಸಿದವರ ಮಾಹಿತಿಯನ್ನು ಸಾರ್ವಜನಿಕಗೊಳಿಸಿದಾಗ ಅದರ ಮಾಹಿತಿ ಎಲ್ಲರಿಗೂ ಸಿಗುತ್ತದೆ. ಜತೆಗೆ ಪಾರದರ್ಶಕ ವ್ಯವಸ್ಥೆ ಇರುತ್ತದೆ.

50 ಸಾವಿರ ಕೋಟಿ ರೂ.
ಲೋಕಸಭೆ ಚುನಾವಣೆಗೆ ಬೇಕಾಗಿರುವ ಅಂದಾಜು ವೆಚ್ಚ
250 ಕೋಟಿ ರೂ.
2014ರಲ್ಲಿ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳಿಗೆ ಮಾಡಿದ್ದ ವೆಚ್ಚ
5 ಸಾವಿರ ಕೋಟಿ ರೂ.
ಸದ್ಯದ ಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳಿಗೆ ಮಾಡುತ್ತಿರುವ ವೆಚ್ಚ.
2,600 ಕೋಟಿ ರೂ.
ರಾಜಕೀಯ ಪಕ್ಷಗಳು ಜಾಹೀರಾತಿಗಾಗಿ ಮಾಡಬಹುದಾದ ವೆಚ್ಚದ ಅಂದಾಜು.

2017  -18ನೇ ಸಾಲಿನಲ್ಲಿ ಪಕ್ಷಗಳಿಗೆ ಸಿಕ್ಕಿದ ದೇಣಿಗೆ ವಿವರ

ಮೊತ್ತ (ಕೋಟಿ ರೂ.ಗಳಲ್ಲಿ) ಪಕ್ಷ

990 ಬಿಜೆಪಿ
26.65 ಕಾಂಗ್ರೆಸ್‌
2 ಎನ್‌ಸಿಪಿ
2.75 ಸಿಪಿಎಂ
1.14 ಸಿಪಿಐ

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇಶಾದ್ಯಂತ ಒಂದೊಂದು ಲೋಕಸಭಾ ಕ್ಷೇತ್ರವೂ ಒಂದೊಂದು ರೀತಿಯಲ್ಲಿ ವಿಶೇಷತೆ ಪಡೆದುಕೊಂಡಿದೆ. ದಿಗ್ಗಜ ನಾಯಕರಿಂದ ಹಿಡಿದು, ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿರುವವರೂ...

  • ಮಥುರಾ (ಉತ್ತರ ಪ್ರದೇಶ) ಹೇಮಮಾಲಿನಿ (ಬಿಜೆಪಿ) Vs ಕುನ್ವರ್‌ ನರೇಂದ್ರ ಸಿಂಗ್‌ (ಆರ್‌ಎಲ್‌ಡಿ) * ಜಾಟ್‌ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಕಳೆದ ಬಾರಿ ಕನಸಿನ...

  • ಲೋಕಸಭಾ ಚುನಾವಣೆಯ ಫ‌ಲಿತಾಂಶದ ದಿನ ಹತ್ತಿರವಾಗುತ್ತಿದ್ದು, ಈ ಬಾರಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದಷ್ಟೇ ಅಲ್ಲದೆ,...

  • 2019ರ ಲೋಕಸಭೆ ಚುನಾವಣೆ ಕ್ಷಣಕ್ಷಣದಲ್ಲೂ, ಕಣಕಣದಲ್ಲೂ ರೋಮಾಂಚಕಾರಿ ತಿರುವು ಪಡೆಯುತ್ತಾ ಇಡೀ ದೇಶವನ್ನು ಫ‌ಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಲ್ಲಿಸಿದೆ. ಜಗತ್ತಿನ...

  • ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಪ್ರಯತ್ನಿಸುತ್ತಿದ್ದು, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ರನ್ನು...

ಹೊಸ ಸೇರ್ಪಡೆ