ದೇಶಾದ್ಯಂತ ಮೋದಿ ವಿರೋಧಿ ಅಲೆಯಿದೆ

Team Udayavani, Mar 27, 2019, 5:53 AM IST

ಚುನಾವಣೆ ಘೋಷಣೆಯಾಗಿದೆ ಮತ್ತು ದೇಶಾದ್ಯಂತ ಪ್ರವಾಸವನ್ನೂ ಮಾಡಿದ್ದೀರಿ. ಜನರ ಮೂಡ್‌ ಹೇಗಿದೆ?
ದೇಶದಲ್ಲಿ ಹಲವಾರು ಸಮಸ್ಯೆಗಳು ಇವೆ. ನಾನು ವಿವಿಧ ಭಾಗಗಳಿಗೆ ಭೇಟಿ ನೀಡಿದಾಗ ನಿರುದ್ಯೋಗ, ಕೃಷಿ ಕ್ಷೇತ್ರಕ್ಕೆ ಕಾಡುತ್ತಿರುವ ಹಲವಾರು ಸಮಸ್ಯೆಗಳನ್ನು ಕಣ್ಣಾರೆ ನೋಡಿದೆ. ಕೃಷಿ ಮತ್ತು ಉದ್ಯೋಗ ನೇರವಾಗಿ ಸಂಬಂಧ ಹೊಂದಿರುವ ಕ್ಷೇತ್ರಗಳು. ಏಕೆಂದರೆ ಅದು ದೇಶದ ಅರ್ಥ ವ್ಯವಸ್ಥೆಗೆ ಸೇರಿದ ವಿಚಾರವಾಗಿದೆ. ಅದು ಮುಂದುವರಿದು ಬ್ಯಾಂಕಿಂಗ್‌ಗೆ ಪರೋಕ್ಷವಾಗಿ ಸಂಪರ್ಕ ಕಲ್ಪಿಸುತ್ತದೆ. ಪ್ರಧಾನಿ ಮೋದಿಯವರು ದ್ವೇಷಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ದ್ವೇಷದಿಂದ ತುಂಬಿರುವ ದೇಶವನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ದೇಶದಲ್ಲಿ ಎಲ್ಲರಿಗೂ ಉದ್ಯೋಗ ಸಿಗುವಂತಾಗಬೇಕು ಎನ್ನುವುದು ನಮ್ಮ ಅಪೇಕ್ಷೆ.

ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂಬ ಆರೋಪವಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಲೋಪ ಸರಿಪಡಿಸಲು ಏನು ಕ್ರಮ ಕೈಗೊಳ್ಳಲಿದೆ?
ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರೇ ಇದ್ದಾರೆ. ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿರುದ್ಯೋಗ ಸಮಸ್ಯೆಯಿಂದ ಹೇಗೆ ಪಾರಾಗಬೇಕು ಎನ್ನುವುದು ಅವರಿಗೆ ಹೊಳೆಯುತ್ತಿಲ್ಲ. ಅದಕ್ಕೆ ಭಾರತ ಸರ್ಕಾರವೇ ಉತ್ತರ ನೀಡಬೇಕಿದೆ. ಮೊದಲನೆಯದಾಗಿ, ಯಾವ ಹಂತದಲ್ಲಿ ಸಮಸ್ಯೆ ಇದೆ ಎನ್ನುವುದನ್ನು ಅರಿಯಬೇಕಾಗಿದೆ. ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದು ಮೊದಲು ಮಾಡಬೇಕಾದ ಕೆಲಸ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಯೋಗ ಕೊರತೆಯ ಸಮಸ್ಯೆಯನ್ನು ತಗ್ಗಿಸುವಲ್ಲಿ ಅಂದುಕೊಂಡಷ್ಟು ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಪ್ರಧಾನಿ ಮೋದಿಯವರು ಏನು ಮಾಡಿದರು? ಸಮಸ್ಯೆಯನ್ನು ಹೆಚ್ಚು ಮಾಡಿದರು. ನೋಟು ಅಮಾನ್ಯ, ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ (ಜಿಎಸ್‌ಟಿ), ಅನಿಲ್‌ ಅಂಬಾನಿ ತಾಳಕ್ಕೆ ತಕ್ಕಂತೆ ಮನ ಬಂದಂತೆ ಬಂಡವಾಳಶಾಹಿ ವ್ಯವಸ್ಥೆ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ.

ಪ್ರಧಾನಮಂತ್ರಿಯವರು ದೇಶದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಹೇಳುತ್ತಿದ್ದಾರೆ.
ಸರ್ಕಾರ ಏನು ಮಾತನಾಡುತ್ತಿದೆ ಎನ್ನುವುದು ನನಗಷ್ಟೇ ಅಲ್ಲ, ಇಡೀ ದೇಶಕ್ಕೂ ತಿಳಿಯುತ್ತಿಲ್ಲ. ಎಲ್ಲಿಯೇ ಹೋದರೂ, ಜನರು ವ್ಯಾಪಾರ ಸರಿಯಾಗಿ ಆಗುತ್ತಿಲ್ಲ ಎನ್ನುತ್ತಿದ್ದಾರೆ, ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳಿಗೆ ಹೋದರೆ ಸರಿಯಾದ ಚಿತ್ರಣ ಸಿಗುತ್ತದೆ. ಚೀನಾ ಪ್ರತಿ ದಿನ 50 ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತದೆ. ನಮ್ಮ ದೇಶದಲ್ಲಿ 450 ಉದ್ಯೋಗ ಸೃಷ್ಟಿಸಲಾಗುತ್ತದೆ.

ಕೃಷಿ ಕ್ಷೇತ್ರದ ಸಮಸ್ಯೆಗಳು ಹೆಚ್ಚಾಗುತ್ತಿವೆ ಮತ್ತು ರಾಜಕೀಯ ಪಕ್ಷಗಳೆಲ್ಲವೂ ಹಲವು ಯೋಜನೆಗಳನ್ನು ರೂಪಿಸಿವೆ. ನಿಮ್ಮದೇನಿದೆ ಹೊಸತು?
ಕೃಷಿಯೇ ನಮ್ಮ ದೇಶದ ಪ್ರಧಾನ ಶಕ್ತಿ ಎನ್ನುವುದು ನನ್ನ ನಂಬಿಕೆ. ಆದರೆ ಬಿಜೆಪಿಗೆ ಈ ನಂಬಿಕೆ ಇಲ್ಲ. ಕೃಷಿಕರಿಗೆ ಅದು ಪ್ರತಿ ದಿನ 3.5ರೂ. ಅನ್ವಯವಾಗುವಂತೆ ಯೋಜನೆ ಘೋಷಣೆ ಮಾಡಿದಾಗ ಈ ಮಾತು ಸಾಬೀತಾಯಿತು. ರೈತರ ಹಣಕಾಸು ಸಮಸ್ಯೆ ಬಗೆಹರಿಸಲು ಈ ಮೊತ್ತ ಏನೇನೂ ಸಾಲದು. 15 ಮಂದಿ ಶ್ರೀಮಂತರ 3.5 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುತ್ತಾರೆ, ಆದರೆ ರೈತರ ವಿಷಯದಲ್ಲಿ ಇದೇಕೆ ಸಾಧ್ಯವಾಗುವುದಿಲ್ಲ? ಸಾಲ ಮನ್ನಾ ಎನ್ನುವುದು ಕೇವಲ ತಾತ್ಕಾಲಿಕ ಪರಿಹಾರ. ಅವರ ಸಮಸ್ಯೆ ಪರಿಹಾರಕ್ಕೆ ತಂತ್ರಜ್ಞಾನದ ಜತೆಗೆ ಜಾಗತಿಕ ಮಾರುಕಟ್ಟೆಯೊಡನೆ ಸಂಪರ್ಕ ಕಲ್ಪಿಸಬೇಕು. ಕೃಷಿಯಲ್ಲಿ ಯಶಸ್ಸು ಸಾಧಿಸಬೇಕಾದರೆ ಆಹಾರ ಸಂಸ್ಕರಣಾ ಘಟಕಗಳು, ಶೀತಲಗೃಹಗಳ ಅಗತ್ಯವಿದೆ. ಈಗ 2ನೇ ಹಂತದ ಹಸಿರು ಕ್ರಾಂತಿಯ ಅಗತ್ಯವಿದೆ.

2018ರ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಬಿಜೆಪಿ ಕ್ಷಿಪ್ರವಾಗಿ ರೈತರು, ಅರೆ ಸೇನಾ ಪಡೆ, ಸೇನಾಪಡೆ, ವೇತನದಾರರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾರಂಭಿಸಿತು. ಈಗ ಬಿಜೆಪಿ ಮರಳಿ ಹಳಿಗೆ ಏರಿದೆ ಎಂದೆನಿಸುವುದಿಲ್ಲವೇ?
ಒಂದು ವರ್ಷದ ಅವಧಿಯಿಂದ ಬಿಜೆಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಇದನ್ನೆಲ್ಲ ಮಾಡುತ್ತಿದೆ. ಅಧಿಕಾರದ ಮೇಲೆ ಇರುವ ಹಿಡಿತ ತಪ್ಪುತ್ತದೆ ಎಂದು ಅರಿವಾದತಕ್ಷಣ ಅವರಿಗೆ ಎಚ್ಚರವಾಗುತ್ತದೆ. ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಯುವಕರು, ರೈತರು ಮತ್ತು ಸಣ್ಣ ಉದ್ದಿಮೆಗಳ ಮಾಲೀಕರು ನೋವು ಅನುಭವಿಸಿದ್ದಾರೆ. ಅವರ ಅಗತ್ಯೆಗಳು, ಸಮಸ್ಯೆಗಳನ್ನು ಮರೆಯಲಾಗಿದೆ. ಹೀಗಾಗಿ ಜನರೀಗ ಬದಲಾವಣೆ ಬಯಸುತ್ತಿದ್ದಾರೆ.

ರಫೇಲ್‌ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಪ್ರಬಲವಾಗಿ ಅವ್ಯಹಾರದ ಆರೋಪ ಮಾಡಿದ್ದೀರಿ. ಪ್ರಧಾನಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಹೇಳುತ್ತೀರಿ. ಆದರೆ ಆರೋಪಗಳಿಗೆ ನೀವು ಸಾಕ್ಷ್ಯವನ್ನೇ ನೀಡಿಲ್ಲವೆಂದು ಬಿಜೆಪಿ ಹೇಳುತ್ತಿದೆಯಲ್ಲ?
ತಾವು ಭಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. “ನನ್ನನ್ನು ಪ್ರಧಾನಮಂತ್ರಿಯಾಗಿಸುವ ಬದಲು ಕಾವಲುಗಾರನ್ನಾಗಿಸಿ’ ಎನ್ನುತ್ತಾರೆ. ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ 70 ವರ್ಷಗಳಿಂದ ಯುದ್ಧ ವಿಮಾನಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಆದರೆ ಅತ್ತ ಅನಿಲ್‌ ಅಂಬಾನಿ
ತಮ್ಮ ಜೀವಿತಾವಧಿಯಲ್ಲಿ ಒಂದೇ ಒಂದು ವಿಮಾನ ನಿರ್ಮಿಸಿಲ್ಲ. ಯುಪಿಎ ಅವಧಿಯಲ್ಲಿ ವಿಮಾನದ ಬೆಲೆ 526 ಕೋಟಿ ರೂ. ಇತ್ತು. ಮೋದಿ ಸಹಿ ಹಾಕಿದ ಡೀಲ್‌ನಲ್ಲಿ ಅದೇ ವಿಮಾನಕ್ಕೆ 1,600 ಕೋಟಿ ರೂ. ಇದೆ. ಗುತ್ತಿಗೆ ಸಿಗುವ 10 ದಿನಗಳ ಮೊದಲು ಅನಿಲ್‌ ಅಂಬಾನಿ ತಮ್ಮ ಕಂಪನಿ (ರಿಲಯನ್ಸ್‌ ಡಿಫೆನ್ಸ್‌) ಆರಂಭಿಸಿದ್ದರು. ಗುತ್ತಿಗೆ ಸಿಗುವ ಬಗ್ಗೆ ಖಚಿತತೆ ಇದ್ದ ಕಾರಣವೇ ಅವರು ಆ ರೀತಿ ಮಾಡಿದ್ದರು. ಪ್ರಧಾನಿಯವರು ಗುತ್ತಿಗೆ ಬಗ್ಗೆ ಸಮಾನಾಂತರ ಮಾತುಕತೆ ನಡೆಸಿದ್ದರು. ಈ ಬಗ್ಗೆ ರಕ್ಷಣಾ ಇಲಾಖೆ ದಾಖಲೆಗಳಲ್ಲಿ ಉಲ್ಲೇಖವಿದೆ. ಈ ಮೂಲಕ 30 ಸಾವಿರ ಕೋಟಿ ರೂ. ಗುತ್ತಿಗೆ ಸಿಗುವಂತೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನೀವು ಎಚ್‌ಎಲ್‌ ಉದ್ಯೋಗಿಗಳನ್ನು ಭೇಟಿಯಾದಿರಿ. ಅವರ ಪ್ರತಿಕ್ರಿಯೆ ಹೇಗಿತ್ತು?
ಎಚ್‌ಎಎಲ್‌ಗೆ ಸಿಗಬೇಕಾಗಿದ್ದ ಗುತ್ತಿಗೆಯನ್ನು ಪ್ರಧಾನಿ ಮೋದಿ ಮತ್ತು ಅನಿಲ್‌ ಅಂಬಾನಿ ಕಳವು ಮಾಡಿದ್ದಾರೆ ಎಂದವರು ಹೇಳಿದರು. ಅಂದು ಆ ಉದ್ಯೋಗಿಗಳಿಗೆ ಬೆದರಿಕೆ ಹಾಕಲಾಗಿತ್ತು. ನನ್ನ ಸಭೆಗೆ ಬರದಂತೆ ಅವರನ್ನು ತಡೆಯಲು ಪ್ರಯತ್ನಿಸಲಾಯಿತು. ಹಾಜರಾದವರನ್ನು ಶಿಕ್ಷಿಸಲಾಯಿತು.

ಈ ಚುನಾವಣೆಯಲ್ಲಿ ತಾನು ಸೋತರೆ ರಾಷ್ಟ್ರೀಯ ಭದ್ರತೆ ದುರ್ಬಲಗೊಳ್ಳಲಿದೆ, ಆರ್ಥಿಕತೆ ಕುಸಿಯಲಿದೆ ಎಂದು ಹೇಳುತ್ತಿದೆಯಲ್ಲ ಬಿಜೆಪಿ?
ದೇಶದ ಮೇಲೆ ಮೋದಿಯವರು ಹೇರುತ್ತಿರುವ ಇಂಥ ಐಡಿಯಾಗಳೇ ಹಾಸ್ಯಾಸ್ಪದ. ನೋಟು ಅಮಾನ್ಯ ಆದೇಶವನ್ನು ಯಾಕೆ ಜಾರಿಗೊಳಿಸಲಾಯಿತೆಂಬುದೇ ಗೊತ್ತಾಗುತ್ತಿಲ್ಲ. ಯಾರು ಅದನ್ನು ಶಿಫಾರಸು ಮಾಡಿದರು, ಅದಕ್ಕೆ ಒಪ್ಪಿಗೆ ಸೂಚಿಸಿದ್ದು ಯಾರು ಎಂಬುದೇ ಆರ್ಥಿಕ ತಜ್ಞರಿಗೆ ಗೊತ್ತಿಲ್ಲ. ಇನ್ನು ಐದು ಹಂತಗಳ ಜಿಎಸ್‌ಟಿ. ಇದು ಯಾವ ರೀತಿಯ ನಿರ್ಣಯ? ಭಾರತ ವಿರೋಧಾಭಾಸಗಳ ನಾಡು. ಈ ವಿರೋಧಾಭಾ ಸಗಳಲ್ಲಿ ವ್ಯವಸ್ಥೆಯ ಜೊತೆಗೆ ಅವ್ಯವಸ್ಥೆಯೂ ಇದೆ(ಟ್ಟಛಛಿr ಚnಛ cಜಚಟs), ವಿವಿಧತೆಯಲ್ಲಿ ಏಕತೆಯಿದೆ. ನಾಯಕರಾದವರು ಈ ವೈವಿಧ್ಯತೆಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಪ್ರಧಾನಿ ಮೋದಿಯವರು ಭಾರತದಲ್ಲಿನ ಋಣಾತ್ಮಕ ಅಂಶಗಳನ್ನು (ಭಯ, ದ್ವೇಷ ಮತ್ತು ಕೋಪ)ವನ್ನು ಎತ್ತಿಕೊಂಡು ಭೂತಗನ್ನಡಿ ಹಿಡಿದು ದೊಡ್ಡದು ಮಾಡುತ್ತಾರೆ. ಆದರೆ ಗಾಂಧೀಜಿಯವರು ನಮ್ಮ ಅತ್ಯಂತ ಬಲಿಷ್ಠ ಅಂಶಗಳಾದ ಪ್ರೀತಿ, ಅಹಿಂಸೆ, ಸಹಬಾಳ್ವೆಗೆ ಭೂತಗನ್ನಡಿ ಹಿಡಿದರು.

ಪ್ರಿಯಾಂಕಾರಿಗೆ ಕಠಿಣ ಸವಾಲು/ಜವಾಬ್ದಾರಿ ನೀಡಿದ್ದೇಕೆ?
ಲೋಕಸಭೆಯ ಚುನಾವಣೆ ಹತ್ತಿರದಲ್ಲಿರುವುದರಿಂದ, ಇದು ಬೃಹತ್‌ ಸವಾಲೇ ಸರಿ. ಆದರೆ ಅದೇ ವಿಧಾನಸಭೆಯ ಚುನಾವಣೆಯನ್ನು ಕೇಂದ್ರೀಕರಿಸಿ ಹೇಳುವುದಾದರೆ ಕಠಿಣ ಸವಾಲು ಅಲ್ಲ. ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಬದಲಾಗುತ್ತಿರುವುದನ್ನು ನೀವು ನೋಡಬಹುದು. ಮುಂದಿನ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಅಲ್ಲಿ ಅತ್ಯುತ್ತಮ ಸಾಧನೆ ಮಾಡಲಿದೆ. ಉತ್ತರಪ್ರದೇಶ ಬೃಹತ್‌ ಅವಕಾಶ ಒದಗಿಸುತ್ತಿದ್ದು, ಪ್ರಿಯಾಂಕಾ ಸಫ‌ಲಳಾಗುತ್ತಾಳೆ.

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರಲಿದೆಯೇ? ಎಲ್ಲವೂ ಅಂದುಕೊಂಡಂತೆ ಆದರೆ, ನೀವೇ ಮುಂದಿನ ಪ್ರಧಾನಿಯೋ?
ಅದನ್ನು ಹೇಳಬೇಕಾದವನು ನಾನಲ್ಲ. ದೇಶದ ಜನರು ಅದನ್ನು ನಿರ್ಧರಿಸಬೇಕು. ದೇಶವನ್ನು ಒಂದು ಮಾಡಲು ಹೋರಾಡುತ್ತಿರುವ ಶಕ್ತಿಗಳು ಗೆಲ್ಲುವಂತೆ ಮಾಡುವುದು ನನ್ನ ಕೆಲಸ. ಯುಪಿಎಗೆ ಬಹುಮತ ಬರುವುದು ಖಚಿತ. ನಿರೀಕ್ಷೆಗಿಂತ ಹೆಚ್ಚು ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ.

ದೇಶಕ್ಕೆ ಸರ್ವಮಾನ್ಯವಾದಂಥ ಮೈತ್ರಿಕೂಟ ಇಲ್ಲವಲ್ಲ?
ವಿಶಾಲ ಅರ್ಥದಿಂದ ಹೇಳುವುದಿದ್ದರೆ ಒಟ್ಟಾರೆ ಮೈತ್ರಿಕೂಟವೇ ಬಿಜೆಪಿ ಮತ್ತು ಮೋದಿ ವಿರುದ್ಧವಿದೆ. ಮಹಾರಾಷ್ಟ್ರ, ತಮಿಳುನಾಡು, ಬಿಹಾರ, ಜಾರ್ಖಂಡ್‌, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂಗಳಲ್ಲಿನ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಇನ್ನು ಕೆಲವು ಪ್ರತಿಪಕ್ಷಗಳ ಜತೆಗೆ ಮೈತ್ರಿ ಸದ್ಯಕ್ಕೆ ಮಾಡಿಕೊಂಡಿಲ್ಲ. ನಮ್ಮ ಪಕ್ಷ ಪ್ರಜಾಸತ್ತಾತ್ಮಕವಾಗಿದ್ದು, ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ.

ನಮ್ಮ ಸೈನಿಕರು ಸತ್ತಾಗ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು ಪ್ರಧಾನಿ ಮೋದಿ
ಪಾಕಿಸ್ತಾನವು ಭಾರತದ ವಿರುದ್ಧ ಉಗ್ರವಾದ ನಡೆಸುವ ಎಲ್ಲಾ ಅವಕಾಶಗಳನ್ನೂ ಬಳಸುತ್ತದೆ ಎನ್ನುವುದು ನನಗೆ ತಿಳಿದಿದೆ. ಆದರೆ ಅದನ್ನು ತಡೆಯುವುದು ಸರ್ಕಾರದ ಕರ್ತವ್ಯವಲ್ಲವೇ? 40 ಮಂದಿ ಸಿಆರ್‌ಪಿಎಫ್ ಯೋಧರ ಹತ್ಯೆಯಾದಾಗ ಪ್ರಧಾನಿ ಎಲ್ಲಿದ್ದರು? ಅವರು ವಿಡಿಯೋ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದರು. ಈ ವ್ಯಕ್ತಿಗೆ ಎಷ್ಟು ಅಸಂವೇದನೆ ಇದೆಯೋ ನೋಡಿ. ಮೂರೂವರೆ ಗಂಟೆ ಮೋದಿ ವಿಡಿಯೋ ಚಿತ್ರೀಕರಣದಲ್ಲೇ ಕಳೆದರು. ಈ ದಾಳಿಯ ರೂವಾರಿ ಯಾರು? ಮಸೂದ್‌ ಅಝರ್‌. ಈ ಮಸೂದ್‌ ಅಝರ್‌ನನ್ನು ಬಿಡುಗಡೆಗೊಳಿಸಿ, ಕಂದಹಾರ್‌ಗೆ ಬಿಟ್ಟುಬಂದವರು ಯಾರು? ಇದೇ ಬಿಜೆಪಿಯವರೇ. ಏಕೆಂದರೆ ಅವರಿಗೆ ಉಗ್ರರನ್ನು ಎದುರಿಸಲು ಸಾಧ್ಯವಾಗಲೇ ಇಲ್ಲ. ಜಮ್ಮು-ಕಾಶ್ಮೀರದಲ್ಲಿ 2004ರಿಂದ 2014ರ ನಡುವೆ ಎಷ್ಟು ಜನ ಸತ್ತಿದ್ದಾರೆ, 2014ರಿಂದ 2019ರವರೆಗೆ ಎಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೋ ಗಮನಿಸಿ. ಕಳೆದ ಐದು ವರ್ಷಗಳಲ್ಲಿ ಉಗ್ರವಾದದಿಂದ ಸತ್ತವರ ಸಂಖ್ಯೆ ಹೆಚ್ಚಿದೆ. ಅಂಕಿಸಂಖ್ಯೆಗಳೇ ಇದಕ್ಕೆ ಸಾಕ್ಷ್ಯ ನುಡಿಯುತ್ತವೆ.

(ಸಂದರ್ಶನ ಕೃಪೆ: ದ ವೀಕ್‌)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದೇಶಾದ್ಯಂತ ಒಂದೊಂದು ಲೋಕಸಭಾ ಕ್ಷೇತ್ರವೂ ಒಂದೊಂದು ರೀತಿಯಲ್ಲಿ ವಿಶೇಷತೆ ಪಡೆದುಕೊಂಡಿದೆ. ದಿಗ್ಗಜ ನಾಯಕರಿಂದ ಹಿಡಿದು, ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿರುವವರೂ...

  • ಮಥುರಾ (ಉತ್ತರ ಪ್ರದೇಶ) ಹೇಮಮಾಲಿನಿ (ಬಿಜೆಪಿ) Vs ಕುನ್ವರ್‌ ನರೇಂದ್ರ ಸಿಂಗ್‌ (ಆರ್‌ಎಲ್‌ಡಿ) * ಜಾಟ್‌ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ ಕಳೆದ ಬಾರಿ ಕನಸಿನ...

  • ಲೋಕಸಭಾ ಚುನಾವಣೆಯ ಫ‌ಲಿತಾಂಶದ ದಿನ ಹತ್ತಿರವಾಗುತ್ತಿದ್ದು, ಈ ಬಾರಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಇದಷ್ಟೇ ಅಲ್ಲದೆ,...

  • 2019ರ ಲೋಕಸಭೆ ಚುನಾವಣೆ ಕ್ಷಣಕ್ಷಣದಲ್ಲೂ, ಕಣಕಣದಲ್ಲೂ ರೋಮಾಂಚಕಾರಿ ತಿರುವು ಪಡೆಯುತ್ತಾ ಇಡೀ ದೇಶವನ್ನು ಫ‌ಲಿತಾಂಶಕ್ಕಾಗಿ ತುದಿಗಾಲಲ್ಲಿ ನಿಲ್ಲಿಸಿದೆ. ಜಗತ್ತಿನ...

  • ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಪ್ರಯತ್ನಿಸುತ್ತಿದ್ದು, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ರನ್ನು...

ಹೊಸ ಸೇರ್ಪಡೆ