ಮೊಯ್ಲಿ ಹ್ಯಾಟ್ರಿಕ್‌ ಸಾಧನೆಗೆ ಬಚ್ಚೇಗೌಡರ ಅಡ್ಡಗಾಲು

ರಣಾಂಗಣ: ಚಿಕ್ಕಬಳ್ಳಾಪುರ

Team Udayavani, Apr 9, 2019, 3:00 AM IST

ಚಿಕ್ಕಬಳ್ಳಾಪುರ: ಬಯಲುಸೀಮೆಯ ಬರದನಾಡು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಬೇಸಿಗೆಯ ರಣಬಿಸಿಲನ್ನು ಮೀರಿಸಿದೆ. ಕಳೆದ ಬಾರಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಹಾಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

ಕಣ ಚಿತ್ರಣ: ಮೈತ್ರಿ ಪಕ್ಷಗಳ ನಡುವಿನ ಸೀಟು ಹೊಂದಾಣಿಕೆ ವೇಳೆ ಕ್ಷೇತ್ರ ಉಳಿಸಿಕೊಂಡು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂ.ವೀರಪ್ಪ ಮೊಯ್ಲಿ, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ತ್ರಿಕೋನ ಸ್ಪರ್ಧೆ ನಡುವೆಯೂ ಮೊಯ್ಲಿ ವಿರುದ್ದ ಕೇವಲ 9,520 ಮತಗಳ ಅಂತರದಿಂದ ಸೋತಿದ್ದ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡ, ಬಿಜೆಪಿಯಿಂದ ಸ್ಪರ್ಧಿಸುವ ಮೂಲಕ ಎರಡನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಮೊಯ್ಲಿ 4,24,800 ಮತ ಪಡೆದರೆ, ಬಚ್ಚೇಗೌಡರು 4,15,280 ಮತ ಪಡೆದಿದ್ದರು. ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ 3,46339 ಮತ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಈ ಬಾರಿ ಅಖಾಡದಲ್ಲಿ ಒಟ್ಟು 15 ಮಂದಿ ಅಭ್ಯರ್ಥಿಗಳಿದ್ದು, ಕಣದಲ್ಲಿರುವ ಬಿಎಸ್ಪಿ ಹಾಗೂ ಸಿಪಿಎಂ ಪಕ್ಷದ ಅಭ್ಯರ್ಥಿಗಳು ಯಾರ ಸೋಲು, ಗೆಲುವಿಗೆ ಕಾರಣ ಆಗುತ್ತಾರೆ ಎನ್ನುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಇತಿಹಾಸದ ಪುಟ ತಿರುವಿದರೆ, ಚಿಕ್ಕಬಳ್ಳಾಪುರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಕ್ಷೇತ್ರ ಅಸ್ವಿತ್ವಕ್ಕೆ ಬಂದ ನಂತರ ನಡೆದ 11 ಲೋಕಸಭಾ ಚುನಾವಣೆಗಳ ಪೈಕಿ 10ರಲ್ಲಿ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಮೆರೆದಿದೆ. 1996ರಲ್ಲಿ ಮಾತ್ರ ಜನತಾದಳದಿಂದ ಆರ್‌.ಎಲ್‌.ಜಾಲಪ್ಪ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಕಾಂಗ್ರೆಸ್‌ಗೆ ಮೈತ್ರಿ ಲಾಭ: ಈ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮೊಯ್ಲಿ ಸ್ಪರ್ಧಿಸಿರುವುದರಿಂದ ಅವರ ಗೆಲುವು ಸುಲಭ ಎನ್ನುವ ವಾದ ಕಾಂಗ್ರೆಸ್‌ ನಾಯಕರದು. ಕಾಂಗ್ರೆಸ್‌ಗೆ ಜೆಡಿಎಸ್‌ನೊಂದಿಗಿನ ಮೈತ್ರಿ ಬಲ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. ಕ್ಷೇತ್ರದಲ್ಲಿ ತನ್ನ ಸಾಂಪ್ರದಾಯಿಕ ಮತಗಳಾಗಿರುವ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಅದು ಹೆಚ್ಚಾಗಿ ಅವಲಂಬಿಸಿದೆ. ಜೊತೆಗೆ, ಸಂಸದರಾಗಿ ಮೊಯ್ಲಿ ಮಾಡಿರುವ ಕೆಲಸಗಳು ಅವರಿಗೆ ಪ್ಲಸ್‌ ಪಾಯಿಂಟ್‌.

ಬಿಜೆಪಿಗೆ ಮೋದಿ ಬಲ: ಇನ್ನು, ಮೋದಿ ಹವಾ ಜೊತೆಗೆ ಕ್ಷೇತ್ರದಲ್ಲಿ ಪ್ರಭಾವಿ ಸಮುದಾಯವಾಗಿರುವ ಒಕ್ಕಲಿಗ ಮತಗಳು ಬಚ್ಚೇಗೌಡರಿಗೆ ಅನುಕೂಲ ಎಂಬುದು ಬಿಜೆಪಿ ನಾಯಕರ ಅನಿಸಿಕೆ. ಹೀಗಾಗಿ, ಒಕ್ಕಲಿಗ ಮತಗಳನ್ನು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದೆ. ಕ್ಷೇತ್ರದಲ್ಲಿ ಯಲಹಂಕ, ಹೊಸಕೋಟೆ ಕ್ಷೇತ್ರ ಬಿಟ್ಟರೆ ಬಿಜೆಪಿಗೆ ಭದ್ರ ನೆಲೆ ಇಲ್ಲ.

ಆದರೂ, ಕಳೆದ ಎರಡು, ಮೂರು ಲೋಕಸಭಾ ಚುನಾವಣೆಗಳಿಂದ ಈಚೆಗೆ ಬಿಜೆಪಿ, ಕಾಂಗ್ರೆಸ್‌ನ ಪ್ರಬಲ ಎದುರಾಳಿಯಾಗಿ, ಜೆಡಿಎಸ್‌ಗಿಂತ ಹೆಚ್ಚು ಮತಗಳನ್ನು ಗಳಿಸಿದೆ. ಕಳೆದ ಬಾರಿ ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಪಡೆದಿದೆ. ಈ ಬಾರಿಯೂ ಬಿಜೆಪಿ, ಈ ಮೂರು ಕ್ಷೇತ್ರಗಳನ್ನೇ ನೆಚ್ಚಿಕೊಂಡಿದೆ. ಪುಲ್ವಾಮಾ ಘಟನೆ ಬಳಿಕ ಮತದಾರರು ಬಿಜೆಪಿ ಪರ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬುದು ಬಿಜೆಪಿ ವಾದ.

ನಿರ್ಣಾಯಕ ಅಂಶ: ಕ್ಷೇತ್ರದಲ್ಲಿರುವ 5 ಲಕ್ಷ ಒಕ್ಕಲಿಗ ಮತಗಳು ನಿರ್ಣಾಯಕ ಎನ್ನುವ ಮಾತು ಪ್ರಬಲವಾಗಿ ಕೇಳಿ ಬರುತ್ತಿದೆ. ಆದರೆ, ಈ ಹಿಂದಿನ ಚುನಾವಣಾ ಫ‌ಲಿತಾಂಶಗಳನ್ನು ನೋಡಿದರೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತಗಳೇ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಬರೆದಿವೆ.

ವಿಶೇಷ ಅಂದರೆ, ಕ್ಷೇತ್ರದ ಮತದಾರರು ಪ್ರತಿ ಚುನಾವಣೆಯಲ್ಲಿಯೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ಎದ್ದು ಕಾಣುತ್ತಿದೆ. ಈ ಬಾರಿ ಬಿಜೆಪಿಯಿಂದ ಎರಡನೇ ಬಾರಿಗೆ ಸ್ಪರ್ಧಿಸಿರುವ ಬಚ್ಚೇಗೌಡ, ಒಕ್ಕಲಿಗರು ಎಂಬ ಕಾರಣಕ್ಕೆ ಒಕ್ಕಲಿಗ ಮತಗಳು ಬಿಜೆಪಿಗೆ ಬರುತ್ತವೆಂಬ ಆಶಾಭಾವನೆ ಬಿಜೆಪಿಯದು. ಆದರೆ, ಜೆಡಿಎಸ್‌ ಜೊತೆಗಿನ ಮೈತ್ರಿ ತನಗೆ ಲಾಭವಾಗಲಿದೆ ಎಂಬುದು ಮೊಯ್ಲಿ ಆಶಾವಾದ.

ಕ್ಷೇತ್ರವ್ಯಾಪ್ತಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಆ ಪೈಕಿ ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ಹೊಸಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ದೇವನಹಳ್ಳಿ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ.

ಜಾತಿವಾರು ಲೆಕ್ಕಾಚಾರ: (ಅಂದಾಜು)
-ಒಕ್ಕಲಿಗರು – 5,00,000.
-ಹಿಂದುಳಿದ ವರ್ಗ- 4,00,000.
-ದಲಿತರು – 6,00,000.
-ಮುಸ್ಲಿಮರು – 3,50,000.

ಮತದಾರರು
-ಒಟ್ಟು – 17,90,408
-ಪುರುಷರು – 9,02,487
-ಮಹಿಳೆಯರು – 8,87,921

* ಕಾಗತಿ ನಾಗರಾಜಪ್ಪ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮೇಲಿನ ಆದಾಯ ತೆರಿಗೆ ದಾಳಿ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ...

  • ಸಿಲಿಕಾನ್‌ ಸಿಟಿ ಬೆಂಗಳೂರು ವಾಹನಗಳು, ಅದರಲ್ಲೂ ದ್ವಿಚಕ್ರ ವಾಹನ ಕಳ್ಳರ ಪರಮಾಪ್ತ ತಾಣವಾಗಿ ಮಾರ್ಪಟ್ಟಿದೆ. ಪಕ್ಕದ ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಿಂದ...

  • ಬೆಂಗಳೂರು: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವ ಬಗ್ಗೆ ಎಚ್‌.ಎನ್‌. ನಾಗಮೋಹನದಾಸ್‌ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ನಂತರ ಅದನ್ನು ಆಧರಿಸಿ ಸೂಕ್ತ...

  • ಬೆಂಗಳೂರು: ನಗರದಲ್ಲಿ ಉತ್ಪತ್ತಿಯಾಗುವ ಪ್ರಾಣಿ ಮಾಂಸ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ನಗರದ ಹೊರವಲಯದಲ್ಲಿ ಮಾಂಸ ತ್ಯಾಜ್ಯ...

  • ಧಾರವಾಡ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಕ್ತ ಸವಾಲು ಮಾಡುವುದಾದರೆ ಮಾಡಲಿ. ನನ್ನದು ಕೂಡ ಮುಕ್ತ ಸವಾಲು ಆಗಿದ್ದು, ಯಾವ ಸರ್ಕಾರ ಹೆಚ್ಚಿನ ಅನುದಾನ ನೀಡಿದೆ...