ಹಿಂದುಳಿದ ವರ್ಗದವನೆಂಬ ಕಾರಣಕ್ಕೆ ಟೀಕೆ

Team Udayavani, Apr 18, 2019, 6:30 AM IST

ನವದೆಹಲಿ: “ಎಲ್ಲ ಕಳ್ಳರಿಗೂ ಮೋದಿ ಎಂಬ ಅಡ್ಡನಾಮ ಏಕೆ ಇರುತ್ತದೆ’ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಕಿಡಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಬುಧವಾರ ನಡೆಸಿದ ರ್ಯಾಲಿಯಲ್ಲಿ, ರಾಹುಲ್‌ರ ಈ ಹೇಳಿಕೆಯನ್ನು ಪ್ರಸ್ತಾಪಿಸಿ ಅವರು ವಾಗ್ಧಾಳಿ ನಡೆಸಿದ್ದಾರೆ. ಈ ರೀತಿಯ ಹೇಳಿಕೆ ನೀಡುವ ಮೂಲಕ ರಾಹುಲ್‌, ಒಂದಿಡೀ ಸಮುದಾಯವನ್ನೇ ಅವಹೇಳನ ಮಾಡಿದ್ದಾರೆ. ಅಲ್ಲದೆ, ನಾನು ಹಿಂದುಳಿದ ವರ್ಗಕ್ಕೆ ಸೇರಿದ ವನು ಎಂಬ ಕಾರಣಕ್ಕಾಗಿಯೇ ಇಂಥ ಟೀಕೆ ಮಾಡಲಾಗು ತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಮಿತ್ರಪಕ್ಷಗಳು ಸಮಾಜದಲ್ಲಿರುವ ಎಲ್ಲ ಮೋದಿಗಳೂ ಕಳ್ಳರು ಎಂದು ಹೇಳುತ್ತಿವೆ. ಹಿಂದುಳಿತ ವರ್ಗದ ನನ್ನನ್ನು ಅವಹೇಳನ ಮಾಡುತ್ತಲೇ ಬಂದಿರುವ ಈ ಪಕ್ಷಗಳು, ಈಗ ಒಂದಿಡೀ ಸಮುದಾಯವನ್ನೇ ದೂಷಿಸುವ ಮೂಲಕ ಎಲ್ಲ ಮಿತಿಗಳನ್ನೂ ದಾಟಿಬಿಟ್ಟಿದೆ. ಇದನ್ನು ನಾನು ಸಹಿಸುವುದಿಲ್ಲ ಎಂದಿದ್ದಾರೆ ಮೋದಿ.

ಇದೇ ವೇಳೆ, ನಾನು ಮತ್ತೆ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಜಲಶಕ್ತಿ ಸಚಿವಾಲಯ ರಚಿಸುತ್ತೇನೆ. ನದಿಗಳ ಜೋಡಣೆ ಮತ್ತು ನೀರಾವರಿ ಹೆಚ್ಚಿಸಲು ಪ್ರತ್ಯೇಕ ಇಲಾಖೆ ತೆರೆಯುತ್ತೇನೆ ಎಂಬ ವಾಗ್ಧಾನವನ್ನೂ ಅವರು ನೀಡಿದ್ದಾರೆ.

ಯುಪಿಎ ಸರಕಾರದ ವಿರುದ್ಧ ವಾಗ್ಧಾಳಿ: ಗುಜರಾತ್‌ನ ಹಿಮ್ಮತ್‌ನಗರದಲ್ಲಿ ರ್ಯಾಲಿ ನಡೆಸಿದ ಪ್ರಧಾನಿ ಮೋದಿ, “2004ರಿಂದ 2014ರವರೆಗೆ ಇದ್ದ ಯುಪಿಎ ಸರಕಾರ ರಿಮೋಟ್‌ ಕಂಟ್ರೋಲ್‌ನಲ್ಲಿ ನಡೆಯುತ್ತಿತ್ತು. ಗುಜರಾತ್‌ ಭಾರತದಲ್ಲೇ ಇಲ್ಲ ಎಂಬಂತೆ ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರಲಾಗುತ್ತಿತ್ತು. ನನ್ನ ನೇತೃತ್ವದ ರಾಜ್ಯ ಸರಕಾರವನ್ನು ಉರುಳಿಸಲೆಂದೇ ಅಮಿತ್‌ ಶಾ ಹಾಗೂ ಕೆಲವು ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಯಿತು’ ಎಂದು ಆರೋಪಿಸಿದ್ದಾರೆ. ಈ ನಡುವೆ, ಪಾಕಿಸ್ಥಾನದ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, “ಪಾಕಿಸ್ಥಾನದ ಅಣ್ವಸ್ತ್ರದ ಬ್ಲ್ಯಾಕ್‌ವೆುàಲ್‌ಗೆ ನಾನು ಹೆದರುವುದಿಲ್ಲ.

ಏಕೆಂದರೆ, ಭಾರತವು ಎಲ್ಲ ಅಣ್ವಸ್ತ್ರಗಳ ಮಹಾತಾಯಿಯಿದ್ದಂತೆ’ ಎಂದಿದ್ದಾರೆ. ಹಿಂದೆಲ್ಲ ಪಾಕಿಸ್ಥಾನದ ಉಗ್ರರು ಭಾರತದ ನೆಲಕ್ಕೆ ಬಂದು, ದಾಳಿ ಮಾಡಿ ವಾಪಸ್‌ ಹೋಗುತ್ತಿದ್ದರು. ಪಾಕ್‌ ಕೂಡ ಅಣ್ವಸ್ತ್ರಗಳ ಹೆಸರು ಹೇಳಿ ಬೆದರಿಸುತ್ತಿತ್ತು. ಆಗೆಲ್ಲ ಭಾರತವು ವಿಶ್ವದ ಇತರೆ ದೇಶಗಳ ಬಳಿ ಹೋಗಿ, ಅಳುತ್ತಿತ್ತು. ಆದರೆ, ಈಗ ಪಾಕಿಸ್ಥಾನವೇ ಎಲ್ಲೆಡೆ ಹೋಗಿ ಅಳುವಂತೆ ನಾವು ಮಾಡಿದ್ದೇವೆ ಎಂದಿದ್ದಾರೆ.

ಇಮ್ರಾನ್‌ ಹೇಳಿಕೆ ರಿವರ್ಸ್‌ ಸ್ವಿಂಗ್‌ ಯತ್ನ
“ಭಾರತದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಎರಡೂ ದೇಶಗಳ ನಡುವಿನ ಶಾಂತಿ ಮಾತುಕತೆಗೆ ಅವಕಾಶ ಸಿಗುತ್ತದೆ’ ಎಂಬ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಹೇಳಿಕೆಯು ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ನಡೆಸಲಾದ ರಿವರ್ಸ್‌ ಸ್ವಿಂಗ್‌ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಮೋದಿ, “ಇಮ್ರಾನ್‌ ಖಾನ್‌ ಒಬ್ಬ ಕ್ರಿಕೆಟಿಗ ಎಂಬುದನ್ನು ನಾವು ಮರೆಯಬಾರದು. ಅವರ ಇತ್ತೀಚೆಗಿನ ಹೇಳಿಕೆಯು ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ನಡೆಸಿದ ರಿವರ್ಸ್‌ ಸ್ವಿಂಗ್‌ ಆಗಿದೆ. ಆದರೆ, ರಿವರ್ಸ್‌ ಸ್ವಿಂಗ್‌ ಡೆಲಿವರಿಗೆ ಹೇಗೆ ಹೆಲಿಕಾಪ್ಟರ್‌ ಶಾಟ್‌ ಹೊಡೆಯ ಬೇಕು ಎಂಬುದು ಭಾರತೀಯರಿಗೆ ಗೊತ್ತು’ ಎಂದಿದ್ದಾರೆ. ಅಲ್ಲದೆ, ಪಾಕ್‌ ಚುನಾವಣೆ ವೇಳೆ ಖಾನ್‌ ನಮ್ಮನ್ನು ಟಾರ್ಗೆಟ್‌ ಮಾಡಿ ಸ್ಲೋಗನ್‌ವೊಂದನ್ನು ಬಳಸಿ ಕೊಂಡಿದ್ದರು ಎಂಬುದನ್ನೂ ಮೋದಿ ಸ್ಮರಿಸಿದ್ದಾರೆ. ಇಮ್ರಾನ್‌ ಖಾನ್‌ ಹೇಳಿಕೆಯನ್ನೇ ಪ್ರಸ್ತಾಪಿಸಿ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳು ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದವು.

1 ಕೋಟಿ, 1.4 ಟನ್‌ ಚಿನ್ನ ವಶ
ಮತದಾನಕ್ಕೆ ಮುನ್ನವೇ ಬುಧವಾರ ಚೆನ್ನೈನ ಅವದಿ ಚೆಕ್‌ ಪೋಸ್ಟ್‌ನಲ್ಲಿ ಬರೋಬ್ಬರಿ 1.4 ಟನ್‌ ಚಿನ್ನವನ್ನು ಚುನಾವಣಾಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಚೆನ್ನೈನ ಆರ್‌.ಕೆ.ನಗರ ಕ್ಷೇತ್ರದ ಶಾಸಕ ಟಿ.ಟಿ.ವಿ. ದಿನಕರನ್‌ ಬೆಂಬಲಿಗರಿಂದ 1.48 ಕೋಟಿ ರೂ. ನಗದು ವಶಪಡಿಸಿ ಕೊಂಡಿದ್ದರು. ಬುಧವಾರ ಸಂಜೆ ಚೆಕ್‌ಪೋಸ್ಟ್‌ನಲ್ಲಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ತಿರುಪತಿ ದೇವಾಲಯಕ್ಕೆ ಇದನ್ನು ಕೊಂಡೊಯ್ಯಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಚುನಾವಣಾಧಿಕಾರಿಗಳು ತಮಿಳುನಾಡಿನ ಹಲವೆಡೆ 9 ಕೋಟಿ ರೂ. ಮೊತ್ತದ 265 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದರು.

ಇನ್ನು ಆಂಡಿಪಟ್ಟಿ ಕ್ಷೇತ್ರದ ಉಪ ಚುನಾವಣೆ ಎ.18ರಂದು ನಿಗದಿಯಾದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ತಡರಾತ್ರಿ, ಬುಧವಾರ ಬೆಳಗ್ಗೆ ಥೇಣಿಯಲ್ಲಿ ನಡೆಸಿದ ದಾಳಿಯಲ್ಲಿ ದಾಖಲೆಗಳಿಲ್ಲದ 1.48 ಕೋಟಿ ರೂ. ವಶಪಡಿಸಿಕೊಳ್ಳ ಲಾಗಿದೆ. ಪ್ರತಿ ಮತದಾರರಿಗೆ 300 ರೂ. ನೀಡಲು ನಿಗದಿಸಲಾಗಿತ್ತು ಎಂದು ಐಟಿ ಇಲಾಖೆಯ ತನಿಖಾ ವಿಭಾಗದ ಮಹಾನಿರ್ದೇಶಕ ಬಿ.ಮುರಳೀಕುಮಾರ್‌ ಮಾಹಿತಿ ನೀಡಿದ್ದಾರೆ. ದಾಳಿ ನಡೆದ ಸ್ಥಳ ಎಎಂಎಂಕೆ ಪಕ್ಷಕ್ಕೆ ಸೇರಿದ್ದು, ಸಿಬಿಡಿಟಿ ಮತ್ತು ಚುನಾವಣಾ ಆಯೋ ಗಕ್ಕೆ ಈ ಬಗ್ಗೆ ವರದಿ ಕಳುಹಿಸಲಾಗುತ್ತದೆ ಎಂದಿದ್ದಾರೆ.

ಆಂಡಿಪಟ್ಟಿ ಪಂಚಾಯತ್‌ ವ್ಯಾಪ್ತಿಯಲ್ಲಿನ ಮತದಾರರಿಗೆ ವಿತರಿಸಲು ಎ.16ರಂದೇ 2 ಕೋಟಿ ರೂ. ನಗದು ತರಲಾಗಿತ್ತು ಎಂದು ಸ್ಥಳದಲ್ಲಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಗುಂಡು ಹಾರಾಟ: ಜಿಲ್ಲಾ ಚುನಾವಣಾಧಿಕಾರಿಗಳನ್ನು ಒಳಗೊಂಡ ತಂಡದ ಜತೆಗೆ ಥೇಣಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಎಎಂಎಂಕೆ ಪಕ್ಷದ ಕಾರ್ಯಕರ್ತರು ಅಡ್ಡಿಪಡಿಸಿದರು. ಈ ಬಗ್ಗೆ ಮನವರಿಕೆಗೂ ಬಗ್ಗದೇ ಇದ್ದಾಗ ಭದ್ರತೆಗಾಗಿ ಬಂದಿದ್ದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಪ್ರಕ ರಣ ಸಂಬಂಧ ಎಎಂಎಂಕೆ ಪಕ್ಷದ ನಾಲ್ವರನ್ನು ಬಂಧಿಸ ಲಾಗಿದೆ ಮತ್ತು 150 ಮಂದಿ ವಿರುದ್ಧ ಕೇಸು ದಾಖಲಿಸ ಲಾಗಿದೆ ಎಂದು ಮುರಳೀ ಕುಮಾರ್‌ ಹೇಳಿದ್ದಾರೆ.

94 ಬಂಡಲ್‌ಗ‌ಳು: ಮತದಾರರಿಗೆ ನೀಡಲು ಉದ್ದೇಶಿಸಲಾಗಿದ್ದ ಮೊತ್ತವನ್ನು 94 ಬಂಡಲ್‌ಗ‌ಳಲ್ಲಿ 1.48 ಕೋಟಿ ರೂ. ಮೊತ್ತ ಇರಿಸಲಾಗಿತ್ತು. 500 ರೂ., 2 ಸಾವಿರ ರೂ. ಮುಖಬೆಲೆಯ ನೋಟುಗಳು ಇದ್ದದ್ದು ಫೋಟೋಗಳಿಂದ ಗೊತ್ತಾಗಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಟಿ.ಟಿ.ವಿ.ದಿನಕರನ್‌ ಪಕ್ಷದ ಅಭ್ಯರ್ಥಿಯ ಹೆಸರಿನಲ್ಲಿದ್ದ ಅಂಚೆ ಮತಪತ್ರಗಳನ್ನೂ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

ವಿಪಕ್ಷಗಳೇ ಗುರಿ: ಡಿಎಂಕೆ ಅಭ್ಯರ್ಥಿ ಕನಿಮೋಳಿ ನಿವಾಸಕ್ಕೆ ಆದಾಯ ತೆರಿಗೆ ನಡೆಸಿರುವುದನ್ನು ರಾಜ ಕೀಯ ಪ್ರೇರಿತ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂ ಬರಂ ಹೊಸದಿಲ್ಲಿಯಲ್ಲಿ ತಿಳಿಸಿದ್ದಾರೆ. ಮೋದಿ ಸರಕಾರ ಚುನಾವಣೆ ಸಂದರ್ಭದಲ್ಲಿಯೇ ಜಾರಿ ನಿರ್ದೇಶನಾ ಲಯ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ವಿಪಕ್ಷಗಳನ್ನು ಗುರಿಯಾಗಿಸುತ್ತಿದೆ ಎಂದು ಟೀಕಿಸಿದ್ದಾರೆ. ಈ ಬಗ್ಗೆ ದೇಶದ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ. ಆದಾಯ ತೆರಿಗೆ ಇಲಾಖೆ ನಿರಂಕುಶ ಮತ್ತು ಏಕಪಕ್ಷೀಯವಾಗಿ ದಾಳಿ, ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ಆರೋಪ ಮಾಡಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ