ಕೃಷಿ ಸಚಿವರ ಕೊನೆಯ ಚುನಾವಣೆ ಅಸ್ತ್ರ

Team Udayavani, May 11, 2019, 7:36 AM IST

ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ರಾಧಾಮೋಹನ್‌ ಸಿಂಗ್‌ ಕ್ಷೇತ್ರ ಪೂರ್ವ ಚಂಪಾರಣ್‌. 2008ರ ಕ್ಷೇತ್ರ ಮರು ವಿಂಗಡಣೆ ಬಳಿಕ ರಚನೆಯಾಗಿದೆ ಈ ಕ್ಷೇತ್ರ. ಅದಕ್ಕಿಂತ ಮೊದಲು ಅದನ್ನು ಮೋತಿಹಾರಿ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕ್ಷೇತ್ರದಿಂದ ಸಿಂಗ್‌ ಅವರು, ಐದು ಬಾರಿ ಜಯ ಸಾಧಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ರಾಧಾಮೋಹನ್‌ ಸಿಂಗ್‌ ವಿರುದ್ಧ ಆರ್‌ಎಲ್ಎಸ್‌ಪಿಯ ಆಕಾಶ್‌ ಕುಮಾರ್‌ ಸಿಂಗ್‌ ಸ್ಪರ್ಧಿಸಿದ್ದಾರೆ.

1952ರಲ್ಲಿ ರಚನೆಯಾಗಿರುವ ಮೋತಿಹಾರಿ ಕ್ಷೇತ್ರದಲ್ಲಿ 1989, 1996, 1999, ಪೂರ್ವಿ ಚಂಪಾರಣ್‌ ಎಂದು ಹೊಸ ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ 2009, 2014ರಲ್ಲಿ ಸಿಂಗ್‌ ಅವರು ಜಯ ಗಳಿಸಿದ್ದಾರೆ. 2014ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ರಾಧಾಮೋಹನ್‌ ಸಿಂಗ್‌ 4,00, 452 ಮತಗಳನ್ನು ಪಡೆದಿದ್ದರು. ಆರ್‌ಜೆಡಿಯ ವಿನೋದ್‌ ಕುಮಾರ್‌ ಶ್ರೀವಾಸ್ತವ 2,08,289 ಮತಗಳನ್ನು ಪಡೆದುಕೊಂಡಿದ್ದರು.

ಕೊನೆಯ ಚುನಾವಣೆ?: ಏ.17ರಂದು ಮೋತಿಹಾರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ್ದ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಾಧಾಮೋಹನ್‌ ಸಿಂಗ್‌ ‘ಈ ಬಾರಿಯ ಚುನಾವಣೆ ನನ್ನ ಕೊನೆಯ ಚುನಾವಣೆ’ ಎಂದು ಹೇಳಿಕೊಂಡಿದ್ದಾರೆ.

ವರ್ಚಸ್ಸು, ಹಣ ಬಲ: ಆರನೇ ಹಂತದಲ್ಲಿ ನಡೆಯಲಿರುವ ಈ ಚುನಾವಣೆಯಲ್ಲಿ ಬಿಹಾರದಲ್ಲಿ ಸಿವಾನ್‌, ಮಹಾರಾಜ್‌ಗಂಜ್‌, ವೈಶಾಲಿ, ಪಶ್ಚಿಮ ಚಂಪಾರಣ್‌, ಪೂರ್ವ ಚಂಪಾರಣ್‌, ವಾಲ್ಮೀಕಿನಗರ್‌ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಲ್ಲಿನ 127 ಅಭ್ಯರ್ಥಿಗಳ ಪೈಕಿ 125 ಮಂದಿಯ ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್‌ಗಳನ್ನು ಪರಿಶೀಲನೆ ನಡೆಸಿದ ಅಧ್ಯಯನ ಪ್ರಕಾರ ಹೆಚ್ಚಿನ ಮಂದಿ ಹುರಿಯಾಳುಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಜತೆಗೆ 44 ಮಂದಿ ಕೋಟ್ಯಧಿಪತಿ ಅಭ್ಯರ್ಥಿಗಳೂ ಇದ್ದಾರೆ. ಜತೆಗೆ 15 ಮಂದಿ ಮಹಿಳಾ ಅಭ್ಯರ್ಥಿಗಳೂ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 127 ಮಂದಿಯ ಪೈಕಿ 90 ಮಂದಿ 50 ವರ್ಷ ವಯಸ್ಸಿಗಿಂತ ಕೆಳಗಿನವರು.

ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯನ್ನು ಗಮನಿಸಿದಾಗ ಬಿಜೆಪಿ ಪ್ರಸ್ತುತಪಡಿಸುತ್ತಿರುವ ರಾಷ್ಟ್ರವಾದ, ಅಭಿವೃದ್ಧಿ ಮತ್ತು ರಾಜಕೀಯ ಪಕ್ಷಗಳು ಅನುಸರಿಸುವ ಜಾತಿಗಳ ಮತಗಳ ಆಧಾರದಲ್ಲಿ ಲೆಕ್ಕಾಚಾರ ಪ್ರಧಾನವಾಗಿಯೇ ಇದೆ.

ಹತ್ತನೇ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಹಿರಿಯ ನಾಯಕನ ವಿರುದ್ಧ ಆರ್‌ಜೆಡಿ ನೇತೃತ್ವದ ಬಿಹಾರದ ಮಹಾಮೈತ್ರಿಕೂಟ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಆಕಾಶ್‌ ಕುಮಾರ್‌ ಸಿಂಗ್‌ರನ್ನು ಕಣಕ್ಕೆ ಇಳಿಸಿದೆ.

ರಾಧಾಮೋಹನ್‌ ಸಿಂಗ್‌ ರಾಜಕೀಯ ಅನುಭವದ ಎದುರು ಆಕಾಶ್‌ ಕುಮಾರ್‌ ಸಿಂಗ್‌ ಕಿರಿಯರು ಎನ್ನುವುದರಲ್ಲಿ ಸಂಶಯವಿಲ್ಲ. ಮೋದಿ ಅಲೆ ಮತ್ತು ಇತರ ವಿಚಾರಗಳನ್ನು ಮುಂದಿಟ್ಟು ನೋಡಿದಾಗ ಮೇಲ್ನೋಟಕ್ಕೆ ಈ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸುತ್ತದೆ ಎಂಬ ಮಾತುಗಳು ಇವೆ.

ಇಬ್ಬರು ಅಭ್ಯರ್ಥಿಗಳು ಕೂಡ ಮೇಲ್ವರ್ಗದ ಜಾತಿಗೆ ಸೇರಿದವರು. ರಾಧಾಮೋಹನ್‌ ಸಿಂಗ್‌ ರಜಪೂತ್‌ ಸಮುದಾಯಕ್ಕೆ ಸೇರಿದವರು. ಆರ್‌ಎಲ್ಎಸ್‌ಪಿಯ ಆಕಾಶ್‌ ಕುಮಾರ್‌ ಸಿಂಗ್‌ ಭೂಮಿಹಾರ್‌ ಜಾತಿಗೆ ಸೇರಿದವರು.

ಕುಶ್ವಾಹ, ಯಾದವ, ಇತರ ಹಿಂದುಳಿದ ವರ್ಗಗಳಿಗೆ ಸೇರಿದವರ ಸಂಖ್ಯೆಯೂ ಈ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ.

ಬಿಜೆಪಿ ಅಭ್ಯರ್ಥಿಗೆ ಮೋದಿ ಸರ್ಕಾರದ ಯೋಜನೆ ಮತ್ತು ಬಿಹಾರ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳ ಲಾಭ ಮತ ಗಳಿಕೆಗೆ ಅಸ್ತ್ರವಾದರೆ, ಮಹಾಮೈತ್ರಿಕೂಟಕ್ಕೆ ಮೋದಿ ಮತ್ತು ನಿತೀಶ್‌ ಕುಮಾರ್‌ ಸರ್ಕಾರದ ವೈಫ‌ಲ್ಯಗಳೇ ಪ್ರಧಾನ ಅಸ್ತ್ರವಾಗಿ ಪರಿಣಮಿಸಿದೆ.

ಈ ಕ್ಷೇತ್ರ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಹರ್ಸಿದಿಯಲ್ಲಿ ಬಿಜೆಪಿ, ಗೋವಿಂದ್‌ಗಂಜ್‌ನಲ್ಲಿ ಲೋಕ್‌ಜನಶಕ್ತಿ, ಕೇಸರಿಯಾದಲ್ಲಿ ಆರ್‌ಜೆಡಿ, ಕಲ್ಯಾಣಪುರದಲ್ಲಿ ಬಿಜೆಪಿ, ಪಿಪ್ರಾದಲ್ಲಿ ಬಿಜೆಪಿ, ಮೋತಿಹಾರಿ ಕ್ಷೇತ್ರದಿಂದ ಬಿಜೆಪಿ ಗೆದ್ದಿದೆ. ಹೀಗಾಗಿ, ಬಿಜೆಪಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಆ ಪಕ್ಷದ ನಾಯಕರ ಅಂಬೋಣ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ