ಭದ್ರಕೋಟೆಯಲ್ಲಿ ಕೌರ್‌ಗೆ ಪರೀಕ್ಷೆ

Team Udayavani, May 13, 2019, 6:00 AM IST

ಕೇಂದ್ರ ಸಚಿವೆ, ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ದ ಪ್ರಭಾವಿ ನಾಯಕಿ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಮೂರನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಲು ಭಟಿಂಡಾದಿಂದ ಪ್ರಯತ್ನ ನಡೆಸುತ್ತಿದ್ದಾರೆ. ಅವರಿಗೆ ಅಡ್ಡಿಯಾಗಿ ನಿಂತದ್ದು ಕಾಂಗ್ರೆಸ್‌ ಶಾಸಕ, ಯುವ ನೇತಾರ ಅರಿಂದರ್‌ ಸಿಂಗ್‌ ರಾಜಾ ವಾರಿಂಗ್‌. ಎರಡು ವರ್ಷಗಳ ಹಿಂದೆ ಪಂಜಾಬ್‌ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ-ಎಸ್‌ಎಡಿ ಮೈತ್ರಿಕೂಟ ಹೀನಾಯ ಸೋಲು ಅನುಭವಿಸಿತ್ತು. 117 ಸ್ಥಾನಗಳ ಪೈಕಿ ಕೇವಲ 15ನ್ನು ಬಗಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆಮ್‌ ಆದ್ಮಿ ಪಾರ್ಟಿ 20 ಕ್ಷೇತ್ರಗಳಲ್ಲಿ ಗೆದ್ದಿದ್ದು, ಆ ಪಕ್ಷದ ಪಾಲಿಗೆ ದಾಖಲೆಯೇ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲೇಬೇಕೆಂದು ಖುದ್ದಾಗಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್‌ ಸಿಂಗ್‌ ಅವರೇ ಪ್ರಚಾರಕ್ಕೆ ಆಗಮಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಇದ್ದ ಆಡಳಿತ ವಿರೋಧಿ ಅಲೆ ಯಿಂದಾಗಿ ಎಸ್‌ಎಡಿ-ಬಿಜೆಪಿ ಮೈತ್ರಿಕೂಟ ವಿಧಾನಸಭೆ ಚುನಾ ವಣೆಯಲ್ಲಿ ಸೋಲು ಅನುಭವಿಸಿತ್ತು. ಹೀಗಾಗಿ, ಶಿರೋಮಣಿ ಅಕಾಲಿ ದಳದ ಭದ್ರ ಕೋಟೆ ಎಂದು ಹೆಗ್ಗಳಿಕೆ ಪಡೆದುಕೊಂಡ ಭಟಿಂಡಾದಲ್ಲಿ ಈ ಬಾರಿ ಕೌರ್‌ಗೆ ಕಠಿಣ ಸ್ಪರ್ಧೆ ಎದುರಾಗಿದೆ.

ಹೇಳಿ ಕೇಳಿ ಕೇಂದ್ರ ಸಚಿವರು, ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್‌ ಸಿಂಗ್‌ ಬಾದಲ್‌ ಪತ್ನಿ ಎಂಬ ಪ್ರಭಾವಳಿಯ ಜತೆಗೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ನರೇಂದ್ರ ಮೋದಿ ವರ್ಚಸ್ಸು ಅವರಿಗೆ ನೆರವಾಗಲಿದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಈ ಕ್ಷೇತ್ರದಿಂದ 1962ರಿಂದ ಅಕಾಲಿ ದಳ ಗೆಲ್ಲಲು ಶುರು ಮಾಡಿತ್ತು. 1977, 1984, 1989, 1996, 1998, 2004, 2009ರಲ್ಲಿ ಪಂಜಾಬ್‌ನ ಪ್ರತಿಪಕ್ಷ ಈ ಕ್ಷೇತ್ರದಲ್ಲಿ ಗೆದ್ದಿದೆ.

ಕಾಂಗ್ರೆಸ್‌ನಿಂದ ಈ ಬಾರಿ ಹೊಸ ಮುಖ, ಎರಡು ಬಾರಿ ಶಾಸಕರಾಗಿರುವ ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ. ಮೂಲ ಯೋಜನೆ ಪ್ರಕಾರ ಪಂಜಾಬ್‌ ಸಚಿವ ನವ್‌ಜೋತ್‌ ಸಿಂಗ್‌ ಸಿಧು ಪತ್ನಿ ನವ್‌ಜೋತ್‌ ಕೌರ್‌ ಮತ್ತು 2014ರಲ್ಲಿ ದ್ವಿತೀಯ ಸ್ಥಾನಿಯಾಗಿದ್ದ, ಹಾಲಿ ಸಚಿವ ಮನ್‌ಪ್ರೀತ್‌ ಬಾದಲ್‌ ಸ್ಪರ್ಧೆಗೆ ಒಪ್ಪದೇ ಇದ್ದ ಬಳಿಕ ವಾರಿಂಗ್‌ರನ್ನು ಸಮರ ಕಣಕ್ಕೆ ಮುನ್ನುಗ್ಗಿಸಲಾಗಿದೆ.
ಇನ್ನುಳಿದಂತೆ ಆಮ್‌ ಆದ್ಮಿ ಪಕ್ಷದಿಂದ ಬಲ್ಜೀಂದರ್‌ ಸಿಂಗ್‌ ಕೌರ್‌, ಪಂಜಾಬ್‌ ಏಕತಾ ಪಾರ್ಟಿಯಿಂದ ಸುಖ್‌ಪಾಲ್‌ ಸಿಂಗ್‌ ಖೈರಾ ಕಣದಲ್ಲಿದ್ದಾರೆ.

ಚುನಾವಣಾ ವಿಚಾರ, ಸಮಸ್ಯೆ: ಎಸ್‌ಎಡಿ ಸರ್ಕಾರ ಅಧಿ ಕಾರದಲ್ಲಿದ್ದಾಗ ಗುರು ಗ್ರಂಥ ಸಾಹಿಬ್‌ಗ ಅವಮಾನ ಮಾಡಿದ ಪ್ರಕರಣವೇ ಕ್ಷೇತ್ರದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಎದುರಾಳಿ ಅಭ್ಯರ್ಥಿಗಳಾಗಿರುವ ಸುಖ್‌ಪಾಲ್‌ ಸಿಂಗ್‌ ಖೈರಾ, ವಾರಿಂಗ್‌ ಅದೇ ವಿಚಾರವನ್ನು ಪದೇ ಪದೆ ಪ್ರಸ್ತಾಪಿಸುತ್ತಿದ್ದಾರೆ. ಕೋಟ್ಕಾಪುರ-ಬೇಹಾºಲ್‌ ಕಲಾನ್‌ನಲ್ಲಿ ಪೊಲೀಸರು ನಡೆಸಿದ್ದ ಗೋಲಿಬಾರ್‌ ಎಸ್‌ಎಡಿಗೆ ಇನ್ನೂ ಪ್ರತಿಕೂಲವಾಗಿ ಪರಿಣಮಿಸಲಿದೆ ಎಂದು ಖೈರಾ ಪ್ರತಿಪಾದಿಸುತ್ತಾರೆ.

ಆದರೆ, ಈ ಅಂಶವನ್ನು ಹರ್‌ಸಿಮ್ರತ್‌ ಕೌರ್‌ ಸುಳ್ಳು ಪ್ರಚಾರ ಎಂದು ಹೇಳಿ ತಿರಸ್ಕರಿಸುತ್ತಾರೆ. ಕ್ಷೇತ್ರಕ್ಕೆ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ, ಉತ್ತಮ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಹಲವು ಮೂಲ ಸೌಕರ್ಯ ಯೋಜನೆಗಳನ್ನು ಎಸ್‌ಎಡಿ ಸರ್ಕಾರ ಇದ್ದಾಗ, ಸಂಸದೆಯಾಗಿರುವ ಅವಧಿಯಲ್ಲಿ ಜಾರಿ ಮಾಡಲಾಗಿದೆ ಎಂದು ಪ್ರತಿಪಾದಿಸುತ್ತಾರೆ.

ಸರ್ಕಾರದ ವಿವಿಧ ಕಚೇರಿಗಳ ಅಧಿಕಾರಿಗಳನ್ನು ಜನರ ಬಳಿಗೆ ಬಂದು, ಅವರ ಸಮಸ್ಯೆ ಪರಿಹರಿಸುವ ಕ್ರಮಗಳನ್ನು ಮಾಡಿದ್ದೆ. ಉದ್ಯೋಗ, ನಿರುದ್ಯೋಗ ಭತ್ಯೆ, ಉಚಿತ ಮೊಬೈಲ್‌ ಫೋನ್‌ಗಳನ್ನು ಕಾಂಗ್ರೆಸ್‌ ನೀಡುತ್ತದೆ ಎಂದು ಹೇಳಿತ್ತು. ಅದನ್ನು ಅದು ಈಡೇರಿಸಲೇ ಇಲ್ಲ ಎಂದು ತಿರುಗೇಟು ನೀಡುತ್ತಾರೆ ಕೌರ್‌.

ಆಮ್‌ ಆದ್ಮಿ ಪಾರ್ಟಿ, ಪಂಜಾಬ್‌ ಏಕತಾ ಪಕ್ಷಗಳ ಹುರಿಯಾಳುಗಳು, ಕ್ಯಾ.ಅಮರಿಂದರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರ ವಹಿಸಿ ಎರಡು ವರ್ಷ ಕಳೆದರೂ, ಚುನಾವಣೆ ವೇಳೆ ನೀಡಿದ್ದ ವಾಗ್ಧಾನಗಳನ್ನು ಈಡೇರಿಸದೇ ಇದ್ದ ಬಗ್ಗೆ ಪ್ರಧಾನವಾಗಿ ಪ್ರಸ್ತಾಪ ಮಾಡುತ್ತಿದ್ದಾರೆ. ಇದು ಕೌರ್‌ ಅವರಿಗೆ ಧನಾತ್ಮಕವಾಗಿ ಮತಗಳನ್ನು ತಂದುಕೊಡಬಹುದು ಎಂಬ ವಿಶ್ಲೇಷಣೆಯೂ ನಡೆದಿದೆ. ಕಾಂಗ್ರೆಸ್‌ ಹುರಿಯಾಳು ವಾರಿಂಗ್‌ ಪ್ರಕಾರ ಪಂಜಾಬ್‌ನ 8.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ. ಜತೆಗೆ ಪಿಂಚಣಿ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಇನ್ನೂ ಎರಡು ವರ್ಷಗಳು ಬಾಕಿ ಇವೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

9 ಕ್ಷೇತ್ರಗಳು: ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿವೆ. ಭಟಿಂಡಾ ಗ್ರಾಮೀಣ (ಆಪ್‌), ತಲ್ವಾಂಡಿ ಸಾಬೂ (ಆಪ್‌), ಮೌರ್‌ (ಆಪ್‌), ಬುಧಾಲ್ಡಾ (ಆಪ್‌), ಭಟಿಂಡಾ ನಗರ (ಕಾಂಗ್ರೆಸ್‌), ಬುಚೋ ಮಂಡಿ (ಕಾಂಗ್ರೆಸ್‌), ಲಂಬಿ ಮತ್ತು ಸರ್ದುಲ್‌ಗ‌ರ್‌ (ಎಸ್‌ಎಡಿ). ಒಂಬತ್ತು ಕ್ಷೇತ್ರಗಳ ಪೈಕಿ ಐದರಲ್ಲಿ ಆಪ್‌, ತಲಾ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಎಸ್‌ಎಡಿ ಜಯ ಗಳಿಸಿದೆ. ಹೀಗಾಗಿ, ವಿಧಾನಸಭಾ ಕ್ಷೇತ್ರಗಳಲ್ಲಿನ ಬಲಾಬಲ ನೋಡಿದರೆ ಹರ್‌ಸಿಮ್ರತ್‌ ಕೌರ್‌ ಅವರಿಗೆ ಕಠಿಣ ಸ್ಪರ್ಧೆ ಎದುರಾಗುವುದು ನಿಶ್ಚಿತ ಎಂಬ ಅಭಿಪ್ರಾಯಗಳು ಇವೆ.

ಈ ಬಾರಿ ಕಣದಲ್ಲಿ
ಹರ್‌ಸಿಮ್ರತ್‌ ಕೌರ್‌ ಬಾದಲ್‌ (ಎಸ್‌ಎಡಿ)
ಅಮರಿಂದರ್‌ ಸಿಂಗ್‌ ರಾಜಾ ವಾರಿಂಗ್‌ (ಕಾಂಗ್ರೆಸ್‌)


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ