ಉತ್ತರ ಕನ್ನಡದಲ್ಲಿ ಹವ್ಯಕರದ್ದೇ ಹವಾ

Team Udayavani, Mar 21, 2019, 1:29 AM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಆಯ್ಕೆಯಾದ ರಾಜಕಾರಣಿಗಳ ಟ್ರ್ಯಾಕ್‌ ಮತ್ತು ಜಾತಿವಾರು ಲೆಕ್ಕಾಚಾರ ನೋಡಿದರೆ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತವೆ. ಕೆನರಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಆದರೆ ಆ ಕೋಟೆ 90ರ ದಶಕದಲ್ಲಿ ಛಿದ್ರವಾಗಿದ್ದು ಸಹ ಈಗ ಇತಿಹಾಸ. ಕಾಂಗ್ರೆಸ್‌ ಹುರಿಯಾಳುಗಳು ಹೆಚ್ಚು ಸಲ ಉತ್ತರ ಕನ್ನಡವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಜೋಕಿಂ ಆಳ್ವಾ ಮೂರು ಸಲ, ಬಿ.ಪಿ.ಕದಂ, ಬಿ.ವಿ. ನಾಯಕ, ಮಾರ್ಗರೆಟ್‌ ಆಳ್ವಾ ತಲಾ ಒಂದು ಸಲ, ದೇವರಾಯ ನಾಯ್ಕ ನಾಲ್ಕು ಸಲ ಗೆದ್ದಿದ್ದಾರೆ. ಜಿಎಸ್‌ಬಿ ಸಮಾಜದ ದಿನಕರ ದೇಸಾಯಿ ಸೋಷಲಿಸ್ಟ್‌ ಪಕ್ಷದಿಂದ ಪ್ರತಿನಿಧಿ ಸಿದ್ದಾರೆ. ಅನಂತಕುಮಾರ್‌ ಹೆಗಡೆ ಐದು ಸಲ ಕೆನರಾದಿಂದ ಲೋಕಸಭೆಗೆ ಆಯ್ಕೆಯಾಗಿದ್ದು ಅವರು ಹವ್ಯಕ ಬ್ರಾಹ್ಮಣ ಸಮಾಜದವರು ಎಂಬುದು ಗಮನಾರ್ಹ.

ನಾಮಧಾರಿ ಸಮುದಾಯಕ್ಕೆ ನಾಲ್ಕು ಸಲ ಪ್ರಾತಿನಿಧ್ಯ ಸಿಕ್ಕಿದ್ದರೆ, ಕ್ರಿಶ್ಚಿಯನ್ನರಿಗೆ ನಾಲ್ಕು ಸಲ, ಬ್ರಾಹ್ಮಣರಿಗೆ ಆರು ಸಲ ಪ್ರಾತಿನಿಧ್ಯ ಸಿಕ್ಕಿದೆ. ಮರಾಠ ಸಮುದಾಯಕ್ಕೆ ಒಂದು ಸಲ, ನಾಡವರ ಸಮಾಜಕ್ಕೆ ಒಂದು ಸಲ ಪ್ರಾತಿನಿಧ್ಯ ಸಿಕ್ಕಿದೆ. ಕೆನರಾ ಲೋಕಸಭಾ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕು ಸೇರಿ ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನು ಸಹ ಒಳಗೊಂಡಿದೆ. ಅಂಕಿ-ಅಂಶಗಳ ಪ್ರಕಾರ ಇಲ್ಲಿ ಮರಾಠ ಮತದಾರರು 1.85 ಲಕ್ಷ, ನಾಮಧಾರಿಗಳು 1.38 ಲಕ್ಷ, ಹವ್ಯಕ ಬ್ರಾಹ್ಮಣರು, ಗೌಡ ಸಾರಸ್ವತ ಬ್ರಾಹ್ಮಣರು, ದೇಶಸ್ತ ಬ್ರಾಹ್ಮಣರು ಸೇರಿ 1.35 ಲಕ್ಷ, ಮುಸ್ಲಿಂ ಮತದಾರರು 1.75 ಲಕ್ಷ, ಕ್ರಿಶ್ಚಿಯನ್ನರು 63 ರಿಂದ 65 ಸಾವಿರ, 1.3 ಲಕ್ಷ ಲಿಂಗಾಯತರು, ಹಾಲಕ್ಕಿ ಒಕ್ಕಲಿಗರು, ಪಟಗಾರರು ಸೇರಿ 1.30 ಲಕ್ಷ ಮತದಾರರು ಇದ್ದಾರೆ. ಮುಸ್ಲಿಮರಿಗೆ ಮತ್ತು ಹಾಲಕ್ಕಿ ಒಕ್ಕಲಿಗರಿಗೆ ಈತನಕ ಲೋಕಸಭೆಯಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಹಿಂದುಳಿದ ವರ್ಗಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಮರಾಠರು, ಲಿಂಗಾಯತರು ನಿರ್ಣಾಯಕ ಸ್ಥಾನದಲ್ಲಿ ಇದ್ದಾರೆ ಎಂಬುದು ಗಮನಾರ್ಹ.

ದಿನಕರ ದೇಸಾಯಿ, ಅನಂತಕುಮಾರ್‌ ಹೆಗಡೆ ಕೆನರಾ ಲೋಕಸಭೆಯನ್ನು ಪ್ರತಿನಿಧಿಸಿದ ಬ್ರಾಹ್ಮಣ ಸಮಾಜದವರಾಗಿದ್ದರು. ಜೋಕಿಂ ಆಳ್ವಾ ಮತ್ತು ಮಾರ್ಗರೇಟ್‌ ಆಳ್ವಾ ಸಹ ಜಿಲ್ಲೆಯನ್ನು ಪ್ರತಿನಿಧಿಸಿದ ಕ್ರಿಶ್ಚಿಯನ್‌ ಸಮುದಾಯದವರು. ಇವರು ಸೆಕ್ಯುಲರ್‌ ಮನೋಭಾವದವರು ಎನ್ನುವುದು ನಿರ್ವಿವಾದ. ಹಾಗೆ ದಿನಕರ ದೇಸಾಯಿ ಹಾಗೂ ಬಿ.ಪಿ. ಕದಂ ಸಹ ಜಾತ್ಯತೀತ ಮನಸ್ಸಿನವರು. ದೇವರಾಯ ನಾಯ್ಕ ಕಾಂಗ್ರೆಸ್‌ ಕಟ್ಟಾಳು. ಅವರು ಸಹ ಇಂದಿರಾ ಗಾಂಧಿ ಅಲೆಯಲ್ಲಿ ಗೆದ್ದು ಬರುತ್ತಿದ್ದರು. ಬಿ.ವಿ. ನಾಯಕ ಅತ್ಯಂತ ವೈಚಾರಿಕ ಮನುಷ್ಯ. ಇವರು ಇಂದಿರಾ ಗಾಂಧಿ ಅವರ ಸ್ನೇಹದಿಂದ ಟಿಕೆಟ್‌ ಪಡೆದು ಅನಾಯಾಸವಾಗಿ ಕೆನರಾ ಕ್ಷೇತ್ರ ಪ್ರತಿನಿಧಿ ಸಿದವರು. ದಿನಕರ ದೇಸಾಯಿ ಸಹ ಉತ್ತರ ಕನ್ನಡದಿಂದ ಒಮ್ಮೆ ಮಾತ್ರ ಲೋಕಸಭೆ ಪ್ರವೇಶಿಸಲು ಸಾಧ್ಯವಾಗಿತ್ತು.

ಮಾರ್ಗರೇಟ್‌ ಆಳ್ವಾ 2 ಸಲ ಸೋತರು. ಒಮ್ಮೆ ಮಾತ್ರ ಅವರು ಕೆನರಾದಿಂದ ಲೋಕಸಭೆಯಲ್ಲಿ ಮಿಂಚಿದ್ದರು. ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಆದ್ಯತೆ ನೀಡಿ ಜಿಲ್ಲೆಯಲ್ಲಿ ರಾಜಕೀಯ ಸಂಚಲನ ಮೂಡಿಸಿದ ಮ ಹಿಳೆಯಾಗಿದ್ದರು. ಜಿಲ್ಲೆಯಲ್ಲಿ ಎಲ್ಲಾ ಸಮುದಾಯಗಳ ಮತದಾನದ ವೈಖರಿ ಗಮನಿಸಿದರೆ ದೇಶದಪರಿಸ್ಥಿತಿ ಹಾಗೂ ಕೇಂದ್ರ ಸರ್ಕಾರದ ನೀತಿ ನಿಲುವುಗಳನ್ನು ನೋಡಿ ಪ್ರತಿನಿಧಿ ಗಳನ್ನು ಆಯ್ಕೆ ಮಾಡಿದ ಇತಿಹಾಸ ಎದ್ದು ಕಾಣುತ್ತಿದೆ. ಕಾಂಗ್ರೆಸ್‌ಟಿಕೆಟ್‌ ಪಡೆ ಯುವಲ್ಲಿ ನಾಮಧಾರಿಗಳು, ನಾಡವರು, ಮರಾಠರು, ಕ್ರಿಶ್ಚಿಯನ್ನರು ಮುನ್ನೆಲೆಯಲ್ಲಿದ್ದಾರೆ. ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಬ್ರಾಹ್ಮಣರು ಸದಾ ಮುಂಚೂಣಿಯಲ್ಲಿದ್ದಾರೆ. ಉತ್ತರ ಕನ್ನಡ ಜಾತ್ಯತೀತ ಮನಸ್ಸಿನವರೇ ಹೆಚ್ಚು ಸಲ ಪ್ರತಿನಿಧಿ ಸಿದ್ದಾರೆ ಹಾಗೂ ಸಮುದಾಯಗಳು ವ್ಯಕ್ತಿಗಿಂತ ಕೇಂದ್ರದ ನಿಲುವುಗಳನ್ನು ಆಧರಿಸಿ ಮತ ನೀಡಿರುವುದು ಸಹ ಕಾಣುತ್ತಿದೆ.

ಘಟ್ಟದ ಮೇಲಿನರಿಗೆ ಹೆಚ್ಚು ಅದೃಷ್ಟ!
ಕರಾವಳಿ ಭಾಗದವರು ಒಂದೊಂದು ಸಲ ಲೋಕಸಭೆ ಪ್ರವೇಶಿಸಿದ್ದಾರೆ. ಜೋಕಿಂ ಆಳ್ವಾರಂತೂ ಮಂಗಳೂರಿನಲ್ಲಿದ್ದೇ ಕೆನರಾದಿಂದ ಆರಿಸಿ ಬರುತ್ತಿದ್ದರು. ಮಾರ್ಗರೇಟ್‌ ಗೆದ್ದ ಅವಧಿ ಯಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯಲ್ಲಿ ಹೆಚ್ಚು ಸಂಪರ್ಕದಲ್ಲಿದ್ದರು. ನಂತರ ಅವರು ಕ್ಷೇತ್ರದಲ್ಲಿ ನಿರಂತರವಾಗಿ ಉಳಿಯಲಿಲ್ಲ. ಘಟ್ಟದ ಮೇಲಿನ, ಅದರಲ್ಲೂ ಶಿರಸಿಯ
ಅನಂತಕುಮಾರ್‌ ಹೆಗಡೆ, ದೇವರಾಯ ನಾಯ್ಕ ಮಾತ್ರ ಅತೀ ಹೆಚ್ಚು ಅವಧಿಯನ್ನು ಲೋಕಸಭೆಯಲ್ಲಿ ಕೆನರಾ ಪ್ರತಿನಿಧಿ ಗಳಾಗಿ ಕಳೆದವರಾಗಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ