ಆಸ್ತಿ ದುಪ್ಪಟ್ಟು,ಕಾರು ಖರೀದಿಗೆ ಸಾಲ

Team Udayavani, Apr 5, 2019, 6:14 AM IST

ಎರಡನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೇ ದಿನಾಂಕವಾದ ಗುರುವಾರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಆಸ್ತಿ ಘೋಷಣೆಯನ್ನೂ ಮಾಡಿಕೊಂಡಿದ್ದಾರೆ. ಧಾರವಾಡದಲ್ಲಿ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಆಸ್ತಿ 5 ವರ್ಷದಲ್ಲಿ ದುಪ್ಪಟ್ಟು ಆಗಿರುವುದು ವಿಶೇಷ. ಇನ್ನು ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದೇ ಶ್ವರ್‌ ಕಾರು ಖರೀದಿಸಲು ಸಂಸದ ಶಿವಕುಮಾರ್‌ ಉದಾಸಿ ಬಳಿ ಸಾಲ ಮಾಡಿದ್ದಾಗಿ ಘೋಷಿಸಿಕೊಂಡಿದ್ದಾರೆ.

ವಿನಯ ಕುಲಕರ್ಣಿ ಆಸ್ತಿ
5 ವರ್ಷದಲ್ಲಿ ದುಪ್ಪಟ್ಟು
ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ವಿನಯ ಕುಲಕರ್ಣಿ ಒಟ್ಟು 19.70 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ.

2014ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ವಿನಯ, ಆಗ ಒಟ್ಟು 10.49 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿ ಒಡೆತನ ಘೋಷಿಸಿದ್ದರು. ಕಳೆದ ವರ್ಷ ಅಂದರೆ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಅವರು ಒಟ್ಟು 18.07 ಕೋಟಿ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು. ಇದೀಗ ಕಳೆದ ಐದು ವರ್ಷದಲ್ಲಿ ಒಟ್ಟು 9 ಕೋಟಿ ರೂ. ಆಸ್ತಿ ಹೆಚ್ಚಳವಾಗಿದೆ.ನಾಯಕನೂರಿನಲ್ಲಿ 41 ಎಕರೆ ಕೃಷಿ ಭೂಮಿ ಹೊಂದಿದ್ದರೆ, ಧಾರವಾಡದ ಮನಸೂರು ಸರಹದ್ದಿನಲ್ಲಿ 11.22 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಅಲ್ಲದೇ ಪಿತ್ರಾರ್ಜಿತವಾಗಿ 3.30 ಕೋಟಿ ರೂ. ಹಾಗೂ ಸ್ವಯಾರ್ಜಿತವಾಗಿ 7.90 ಕೋಟಿ ರೂ. ಮೌಲ್ಯದ ಆಸ್ತಿ ಹೊಂದ್ದಿದ್ದಾರೆ. ಒಟ್ಟು ಸ್ಥಿರಾಸ್ತಿ ಮೌಲ್ಯ 11.20 ಕೋಟಿ ರೂ. ಆಗಿದೆ. 30 ಲಕ್ಷ ರೂ. ಮೌಲ್ಯದ ಪಜೆರೋ ಕಾರು, ವಿವಿಧ ಬ್ಯಾಂಕುಗಳಲ್ಲಿನ ಠೇವಣಿ, ಕೈಯಲ್ಲಿ 1.60 ಲಕ್ಷ ನಗದು, ಜೀವ ವಿಮಾ ಬಾಂಡ್‌ಗಳು ಸೇರಿ ಒಟ್ಟು 5.60 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಅಸ್ನೋಟಿಕರ್‌ 57.70 ಕೋಟಿ ರೂ. ಒಡೆಯ
ಜೆಡಿಎಸ್‌ ಮುಖಂಡ, ಕೆನರಾ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಅವರ ಒಟ್ಟು ಸ್ವಯಾರ್ಜಿತ ಸ್ಥಿರಾಸ್ತಿ ಮೌಲ್ಯ 57,70,77,429 ರೂ. ಅವರ ಹೆಸರಲ್ಲಿ ಒಟ್ಟು 2,38,00,806 ರೂ. ಸಾಲವೂ ಇದೆ. ಅವರ ಚರಾಸ್ತಿ 4,98,86,695 ರೂ. ಆಗಿದೆ. ಪತ್ನಿ ಗೌರಿ ಹೆಸರಲ್ಲಿ ಒಟ್ಟು ಚರಾಸ್ತಿ 65,26,902 ರೂ.ಗಳಿದ್ದು, ಸ್ವಯಾರ್ಜಿತ ಸ್ಥಿರಾಸ್ತಿ ಮೌಲ್ಯ 4,00,00,000.00 ರೂ.ಗಳಷ್ಟಿದೆ. ಪುತ್ರ ಸಿದಾಟಛಿಂತ ಬಳಿ ಚರಾಸ್ತಿ 5,21,250 ರೂ. ಇದೆ. ಎರಡನೇ ಪುತ್ರ ಅದಿತ್‌ ಹೆಸರಲ್ಲಿ ಚರಾಸ್ತಿ 3,88,125 ರೂ. ಇದೆ. ತಾಯಿ ಶುಭಲತಾ ಅಸ್ನೋಟಿಕರ್‌ ಬಳಿ ಚರಾಸ್ತಿ 39,56,500 ರೂ.ನಷ್ಟಿದೆ. ಅವರ ಹೆಸರಲ್ಲಿ ಸ್ಥಿರಾಸ್ತಿ 4,35,60,000.00 ರೂ.ನಷ್ಟಿದೆ.

ಅಸ್ನೋಟಿಕರ್‌ ವಿರುದ್ಧ ಆಯುಧ ಲೈಸೆನ್ಸ್‌ ರಿನ್ಯುವಲ್‌ ಮಾಡಿಸದ ಆರೋಪದ ಪ್ರಕರಣ ದಾಖಲಾಗಿದೆ.

5 ವರ್ಷದಲ್ಲಿ ಉದಾಸಿ ಆಸ್ತಿ 19 ಕೋಟಿ ಏರಿಕೆ
ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಿವಕುಮಾರ ಉದಾಸಿ ಆಸ್ತಿ ಮೌಲ್ಯ 64 ಕೋಟಿ ರೂ. ಆಗಿದ್ದು, ಕಳೆದ ಐದು ವರ್ಷಗಳಿಗೆ ಹೋಲಿಸಿದರೆ 19 ಕೋಟಿ ರೂ.ಗಳಷ್ಟು ಆಸ್ತಿ ಏರಿಕೆಯಾಗಿದೆ. 2014ರ ಚುನಾವಣೆಯಲ್ಲಿ 45 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು. ಚರಾಸ್ತಿ ಮೌಲ್ಯ 5,72,74,350 ರೂ. ಹಾಗೂ ಸ್ಥಿರಾಸ್ತಿ ಮೌಲ್ಯ 18,32,92,500 ರೂ. ಸೇರಿ ಒಟ್ಟು 64,05,66,850 ಮೌಲ್ಯದ ಆಸ್ತಿ
ಹೊಂದಿದ್ದಾರೆ. ಶಿವಕುಮಾರ ಉದಾಸಿ ಅವರು 18,53,866 ರೂ. ನಗದು ಹೊಂದಿದ್ದಾರೆ.

ವಿವಿಧ ಬ್ಯಾಂಕುಗಳ ಉಳಿತಾಯ ಖಾತೆ, ಎಫ್‌ಡಿ ರೂಪದಲ್ಲಿ 1.95 ಕೋಟಿ ರೂ. ಇದೆ. 1.05 ಕೋಟಿ ರೂ. ಗಳನ್ನು ಬಾಂಡ್‌, ಷೇರ್‌, ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸಿದ್ದಾರೆ. 1.62 ಕೋಟಿ ರೂ. ಮೊತ್ತದ ವಿಮಾ ಪಾಲಸಿ ಹೊಂದಿದ್ದಾರೆ.ವಿವಿಧ ಸಂಸ್ಥೆಗಳಿಗೆ ಹಾಗೂ ವೈಯಕ್ತಿಕ ಸಾಲವಾಗಿ 16.66 ಕೋಟಿ ರೂ. ನೀಡಿದ್ದಾರೆ.

ಖರ್ಗೆಗಿಂತ ಪತ್ನಿ ಸಿರಿವಂತೆ
ಕಲಬುರಗಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ದಂಪತಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಸಂಸತ್ತಿನಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರೂ ಅವರದ್ದೇ ಆದ ಒಂದು ಸ್ವಂತ ವಾಹನ ಹೊಂದಿಲ್ಲ. ಖರ್ಗೆಯವರಿಗಿಂತ ಅವರ ಪತ್ನಿ ರಾಧಾಬಾಯಿ ಅಧಿಕ ಆಸ್ತಿ ಹೊಂದಿದ್ದಾರೆ. ಖರ್ಗೆ ಕೈಯಲ್ಲಿ 3 ಲಕ್ಷ ರೂ., ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಕಲಬುರಗಿ, ಅಪೆಕ್ಸ್‌ ಬ್ಯಾಂಕ್‌ ಬೆಂಗಳೂರಲ್ಲಿ ಹಾಗೂ ದೆಹಲಿಯ ಎಸ್‌ಬಿಐನಲ್ಲಿ, ಅಪೆಕ್ಸ್‌ ಬ್ಯಾಂಕ್‌ ಬೆಂಗಳೂರಲ್ಲಿ ಹೊಂದಿರುವ ಫಿಕ್ಸ್‌ ಡಿಪಾಜಿಟ್‌ ಮತ್ತು 255 ಗ್ರಾಂ ಬಂಗಾರ, 6 ಕೆ.ಜಿ. ಬೆಳ್ಳಿ ಸೇರಿ 1,36,10,568 ರೂ. ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.

ಪತ್ನಿ ರಾಧಾಬಾಯಿ ಕೈಯಲ್ಲಿ ನಗದು 2.50 ಲಕ್ಷ ರೂ. ನಗದು, ಬೆಂಗಳೂರಿನ ಸದಾಶಿವನಗರ, ಆರ್‌ಟಿನಗರದಲ್ಲಿರುವ ಕಾರ್ಪೊರೇಷನ್‌ಬ್ಯಾಂಕ್‌ ಹಾಗೂ 805 ಗ್ರಾಂ ಬಂಗಾರ ಮತ್ತು 11 ಕೆಜಿ ಬೆಳ್ಳಿ  ಒಡವೆ ಸೇರಿದಂತೆ 1,00,85,019 ರೂ. ಚರಾಸ್ತಿ ಹೊಂದಿದ್ದಾರೆ.

ಸ್ಥಿರಾಸ್ತಿ: ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರ ತಾಲೂಕಿನ ಗುಂಡಗುರ್ತಿಯಲ್ಲಿ 1.08 ಎಕರೆ ಜಮೀನು, ಬೆಂಗಳೂರು ಸದಾಶಿವನಗರದಲ್ಲಿ 571.43 ಚ.ಅಡಿ ಮನೆ, ಕಲಬುರಗಿ
ಬಸವನಗರದಲ್ಲಿ 3200 ಚದರ ಅಡಿ, ಬೆಂಗಳೂರಿನ ಆರ್‌ಎಂವಿ 2ನೇ ಹಂತದಲ್ಲಿ 4000 ಹಾಗೂ 700 ಚದರ ಅಡಿ ಜಾಗ ಸೇರಿದಂತೆ ಒಟ್ಟು 6,31,92614 ರೂ. ಮೌಲ್ಯದ ಸ್ಥಿರಾಸ್ಥಿ ಹೊಂದಿದ್ದಾರೆ.

ಉದಾಸಿ ಬಳಿ ಸಾಲ
ಮಾಡಿದ ಸಿದ್ದೇಶ್ವರ್‌
ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಒಟ್ಟು 19.39 ಕೋಟಿ ಮೌಲ್ಯದ ಆಸ್ತಿ, 1.16 ಕೋಟಿ ಸಾಲ ಹೊಂದಿದ್ದಾರೆ.

ಸಿದ್ದೇಶ್ವರ್‌ ಹೆಸರಲ್ಲಿ 7.5 ಕೋಟಿ ಚರಾಸ್ತಿ, 12.34 ಕೋಟಿ ಮೊತ್ತದ ಸ್ಥಿರಾಸ್ತಿ ಇದ್ದರೆ ಅವರ ಬಳಿ 24.7 ಲಕ್ಷ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಹಾವೇರಿ ಲೋಕಸಭಾ ಕ್ಷೇತ್ರದ ಸದಸ್ಯ ಶಿವಕುಮಾರ್‌ ಉದಾಸಿ ಅವರಿಂದ 1 ಕೋಟಿ, ಬಿಎಂಡಬ್ಯೂ ಕಾರು ಖರೀದಿಗೆ 16 ಲಕ್ಷ ಸಾಲ ಸೇರಿ ಒಟ್ಟು 1.16 ಕೋಟಿ ಸಾಲ ಅವರ ಹೆಸರಲ್ಲಿದೆ. 2014ರಲ್ಲಿ ಅವರು ಯಾವುದೇ ಸಾಲ ಹೊಂದಿರಲಿಲ್ಲ.

2014ರಲ್ಲಿ ಸಿದ್ದೇಶ್ವರ್‌ ತಮ್ಮ ಆಸ್ತಿ 12.29 ಕೋಟಿ ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. 7.99 ಕೋಟಿ ಚರಾಸ್ತಿ, 4.3 ಕೋಟಿ ಸ್ಥಿರಾಸ್ತಿ ಇದೆ ಎಂಬುದಾಗಿ ಘೋಷಣೆ ಮಾಡಿಕೊಂಡಿದ್ದರು. 5 ವರ್ಷದಲ್ಲಿ ಅವರ ಒಟ್ಟು ಆಸ್ತಿ 7 ಕೋಟಿಯಷ್ಟು ಹೆಚ್ಚಾಗಿದೆ. ಸಿದ್ದೇಶ್ವರ್‌ ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

  • ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರು ಸಮಬಲರೇ ಆಗಿರುವ  ಅತ್ಯಂತ ಹಾಟ್‌ ಲೋಕಸಭಾ ಕ್ಷೇತ್ರಗಳು ಇವು ಅಮೇಠಿ (ಉತ್ತರ ಪ್ರದೇಶ) ರಾಹುಲ್‌ ಗಾಂಧಿ (ಕಾಂಗ್ರೆಸ್‌) Vs ಸ್ಮತಿ...

  • ರಾಹುಲ್‌ ಗಾಂಧಿಯವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ಪಕ್ಷವು ಹಿರಿಯರನ್ನು ಗೌರವಿಸುತ್ತದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಮಾಜಿ...

  • ಹರ್ಯಾಣದ ಹಿಸಾರ್‌ ಲೋಕಸಭಾ ಕ್ಷೇತ್ರವು ಮೂರು ರಾಜಕೀಯ ಕುಟುಂಬಗಳ ನಡುವಿನ ಅಖಾಡವಾಗಿ ಬದಲಾಗಿದ್ದು, ಈ ತಿಕ್ರೋನ ಸ್ಪರ್ಧೆಯು ಹರ್ಯಾಣದ ಅತಿದೊಡ್ಡ ಕುಟುಂಬ ರಾಜಕಾರಣದ...

  • ಹಝಾರಿಭಾಗ್‌ ಜಾರ್ಖಂಡ್‌ನ‌ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರ. ಸದ್ಯ ಬಿಜೆಪಿಯ ಮಾಜಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಮೂರು ಬಾರಿ ಪ್ರತಿನಿಧಿಸಿದ್ದ...

  • ಲೋಕಜನ ಶಕ್ತಿ ಪಕ್ಷದ ನಾಯಕ, ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಪ್ರತಿನಿಧಿಸುವ ಕ್ಷೇತ್ರವೇ ಹಾಜಿಪುರ. ಈ ಕ್ಷೇತ್ರದಿಂದ ಪ್ರಸಕ್ತ ಸಾಲಿನಲ್ಲಿ...

ಹೊಸ ಸೇರ್ಪಡೆ