ದುಮ್ಕಾದಲ್ಲಿ ಗುರು-ಶಿಷ್ಯ ಸಮರ

Team Udayavani, May 14, 2019, 4:55 AM IST

ಜಾರ್ಖಂಡ್‌ನ‌ ದುಮ್ಕಾ ಕ್ಷೇತ್ರವೆಂದಾಕ್ಷಣ ನೆನಪಿಗೆ ಬರುವುದು ಜಾರ್ಖಂಡ್‌ ಮುಕ್ತಿ ಮೋರ್ಚಾ ನಾಯಕ, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಅವರ ಹೆಸರು. 1980ರಿಂದ, ಅಂದರೆ ಈ ಕ್ಷೇತ್ರ ಅವಿಭಜಿತ ಬಿಹಾರದ ಭಾಗವಾಗಿದ್ದ ಸಮಯದಿಂದ ಆರಂಭಿಸಿ ಇಲ್ಲಿಯ ವರೆಗೂ 8 ಬಾರಿ ಈ ಕ್ಷೇತ್ರದಿಂದ ಗೆದ್ದಿರುವ ಶಿಬು ಸೋರೇನ್‌ ಕೇವಲ ಮೂರು ಬಾರಿ ಸೋತಿದ್ದಾರೆ. ಈ ಬಾರಿ ಬಿಜೆಪಿ ಯು ಸುನಿಲ್ ಸೋರೇನ್‌ರನ್ನು ಶಿಬು ವಿರುದ್ಧ ಕಣಕ್ಕೆ ಇಳಿಸಿದೆ.

ಗಮನಿಸಬೇಕಾದ ಅಂಶವೆಂದರೆ, ಸುನಿಲ್ ಸೋರೇನ್‌ ಒಂದು ಕಾಲದಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾದ ಭಾಗವಾಗಿದ್ದವರು, ಅಲ್ಲದೇ ಶಿಬು ಸೋರೇನ್‌ರ ಕಟ್ಟಾ ಶಿಷ್ಯ ಎಂದೇ ಕರೆಸಿಕೊ ಳ್ಳುತ್ತಿದ್ದರು. ಹೀಗಾಗಿ, ದುಮ್ಕಾ ಕದನವನ್ನು ಜನ, ಗುರು-ಶಿಷ್ಯನ ಹೋರಾಟ ಎಂದೇ ಕರೆಯುತ್ತಿದ್ದಾರೆ.

ಗುರು ಶಿಷ್ಯನ ನಡುವಿನ ಕದನ ಇದೇ ಮೊದಲಿನದ್ದೇನೂ ಅಲ್ಲ. ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲೂ ಇಬ್ಬರೂ ಮುಖಾಮುಖೀಯಾಗಿದ್ದಾರೆ. ಎರಡರಲ್ಲೂ ಸುನಿಲ್ ಸೋತಿದ್ದಾರೆ. ಆದರೆ ಸೋಲಿನ ಅಂತರ ಮಾತ್ರ ಕಡಿಮೆಯೇ. 2014ರ ಮೋದಿ ಅಲೆಯ ವೇಳೆ ಶಿಬು ಸೋರೇನ್‌ ಅವರಿಗೆ ಪ್ರಬಲ ಸ್ಪರ್ಧೆ ಎದುರೊಡ್ಡಿದ್ದ ಸುನಿಲ್ ಕೇವಲ 39 ಸಾವಿರ ಮತಗಳ ಅಂತರದಿಂದ ಸೋತಿದ್ದರು. 2009ರಲ್ಲಂತೂ 19 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಹೀಗಾಗಿ ಶಿಬು ಸೋರೇನ್‌ ಅವರು ಈ ಬಾರಿಯ ಚುನಾವಣೆಯನ್ನು ಹಗುರವಾಗಿಯಂತೂ ಪರಿಗಣಿಸಿಲ್ಲ. ಇದು ಗುರೂಜಿಯ ಕೊನೆಯ ಚುನಾವಣೆಯಾಗಿದ್ದು, ನೀವೆಲ್ಲ ಅವ ರನ್ನು ಗೆಲ್ಲಿಸಲೇಬೇಕು ಎಂದು ಜಾರ್ಖಂಡ್‌ ಮುಕ್ತಿ ಮೋರ್ಚಾ ಭಾವನಾತ್ಮಕ ಅಸ್ತ್ರ ಬಳಸತೊಡಗಿದೆ.

2014ರಲ್ಲಿ ಜಾರ್ಖಂಡ್‌ ವಿಕಾಸ್‌ ಮೋರ್ಚಾ ವತಿಯಿಂದ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಕೂಡ ಈ ಕ್ಷೇತ್ರ ದಿಂದ ಸ್ಪರ್ಧಿಸಿದ್ದರು (ಇವರು ಹಿಂದೆ ಬಿಜೆಪಿಯ ಟಿಕೆಟ್ ಮೇಲೆ 1998 ಮತ್ತು 1999ರ ಚುನಾವಣೆಯಲ್ಲಿ ಶಿಬು ಸೋರೇನ್‌ ಅವರನ್ನು ಸೋಲಿಸಿದ್ದ ಖ್ಯಾತಿ ಹೊಂದಿದವರು). ಅಂದರೆ 2014ರಲ್ಲಿ ತ್ರಿಕೋನ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈಗ ಬಾಬುಲಾಲ್ ಮರಾಂಡಿ ಅವರು ಮಹಾ ಘಟ ಬಂಧನದ ಭಾಗವಾಗಿದ್ದು, ಶಿಬು ಸೋರೇನ್‌ ಪರವಾಗಿ ನಿಂತಿದ್ದಾರೆ.

ಹೀಗಾಗಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಾಬುಲಾಲ್ರಿಗೆ ಹೋಗಿದ್ದ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳು ಈ ಬಾರಿ ಶಿಬು ಅವರಿಗೆ ಬರಲಿವೆ ಎನ್ನುವ ಭರವಸೆಯಲ್ಲಿ ಪಕ್ಷದವರು ಇದ್ದಾರೆ. ಶಿಬು ಸೋರೇನ್‌ ಅವರು ಕೊಲೆ ಪ್ರಕರಣವೊಂದರಲ್ಲಿ ಹೆಸರು ಕೆಡಿಸಿಕೊಂಡು ಅಧಿಕಾರ ಕಳೆದುಕೊಂಡ ಇತಿಹಾಸವನ್ನು ಹೊಂದಿದ್ದರೂ ಈ ಭಾಗದ ಜನರಿಗೆ ಅವರೆಡೆಗಿನ ಅಭಿ ಮಾನವೇನೂ ತಗ್ಗಿಲ್ಲ. ಅವರನ್ನು ಜನ ‘ಗುರೂಜಿ’ ಎಂದೇ ಕರೆಯುತ್ತಾರೆ. ಆದರೆ ”ಶಿಬು ಸೋರೇನ್‌ ಬುಡಕಟ್ಟು ಜನರನ್ನು ಕತ್ತಲಲ್ಲೇ ಇಟ್ಟು, ತಾವಷ್ಟೇ ಬೆಳೆದಿದ್ದಾರೆ” ಎನ್ನುತ್ತಾರೆ ಸುನೀಲ್ ಸೋರೇನ್‌. ದುಮ್ಕಾ ಕ್ಷೇತ್ರದಲ್ಲಿ ಸಂತಾಲ್ ಬುಡಕಟ್ಟು ಜನರ ಪ್ರಾಬಲ್ಯವಿದ್ದು ಶಿಬು ಸೋರೇನ್‌ ಅವರು ಸಂತಾಲ್ ಮತ್ತು ಮುಸ್ಲಿಂ ಮತಗಳ ಮೇಲೆ ಅವಲಂಬಿತರಾಗಿದ್ದಾರೆ. ”ಈ ಬಾರಿ ಯುವ ಸಂತಾಲರು ಗುರೂಜಿಯ ನಿಷ್ಕ್ರಿಯತೆಯಿಂದ ಬೇಸತ್ತಿದ್ದು ಅವರೆಲ್ಲ ನಮಗೆ ಮತನೀಡಲಿದ್ದಾರೆ” ಎನ್ನುತ್ತಾರೆ ಸುನಿಲ್.

”ಇಡೀ ದುಮ್ಕಾ ಕ್ಷೇತ್ರ ನಕ್ಸಲ್ ಪೀಡಿತವಾಗಿದೆ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಆದರೆ ಈ ವಿಚಾರದ ಬಗ್ಗೆ ಅತ್ತ ಶಿಬು ಸೋರೇನ್‌ ಆಗಲಿ, ಇತ್ತ ಸುನಿಲ್ ಆಗಲಿ ಮಾತನಾಡುತ್ತಲೇ ಇಲ್ಲ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿ ಕಣದಲ್ಲಿ
ಶಿಬು ಸೋರೇನ್‌(ಜೆಎಂಎಂ)
ಸುನಿಲ್ ಸೋರೇನ್‌(ಬಿಜೆಪಿ)

2014ರ ಫ‌ಲಿತಾಂಶ
ಶಿಬು ಸೋರೇನ್‌(ಜೆಎಂಎಂ) 3,35,815
ಸುನಿಲ್ ಸೋರೇನ್‌(ಬಿಜೆಪಿ)2,96,785


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ