ರಂಗೀಲಾ ಖದರ್‌ ತಂದೀತೇ ಮತ?

Team Udayavani, Apr 25, 2019, 6:00 AM IST

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಒಟ್ಟು ಆರು ಲೋಕಸಭಾ ಕ್ಷೇತ್ರಗಳು ಇವೆ. ಈ ಪೈಕಿ ಮುಂಬೈ ಉತ್ತರ ಕ್ಷೇತ್ರದಿಂದ 2014ರ ಚುನಾವಣೆಯಲ್ಲಿ ಗೆದ್ದದ್ದು ಕರ್ನಾಟಕ ಮೂಲದವರಾದ ಗೋಪಾಲ ಚಿನ್ನಯ್ಯ ಶೆಟ್ಟಿ. ಕಳೆದ ಬಾರಿ ಕಾಂಗ್ರೆಸ್‌ ವತಿಯಿಂದ ಸಂಜಯ ನಿರುಪಮ್‌ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ರಂಗೀಲಾ ಖ್ಯಾತಿಯ ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಾಜಕೀಯ ಕ್ಷೇತ್ರದಲ್ಲಿ ಪರೀಕ್ಷೆ ಎದುರಿಸಲಿದ್ದಾರೆ. ಈ ಸ್ಥಾನದಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಮುನಿಸಿಕೊಂಡು ಶಿವಸೇನೆ ಸೇರ್ಪಡೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಾರ್ಟಿ ಮತ್ತು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹೋರಾಟ ಇದೆ.

ಮನೆ ನಿರ್ಮಾಣ, ಕೊಳೆಗೇರಿ ನಿವಾಸಿಗಳಿಗೆ ಮೂಲ ಸೌಕರ್ಯ, ಮಧ್ಯಮ ವರ್ಗದವರಿಗೆ ಮೂಲ ಸೌಕರ್ಯ ಮತ್ತು ಮರು ಅಭಿವೃದ್ಧಿ ವಿಚಾರಗಳು ಸ್ಥಳೀಯವಾಗಿ ಪ್ರಮುಖವಾಗಿ ಪ್ರಚಾರದ ವೇಳೆ ಚರ್ಚೆಯಾಗಿವೆ.

1952ರಲ್ಲಿ ರೂಪುಗೊಂಡ ಈ ಕ್ಷೇತ್ರದಲ್ಲಿ ಮೊದಲಿಗೆ ಗೆದ್ದದ್ದು ಸಿಪಿಎಂ. 1984ರ ವರೆಗೆ ಕಾಂಗ್ರೆಸ್‌, ಭಾರತೀಯ ಲೋಕ ದಳ, ಜನತಾ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದರು. 1989-1999ರ ಚುನಾವಣೆ ವರೆಗೆ ಉತ್ತರ ಪ್ರದೇಶದ ಹಾಲಿ ರಾಜ್ಯಪಾಲ ರಾಮ ನಾಯ್ಕ ಸತತವಾಗಿ ಆಯ್ಕೆಯಾಗುತ್ತಿದ್ದರು. 2004ರಲ್ಲಿ ಬಾಲಿವುಡ್‌ ನಟ ಗೋವಿಂದ ಕಾಂಗ್ರೆಸ್‌ ಸೇರ್ಪಡೆಯಾಗಿ, ಚುನಾವಣೆ ಗೆದ್ದಿದ್ದರು. 2009ರಲ್ಲಿ ಸಂಜಯ್‌ ನಿರುಪಂ ಲೋಕಸಭೆ ಪ್ರವೇಶ ಮಾಡಿದ್ದರು.

2014ರಲ್ಲಿ ಮೋದಿ ಅಲೆ ಇದ್ದಿದ್ದರಿಂದ ಕರ್ನಾಟಕ ಮೂಲದ ಗೋಪಾಲ ಶೆಟ್ಟಿ ಸಂಜಯ ನಿರುಪಂರನ್ನು ನಾಲ್ಕು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದ್ದರು. ಮೂರು ಬಾರಿ ಬೃಹನ್ಮುಂಬೈ ಮಹಾನಗರ ಪಾಲಿಕೆ ಸದಸ್ಯರಾಗಿ, ಎರಡು ಬಾರಿ ಶಾಸಕರಾಗಿರುವ ಹೆಗ್ಗಳಿಕೆ ಶೆಟ್ಟಿಯವರಿಗೆ ಇದೆ. ಐದು ವರ್ಷಗಳ ಅವಧಿಯಲ್ಲಿ ಸಂಸದನಾಗಿ ಮಾಡಿರುವ ಕೆಲಸಗಳೇ ತಮಗೆ ಆಶೀರ್ವಾದ ಎಂದು ಅವರು ಹೇಳಿಕೊಳ್ಳುತ್ತಾರೆ. ದೇಶಾದ್ಯಂತ ಬಿಜೆಪಿ ಮತ್ತು ಮೋದಿ ಸರ್ಕಾರದ ಪರ ಭಾವನೆ ಇರುವುದರಿಂದ ಆಡಳಿತ ವಿರೋಧಿ ಅಲೆ ತೊಂದರೆ ನೀಡದು ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ಗೆ ನೀಡಿದ ಸಂದರ್ಶನದಲ್ಲಿ ಶೆಟ್ಟಿ ಅಭಿಪ್ರಾಯಪಡುತ್ತಾರೆ.

ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಊರ್ಮಿಳಾ ಮಾತೋಂಡ್ಕರ್‌ ಕೂಡ ರ್ಯಾಲಿಗಳಲ್ಲಿ ಭಾಗವಹಿಸಿ
ಪ್ರಚಾರ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ಅವರು ಮಾತನಾಡಿದ್ದಾರೆ. “ನಾನು ಇಲ್ಲಿಯೇ ಇರಲು ಬಂದವಳು. ಚುನಾವಣೆ ಹೊರತಾಗಿಯೂ ಹಾಲಿ ಸರ್ಕಾರದ ನೀತಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ’ ಎಂದು ಅಬ್ಬರಿಸಿ ಪ್ರಚಾರ ನಡೆಸಿದ್ದಾರೆ. ಅವರ ಮಾತುಗಳಿಗೆ ಜನರು ಮಾರು ಹೋಗುತ್ತಾರೋ ಅಥವಾ ಹಾಲಿ ಸಂಸದರೇ ಇರಲಿ ಎಂದು ನಿರ್ಧರಿಸುತ್ತಾರೆಯೋ ಎನ್ನುವುದನ್ನು ಮೇ 23ಕ್ಕೆ ಪ್ರಕಟವಾಗಲಿದೆ.

2014ರ ಫ‌ಲಿತಾಂಶ
ಗೋಪಾಲ್‌ ಶೆಟ್ಟಿ (ಬಿಜೆಪಿ) 6,64, 004
ಸಂಜಯ್‌ ನಿರುಪಮ್‌ (ಕಾಂಗ್ರೆಸ್‌) 2,17, 422


ಈ ವಿಭಾಗದಿಂದ ಇನ್ನಷ್ಟು

  • ಇಡೀ ದೇಶದ ದೃಷ್ಟಿಯೀಗ ವಿಶ್ವನಾಥನ ಸನ್ನಿಧಾನ ಕ್ಷೇತ್ರ ವಾರಾಣಸಿಯ ಮೇಲೆ ನೆಟ್ಟಿದೆ. ಈ ಬಾರಿ ಪ್ರಧಾನಿ ಮೋದಿಯವರೇ ಘರ್‌ ಘರ್‌ನಲ್ಲೂ ಸದ್ದು ಮಾಡುತ್ತಾರಾ ಅಥವಾ...

  • ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು...

  • ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ರಾಜ ವಂಶಸ್ಥರಾದ ಸಿಂಧಿಯಾ ಕುಟುಂಬ ಈ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಂಡಿಲ್ಲ. ಕಾಂಗ್ರೆಸ್‌ನಲ್ಲಿ...

  • ದೆಹಲಿಯ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಈಶಾನ್ಯ ದೆಹಲಿಯಲ್ಲಿ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ಹಾಲಿ ಸಂಸದ, ದೆಹಲಿ ಬಿಜೆಪಿಯ...

  • ನಾರ್ತ್‌ ವೆಸ್ಟ್‌ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ...

ಹೊಸ ಸೇರ್ಪಡೆ