ಮೋದಿ ಸರ್ಕಾರದ ಮುಖವಾಡ ಕಳಚಲಿದೆ

Team Udayavani, Apr 30, 2019, 6:00 AM IST

ಬಾಕ್ಸರ್‌ ವಿಜೇಂದರ್‌ ಸಿಂಗ್‌ ಕಾಂಗ್ರೆಸ್‌ ಸೇರಿದ್ದಾರೆ. ದಕ್ಷಿಣ ದೆಹಲಿಯಲ್ಲಿ ಬಿಜೆಪಿಯ ವಿರುದ್ಧ ಕಣಕ್ಕಿಳಿದಿದ್ದಾರೆ. ತಾವು ರಾಜಕೀಯಕ್ಕೆ ಜನಸೇವೆ ಮಾಡುವ ದೃಢನಿಶ್ಚಯದಿಂದಲೇ ಬಂದಿದ್ದು ಎಂದು ಭರವಸೆಯಿಂದ ಹೇಳುವ ವಿಜೇಂದರ್‌ ಸಿಂಗ್‌, ಮೋದಿ ಸರ್ಕಾರದ ವಿರುದ್ಧವೂ ಹರಿಹಾಯುತ್ತಿದ್ದಾರೆ. ಭಾರತೀಯ ಸೇನೆಯೂ ಮೋದಿ ಸರ್ಕಾರದ ವಿರುದ್ಧ ಬೇಸತ್ತಿದೆ ಎನ್ನುವ ಅವರು, ಮೋದಿ ಆಡಳಿತವನ್ನು ಬ್ರಿಟಿಷರ ಒಡೆದು ಆಳುವ ನೀತಿಗೆ ಹೋಲಿಸುತ್ತಾರೆ…

– ನೀವು ರಾಜಕಾರಣಕ್ಕೆ ಬಂದದ್ದು ಏಕೆ?
ನನಗನ್ನಿಸುತ್ತದೆ, ಇದು ಬದಲಾವಣೆಗೆ ಸರಿಯಾದ ಸಮಯ. ಸುಳ್ಳಿನ ಪರದೆಯು ಈಗ ಕಳಚಿ ಬಿದ್ದಿದೆ. ಅಧಿಕಾರಕ್ಕೆ ಬರುವುದಕ್ಕಾಗಿ ಸುಳ್ಳು ಭರವಸೆಗಳನ್ನು ನೀಡಿದವರು, ಈಗ ನಿರ್ಗಮಿಸಲೇಬೇಕು. ನಾನಷ್ಟೇ ಅಲ್ಲ, ಉಳಿದ ಕ್ರೀಡಾಪಟುಗಳಿಗೂ ರಾಜಕೀಯಕ್ಕೆ ಪ್ರವೇಶ ಸಿಗುವಂತಾಗಬೇಕು, ಏಕೆಂದರೆ ಅವರಿಗೆ ಭಾರತಕ್ಕೆ ಕೊಡುಗೆ ಕೊಡಬೇಕು ಎನ್ನುವ ಅದಮ್ಯ ಬಯಕೆಯಿರುತ್ತದೆ.

– ನೀವು “ಬದಲಾವಣೆ’, “ಸುಳ್ಳು’ ಎನ್ನುವ ಪದ ಬಳಸಿದ್ದೇಕೆ?
ಏಕೆಂದರೆ, ಸುಳ್ಳುಗಳ ದೊಡ್ಡ ಪಟ್ಟಿಯೇ ಇದೆ. ನೀವೇ ಹೇಳಿ- ಯಾರಿಗಾದರೂ ಇದುವರೆಗೂ 15 ಲಕ್ಷ ರೂಪಾಯಿ ಸಿಕ್ಕಿತಾ? ಗಂಗಾ ನದಿಯನ್ನು ಇವರು ಸ್ವತ್ಛಗೊಳಿಸಿದ್ದಾರಾ? ಒಂದಾದರೂ ಸ್ಮಾರ್ಟ್‌ ಸಿಟಿ ಅಭಿವೃದ್ಧಿಯಾಗುತ್ತಿರುವುದನ್ನು ನೋಡಿದ್ದೀರಾ? ಪಾಕಿಸ್ತಾನದೊಂದಿಗಿನ ಸಮಸ್ಯೆಗೆ ಪರಿಹಾರ ಸಿಕ್ಕಿRದೆಯೇ? ಆರ್ಟಿಕಲ್‌ 370 ಕಥೆ ಏನಾಯಿತು? ಈ ಸರ್ಕಾರ ಇನ್ನೂ ಅನೇಕ ಸುಳ್ಳುಗಳನ್ನು ಹೇಳಿದೆ. ಇಂದು ಭಾರತದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಜನರನ್ನು ಸಾಯಿಸ ಲಾಗುತ್ತಿದೆ. ಚುನಾವಣೆ ಹತ್ತಿರವಾಗುತ್ತಿ ದ್ದಂತೆಯೇ ಅವರು ರಾಮಮಂದಿರ ವಿಚಾರವನ್ನು ಮಾತ ನಾಡುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಸರ್ಕಾರ ರಾಮಮಂದಿರದ ವಿಚಾರವನ್ನು ಸಂಪೂ ರ್ಣವಾಗಿ ಮರೆತುಬಿಟ್ಟಿತ್ತು. ಧರ್ಮದ ಹೆಸರಿನಲ್ಲಿ ಜನರು ಹೊಡೆದಾಡಬೇಕು ಎಂದು ಅವರು ಬಯಸುತ್ತಾರೆ. ಈಗ ಅವರೆಲ್ಲ ಭವಿಷ್ಯದ ಬಗ್ಗೆ ಅಥವಾ ಅಭಿವೃದ್ಧಿಯ ಬಗ್ಗೆ ಮಾತನಾ ಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಅದಕ್ಕೇ ಇದೆಲ್ಲವೂ ನಿಲ್ಲಬೇಕು, ಅವರ ಮುಖವಾಡ ಕಳಚಿ ಕೆಳಕ್ಕೆ ಬೀಳಬೇಕು.

– ಕಾಂಗ್ರೆಸ್‌ ಅನ್ನೇ ಆಯ್ಕೆ ಮಾಡಿಕೊಂಡದ್ದೇಕೆ?
ಕಾಂಗ್ರೆಸ್‌ಗೆ ಭವಿಷ್ಯದ ಚಿಂತನೆಯಿದೆ. ಅದ‌ರ ವಿಚಾರಧಾರೆ ಸ್ಪಷ್ಟವಾಗಿದೆ. ಒಂದು ವೇಳೆ ನೀವು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಓದಿದರೆ, ಮುಂದಿನ ಐದು ವರ್ಷದಲ್ಲಿ ದೇಶಕ್ಕಾಗಿ ಅವರ ವಿಷನ್‌ ಏನಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಕಾಂಗ್ರೆಸ್‌ ಸೇರಿದ್ದಕ್ಕೆ ಈ ಅಂಶಗಳೇ ಕಾರಣ.

-ಕಾಂಗ್ರೆಸ್‌ ಬಿಜೆಪಿಯನ್ನು ಸೋಲಿಸುತ್ತಾ?
ನನ್ನಂಥ ಫೈಟರ್‌ಗಳು ಕಾಂಗ್ರೆಸ್‌ ಸೇರಿದ್ದೇವಲ್ಲ…ಖಂಡಿತವಾಗಿಯೂ ಕಾಂಗ್ರೆಸ್‌ ಬಿಜೆಪಿಯನ್ನು ಅಖಾಡದಲ್ಲಿ ಹೊಡೆದುರುಳಿಸುತ್ತದೆ.

-ನೀವು ದೇಶದ ನ್ಪೋರ್ಟ್ಸ್ ಐಕಾನ್‌. ಅನೇಕ ಯುವ ಅಭಿಮಾನಿಗಳು ನಿಮಗಿದ್ದಾರೆ. ಹಾಗಿದ್ದರೆ ರಾಜಕೀಯದಲ್ಲಿ ನೀವು ಈ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಹೇಗೆ ಬೆಸೆಯುತ್ತೀರಿ? ಅವರೆಲ್ಲ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಹೇಗೆ ಮನವೊಲಿಸುತ್ತೀರಿ?
ಜನ ನನ್ನನ್ನು ಇಷ್ಟ ಪಡುತ್ತಾರೆ ಎನ್ನುವ ಭರವಸೆ ನನಗಿದೆ. ಏಕೆಂದರೆ ನಾನು ಹೊರಗೊಂದು, ಒಳಗೊಂದು ವ್ಯಕ್ತಿತ್ವದವನಲ್ಲ. ನನ್ನ ವರ್ಚಸ್ಸು ಹೆಚ್ಚಿಸಿಕೊಳ್ಳಲು ಜನರಿಗೆ ಸುಳ್ಳು ಹೇಳುವುದಿಲ್ಲ, ನಾನು ಯಾವುದೇ ಮುಖವಾಡವನ್ನೂ ಧರಿಸಿಲ್ಲ. ನಾನು ಕಳೆದ 10-12 ವರ್ಷಗಳಿಂದ ಲೈಮ್‌ಲೈಟ್‌ನಲ್ಲಿ ಇರುವವನು. ನಾನು ಪರಿಶ್ರಮಿ ಮತ್ತು ಪ್ರಾಮಾಣಿಕ ವ್ಯಕ್ತಿ ಎನ್ನುವುದು ಜನರಿಗೆ ಗೊತ್ತಿದೆ. ಇನ್ನು ನಾನು ದಕ್ಷಿಣ ದೆಹಲಿಯ ಜನನಾಡಿಯನ್ನು ಅರಿತವನು. ಅವರಿಗೆ ಏನು ಬೇಕು ಎನ್ನುವುದು ನನಗೆ ಗೊತ್ತಿದೆ…ಅವರ ಜೀವನ ಸುಧಾರಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂಬ ಭರವಸೆ ಇದೆ.

-ಈ ಬಾರಿ ಕಾಂಗ್ರೆಸ್‌ ಪಕ್ಷ ಮೋದಿ ಅಲೆಯನ್ನು ಹೇಗೆ ಎದುರಿಸುತ್ತಿದೆ?
ಎಲ್ಲಿದೆ ಮೋದಿ ಅಲೆ? ಈ ಬಾರಿ ಅಲೆ ಇಲ್ಲವೇ ಇಲ್ಲ. ಅದು ನಿಂತುಹೋಗಿದೆ. ದ್ವೇಷದ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಎಷ್ಟು ದಿನ ಅಂತ ಅವರು ಜನರ ನಡುವೆ ಜಗಳ ಹಚ್ಚಿ ರಾಜಕಾರಣ ಮಾಡಲು ಸಾಧ್ಯ? ಹರ್ಯಾಣದಲ್ಲೇ ನೋಡಿ, ಜಾಟ್‌ ಮತ್ತು ಇತರೆ ಸಮುದಾಯಗಳನ್ನು ಜಾತಿಯ ಹೆಸರಲ್ಲಿ ಅವರು ವಿಭಜಿಸಿಬಿಟ್ಟಿದ್ದಾರೆ. ನೀವು ಗುಜರಾತ್‌ಗೆ ಹೋದರೆ, ಅಲ್ಲಿ ಪಟೇಲ್‌ ಸಮುದಾಯ ಮತ್ತು ಇತರೆ ಜಾತಿಗಳ ನಡುವೆ ವೈಮನಸ್ಯ ಕಾಣುತ್ತದೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಠಾಕೂರರು ಮತ್ತು ದಲಿತರು ಪರಸ್ಪರ ಹೊಡೆದಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಜನ ಖುಷಿಯಾಗಿಲ್ಲ, ಅಲ್ಲೂ ಅಸಮಾಧಾನ ತೀವ್ರವಾಗಿದೆ. ಅಂದರೆ, ಅವರು ಎಲ್ಲೆಲ್ಲಿ ಹೋಗಿದ್ದಾರೋ ಅಲ್ಲೆಲ್ಲ ಜನರ ನಡುವೆ ಜಗಳ ಹಚ್ಚಿದ್ದಾರೆ. ಇದೊಂದು ರೀತಿಯಲ್ಲಿ ಬ್ರಿಟಿಷ್‌ ಆಳ್ವಿಕೆಯಂತಿದೆ. ಆಗೆಲ್ಲ ಬಿಳಿಯರು ಭಾರತವನ್ನು “ಒಡೆದು ಆಳು’ತ್ತಿದ್ದರಲ್ಲವೇ? ಇದೂ ಹಾಗೇ.

– ದೇಶವನ್ನು ಮುನ್ನಡೆಸಲು ರಾಹುಲ್‌ ಗಾಂಧಿಯೇ ಸರಿಯಾದ ಅಭ್ಯರ್ಥಿ ಎಂದೇಕೆ ಹೇಳುತ್ತೀರಿ?
ನನಗೆ ರಾಹುಲ್‌ ಏನೆಂದು ಚೆನ್ನಾಗಿ ಗೊತ್ತಿದೆ. ಅವರು ಪ್ರಾಮಾಣಿಕ ವ್ಯಕ್ತಿ. ಅವರೊಂದಿಗೆ ಮಾತನಾಡಿದಾಗ, ದೇಶವನ್ನು ಮುನ್ನಡೆಸಲು ಅವರೇ ಸರಿಯಾದ ವ್ಯಕ್ತಿ ಎಂದು ಅರ್ಥವಾಗುತ್ತದೆ. ನನಗೆ ಗೊತ್ತಿದೆ, ರಾಹುಲ್‌ ಗಾಂಧಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಷಯಗಳನ್ನು ಹರಿಬಿಡಲಾಗುತ್ತದೆ, ಅವೆಲ್ಲವೂ ಫೇಕ್‌ ಸುದ್ದಿಗಳು. ರಾಹುಲ್‌ ಗಾಂಧಿಗೆ ಒಮ್ಮೆ ಅವಕಾಶ ಕೊಡಿ, ದೇಶ ಬದಲಾಗುವುದನ್ನು, ಮುನ್ನಡೆಯುವುದನ್ನು ನೀವು ನೋಡುತ್ತೀರಿ..l

– ಹಾಗಿದ್ದರೆ ರಾಹುಲ್‌ ಗಾಂಧಿ ದೇಶಕ್ಕೆ ಅಚ್ಛೇ ದಿನಗಳನ್ನು ತರುತ್ತಾರಾ?
ಐದು ವರ್ಷದ ಹಿಂದೆ ಬಿಜೆಪಿಯು ನೀಡಿದ್ದ ಅಚ್ಛೇ ದಿನದ ಭರವಸೆ ಇನ್ನೂ ಈಡೇರಿಲ್ಲ…ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿರುವ “ನ್ಯಾಯ್‌’ ಈಡೇರುತ್ತದೆ ಎನ್ನುವ ಭರವಸೆ ನನ ಗಿದೆ. ರೈತರು, ವೃತ್ತಿಪರರು ಸೇರಿದಂತೆ ದೇಶದ ಜನ ರೆಲ್ಲ ಪರದಾಡುತ್ತಿದ್ದಾರೆ, ಅವರಿಗೆಲ್ಲ ಕಾಂಗ್ರೆಸ್‌ ನ್ಯಾಯ ಒದಗಿಸುತ್ತದೆ. ಕೇಂದ್ರ ಸರ್ಕಾರ ರಾಷ್ಟ್ರೀಯತೆಯ ಹೆಸರಲ್ಲಿ ಮತ ಕೇಳುತ್ತಿದೆ ಮತ್ತು ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ.

-ಬಿಜೆಪಿ ನಾಯಕರು ಮತದಾರರನ್ನು ಸೆಳೆಯಲು ಸರ್ಜಿಕಲ್‌ ಸ್ಟ್ರೈಕ್‌ ವಿಷಯವನ್ನು ಬಳಸಿಕೊಂಡು ಟೀಕೆಗೆ ಒಳಗಾಗಿದ್ದಾರೆ. ನೀವೇನಂತೀರಿ?
ನಮ್ಮ ಸಶಸ್ತ್ರ ಸೇನಾಪಡೆಗಳೂ ಈ ಸರ್ಕಾರ ಬಗ್ಗೆ ಬೇಸತ್ತಿವೆ. ಉದಾಹರಣೆಗೆ ಮಾಜಿ ಸೈನಿಕ ತೇಜ್‌ ಬಹಾದ್ದೂರ್‌ ಯಾದವ್‌ ವಾರಾಣಸಿಯಲ್ಲಿ ಮೋದಿ ಎದುರು ಸ್ಪರ್ಧಿಸುತ್ತಿದ್ದಾರೆ. ಆ ವ್ಯಕ್ತಿ ಏನು ಮಾಡಿದ್ದರಂತೆ? ಸೇನೆಗೆ ಕೊಡಲಾಗುವ ಆಹಾರದ ಗುಣಮಟ್ಟ ಸರಿ ಇಲ್ಲ ಎಂದು ಅವರು ಆರೋಪಿಸಿದ್ದರು. ಅಷ್ಟಕ್ಕೇ ಅವರನ್ನು ಕೆಲಸದಿಂದ ಕಿತ್ತುಹಾಕಲಾಯಿತು. ಆಮೇಲೆಯೂ ಅವರಿಗೆ ತುಂಬಾ ತೊಂದರೆ ಕೊಡಲಾಯಿತು. ಕೊನೆಗೆ ಅವರು ಮೋದಿ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದರು. ಸೇನೆಯು ಮೋದಿ ಸರ್ಕಾರದ ಬಗ್ಗೆ ಬೇಸತ್ತಿದೆ ಎನ್ನುವುದಕ್ಕೆ ಇದಕ್ಕಿಂತಲೂ ದೊಡ್ಡ ಪುರಾವೆ ಬೇಕಿಲ್ಲ.

-ಇದು ನಿಮ್ಮ ಬಾಕ್ಸಿಂಗ್‌ ವೃತ್ತಿಯ ಅಂತ್ಯವೇ?
ಖಂಡಿತ ಇಲ್ಲ. ಬಾಕ್ಸಿಂಗ್‌ ನನ್ನ ರಕ್ತದಲ್ಲಿಯೇ ಇದೆ. ಕೊನೆಯುಸಿರು ಇರುವವರೆಗೂ ನಾನು ಬಾಕ್ಸಿಂಗ್‌ ಬಿಡುವುದಿಲ್ಲ.

ಸಂದರ್ಶನ; ವಿಜೇಂದರ್‌ ಸಿಂಗ್‌

(ಕೃಪೆ: ರೆಡಿಫ್)

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ