ಸುಪ್ತವಾಗಿ ಹರಿಯುತ್ತಿದೆ ಚುನಾವಣೆಯ ಕಾವು

ಮೂಡುಬಿದಿರೆ ವಿಧಾನಸಭಾ ಕ್ಷೇತ್ರ: ಮಂಡ್ಯ ಫ‌ಲಿತಾಂಶದ ಕುರಿತೂ ಇದೆ ಕುತೂಹಲ ಸ್ಥಳೀಯ ಸಮಸ್ಯೆಗಳಿಗಿದೆ ನಿರ್ಧರಿಸುವ ಬಲ

Team Udayavani, Apr 16, 2019, 6:13 AM IST

ಮೂಡುಬಿದಿರೆ: ಕೃಷಿ, ಉದ್ಯಮ, ಕೈಗಾರಿಕೆ, ಶೈಕ್ಷಣಿಕ ತಾಣ, ಐತಿಹಾಸಿಕ ಸ್ಥಳಗಳನ್ನು ಹೊಂದಿ ರುವ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಸುಪ್ತವಾಗಿ ಹರಿಯುತ್ತಿದೆ. ದಿನೇ ದಿನೇ ಏರುತ್ತಿರುವ ಬಿಸಿಲಿನ ಬೇಗೆಗೆ ಚುನಾವಣ ಉತ್ಸಾಹದ ಬುಗ್ಗೆ ಹದವಾಗಿ ಚಿಮ್ಮುತ್ತಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಠಿನ ಸ್ಪರ್ಧೆ ಇದೆ ಎಂಬ ಅಭಿಪ್ರಾಯ ಕೆಲವರಲ್ಲಿದ್ದರೆ, ಇನ್ನು ಕೆಲವರು ಮಂಡ್ಯ ಕ್ಷೇತ್ರದ ಹಣಾಹಣಿಯ ಬಗೆಗೂ ಆಸಕ್ತರು. ಯಾರಿಗೆ ಮತ ಹಾಕಿದರೂ ಒಂದೇ ಎಂಬ ಸಿನಿಕತನ ಅಲ್ಲಲ್ಲಿ ಇಣುಕಿದರೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆಯೂ ಲೋಕಸಭಾ ಸದಸ್ಯರ ಕರ್ತವ್ಯ ವಾಗಬೇಕು ಎಂಬ ಅಭಿಪ್ರಾಯವೂ ಸಿಕ್ಕಿತು. ಒಟ್ಟಾರೆ ಯಾಗಿ ಪ್ರಚಾರದ ಭರಾಟೆ ಜೋರಾಗಿ ಕಾಣದಿದ್ದರೂ ಕ್ಷೇತ್ರದಲ್ಲಿ ಬೂದಿಮುಚ್ಚಿದ ಕೆಂಡದಂತೆ ಚುನಾವಣೆಯ ಕಾವಿನ ಹರಿವು ಸುಪ್ತವಾಗಿ ಇದ್ದೇ ಇದೆ.

“ಟಫ್ ಫೈಟ್‌’
ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ನಾಗೇಶ ಶೆಟ್ಟಿ ಅವರನ್ನು ಮಾತನಾಡಿಸಿದಾಗ, “ಮತದಾನ ನಮ್ಮೆ
ಲ್ಲರ ಹಕ್ಕು. ಮತ ಚಲಾಯಿಸಬೇಕು. ಜಿಲ್ಲೆಯಲ್ಲಿ ಟಫ್ ಫೈಟ್‌ ಇದೆ’ ಎಂದರು. ಅಭ್ಯರ್ಥಿಗಳ ಕುರಿತಾಗಿ, “ಬದಲಾವಣೆ ಆವೊಡುಯೇ’ (ಬದಲಾವಣೆ ಆಗಬೇಕು) ಎಂದಷ್ಟೇ ಹೇಳಿ ಸುಮ್ಮನಾದರು.

ರಾಜಕೀಯದ ಕುರಿತಾಗಿ ಆಸಕ್ತಿ ಇಲ್ಲ ಎಂಬಂತೆ ತೋರಿಸಿಕೊಂಡವರು ಓರ್ವ ಮಹಿಳೆ. “ಮತ ಚಲಾವಣೆ ಮಾಡುವುದಿಲ್ಲವೇ’ ಎಂದು ಪ್ರಶ್ನಿಸಿದರೆ, “ಮತದಾನ ಮಾಡ್ತೇನೆ. ಈ ಬಾರಿ ನಾಯಕರೊಬ್ಬರ ಮುಖ ನೋಡಿ ಮತ ಚಲಾಯಿಸುತ್ತೇನೆ’ ಎಂದರು.

ಎಂಜಿನಿಯರಿಂಗ್‌ ವಿದ್ಯಾರ್ಥಿ ನಾಸಿರ್‌ ನವ ಮತದಾರ. “ವೋಟ್‌ನ ಮಿಸ್‌ ಮಾಡ್ಲೆà ಬಾರ್ಧು. ಯೋಚಿಸಿ, ಉತ್ತಮರನ್ನೇ ನಾವು ಆಯ್ಕೆ ಮಾಡಿ ಪಾರ್ಲಿಮೆಂಟ್‌ಗೆ ಕಳುಹಿಸಿಕೊಡಬೇಕು’ ಎಂದರು. “ಪ್ರಚಾರ ಹೇಗೆ ಸಾಗಿದೆ’ ಎಂದು ಕೇಳಿದ್ದಕ್ಕೆ ತೋಟದ ಕೆಲಸಕ್ಕೆ ಹೋಗುವ ಗುಮ್ಮಣ್ಣ, “ಚೀಟಿ ಕೊರ್ಧು ಪೋತೆರ್‌, ಓಟು ಕೊರೆಲ ಪನಿ³ನೆನ್‌ ಬುಡ್‌ಂಡ ಬೊಕ್ಕ ದಾಲಾ ಪನಿ¤ಜೆರ್‌’ (ಚೀಟಿ ಕೊಟ್ಟು ಹೋಗಿದ್ದಾರೆ. ಓಟು ಹಾಕಿ ಎಂದು ಬಿಟ್ಟರೆ ಬೇರೇನೂ ಹೇಳಿಲ್ಲ) ಎಂದರು.

ನಾಲ್ಕು ಬಾರಿ ತಪ್ಪದೇ ಮತ ಚಲಾಯಿಸಿರುವ ಬಿರಾವಿನ ಗೃಹಿಣಿ ಭಾರತಿ ಅವರಿಗೆ ಒಬ್ಬ ರಾಷ್ಟ್ರೀಯ ನಾಯಕನ ಬಗ್ಗೆ ಅಭಿಮಾನ. “ಏಕೆ’ ಎಂದರೆ, “ಅವರು ಉತ್ತಮ ವಾಗ್ಮಿ, ಜನರಿಗೆ ಒಳ್ಳೆಯದು ಮಾಡ್ತಾ ಇದ್ದಾರೆ’ ಎಂದು ಉತ್ತರಿಸಿದರು.

ಅಷ್ಟರೊಳಗೆ ಮಧ್ಯಪ್ರವೇಶಿಸಿ ಮಾತ ನಾಡಿದ ಅವರ ಸಂಬಂಧಿ, ಇದೇ ಮೊದಲ ಬಾರಿಗೆ ಓಟು ಹಾಕಲಿರುವ ಯುವ ಮತದಾರೆ ರಶ್ಮಿ, “ನಾನು ಮತ ಹಾಕಿಯೇ ಹಾಕುತ್ತೇನೆ. ಅದೂ ಯಾರಿಗೆ ಎಂಬುದನ್ನು ನಿರ್ಧರಿಸಿ ಆಗಿದೆ. ಆದರೆ ಈಗ ಹೇಳಲಾರೆ’ ಅಂದರು ಜಾಣೆಯಂತೆ.

ದೇಶ ಮುಖ್ಯ
ಅಂಗಡಿ ಮಾಲಕ ಹರೀಶ್‌ ದೇವಾಡಿಗ ಮಾತುಗಳಲ್ಲಿ ಹೇಳುವುದಾದರೆ, “ಮೊದಲು ದೇಶ ಮುಖ್ಯ, ಆಮೇಲೆ ಉಳಿದ ಸಂಗತಿಗಳು.’ ಮುಂದುವರಿದು ಅಭ್ಯರ್ಥಿಗಳ ಬಗ್ಗೆ ಪ್ರಶ್ನಿಸಿದಾಗ, ಇಬ್ಬರೂ ಸಮರ್ಥರೇ’ ಎಂದಷ್ಟೇ ಹೇಳಿ ಬಿಟ್ಟರು.

ತೋಡಾರ್‌ನ ಶ್ರೀಕಾಂತ್‌ ಬಸ್‌ ಚಾಲಕ. ಸ್ಥಳೀಯ ಸಮಸ್ಯೆಗಳ ಬಗ್ಗೆ ಆಯ್ಕೆಯಾದವರು ಗಮನ
ಹರಿಸಬೇಕು. ನಾವು ಮತ ಹಾಕುವಾಗ ರಾಷ್ಟ್ರೀಯ ಹಿತಾಸಕ್ತಿ ಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗು ತ್ತದೆ. ನಮ್ಮ ಮತ ಪಡೆದು ಗೆದ್ದು ಬಂದೂ ನಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಇದ್ದರೆ ಬೇಜಾ ರಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಅವರ ಜತೆಗಿದ್ದ ನಿರ್ವಾ ಹಕ ರವಿ, “ಮೂಡುಬಿದಿರೆ  ಬಿಸಿ ರೋಡ್‌ ರಸ್ತೆ ಅಭಿವೃದ್ಧಿ ಆಗ ಬೇಕಿತ್ತು. ಮುಂದೆ ಗೆದ್ದು ಬರುವ ಸಂಸದ ಯಾರೇ ಆಗಲಿ, ಈ ಬಗ್ಗೆ ಗಮನ ಹರಿಸಬೇಕು’ ಎಂದರು.

ಮಂಡ್ಯದಲ್ಲಿ ಸುಮಲತಾ ಗೆಲ್ಲಬೇಕು “ಯಾರು ಎಲ್ಲಿ ಬೇಕಾದರೂ ಗೆಲ್ಲಲಿ ಬಿಡಲಿ ಮಹರಾಯೆÅà, ಮಂಡ್ಯದಲ್ಲಿ ಮಾತ್ರ ಸುಮಲತಾ ಗೆಲ್ಲಬೇಕು, ಆಗ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ’   ಅಂಗಡಿಯೊಂದರ ಮುಂಭಾಗ ನಮ್ಮ ಮಾತುಕತೆ ಕೇಳುತ್ತ ನಿಂತಿದ್ದವರೊಬ್ಬರು ಏರುಧ್ವನಿಯಲ್ಲಿ ಹೇಳಿದ್ದು. “ಹೆಸರೇನ್ರೀ’ ಎಂದರೆ ಉತ್ತರಿಸದೆ ಜಾರಿಕೊಂಡರು!

ಸಮಸ್ಯೆಗಳು
ಲೋಕಸಭಾ ಚುನಾವಣೆ ಕಾವಿನ ನಡುವೆ ಸ್ಥಳೀಯ ಸಮಸ್ಯೆಗಳೂ ಜನರ ನಡುವೆ ಚರ್ಚೆಯಲ್ಲಿವೆ. ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169 ಚತುಷ್ಪಥಗೊಂಡಿಲ್ಲ, ಸಾರ್ವಜನಿಕ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸೇವೆ ತೃಪ್ತಿಕರವಾಗಿಲ್ಲ.

ಕೇಂದ್ರ ಸರಕಾರ ಈ ಕುರಿತು ಸೂಕ್ತ ನಿರ್ಧಾರ ತಳೆಯಬೇಕಿತ್ತು. ಮರಳು ಸಮಸ್ಯೆ ಬಗೆಹರಿಸುವಲ್ಲಿ ರಾಜಕೀಯ ಮಾಡುವವರು ವಿಫ‌ಲವಾಗಿದ್ದಾರೆ ಎಂದು ಕೆಲವರು ದೂರಿದರು.

ಒಟ್ಟಾರೆಯಾಗಿ ನೋಡಿದಾಗ, ಚುನಾವಣೆ, ಫ‌ಲಿತಾಂಶದ ಕುರಿತಾಗಿ ಬಹಳ ನಿರೀಕ್ಷೆ ಜನತೆಯಲ್ಲಿ ಕಂಡುಬಂದಿಲ್ಲ. ಜೆಡಿಎಸ್‌ ಕಾರ್ಯಕರ್ತರು ಮೂಡುಬಿದಿರೆ ಕ್ಷೇತ್ರದಲ್ಲಿ ಕರಾವಳಿಯ ಉಳಿದ ಕ್ಷೇತ್ರಗಳಿಗೆ ಹೋಲಿಕೆ ಮಾಡಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ಒಟ್ಟಾಗಿ ಪ್ರಚಾರ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಇನ್ನಿಲ್ಲದಂತೆ ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ. ಭಾರೀ ಸಮಾವೇಶಗಳಿಲ್ಲದೆ, ರಾಷ್ಟ್ರೀಯ ನಾಯಕರ ಭೇಟಿ ಇಲ್ಲದೆ ಚುನಾವಣೆಯ ಕಾವು ಹುತ್ತಗಟ್ಟಿರುವ ಈ ಕ್ಷೇತ್ರ ಮತದಾನ ದಿನದ ತೀವ್ರ ನಿರೀಕ್ಷೆಯಲ್ಲಿದೆ.

ಬಂಟಿಂಗ್ಸ್‌, ಮೈಕ್‌ ಇಲ್ಲದ ಪ್ರಚಾರ
ಕಾಲೇಜು ಶಿಕ್ಷಕರೋರ್ವರಿಗೆ ಒಟ್ಟೂ ಚುನಾವಣೆ ವ್ಯವಸ್ಥೆ ಕೆಲವು ವರ್ಷಗಳಿಂದ ಈಚೆಗೆ ಹಂತಹಂತವಾಗಿ ಸುಧಾರಣೆ ಕಾಣುತ್ತಿರುವ ಬಗ್ಗೆ ಸಂತಸವಿದೆ. “ಚುನಾವಣೆ ಪ್ರಚಾರದ ವೇಳೆ ಬಂಟಿಂಗ್ಸ್‌, ಅಬ್ಬರದ ಮೈಕ್‌ ಪ್ರಚಾರ ಇಲ್ಲದಿರುವುದು ಖುಷಿಯ ವಿಚಾರ’   ಇದು ಅವರ ಮಾತು.

– ರಾಮಚಂದ್ರ ಬರೆಪ್ಪಾಡಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ