ಮಂಡ್ಯದಲ್ಲಿ ನಿಖಿಲ್‌ ಪರ ಹಣದ ಹೊಳೆಯೇ ಹರಿಯುತ್ತಿದೆ: ಶೆಟ್ಟರ್‌

Team Udayavani, Apr 9, 2019, 3:00 AM IST

ಬಳ್ಳಾರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಸ್ಪರ್ಧಿಸುತ್ತಿರುವ ಮಂಡ್ಯ ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಲಾಗುತ್ತಿದೆ. ಹಣ ಹಂಚಿಕೆ ಕುರಿತು ಸಚಿವರೊಬ್ಬರ ಆಡಿಯೋ ಬಹಿರಂಗವಾಗಿರುವುದೇ ಇದಕ್ಕೆ ಸಾಕ್ಷಿ. ಆದರೆ, ಇದನ್ನು ಸಮರ್ಥಿಸಿಕೊಳ್ಳುತ್ತಿರುವ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ಎಲ್ಲವನ್ನೂ ಬಿಟ್ಟು ನಿಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಟೀಕಿಸಿದ್ದಾರೆ.

ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಣ ಹಂಚಿಕೆ ಕುರಿತು ಮೈತ್ರಿ ಸರ್ಕಾರದ ಸಚಿವರೇ ಆಡಿಯೋವೊಂದನ್ನು ಬಹಿರಂಗ ಪಡಿಸಿದ್ದಾರೆ. ಆದರೂ, ಸಿಎಂ ಕುಮಾರಸ್ವಾಮಿ ಇದನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.

ಸದ್ಯಕ್ಕೆ ಒಂದು ಆಡಿಯೋ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಹಣ ನೀಡಲಾಗಿದೆ ಎಂಬ ಹಲವು ಆಡಿಯೋ ರೆಕಾರ್ಡ್‌ಗಳು ಹೊರಗಡೆ ಬರಲಿವೆ. ಹೀಗಾಗಿ, ಮಂಡ್ಯದಲ್ಲಿ ಅಧಿಕಾರದ ದುರುಪಯೋಗ ಮತ್ತು ಹಣದ ಪ್ರಭಾವ ಬೀರಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಆದರೂ, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಹೋರಾಟ ನಡೆಸುತ್ತಿದ್ದು, ಚುನಾವಣೆಯಲ್ಲಿ ಸುಲಭವಾಗಿ ಜಯಗಳಿಸಲಿದ್ದಾರೆ. ಕುಮಾರಸ್ವಾಮಿ ಪುತ್ರ ನಿಖಿಲ್‌ ಪರಾಭವಗೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ