ಅಂಬೇಡ್ಕರ್‌ ಜಯಂತಿಯಲ್ಲಿ ಭಾಗಿಯಾದ ಸುಮಲತಾ, ನಿಖಿಲ್‌

Team Udayavani, Apr 15, 2019, 3:00 AM IST

ಮಂಡ್ಯ: ಚುನಾವಣಾ ಪ್ರಚಾರದ ಅಬ್ಬರದ ನಡುವೆ ಜಿಲ್ಲೆಯಲ್ಲಿ ನಡೆದ ಅಂಬೇಡ್ಕರ್‌ ಜಯಂತಿಯಲ್ಲಿ ಮೈತ್ರಿಕೂಟ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಂಡ್ಯದ ಕಾವೇರಿವನದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸುಮಲತಾ ಅಂಬೇಡ್ಕರ್‌ ಜಯಂತಿ ಆಚರಿಸಿದರು. ಬಳಿಕ ಮಾತನಾಡಿ, ಈ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಭಯದ ವಾತಾವರಣವಿರುವುದು ಸಹಜ. ಆ ಕಾರಣಕ್ಕೆ ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇನೆ. ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂಷಿಸಿದರು.

ಜಿಲ್ಲೆಯ ಜನರನ್ನು ನಂಬಿ ಮುಖ್ಯಮಂತ್ರಿ, ಮಾಜಿ ಪ್ರಧಾನಿ, ಎಂಟು ಶಾಸಕರು, ಮೂವರು ಎಂಎಲ್‌ಸಿ ಹಾಗೂ ಒಬ್ಬರು ಸಂಸದರನ್ನು ಎದುರು ಹಾಕಿಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ಚುನಾವಣೆಯಲ್ಲಿ ಮಳವಳ್ಳಿ ಹುಚ್ಚೇಗೌಡರ ಸೊಸೆಯನ್ನು ಮಾತ್ರ ಕೈಬಿಡಬೇಡಿ.

ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ ಮಂಡ್ಯ ಜಿಲ್ಲೆಯ ಸೊಸೆಯಾಗಿರುವ ಸುಮಾಲತಾರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು. ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸಾಥ್‌ ನೀಡಿದರು. ಬಳಿಕ, ಮಂಡ್ಯದ ಹಲವು ಚರ್ಚ್‌ಗಳಿಗೆ ತೆರಳಿ, ಕ್ರೈಸ್ತ ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಬೆಂಬಲ ಕೋರಿದರು.

ಟಿಪ್ಪು ಸಮಾಧಿಗೆ ನಮನ: ಈ ಮಧ್ಯೆ, ನಿಖಿಲ್‌ ಕೂಡ ಕಾವೇರಿವನದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿ, ಚುನಾವಣಾ ಪ್ರಚಾರ ಆರಂಭಿಸಿದರು. “ಚುನಾವಣೆಯಲ್ಲಿ ನನ್ನ ಪರ ಶಕ್ತಿ ತುಂಬಲು ಡಾ.ಯತೀಂದ್ರಣ್ಣ ಬಂದಿದ್ದಾರೆ.

ಮೊನ್ನೆಯಷ್ಟೇ ಸಿದ್ದರಾಮಯ್ಯನವರು ಬಂದು ನನಗೆ ಬೆಂಬಲ ಸೂಚಿಸಿ ಪ್ರಚಾರ ಮಾಡಿ ಹೋಗಿದ್ದಾರೆ. ಏ.16ರಂದು ಮಂಡ್ಯ ನಗರದಲ್ಲಿ ಪ್ರಚಾರ ಮುಗಿಸೋಣ ಎಂದುಕೊಂಡಿದ್ದೇವೆ. ಜನರು ಈ ಬಾರಿ ನನ್ನ ಕೈ ಹಿಡಿದೇ ಹಿಡಿಯುವರೆಂಬ ಆತ್ಮವಿಶ್ವಾಸವಿದೆ’ ಎಂದರು.

ಬಳಿಕ, ಗಂಜಾಂನ ಗುಂಬಸ್‌ಗೆ ಭೇಟಿ ನೀಡಿ ಟಿಪ್ಪು ಸಮಾಧಿಗೆ ಹೂವಿನ ಚಾದರ ಹೊದಿಸಿ, ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಶ್ರೀ ನಿಮಿಷಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ, ಗಂಜಾಂ ಗ್ರಾಮದಲ್ಲಿ ರೋಡ್‌ ಶೋ ನಡೆಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ