ವಿಪಕ್ಷಗಳಿಗೆ ಕೈಕೊಟ್ಟ ಟಿಆರ್‌ಎಸ್‌

Team Udayavani, May 11, 2019, 6:00 AM IST

ಫ‌ಲಿತಾಂಶಕ್ಕೂ ಮೊದಲೇ ಮಹಾಮೈತ್ರಿಯ ಮಾತುಕತೆ ಮುರಿದು ಬೀಳುವ ಲಕ್ಷಣ ಗೋಚರಿಸತೊಡಗಿದೆ. ಇದೇ ತಿಂಗಳ 21ರಂದು ನಡೆಸಲು ಉದ್ದೇಶಿಸಿರುವ ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ನೇತೃತ್ವದ ವಿಪಕ್ಷಗಳ ಸಭೆಯಲ್ಲಿ ತಾನು ಪಾಲ್ಗೊಳ್ಳುವುದಿಲ್ಲ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಖಚಿತಪಡಿಸಿದೆ. ಟಿಆರ್‌ಎಸ್‌ ನಾಯಕ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರ ನಿಷ್ಠರಾಗಿರುವ, ಕರೀಂ ನಗರ ಸಂಸದರೂ ಆದ ಬಿ. ವಿನೋದ್‌ ಕುಮಾರ್‌ ಈ ವಿಷಯ ತಿಳಿಸಿದ್ದಾರೆ. ಇತ್ತೀಚೆಗೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಚುನಾವಣೋತ್ತರ ಮೈತ್ರಿಗಾಗಿ ವಿಪಕ್ಷಗಳ ಸಭೆ ಆಯೋಜಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ, ಟಿಆರ್‌ಎಸ್‌ನಿಂದ ಈ ಸ್ಪಷ್ಟನೆ ಹೊರಬಿದ್ದಿದೆ. ಟಿಡಿಪಿ ನೇತೃತ್ವದ ಸಭೆಯಿಂದ ಟಿಆರ್‌ಎಸ್‌ ದೂರ ಉಳಿಯುತ್ತಿರುವುದು ಅನಿರೀಕ್ಷಿತವೇನಲ್ಲ. ನಾಯ್ಡು – ಕೆಸಿಆರ್‌ ಎಣ್ಣೆ-ಸೀಗೇಕಾಯಿಯಂತಿರುವುದು ಇದ‌ಕ್ಕೊಂದು ಕಾರಣವಾದರೆ, ಕಾಂಗ್ರೆಸ್ಸೇತರ ವಿಪಕ್ಷಗಳ ಮೈತ್ರಿಯೊಂದನ್ನು ಅಸ್ತಿತ್ವಕ್ಕೆ ತರಲು ಕೆಸಿಆರ್‌ ಪ್ರಯತ್ನಿಸುತ್ತಿರುವುದೂ ಮತ್ತೂಂದು ಕಾರಣ ಎನ್ನಲಾಗಿದೆ.

ಬಿಜೆಪಿಯೇತರ ಪಕ್ಷಗಳಿಗೆ ಹೆಚ್ಚು ಸ್ಥಾನ: ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳು ಲಭಿಸಲಿದ್ದು, ವಿಪಕ್ಷಗಳ ಮೈತ್ರಿಯೇ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವ್ಯಕ್ತಪಡಿಸಿದ್ದಾರೆ. ಜತೆಗೆ, ವಿಪಕ್ಷಗಳ ಪ್ರತಿಯೊಬ್ಬ ನಾಯಕರೂ ಪ್ರಧಾನಿ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಆದರೂ, ಸರಕಾರ ರಚಿಸುವ ಸಾಧ್ಯತೆ ಬಂದಾಗ ಎಲ್ಲಾ ಪಕ್ಷಗಳೂ ಕೂಡಿ ಒಬ್ಬ ನಾಯಕನನ್ನು ಒಮ್ಮತದಿಂದ ಆರಿಸುತ್ತೇವೆ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ