“ಲೋಕ’ ಗೆಲ್ಲದೆ ಠೇವಣಿ ಕಳೆದುಕೊಂಡವರು

Team Udayavani, Apr 9, 2019, 3:00 AM IST

ಬೆಂಗಳೂರು: ಈವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡವರದ್ದೇ ಮೇಲುಗೈ. ರಾಜಕೀಯ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸೇರಿ ಅದೃಷ್ಟ ಪರೀಕ್ಷೆಗಿಳಿದವರಲ್ಲಿ ಶೇ.75ಕ್ಕೂ ಹೆಚ್ಚು ಮಂದಿ ಠೇವಣಿ ಸಿಗದೇ ಕೈ ಸುಟ್ಟುಕೊಂಡಿದ್ದಾರೆ. ಹೀಗೆ “ಲೋಕ’ ಗೆಲ್ಲುವ ಕನಸಿನೊಂದಿಗೆ ರಾಜ್ಯದಲ್ಲಿ ಚುನಾವಣಾ ಖಯಾಲಿಗೆ ಬಿದ್ದು ಠೇವಣಿ ಕಳೆದುಕೊಂಡವರ “ಇತಿಹಾಸ’ ಇಲ್ಲಿದೆ.

1951-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಿಂದ ಹಿಡಿದು 2014ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆವರೆಗೆ ರಾಜ್ಯದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳು, ರಾಜ್ಯಮಟ್ಟದ ರಾಜಕೀಯ ಪಕ್ಷಗಳು, ನೋಂದಾಯಿತ ಪಕ್ಷಗಳು ಹಾಗೂ ಪಕ್ಷೇತರರು ಸೇರಿ ಸ್ಪರ್ಧಿಸಿದವರು ಒಟ್ಟು 3,987 ಅಭ್ಯರ್ಥಿಗಳು. ಇವರಲ್ಲಿ ಠೇವಣಿ ಕಳೆದುಕೊಂಡವರು 3,025 ಅಭ್ಯರ್ಥಿಗಳು.

ಸ್ಪರ್ಧಿಸಿದ್ದ ಒಟ್ಟು 3,987 ಅಭ್ಯರ್ಥಿಗಳ ಪೈಕಿ 420 ಅಭ್ಯರ್ಥಿಗಳು ಗೆದ್ದು, 3,567 ಅಭ್ಯರ್ಥಿಗಳು ಸೋಲಿನ ರುಚಿ ಕಂಡಿದ್ದಾರೆ. ಇವರಲ್ಲಿ ಚುನಾವಣೆಯಲ್ಲಿ ಸೋತರೂ ಠೇವಣಿ ಉಳಿಸಿಕೊಂಡವರು 542 ಅಭ್ಯರ್ಥಿಗಳು. 1951-52ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ 37 ಅಭ್ಯರ್ಥಿಗಳು ಸ್ಪರ್ಧಿಸಿ 12 ಮಂದಿ ಠೇವಣಿ ಕಳೆದುಕೊಂಡಿದ್ದರೆ, 2014ರಲ್ಲಿ ನಡೆದ 16ನೇ ಲೋಕಸಭೆ ಚುನಾವಣೆಯಲ್ಲಿ 434 ಅಭ್ಯರ್ಥಿಗಳು ಸ್ಪರ್ಧಿಸಿ 372 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಮೊದಲ 3 ಚುನಾವಣೆಗಳಲ್ಲಿ ಸ್ಪರ್ಧಿಸಿದವರ ಮತ್ತು ಠೇವಣಿ ಕಳೆದುಕೊಂಡವರ ಸಂಖ್ಯೆ 100ರೊಳಗೆ ಇತ್ತು. 1967ರಲ್ಲಿ ನಡೆದ 4ನೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದವರ ಸಂಖ್ಯೆ 100ರ ಗಡಿ ತಲುಪಿತು. ಆಗ 38 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 1984ರಲ್ಲಿ ನಡೆದ 8ನೇ ಲೋಕಸಭೆಗೆ ಸ್ಪರ್ಧಿಸಿದವರ ಸಂಖ್ಯೆ 300ರ ಗಡಿ ದಾಟಿತ್ತು.

1996ರಲ್ಲಿ ಅತಿ ಹೆಚ್ಚು: 300 ರಿಂದ 400ರ ಮಿತಿಯೊಳಗಿದ್ದ ಸ್ಪರ್ಧಿಗಳ ಸಂಖ್ಯೆ 1996ರಲ್ಲಿ ನಡೆದ 11ನೇ ಲೋಕಸಭೆ ಚುನಾವಣೆಯಲ್ಲಿ ಏಕಾಏಕಿ ಏರಿತು. ಆಗ ದಾಖಲೆ ಪ್ರಮಾಣದಲ್ಲಿ, ಒಟ್ಟು 978 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ ದಾಖಲೆ ಪ್ರಮಾಣದಲ್ಲಿ ಅಂದರೆ, 905 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಒಂದೇ ವರ್ಷದಲ್ಲಿ ನಡೆದ 12ನೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವವರ ಸಂಖ್ಯೆ ಏಕಾಏಕಿ 200ಕ್ಕೆ ಇಳಿದಿತ್ತು.

ನಂತರದ ಎರಡು ಚುನಾವಣೆಗಳಲ್ಲಿ ಕ್ರಮವಾಗಿ 130 ಹಾಗೂ 172 ಮಂದಿ ಸ್ಪರ್ಧಿಸಿದ್ದರು. ನಂತರ ಈ ಸಂಖ್ಯೆ ಮತ್ತೆ ಏರಿಕೆ ಕಂಡಿತು. 2009ರಲ್ಲಿ ನಡೆದ 15ನೇ ಲೋಕಸಭೆ ಚುನಾವಣೆಯಲ್ಲಿ 472 ಮಂದಿ ಸ್ಪರ್ಧಿಸಿ 362 ಮಂದಿ ಠೇವಣಿ ಕಳೆದುಕೊಂಡಿದ್ದರು. ಹಾಲಿ 16ನೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 434 ಅಭ್ಯರ್ಥಿಗಳ ಪೈಕಿ 372 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

6ನೇ 1 ಭಾಗದಷ್ಟು ಮತ ಅವಶ್ಯ: ಚುನಾವಣಾ ಆಯೋಗದ ನಿಯಮದ ಪ್ರಕಾರ ಒಂದು ಮತಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳ ಪೈಕಿ ಒಟ್ಟು ಸಿಂಧು ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯುವಲ್ಲಿ ವಿಫ‌ಲರಾಗುವ ಅಭ್ಯರ್ಥಿಗಳ ಠೇವಣಿ ವಾಪಸ್‌ ಬರುವುದಿಲ್ಲ. ಆ ಠೇವಣಿ ಮೊತ್ತವನ್ನು ಸರ್ಕಾರದ ಖಜಾನೆಗೆ ಜಮೆ ಮಾಡಲಾಗುತ್ತದೆ.

ಪಕ್ಷೇತರದ್ದೇ ಸಿಂಹಪಾಲು: ಠೇವಣಿ ಕಳೆದುಕೊಂಡವರಲ್ಲಿ ಪಕ್ಷೇತರರದ್ದೇ ಸಿಂಹಪಾಲು. ಈವರೆಗಿನ 16 ಲೋಕಸಭಾ ಚುನಾವಣೆಗಳಲ್ಲಿ 2,368 ಮಂದಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 2,328 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. 1951-52ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆ ವೇಳೆ ಠೇವಣಿ ಮೊತ್ತ 500 ರೂ.ಇದ್ದರೆ, ಈಗ ಸಾಮಾನ್ಯ ಅಭ್ಯರ್ಥಿಗೆ 25 ಸಾವಿರ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 12,500 ರೂ. ಇದೆ.

ಕಳೆದ ಬಾರಿ 84 ಲಕ್ಷ ರೂ.ಖಜಾನೆ ಸೇರಿತ್ತು: 2014ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಸ್ಪರ್ಧಿಸಿದ್ದವರ ಸಂಖ್ಯೆ 434. ಇವರಲ್ಲಿ ಠೇವಣಿ ಕಳೆದುಕೊಂಡವರು 372 ಅಭ್ಯರ್ಥಿಗಳು. ಇವರಲ್ಲಿ 209 ಸಾಮಾನ್ಯ ಅಭ್ಯರ್ಥಿಗಳಿದ್ದರೆ, 163 ಎಸ್ಸಿ/ಎಸ್ಟಿ ಅಭ್ಯರ್ಥಿಗಳಿದ್ದರು. ಸಾಮಾನ್ಯ ಅಭ್ಯರ್ಥಿಗಳ ತಲಾ 25 ಸಾವಿರ ಹಾಗೂ ಎಸ್ಸಿ/ಎಸ್ಟಿ ಅಭ್ಯರ್ಥಿಗಳ 12,500 ರೂ.ಠೇವಣಿ ಮೊತ್ತದಂತೆ ಒಟ್ಟು 84 ಲಕ್ಷ ರೂ.ಠೇವಣಿ ಮೊತ್ತ ಸರ್ಕಾರದ ಖಜಾನೆಗೆ ಸೇರಿತ್ತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಮೀಸಲು ಕ್ಷೇತ್ರಗಳಲ್ಲಿ 79 ಮಂದಿ ಹಾಗೂ 21 ಸಾಮಾನ್ಯ ಕ್ಷೇತ್ರಗಳಲ್ಲಿ 64 ಮಂದಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಕಳೆದ ಬಾರಿ ಠೇವಣಿ ಕಳೆದುಕೊಂಡ ಪ್ರಮುಖರು: 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ ಸೇರಿ 6 ರಾಷ್ಟ್ರೀಯ ಪಕ್ಷಗಳಿಂದ 90 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ 36 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಎಲ್ಲ 28 ಕ್ಷೇತ್ರಗಳಲ್ಲಿ ಬಿಎಸ್‌ಪಿ ಠೇವಣಿ ಕಳೆದುಕೊಂಡಿತ್ತು. 2 ಕ್ಷೇತ್ರಗಳಲ್ಲಿ ಬಿಜೆಪಿ, 3 ಕ್ಷೇತ್ರಗಳಲ್ಲಿ ಸಿಪಿಐ ಹಾಗೂ 2 ಕ್ಷೇತ್ರಗಳಲ್ಲಿ ಸಿಪಿಎಂ, 1 ಕ್ಷೇತ್ರದಲ್ಲಿ ಎನ್‌ಸಿಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಜೆಡಿಎಸ್‌ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ 17 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

ಹಾಸನದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಚ್‌.ವಿಜಯಶಂಕರ್‌, ಉಡುಪಿ-ಚಿಕ್ಕಮಗಳೂರಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ವಿ.ಧನಂಜಯ ಕುಮಾರ್‌, ಮಂಡ್ಯದ ಬಿಜೆಪಿ ಅಭ್ಯರ್ಥಿ ಪ್ರೊ. ಬಿ.ಶಿವಲಿಂಗಯ್ಯ, ದಾವಣಗೆರೆಯಿಂದ ಜೆಡಿಎಸ್‌ ಅಭ್ಯರ್ಥಿ ಮಹಿಮಾ ಪಟೇಲ್‌, ಬೆಂಗಳೂರು ಕೇಂದ್ರದ ಜೆಡಿಎಸ್‌ ಅಭ್ಯರ್ಥಿ ನಂದಿನಿ ಆಳ್ವ, ಬೆಂಗಳೂರು ದಕ್ಷಿಣದ ಜೆಡಿಎಸ್‌ ಅಭ್ಯರ್ಥಿ ರುತ್‌ ಮನೋರಮಾ ಠೇವಣಿ ಕಳೆದುಕೊಂಡ ಪ್ರಮುಖರು.

ಈವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ಪಕ್ಷಗಳಿಂದ
ಸ್ಪರ್ಧಿಸಿದ್ದ ಒಟ್ಟು 1,159 ಅಭ್ಯರ್ಥಿಗಳ ಪೈಕಿ 317 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

* ರಫೀಕ್‌ ಅಹ್ಮದ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ