ವಿಜಯಪುರ: ಹಳೆ ಸಮಸ್ಯೆಗಳೇ ಪ್ರಚಾರದ ಸರಕು

Team Udayavani, Mar 17, 2019, 1:16 AM IST

ವಿಜಯಪುರ: ಉತ್ತರ ಕರ್ನಾಟಕದ ನತದೃಷ್ಟ ಜಿಲ್ಲೆ ಎನಿಸಿಕೊಂಡಿರುವ ವಿಜಯಪುರವನ್ನು ಹಲವು ಗಂಭೀರ ಸಮಸ್ಯೆಗಳು ಕಾಡುತ್ತಿದ್ದು, ಪ್ರತಿ ಚುನಾವಣೆಯಲ್ಲಿಯೂ ಈ ಸಮಸ್ಯೆಗಳು ಪ್ರಚಾರದ ವಸ್ತುಗಳಾಗುತ್ತವೆ. ಅಭ್ಯರ್ಥಿಗಳ ಭರವಸೆ ಮತ್ತು ಪಕ್ಷಗಳ ಪ್ರಣಾಳಿಕೆಗಳಿಗಷ್ಟೇ ಇವು ಸೀಮಿತವಾಗುತ್ತಿದ್ದು  ಪರಿಹಾರ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಕಳೆದೊಂದು ದಶಕದಲ್ಲಿ ನೀರಾವರಿ ಮತ್ತು ನಿರುದ್ಯೋಗ ನಿವಾರಣೆಗೆ ಬೃಹತ್‌ ಕೈಗಾರಿಕೆಗಳ ಸ್ಥಾಪನೆ ಕುರಿತು ದೊಡ್ಡಮಟ್ಟದಲ್ಲಿ ಚರ್ಚೆಗಳಾದವು. ಆದರೆ ಒಂದೇ ಒಂದು ಬೃಹತ್‌ ಕೈಗಾರಿಕೆ ಜಿಲ್ಲೆಯಲ್ಲಿ ಸ್ಥಾಪನೆ ಆಗಲಿಲ್ಲ. ಜಿಲ್ಲೆಗೆ ಬಂದಿದ್ದ ರಸಗೊಬ್ಬರ ಕಾರ್ಖಾನೆ ಸಹ ದಾವಣಗೆರೆ ಪಾಲಾಯಿತು.

ವಿಶ್ವವಿಖ್ಯಾತ ಇಬ್ರಾಹಿಂ ರೋಜಾ ಸಹಿತ ನೂರಾರು ಸ್ಮಾರಕಗಳಿರುವ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಕಚೇರಿ ಸ್ಥಾಪನೆ, ವಿಶ್ವವಿಖ್ಯಾತ ಗೋಲಗುಮ್ಮಟವನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸುವುದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಪುರದ ಪ್ರವಾಸಿ ತಾಣಗಳ ಕುರಿತು ಹೆಚ್ಚಿನ ಪ್ರಚಾರ ನೀಡುವ ವಿಷಯಗಳು ಚರ್ಚೆಗೆ ಬಂದವೇ ಹೊರತು, ಈ ನಿಟ್ಟಿನಲ್ಲಿ ಯಾವ ಉಪಕ್ರಮಗಳೂ ನಡೆದಿಲ್ಲ.

ಬಿಜೆಪಿ ಚುನಾವಣ ಅಸ್ತ್ರ
ರಮೇಶ್‌ ಜಿಗಜಿಣಗಿ ಕ್ಷೇತ್ರದ ಸಂಸದರಾಗಿ, ಕೇಂದ್ರ ಸಚಿವರಾಗಿ ಮಾಡಿದ ಕೆಲಸಗಳು, ಅದಕ್ಕಿಂತಲೂ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಪಕ್ಷದ ವರ್ಚಸ್ಸು ಬಿಜೆಪಿಯ ಚುನಾವಣ ಅಸ್ತ್ರಗಳು. ಜತೆಗೆ ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು, ಉತ್ತರ ಕರ್ನಾಟಕದ ಒಬ್ಬ ಅಭ್ಯರ್ಥಿಯನ್ನು ಕೇಂದ್ರ ಸಚಿವರನ್ನಾಗಿ ಮಾಡಿದ ಮೋದಿಯ ಚಿಂತನೆ ಪ್ಲಸ್‌ ಪಾಯಿಂಟ್‌. ಅಲ್ಲದೆ ರಾಜ್ಯದ ಮೈತ್ರಿ ಸರಕಾರ ಉತ್ತರ ಕರ್ನಾಟಕದ ಈ ಜಿಲ್ಲೆಯನ್ನು ಕಡೆಗಣಿಸಿದೆ ಎಂಬ ಆರೋಪವಂತೂ ಇದ್ದದ್ದೆ.

ಜೆಡಿಎಸ್‌ ಚುನಾವಣ ಅಸ್ತ್ರ
ಮೈತ್ರಿ ಸೂತ್ರದನ್ವಯ ಈ ಕ್ಷೇತ್ರ ಜೆಡಿಎಸ್‌ ತೆಕ್ಕೆಗೆ ಬಂದಿದ್ದು, ಜೆಡಿಎಸ್‌ನಿಂದ ದೇವಾನಂದ ಚೌಹಾಣ್‌ ಪತ್ನಿ ಸುನಿತಾ ಚೌಹಾಣ್‌, ದೇವಾನಂದ ಸಹೋದರ ರವಿ ಚೌಹಾಣ್‌, ಸುನೀಲ್‌ ರಾಥೋಡ್‌ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಬಿಜೆಪಿಯಿಂದ ಜಿಗಜಿಣಗಿಯವರು 2 ಬಾರಿ ಸಂಸದರಾಗಿದ್ದಾರೆ. ಜತೆಗೆ, ಪ್ರಸ್ತುತ ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಹಾಯಕ ಸಚಿವರಾಗಿದ್ದಾರೆ. ಆದರೂ ಅವರು ಹೇಳಿಕೊಳ್ಳುವಂಥ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಕೂಗು ಕ್ಷೇತ್ರದ ಜನರಲ್ಲಿದೆ. ಅಲ್ಲದೆ ಪರಿಶಿಷ್ಟ ಜಾತಿ (ಎಡ)ಗೆ ಸೇರಿದ ಸಂಸದರು, ಒಳ ಮೀಸಲಾತಿ ಹೋರಾಟಕ್ಕೆ ಧ್ವನಿಯಾಗ ಲಿಲ್ಲ ಎಂಬ ಅಸಮಾಧಾನ ಮಾದಿಗರ (ಪರಿಶಿಷ್ಟ ಜಾತಿ- ಬಲ ಪಂಗಡ) ಒಳಮೀಸಲು ಹೋರಾಟ ಸಮಿತಿಯದ್ದಾಗಿದೆ. ಜತೆಗೆ ಇವರ ಸ್ಪರ್ಧೆಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಇವೆಲ್ಲವೂ ಜೆಡಿಎಸ್‌ಗೆ ಪ್ಲಸ್‌ ಪಾಯಿಂಟ್‌.

ಕ್ಷೇತ್ರವ್ಯಾಪ್ತಿ
ವಿಜಯಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬಬಲೇಶ್ವರ, ವಿಜಯಪುರ ನಗರ, ಇಂಡಿ, ಸಿಂಧಗಿ, ದೇವರ ಹಿಪ್ಪರಗಿ, ಮುದ್ದೆಬಿಹಾಳ, ಬಸವನಬಾಗೇವಾಡಿ, ನಾಗಠಾಣ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.

ಹುಳಿಯಾಗುತ್ತಿದೆ ದ್ರಾಕ್ಷಿ
ದಕ್ಷಿಣ ಭಾರತದ ದ್ರಾಕ್ಷಿ ಕಣಜ ಎನಿಸಿರುವ ಜಿಲ್ಲೆಯ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 18 ಸಾವಿರ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ಕಳೆದ ಒಂದು ದಶಕದಿಂದ ಜಿಲ್ಲೆಯನ್ನು ಕಾಡುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿ, ದ್ರಾಕ್ಷಿ ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸುಮಾರು 550 ಕೋ. ರೂ. ಸಾಲವನ್ನು ಕೇಂದ್ರದಿಂದ ಮನ್ನಾ ಮಾಡಿಸುವ ಬೇಡಿಕೆ ಈಡೇರಿಲ್ಲ.

ಕರ್ನಾಟಕದ ಸೈಕ್ಲಿಂಗ್‌ ಕಾಶಿ ಎನಿಸಿರುವ ವಿಜಯಪುರ ಜಿಲ್ಲೆಯಲ್ಲಿ ವೆಲೋಡ್ರೋಂ ನಿರ್ಮಾಣ ಕಾಮಗಾರಿ ಐದು ವರ್ಷಗಳಿಂದ ಕುಂಟುತ್ತ ಸಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್‌ ಮೈದಾನ ನಿರ್ಮಾಣ ಕಳೆದ ಹಲವಾರು ವರ್ಷಗಳಿಂದ ಚರ್ಚಾ ವಿಷಯವಾಗಿಯೇ ಉಳಿದಿದೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಬೇಕಿರುವ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ದಶಕದ ಹಿಂದೆಯೇ ಮದಭಾವಿ ಬಳಿ ನೂರಾರು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು, ಅಡಿಗಲ್ಲು ಹಾಕಲಾಗಿದೆ. ಕಾಮಗಾರಿ ಅಲ್ಲಿಗೇ ನಿಂತಿದೆ. ವಿಮಾನ ನಿಲ್ದಾಣ ನಿರ್ಮಿಸಲು ತುರ್ತಾಗಿ ಬೇಕಿರುವ 100 ಕೋ. ರೂ.ಗಳ ಪೈಕಿ ರಾಜ್ಯ ಮತ್ತು ಕೇಂದ್ರ ಸರಕಾರ  ಶೇ.50ರ ಹೊಣೆಗಾರಿಕೆ ನಿಭಾಯಿಸುವ ಕೆಲಸವಾಗಿಲ್ಲ. ಪರಿಣಾಮ ವಿಮಾನ ಹಾರಾಟದ ಭರವಸೆಗೆ ಇಲ್ಲಿ ರೆಕ್ಕೆಗಳೇ ಮೂಡಿಲ್ಲ.

 ಜಿ.ಎಸ್‌.ಕಮತರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಡೀ ದೇಶದ ದೃಷ್ಟಿಯೀಗ ವಿಶ್ವನಾಥನ ಸನ್ನಿಧಾನ ಕ್ಷೇತ್ರ ವಾರಾಣಸಿಯ ಮೇಲೆ ನೆಟ್ಟಿದೆ. ಈ ಬಾರಿ ಪ್ರಧಾನಿ ಮೋದಿಯವರೇ ಘರ್‌ ಘರ್‌ನಲ್ಲೂ ಸದ್ದು ಮಾಡುತ್ತಾರಾ ಅಥವಾ...

  • ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು...

  • ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ರಾಜ ವಂಶಸ್ಥರಾದ ಸಿಂಧಿಯಾ ಕುಟುಂಬ ಈ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಂಡಿಲ್ಲ. ಕಾಂಗ್ರೆಸ್‌ನಲ್ಲಿ...

  • ದೆಹಲಿಯ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಈಶಾನ್ಯ ದೆಹಲಿಯಲ್ಲಿ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ಹಾಲಿ ಸಂಸದ, ದೆಹಲಿ ಬಿಜೆಪಿಯ...

  • ನಾರ್ತ್‌ ವೆಸ್ಟ್‌ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ...

ಹೊಸ ಸೇರ್ಪಡೆ