ನಿಖಿಲ್‌ ಪರ ಸಿದ್ದು ಪ್ರಚಾರದ ವಿಡಿಯೋ ವೈರಲ್‌

Team Udayavani, Apr 9, 2019, 3:00 AM IST

ಬೆಂಗಳೂರು: ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಪರ ಮತ ನೀಡುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮನವಿ ಮಾಡುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ.

ಇತ್ತೀಚೆಗೆ ನಿಖಿಲ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಅವರ ಬೆಂಬಲಿಗರು ಈ ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಅವರು, ನಿಖಿಲ್‌ ಅವರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರಿಗೆ ಎರಡೂ ಪಕ್ಷದವರ ಸಂಪೂರ್ಣ ಬೆಂಬಲವಿದೆ. ಕ್ಷೇತ್ರದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ನಿಖಿಲ್‌ ಪರ ಕೆಲಸ ಮಾಡಬೇಕು. ಮತದಾರರು ನಿಖಿಲ್‌ಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ದೇವೇಗೌಡರು ಹಾಗೂ ನಾನು ಏಪ್ರಿಲ್‌ 12ರಂದು ನಿಖಿಲ್‌ ಪರ ಜಂಟಿ ಪ್ರಚಾರ ಮಾಡಲಿದ್ದೇವೆ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿಗಳ ಪರ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕು ಎಂದು ವಿಡಿಯೋದಲ್ಲಿ ಕೋರಲಾಗಿದೆ. ಈ ವಿಡಿಯೋವನ್ನು ಕುಮಾರಸ್ವಾಮಿ ಸಹ ಟ್ವೀಟ್‌ ಮಾಡಿದ್ದು, ಕ್ಷೇತ್ರದೆಲ್ಲೆಡೆ ಹರಿದಾಡುತ್ತಿದೆ.

ಮಂಡ್ಯದಲ್ಲಿ ಸುಮಲತಾ ಪರ ಪರೋಕ್ಷವಾಗಿ ಕೆಲಸ ಮಾಡುತ್ತಿರುವ ಚೆಲುವರಾಯಸ್ವಾಮಿ ಹಾಗೂ ಇತರ ಮಾಜಿ ಶಾಸಕರು, ಸಿದ್ದರಾಮಯ್ಯ ಅವರ ಸಂಧಾನದ ನಂತರವೂ ನಿಖಿಲ್‌ ಪರ ಕೆಲಸ ಮಾಡಲು ಒಪ್ಪಿಲ್ಲ. ಹೀಗಾಗಿ, ಜೆಡಿಎಸ್‌ನವರು ಇದೀಗ ಸಿದ್ದರಾಮಯ್ಯ ಅವರು ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಮತದಾರರಿಗೆ ಮನವಿ ಮಾಡುವ ವಿಡಿಯೋ ಮಾಡಿ ವೈರಲ್‌ ಮಾಡಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮತ್ತೂಂದು ಮೂಲಗಳ ಪ್ರಕಾರ, ಮೈಸೂರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ವಿಜಯಶಂಕರ್‌ ಕಣದಲ್ಲಿದ್ದು, ಅಲ್ಲಿ ಜೆಡಿಎಸ್‌ನವರು ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ. ಇದರಿಂದಾಗಿ ಮೈಸೂರಿನಲ್ಲಿ ಜೆಡಿಎಸ್‌ನವರು ಕೈ ಕೊಟ್ಟರೆ ಕಷ್ಟ ಎಂಬ ಹಿನ್ನೆಲೆಯಲ್ಲಿ ಖುದ್ದು ಸಿದ್ದರಾಮಯ್ಯ ಅವರು ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಖಿಲ್‌ ಪರ ಕೆಲಸ ಮಾಡುವಂತೆ ವಿಡಿಯೋ ಸಂದೇಶದ ಮೂಲಕ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಮಂಡ್ಯ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಚೆಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಹಲವು ನಾಯಕರ ಜತೆ ಸಭೆ ನಡೆಸಿದ್ದರು. ಆದರೆ, ಸಂಧಾನ ಮಾತುಕತೆ ವಿಫ‌ಲವಾಗಿತ್ತು. ಇದರ ಬೆನ್ನಲ್ಲೇ ಇದೀಗ ವಿಡಿಯೋ ವೈರಲ್‌ ಆಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ