“ದಕ್ಷಿಣಾರ್ಧ’ದಲ್ಲಿ ಇಂದು ಮತದಾನ

Team Udayavani, Apr 18, 2019, 3:00 AM IST

ಬೆಂಗಳೂರು: ದೇಶದ 17ನೇ ಲೋಕಸಭೆಗೆ ದಕ್ಷಿಣ ಕರ್ನಾಟಕ ಭಾಗದ 18 ಜಿಲ್ಲೆಗಳ ವ್ಯಾಪ್ತಿಯ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು (ಏ.18)ಮತದಾನ ನಡೆಯಲಿದೆ.

ಈ ಕ್ಷೇತ್ರಗಳಲ್ಲಿ ಒಟ್ಟು 2.67 ಕೋಟಿ ಮತದಾರರು 241 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಈ ಪೈಕಿ ಪಕ್ಷೇತರರೇ 133 ಮಂದಿ ಕಣದಲ್ಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. 30,164 ಮತಗಟ್ಟೆಗಳಲ್ಲಿ ಏಕ ಕಾಲಕ್ಕೆ ಮತದಾನ ಪ್ರಕ್ರಿಯೆ ನಡೆಯಲಿದ್ದು, 2.11 ಲಕ್ಷ ಸಿಬ್ಬಂದಿ ಮತದಾನ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮತದಾನದ ಸಿದ್ಧತೆಗಳ ವಿವರಗಳನ್ನು ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಶಾಂತಿಯುತ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಲಾಗಿದ್ದು, ಸಿಬ್ಬಂದಿಗೆ ಈಗಾಗಲೇ ತರಬೇತಿ ಕೊಡಲಾಗಿದ್ದು, ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅರ್ಹ ಮತದಾರ ಮುಕ್ತವಾಗಿ ತನ್ನ ಹಕ್ಕು ಚಲಾಯಿಸಬೇಕು. ಆ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಬೇಕು ಅನ್ನುವುದು ಆಯೋಗದ ಆಶಯ ಎಂದರು.

ಒಟ್ಟು 14 ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವ ಚಿತ್ರದುರ್ಗ, ಮಂಡ್ಯ, ಮೈಸೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ತಲಾ 2 ಬ್ಯಾಲೆಟ್‌ ಯೂನಿಟ್‌ಗಳನ್ನು ಬಳಸಲಾಗುತ್ತಿದೆ. ಒಟ್ಟಾರೆ 30,164 ಮತಗಟ್ಟೆಗಳಲ್ಲಿ 52,112 ಬ್ಯಾಲೆಟ್‌ ಯೂನಿಟ್‌, 36,196 ಕಂಟ್ರೋಲ್‌ ಯೂನಿಟ್‌, 37,705 ವಿವಿಪ್ಯಾಟ್‌ಗಳನ್ನು ಬಳಸಲಾಗುತ್ತಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಎಂ-3 ಇವಿಎಂಗಳನ್ನು ಬಳಸಿದರೆ ಉಳಿದ 13 ಕ್ಷೇತ್ರಗಳಲ್ಲಿ ಎಂ-2 ಇವಿಎಂಗಳನ್ನು ಬಳಸಲಾಗುತ್ತಿದೆ.

ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಗುರುವಾರ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಚಿತ್ರದುರ್ಗ, ಚಾಮರಾಜನಗರ, ಕೋಲಾರ ಕ್ಷೇತ್ರಗಳು ಎಸ್ಸಿ ಮೀಸಲು ಕ್ಷೇತ್ರಗಳಾಗಿದ್ದು, ಉಳಿದಂತೆ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ತುಮಕೂರು, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಸಾಮಾನ್ಯ ಕ್ಷೇತ್ರಗಳಾಗಿವೆ.

ಒಟ್ಟು ಕ್ಷೇತ್ರಗಳು: 14
ಸಾಮಾನ್ಯ ಕ್ಷೇತ್ರಗಳು: 11
ಮೀಸಲು ಕ್ಷೇತ್ರಗಳು: 03
ಒಟ್ಟು ಅಭ್ಯರ್ಥಿಗಳು: 241
ಪುರುಷರು: 224
ಮಹಿಳೆಯರು: 17

ಒಟ್ಟು ಮತದಾರರು: 2.76 ಕೋಟಿ
ಪುರುಷರು: 1.35 ಕೋಟಿ
ಮಹಿಳೆಯರು: 1.32 ಕೋಟಿ
ಇತರರು: 2,817

ಯುವ ಮತದಾರರು: 12.37 ಲಕ್ಷ
ಮೊದಲ ಬಾರಿ ಓಟ್‌ ಹಾಕುವವರು: 4.68 ಲಕ್ಷ

ಒಟ್ಟು ಮತಗಟ್ಟೆಗಳು: 30,164
ಸಮಸ್ಯಾತ್ಮಕ ಮತಗಟ್ಟೆ: 6,012
ಮಾದರಿ ಮತಗಟ್ಟೆ: 486
ಮತದಾನದ ಸಮಯ: ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ

ಒಟ್ಟು ಇವಿಎಂ ಬಳಕೆ
ಬ್ಯಾಲೆಟ್‌ ಯೂನಿಟ್‌: 52,112
ಕಂಟ್ರೋಲ್‌ ಯೂನಿಟ್‌: 36,196
ವಿವಿಪ್ಯಾಟ್‌: 37,705

ಅತಿ ಹೆಚ್ಚು ಅಭ್ಯರ್ಥಿಗಳು
ಬೆಂಗಳೂರು ಉತ್ತರ: 31 ಅತಿ ಕಡಿಮೆ ಅಭ್ಯರ್ಥಿಗಳು
ಹಾಸನ: 06

ಅತಿ ಹೆಚ್ಚು ಮತದಾರರು
ಬೆಂಗಳೂರು ಉತ್ತರ: 28.48 ಲಕ್ಷ ಅತಿ ಕಡಿಮೆ ಮತದಾರರು
ಉಡುಪಿ-ಚಿಕ್ಕಮಗಳೂರು: 15.13 ಲಕ್ಷ

ಅತಿ ಹೆಚ್ಚು ಮೊದಲ ಬಾರಿ ಮತದಾರರು
ಚಿತ್ರದುರ್ಗ: 41,713 ಅತಿ ಕಡಿಮೆ ಮೊದಲ ಬಾರಿ ಮತದಾರರು
ಬೆಂಗಳೂರು ಕೇಂದ್ರ: 24,284

ಅತಿ ಹೆಚ್ಚು ಯುವ ಮತದಾರರು
ಚಿತ್ರದುರ್ಗ: 1.08 ಲಕ್ಷ ಅತಿ ಕಡಿಮೆ ಯುವ ಮತದಾರರು
ಬೆಂಗಳೂರು ದಕ್ಷಿಣ: 65,662

ಅತಿ ಹೆಚ್ಚು ಮತಗಟ್ಟೆ
ಬೆಂಗಳೂರು ಗ್ರಾಮಾಂತರ-2,672
ಅತಿ ಕಡಿಮೆ ಮತಗಟ್ಟೆ-
ಉಡುಪಿ-ಚಿಕ್ಕಮಗಳೂರು: 1,837

ಎಡಗೈ ತೋರು ಬೆರಳಿಗೆ ಶಾಯಿ: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಕ್ಕು ಚಲಾಯಿಸುವ ಮತದಾರರ ಎಡಗೈ ತೋರು ಬೆರಳಿಗೆ ಚುನಾವಣಾ ಶಾಯಿ ಹಾಕಲಾಗುವುದು.

486 ವಿಶೇಷ ಮತಗಟ್ಟೆಗಳು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುವ 393 ಸಖೀ, ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆ ಬಿಂಬಿಸುವ 32 ಸಾಂಪ್ರದಾಯಿಕ ಹಾಗೂ ಸಂಪೂರ್ಣವಾಗಿ ದಿವ್ಯಾಂಗರು ನಿರ್ವಹಿಸುವ 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರು ನಗರ ಹಾಗೂ ಬಿಬಿಎಂಪಿ ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು ತಲಾ 36 ಸಖೀ ಮತಗಟ್ಟೆಗಳಿವೆ. ಚಾಮರಾಜನಗರ ಮತ್ತು ಮೈಸೂರಿನಲ್ಲಿ ಅತಿ ಹೆಚ್ಚು ತಲಾ 9 ಸಾಂಪ್ರದಾಯಿಕ ಮತಗಟ್ಟೆಗಳು, ದಿವ್ಯಾಂಗರು ನಿರ್ವಹಿಸುವ ಮತಗಟ್ಟೆಗಳು ಅತಿ ಹೆಚ್ಚು ಮಂಡ್ಯದಲ್ಲಿ 16 ಮತ್ತು ಮೈಸೂರಿನಲ್ಲಿ 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

6 ಸಾವಿರ ಸಮಸ್ಯಾತ್ಮಕ ಮತಗಟ್ಟೆಗಳು: ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 30,164 ಮತಗಟ್ಟೆಗಳ ಪೈಕಿ 6,012 ಮತಗಟ್ಟೆಗಳನ್ನು ಸಮಸ್ಯಾತ್ಮಕ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದರಲ್ಲಿ 990 ಮತಗಟ್ಟೆಗಳಲ್ಲಿ ಹೆಚ್ಚುವರಿ ಕೇಂದ್ರ ಶಸಸ್ತ್ರ ಮೀಸಲು ಪಡೆ ನಿಯೋಜಿಸಲಾಗುತ್ತಿದೆ. 2,038 ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗುತ್ತದೆ.

ಮತದಾನದಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲ್ಗೊಳ್ಳಿ. ಸ್ವ ವಿವೇಕದಿಂದ, ಮುಕ್ತವಾಗಿ, ನಿರ್ಭೀತರಾಗಿ, ಯಾವುದೇ ಒತ್ತಡ ಅಥವಾ ಆಮಿಷಕ್ಕೊಳಗಾಗದೇ ಮತ ಚಲಾಯಿಸಿ ನೈತಿಕ ಚುನಾವಣೆಯ ಆಶಯವನ್ನು ಸಾಕಾರಗೊಳಿಸಿ.
-ಸಂಜೀವ್‌ ಕುಮಾರ್‌, ರಾಜ್ಯ ಮುಖ್ಯ ಚುನಾವಣಾಧಿಕಾರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ