ತಿರುನೆಲ್ಲಿ ದೇಗುಲ ಭೇಟಿ ಮೂಲಕ ಬಿಜೆಪಿಗೆ ಚೆಕ್‌!

Team Udayavani, Apr 21, 2019, 6:00 AM IST

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ವಯನಾಡ್‌ನ‌ ತಿರುನೆಲ್ಲಿ ಮಹಾವಿಷ್ಣು ದೇಗುಲಕ್ಕೆ ಭೇಟಿ ನೀಡುವ ಮೂಲಕ ಪ್ರಚಾರ ಆರಂಭಿಸಿದ್ದಾರೆ.

ಶಬರಿಮಲೆ ವಿಷಯದ ಹಿನ್ನೆಲೆಯಲ್ಲಿ ಮತಗಳಿಕೆಯ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ತಮ್ಮ ದೇಗುಲ ಭೇಟಿ ಮೂಲಕ ರಾಹುಲ್‌ ಚೆಕ್‌ ಕೊಟ್ಟಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಿಂದೂ ಮತಗಳಿಕೆಗೆ ಕಣ್ಣಿಟ್ಟಿದ್ದಾರೆ. ರಾಹುಲ್‌ ದೇಗುಲ ಭೇಟಿ ಹಿಂದಿನ ಮರ್ಮವೇನು ಎಂಬುದನ್ನೂ ಈಗ ಚುನಾವಣ ಪಂಡಿತರು ಲೆಕ್ಕಹಾಕುತ್ತಿದ್ದಾರೆ.

ತಿರುನೆಲ್ಲಿ ಮಹಾವಿಷ್ಣು ದೇಗುಲ ಸುಮಾರು 5 ಸಾವಿರ ವರ್ಷ ಇತಿಹಾಸ ಹೊಂದಿದ್ದು, ಅಪಾರ ಸಂಖ್ಯೆಯ ಹಿಂದೂ ಮತ್ತಿತರ ಭಕ್ತರು ನಡೆದುಕೊಳ್ಳುತ್ತಾರೆ. ಇದನ್ನು ಅರಿತೇ ರಾಹುಲ್‌ ಅವರಿಗೆ ಭೇಟಿ ನೀಡುವಂತೆ ಕೇರಳ ಕಾಂಗ್ರೆಸ್‌ನ ಮುಖಂಡರು ಹೇಳಿದ್ದರು ಎನ್ನಲಾಗಿದೆ.

ಇನ್ನೊಂದು ದೃಷ್ಟಿಯಲ್ಲಿ 1991ರಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್‌ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಚಿತಾಭಸ್ಮವನ್ನು ಇಲ್ಲಿನ ಪಾಪನಾಶಿನಿ ನದಿಯಲ್ಲಿ ಬಿಡಲಾಗಿತ್ತು. ಹೀಗಾಗಿ ಭಾವನಾತ್ಮಕ ಸಂಬಂಧವೂ ಭೇಟಿ ಹಿಂದಿದೆ ಎನ್ನಲಾಗುತ್ತಿದೆ.

ಬಲಿತರ್ಪಣ
ತಮ್ಮ ತಂದೆಯವರಿಗಾಗಿ ದೇಗುಲದ ಪ್ರಸಿದ್ಧ ಸೇವೆಯಲ್ಲೊಂದಾದ ಬಲಿತರ್ಪಣವನ್ನು ರಾಹುಲ್‌ ನೀಡಿದ್ದಾರೆ. ಸಾಂಪ್ರದಾಯಿಕ ವೇಷ್ಟಿ, ಶಲ್ಯ ಹೊದ್ದು ಸೇವೆಗಳನ್ನೂ ಮಾಡಿಸಿ ಪ್ರದಕ್ಷಿಣೆಯನ್ನೂ ಪೂರೈಸಿದರು. ರಾಹುಲ್‌ ಅವರ ದೇಗುಲ ಭೇಟಿ ವೈಯಕ್ತಿಕವಾಗಿರಬಹುದು. ಆದರೆ ಇದರ ಹಿಂದೆ ಗುಪ್ತ ಲೆಕ್ಕಾಚಾರವಿದೆ. ಬಿಜೆಪಿ ರಾಹುಲ್‌ ಅವರ ನಂಬಿಕೆಗಳ ಬಗ್ಗೆ ಯಾವತ್ತೂ ಪ್ರಶ್ನೆಗಳನ್ನೆತ್ತಿದೆ. ಈ ಸಂಬಂಧ ಉತ್ತರಿಸಲು ವಯನಾಡ್‌ನ‌ ಸಂದರ್ಭವನ್ನು ರಾಹುಲ್‌ ಬಳಸಿದರು ಎನ್ನಲಾಗುತ್ತಿದೆ.. ಅಲ್ಲದೆ ಬಿಜೆಪಿಯ ಪ್ರಖರ ಹಿಂದುತ್ವ ಎದುರಿಸಲು ರಾಹುಲ್‌ ಮೃದು ಹಿಂದುತ್ವದ ದಾಳವನ್ನು ಎಸೆಯುತ್ತಿದ್ದಾರೆ ಎನ್ನಲಾಗಿದೆ.

ರಾಹುಲ್‌ ವಯನಾಡ್‌ನ‌ಲ್ಲಿ ಚುನಾವಣೆಗೆ ನಿಂತ ಕೂಡಲೇ ಬಿಜೆಪಿ ಹಿಂದೂಗಳ ಮತಗಳು ಕಡಿಮೆ ಇರುವ ವಯನಾಡ್‌ ಅನ್ನೇ ರಾಹುಲ್‌ ಆಯ್ದುಕೊಂಡರು ಎಂದು ಲೇವಡಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ವಯನಾಡ್‌ನ‌ಲ್ಲಿ ಶೇ.41ರಷ್ಟಿರುವ ಹಿಂದೂಗಳ ಓಟು ಗಳಲ್ಲಿ ಸ್ವಲ್ಪವನ್ನಾದರೂ ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದು ರಾಹುಲ್‌ ಯತ್ನ. ಅಷ್ಟೇ ಅಲ್ಲದೆ, ಹಿಂದೂ ಸಂಪ್ರದಾಯ, ಪರಂಪರೆಗಳನ್ನು ಗೌರವಿಸುವೆ ಎಂದು ಕೇರಳದ ಹಿಂದೂಗಳಿಗೆ ತಿಳಿಸುವ ಪ್ರಯತ್ನವೂ ಹೌದು.

ಶಬರಿಮಲೆ ವಿಷಯದಲ್ಲಿ ಹಿಂದೂಗಳಿಗೆ ತಮ್ಮ ಪಕ್ಷವೇ ಏಕೈಕ ದಿಕ್ಕು ಎಂದು ಪ್ರತಿಪಾದಿಸಲು ಬಿಜೆಪಿ ಹೊರಟಿತ್ತು. ಈ ಮತ ಧ್ರುವೀಕರಣ ತಡೆಯುವ ಪ್ರಯತ್ನ ರಾಹುಲ್‌ ಅವರದ್ದು ಎಂಬ ವ್ಯಾಖ್ಯಾನ ಚಾಲ್ತಿಯಲ್ಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

  • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

  • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

  • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

  • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

  • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...