ವಾರಾಣಸಿಯತ್ತ ದೇಶದ ಗಮನ, ಮತ್ತೆ ಮೋದಿಗೇ ಕಾಶಿವಾಸಿಗಳ ನಮನ?

Team Udayavani, May 19, 2019, 9:45 AM IST

ಇಡೀ ದೇಶದ ದೃಷ್ಟಿಯೀಗ ವಿಶ್ವನಾಥನ ಸನ್ನಿಧಾನ ಕ್ಷೇತ್ರ ವಾರಾಣಸಿಯ ಮೇಲೆ ನೆಟ್ಟಿದೆ. ಈ ಬಾರಿ ಪ್ರಧಾನಿ ಮೋದಿಯವರೇ ಘರ್‌ ಘರ್‌ನಲ್ಲೂ ಸದ್ದು ಮಾಡುತ್ತಾರಾ ಅಥವಾ ಗಂಗಾತೀರದ ಮತದಾರರು ಅನ್ಯ ಅಭ್ಯರ್ಥಿಗಳಿಗೆ ಹರ ಹರ ಎನ್ನುತ್ತಾರಾ? ಸದ್ಯದ ಬಹುತೇಕ ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಗಮನಿಸಿ ಹೇಳುವುದಾದರೆ, ಈ ಬಾರಿಯೂ ವಾರಾಣಸಿಯ ಜನರು ನರೇಂದ್ರ ಮೋದಿಯವರನ್ನೇ ಆಯ್ಕೆ ಮಾಡಿ ಕಳುಹಿಸಲಿದ್ದು, ಮೋದಿ ಈ ಬಾರಿ ಎಷ್ಟು ಅಂತರದಿಂದ ಗೆಲ್ಲುತ್ತಾರೆ ಎನ್ನುವುದಷ್ಟೆ ಈಗಿರುವ ಪ್ರಶ್ನೆ ಎನ್ನಲಾಗುತ್ತಿದೆ.

2014ರಲ್ಲಿ ನರೇಂದ್ರ ಮೋದಿಯವರು ವಡೋದರಾ ಮತ್ತು ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಿ ಎರಡರಲ್ಲೂ ಗೆದ್ದು, ವಡೋದರಾ ಕ್ಷೇತ್ರವನ್ನು ತೊರೆದಿದ್ದರು. ಆ ಸಮಯದಲ್ಲಿ ವಾರಾಣಸಿಯಲ್ಲಿ ಬಹುವಾಗಿ ಮಿಂಚಿದ್ದ ಮತ್ತೂಬ್ಬ ನಾಯಕರೆಂದರೆ ಆಮ್‌ ಆದ್ಮಿ ಪಾರ್ಟಿಯ ಅರವಿಂದ್‌ ಕೇಜ್ರಿವಾಲ್‌ ಅವರು. ಈಗ ಮಹಾಘಟ ಬಂಧನದಲ್ಲಿರುವ ಬಹುತೇಕ ಪಕ್ಷಗಳು ಅಂದು ಕೇಜ್ರಿವಾಲ್‌ಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದವು. ಆದರೆ ವಾರಾಣಸಿಯ ಒಟ್ಟಾರೆ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಮುಖ್ಯವಾಗಿ ಗಂಗಾ ಸ್ವತ್ಛತೆಯ ಭರವಸೆ ನೀಡಿದ್ದ ನರೇಂದ್ರ ಮೋದಿಯರು ತಮ್ಮ ಎದುರಾಳಿಗಳನ್ನು ಭಾರೀ ಅಂತರದಿಂದ ಸೋಲಿಸಿಬಿಟ್ಟರು. ಅಂದು ನರೇಂದ್ರ ಮೋದಿ 5,81,023 ಮತಗಳನ್ನು ಪಡೆದರೆ, ಅವರ ಪ್ರಮುಖ ಎದುರಾಳಿ ಯಾಗಿದ್ದ ಕೇಜ್ರಿವಾಲ್‌-2,09,238 ಮತಗಳನ್ನಷ್ಟೇ ಪಡೆದರು. ಕಾಂಗ್ರೆಸ್‌ ಅಭ್ಯರ್ಥಿ ಅಜಯ್‌ ರಾಯ್‌ ಕೇವಲ 75,614 ಮತಗಳನ್ನು ಪಡೆದು ಮುಖಭಂಗ ಅನುಭವಿಸಿದರು. ಆ ಬಾರಿ ಕೇಜ್ರಿವಾಲ್‌ ಅವರು ಪ್ರಧಾನಿ ಹುದ್ದೆಯ ಕನಸನ್ನು ಬದಿಗೊತ್ತಿ ಹೆಚ್ಚಾ ಕಡಿಮೆ ದೆಹಲಿಗಷ್ಟೇ ಸೀಮಿತವಾಗಿಬಿಟ್ಟಿದ್ದಾರೆ.

ಈ ಬಾರಿ ಮೋದಿ ಎದುರು ಪ್ರಿಯಾಂಕಾ ಗಾಂಧಿ ನಿಲ್ಲುತ್ತಾರೆ ಎಂಬ ಸುದ್ದಿಗಳು ಹರಿದಾಡಿದವು, ಪ್ರಿಯಾಂಕಾ ಕೂಡ ವಾರಾಣಸಿಯಲ್ಲಿ ಸ್ಪರ್ಧಿಸಲು ತಾವು ಸಿದ್ಧ ಎಂಬ ಧಾಟಿಯ ಸಂಕೇತಗಳನ್ನು ಕಳುಹಿಸಿದರಾದರೂ, ಕೊನೆಗೆ ಕಾಂಗ್ರೆಸ್‌ ನಾಯಕತ್ವ ಪ್ರಿಯಾಂಕಾರನ್ನು ಅಖಾಡಕ್ಕಿಳಿಸುವ ರಿಸ್ಕ್ ತೆಗೆದುಕೊಳ್ಳದೇ, ಹಿಂದಿನ ಬಾರಿ 75 ಸಾವಿರ ಮತಗಳಷ್ಟೇ ಪಡೆದಿದ್ದ ಅಜಯ್‌ ರಾಯ್‌ರನ್ನೇ ಈ ಬಾರಿಯೂ ಅಖಾಡಕ್ಕೆ ಇಳಿಸಿದೆ.

ಕಾಂಗ್ರೆಸ್‌ನ ಈ ನಡೆ ವಾರಾಣಸಿಯಲ್ಲಿ ಮೋದಿ ಅಲೆಯೇ ಇದೆ ಎನ್ನುವುದಕ್ಕೆ ಪುರಾವೆಯಾಗಿ ನಿಲ್ಲುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು. ಮೋದಿ ಗೆಲ್ಲುತ್ತಾರಾ ಎನ್ನುವುದು ಪ್ರಶ್ನೆಯೇ ಅಲ್ಲ, ಈ ಬಾರಿ ಗೆಲುವಿನ ಅಂತರ ಎಷ್ಟಿರಲಿದೆ ಎನ್ನುವುದಷ್ಟೇ ಪ್ರಶ್ನೆ ಎನ್ನುವುದು ಬಹುತೇಕರ ವಾದ.

ನಾಮಪತ್ರ ತಿರಸ್ಕೃತರು: ಈ ಬಾರಿ ಮೋದಿ ವಿರುದ್ಧ ಸ್ಪರ್ಧಿಸುವುದಕ್ಕಾಗಿ ನೂರಕ್ಕೂ ಹೆಚ್ಚು ಜನರು ನಾಮಪತ್ರ ಸಲ್ಲಿಸಿದ್ದರು. ತಮಿಳುನಾಡು ಹಾಗೂ ಇತರೆ ರಾಜ್ಯಗಳ ರೈತರು, ಸ್ಥಳೀಯ ಮುಖಂಡರು ಮತ್ತು ಬಿಎಸ್‌ಎಫ್ನ ಮಾಜಿ ಯೋಧ ತೇಜ್‌ಬಹಾದ್ದೂರ್‌ ಕೂಡ ಇದ್ದರು. ವಿವಿಧ ಕಾರಣಗಳಿಗಾಗಿ ತೇಜ್‌ ಬಹಾದ್ದೂರ್‌ ಸೇರಿದಂತೆ ಬಹುತೇಕರ ನಾಮಪತ್ರ ತಿರಸ್ಕೃತಗೊಂಡು, ಈಗ 25 ಜನ ಮಾತ್ರ ಅಖಾಡದಲ್ಲಿ ಇದ್ದಾರೆ.

ಅಭಿವೃದ್ಧಿ ಆಗಿದೆಯೇ: ವಾರಾಣಸಿಯನ್ನು ಜಪಾನ್‌ನ ಕೊಟೋ (ಮಂದಿರಗಳಿಗೆ ಪ್ರಖ್ಯಾತವಾದ ಊರು) ಆಗಿಸುತ್ತೇನೆ ಎಂದಿದ್ದರು ಮೋದಿ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಐದು ವರ್ಷಗಳಲ್ಲಿ 30 ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನವನ್ನು ವಾರಾಣಸಿಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆ ಮಾಡಿದೆ. ಇವುಗಳಲ್ಲಿ ಕಾಶಿ-ವಿಶ್ವನಾಥ ಕಾರಿಡಾರ್‌ ಮತ್ತು ಸ್ವತ್ಛಗಂಗೆ ಯೋಚನೆಗಳು ಪ್ರಮುಖವಾದವು. ಇನ್ನು ವಾರಾಣಸಿ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 17.6 ಕಿಲೋಮೀಟರ್‌ ಉದ್ದದ ಚತುಷ್ಪಥ ರಸ್ತೆಯೂ ಗಮನ ಸೆಳೆಯುವಂತಿದೆ. “ದಿ ವೀಕ್‌’ ನಿಯತ ಕಾಲಿಕದೊಂದಿಗೆ ಮಾತನಾಡಿದ ಶತ್ರುಘ್ನ ಪ್ರಸಾದ್‌ ಎನ್ನುವ ಡ್ರೈವರ್‌ ಈ ಬಗ್ಗೆ ಹೇಳುತ್ತಾರೆ- “”ಹಿಂದೆಲ್ಲ ವಿಮಾನ ನಿಲ್ದಾಣದಿಂದ ಊರು ತಲುಪಲು 2 ಗಂಟೆ ಸಮಯ ಹಿಡಿಯುತ್ತಿತ್ತು, ಈಗ ಕೇವಲ 45 ನಿಮಿಷದಲ್ಲಿ ತಲುಪುತ್ತೇನೆ. ಇನ್ನು ತಮ್ಮ ಬೆಳೆಗಳನ್ನು ನಗರಕ್ಕೆ ತರುವ ರೈತರಿಗೂ ಇದರಿಂದ ಬಹಳ ಅನುಕೂಲವಾಗಿದೆ. ರಸ್ತೆ ಅಗಲೀಕರಣದ ಸಮಯದಲ್ಲಿ ಅನೇಕರು ತಮ್ಮ ಮನೆ ಮತ್ತು ಅಂಗಡಿಗಳನ್ನು ಕಳೆದುಕೊಂಡರು ಎನ್ನುವುದೇನೋ ನಿಜ. ಆದರೆ ಎಲ್ಲರಿಗೂ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಮೊತ್ತದ ಪರಿಹಾರ ಸಿಕ್ಕಿದೆ” ಎನ್ನುತ್ತಾರವರು.

ಇವಷ್ಟೇ ಅಲ್ಲದೆ, ಅತ್ಯಾಧುನಿಕ ಸೌಕರ್ಯಗಳೊಂದಿಗೆ ಕಂಗೊಳಿಸುತ್ತಿರುವ ವಾರಾಣಸಿ ರೈಲ್ವೆ ಸ್ಟೇಷನ್‌ ಕೂಡ ಕಣ್ಮನ ಸೆಳೆಯುತ್ತಿದೆ. ಇನ್ನು ವಿಪರೀತ ಕಸ-ಅನೈರ್ಮಲ್ಯ ದಿಂದಲೂ ಕುಖ್ಯಾತಿಗಳಿಸಿರುವ ವಾರಾಣಸಿಯಲ್ಲಿ ಈಗಲೂ ಸ್ವತ್ಛತೆಯ ವಿಷಯದಲ್ಲಿ ಅನೇಕ ಸಮಸ್ಯೆಗಳು ಇವೆಯಾದರೂ, ನಮಾಮಿ ಗಂಗೆ, ಸ್ವತ್ಛ ಭಾರತ ಯೋಜನೆಗಳಿಂದಾಗಿ ಪರಿಸ್ಥಿತಿ ಬಹಳ ಸುಧಾರಿಸಿದೆ ಎನ್ನಲಾಗುತ್ತದೆ. ಸ್ವತ್ಛ ಭಾರತದ ಟೀಶರ್ಟ್‌ ಧರಿಸಿರುವ ನೂರಾರು ಸ್ವಯಂಸೇವಕರು ಮತ್ತು ಘಾಟ್‌ಗಳಲ್ಲಿ ಕಾರ್ಯನಿರತರಾಗಿರುವ ನಮಾಮಿ ಗಂಗೆ ಕೆಲಸಗಾರರು ಬಹಳಷ್ಟು ಶ್ರಮಿ ಸುತ್ತಿದ್ದಾರೆ. ನಮಾಮಿ ಗಂಗೆ ಕೆಲಸಗಾರರಂತೂ ನದಿ ತಟದ ಪಾವಟಿ ಗೆಗಳಿಗೆ ಅಂಟಿಕೊಂಡ ಚೀವಿಂಗ್‌ ಗಮ್‌ನಿಂದ ಹಿಡಿದು, ಸಗಣಿ, ಮಾನವ ತ್ಯಾಜ್ಯವನ್ನೂ ತೆಗೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಆದರೆ, ಗಂಗಾ ನದಿಯನ್ನು ಮುಖ್ಯವಾಗಿ ಕಲುಷಿತಗೊಳಿಸುತ್ತಿರುವುದು ಕಾರ್ಖಾನೆಗಳ ವಿಷತ್ಯಾಜ್ಯಗಳು. ಬೃಹತ್‌ ಕಾರ್ಖಾನೆಗಳನ್ನು ಮುಚ್ಚುವವರೆಗೂ ಸ್ವತ್ಛತೆ ಪೂರ್ಣವಾಗದು ಎನ್ನುವುದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ವಾದ.

ಕ್ಯಾನ್ಸರ್‌ ಸೆಂಟರ್‌: ವಾರಾಣಸಿಯನ್ನು ದೇಶದ ಪ್ರಮುಖ ಕ್ಯಾನ್ಸರ್‌ ಶುಶ್ರೂಷೆ ಕೇಂದ್ರವಾಗಿಸುವತ್ತಲೂ ಹೆಜ್ಜೆ ಇಡುತ್ತಿದೆ ಮೋದಿ ಮತ್ತು ಯೋಗಿ ಸರ್ಕಾರ. ಮೊದಲಿದ್ದ ರೈಲ್ವೆ ಕ್ಯಾನ್ಸರ್‌ ಇನ್ಸ್‌ಟಿಟ್ಯೂಟ್‌ ಅನ್ನು ಟಾಟಾ ಮೆಮೋರಿಯಲ್‌ ಹಾಸ್ಪಿಟಲ್ಸ್‌ಗೆ ಹಸ್ತಾಂತರಿಸಿದ ಮೇಲೆ ಹಳೆಯ ಸಂಸ್ಥೆಯು 2018ರಲ್ಲಿ “ಹೋಮಿ ಭಾಬಾ ಕ್ಯಾನ್ಸರ್‌ ಸೆಂಟರ್‌'(ಎಚ್‌ಬಿಸಿಸಿ) ಹೆಸರಲ್ಲಿ 180 ಬೆಡ್‌ಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ರೂಪಪಡೆದಿದೆ. ಇನ್ನು ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ “ಮಹಾಮನ ಪಂಡಿತ್‌ ಮದನ್‌ ಮೋಹನ್‌ ಮಾಳವಿಯಾ ಕ್ಯಾನ್ಸರ್‌ ಸೆಂಟರ್‌(ಎಂಪಿಎಂ ಎಂಸಿಸಿ)’ ಅನ್ನು ತೆರೆಯಲಾಗಿದ್ದು. ಕೇವಲ ಹತ್ತು ತಿಂಗಳಲ್ಲೇ 350 ಬೆಡ್‌ ಸಾಮರ್ಥ್ಯವುಳ್ಳ ಈ ಕೇಂದ್ರವನ್ನು ಕಟ್ಟಲಾಗಿದೆ. 5.86 ಲಕ್ಷ. ಚದರ ಅಡಿ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಸಂಸ್ಥೆಯನ್ನು ಪ್ರಧಾನಿ ಮೋದಿಯವರು ಇದೇ ವರ್ಷದ ಫೆ. 27ರಂದು ಉದ್ಘಾಟಿಸಿದ್ದರು. “”ಸಾಮಾನ್ಯವಾಗಿ, ಇಂಥ ಯೋಜನೆಗಳು ಮುಗಿಯಲು ಮೂರು ವರ್ಷವಾದರೂ ಹಿಡಿಯುತ್ತದೆ. ಆದರೆ ಟಾಟಾ ಟ್ರಸ್ಟ್‌ ಇಂಥ ಬೃಹತ್‌ ಕೆಲಸವನ್ನು ಅತಿ ಚಿಕ್ಕ ಅವಧಿಯಲ್ಲೇ ಮುಗಿಸಿದ್ದು ಅಮೋಘ ಸಾಧನೆ” ಎನ್ನುತ್ತಾರೆ ಸಂಸ್ಥೆಯ ಡಾ. ಪಂಕಜ್‌ ಎನ್‌.
ಆದರೆ ಎಲ್ಲಾ ಅಭಿವೃದ್ಧಿ ಯೋಜನೆಗಳೂ ಸುಲಲಿತ ವಾಗೇನೂ ಸಾಗುತ್ತಿಲ್ಲ. ಕೆಲವು ಪ್ರದೇಶಗಳಲ್ಲಂತೂ ಆಧುನಿಕತೆ ವರ್ಸಸ್‌ ಸಾಂಪ್ರದಾಯಿಕತೆಯ ಸಂಘರ್ಷ ಏರ್ಪಟ್ಟಿದೆ.  ಉದಾಹರಣೆಗೆ ಕಾಶಿ ವಿಶ್ವನಾಥ ಮಂದಿರದ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ರೂಪಿತವಾದ “ಕಾಶಿ ವಿಶ್ವನಾಥ ಕಾರಿಡಾರ್‌’ ಯೋಜನೆ. 600 ಕೋಟಿ ರೂಪಾಯಿ ಮೊತ್ತದ ಈ ಯೋಜನೆಯ ಉದ್ದೇಶ, ಮಂದಿರದ ಸುತ್ತಲಿನ ಸುಮಾರು 4.6 ಹೆಕ್ಟೇರ್‌ ಪ್ರದೇಶವನ್ನು ತೆರವುಗೊಳಿಸಿ, ಸಂಚಾರ ದಟ್ಟಣೆಯನ್ನು ತಗ್ಗಿಸಿ, ಯಾತ್ರಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸು ವುದೇ ಆಗಿದೆ. ಆದರೆ ಈ ಕಾರಿಡಾರ್‌ ಪೂರ್ಣ ನಿರ್ಮಾಣವಾಗುವಷ್ಟರಲ್ಲಿ ಅನೇಕರು ವಸತಿ, ಅಂಗಡಿಗಳು, ಲಾಡಿಗ್‌ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೇ, ಕೆಲವು ಮಂದಿರಗಳನ್ನೂ ಸ್ಥಳಾಂತರಿಸ ಬೇಕಾಗುತ್ತದೆ. ದಶಕಗಳಿಂದ ಇದ್ದ ಜಾಗವನ್ನು ಬಿಟ್ಟುಕೊಡುವ ವಿಚಾರದಲ್ಲಿ ವಿರೋಧವೂ ಎದುರಾಗುತ್ತಿದೆ. ಕಾಶಿ ವಿಶ್ವನಾಥ ಮಂದಿರದ ಪೂರ್ವ ಮಹಾಂತ ರಾಜೇಂದ್ರ ತಿವಾರಿ ಅವರು “”ಯಾರೋ ಕೆಲವರು ತಮ್ಮ ಕಾರುಗಳನ್ನು ಮಂದಿರದವರೆಗೂ ತರಬೇಕು ಎನ್ನುವುದಕ್ಕಾಗಿ, ನಮ್ಮ ಸಾಂಸ್ಕೃತಿಕ ಪರಂಪರೆಯ ಮೇಲೆ ಈ ಕಾರಿಡಾರ್‌ ಮೂಲಕ ನೇರ ದಾಳಿ ಮಾಡಲಾಗುತ್ತಿದೆ. ಈ ಯೋಜನೆಯು ಕಾಶಿಯ ಅಸ್ಮಿತೆಯನ್ನೇ ಹಾಳು ಮಾಡುತ್ತಿದೆ” ಎನ್ನುತ್ತಾರೆ.

ಇನ್ನು, ಗಂಗಾನದಿಯ ಮೇಲೆ ಹರಿದಾಡುತ್ತಿರುವ “ಅಲಕನಂದಾ’ ಎಂಬ ಅದ್ಧೂರಿ ಪ್ರವಾಸಿ ಹಡಗಿನಿಂದಾಗಿ ತಮ್ಮ ಕೆಲಸಕ್ಕೆ ಅಪಾಯ ಎದುರಾಗುತ್ತಿದೆ ಎಂದು ವಿರೋಧಿಸುತ್ತಿದ್ದಾರೆ ಸ್ಥಳೀಯ ನಿಷಾದ್‌ ಸಮುದಾಯದ ಅಂಬಿಗರು. ಹಾಗಾದರೆ, ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಮಾತ್ರ ಎಲ್ಲರೂ ಒಕ್ಕೊರಲಿನಿಂದ ಹೇಳುವುದು “ಮೋದಿ’ ಹೆಸರನ್ನೇ!  “”ಬನಾರಸ್‌ನಲ್ಲಿ ಅಭಿವೃದ್ಧಿ ಕೆಲಸಗಳಂತೂ ವೇಗಪಡೆದಿವೆ. ಹಿಂದಿನ ಯಾವ ಸರ್ಕಾರವೂ ಮಾಡದಷ್ಟು ಕೆಲಸವನ್ನು ಮಾಡುತ್ತಿದ್ದಾರೆ ಮೋದಿ. ಒಂದು ರೀತಿಯಲ್ಲಿ ಅವರು ಬ್ರ್ಯಾಂಡ್‌ ಬನಾರಸ್‌ ಅನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಹೊಸತನಕ್ಕೆ ಹೊಂದಿಕೊಳ್ಳಲು ಜನ ಬೇಗ ಸಿದ್ಧರಾಗುವುದಿಲ್ಲ.

ಗಂಗಾ ನದಿ ಸ್ವತ್ಛತೆಯ ವಿಷಯವಿರಲಿ ಅಥವಾ ನೈರ್ಮಲ್ಯದ ವಿಷಯವಿರಲಿ, ಜನರ ಸಹಯೋಗ ವಿಲ್ಲದೇ ಯಶಸ್ಸು ಕಾಣುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ಕಾಶಿವಾಸಿಗಳೆಲ್ಲ ಮೋದೀಜಿಯ ಪ್ರಯತ್ನಕ್ಕೆ ಕೈಜೋ ಡಿಸಿದರೆ, ವಾರಾಣಸಿ ಕೊಟೋವನ್ನು ಮೀರಿ ನಿಲ್ಲ ಲಿದೆ” ಎನ್ನುತ್ತಾರೆ ಅಮರ್‌ ಉಜಾಲಾ ಪತ್ರಿಕೆಗೆ ಬಿಎಚ್‌ಯುನ ನಿವೃತ್ತ ಪ್ರೊಫೆಸರ್‌ ಗಂಗಾಧರ್‌ ತ್ರಿಪಾಠಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು...

  • ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ರಾಜ ವಂಶಸ್ಥರಾದ ಸಿಂಧಿಯಾ ಕುಟುಂಬ ಈ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಂಡಿಲ್ಲ. ಕಾಂಗ್ರೆಸ್‌ನಲ್ಲಿ...

  • ದೆಹಲಿಯ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಈಶಾನ್ಯ ದೆಹಲಿಯಲ್ಲಿ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ಹಾಲಿ ಸಂಸದ, ದೆಹಲಿ ಬಿಜೆಪಿಯ...

  • ನಾರ್ತ್‌ ವೆಸ್ಟ್‌ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ...

  • ದೇಶಾದ್ಯಂತ 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ, ಛಪ್ರಾ ಲೋಕಸಭಾ ಕ್ಷೇತ್ರವನ್ನು ಪುನರ್‌ವಿಂಗಡಿಸಿದ ಸಂದರ್ಭದಲ್ಲಿ ಸರಣ್‌ ಎಂಬ ಹೊಸ ಕ್ಷೇತ್ರ ರಚಿಸಲಾಯಿತು....

ಹೊಸ ಸೇರ್ಪಡೆ