ನಮ್ಮ ಮತ ಉತ್ತಮ ನಾಯಕನಿಗೆ; ಪಕ್ಷಕ್ಕಲ್ಲ

Team Udayavani, Mar 28, 2019, 6:30 AM IST

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆದಿದ್ದಾರೆ.

ಈ ಅಭಿಯಾನ ಇಂದು ಮುಕ್ತಾಯಗೊಳ್ಳುತ್ತಿದ್ದು, ಪಾಲ್ಗೊಂಡ ಯುವ ಮತದಾರರೆಲ್ಲರಿಗೆ ಅಭಿನಂದನೆ.

ಮತ ಚಲಾಯಿಸಲು ಉದಾಸೀನ ಬೇಡ
ನಮ್ಮ ಮತ ನಮ್ಮ ಹಕ್ಕು. ನಮಗೆ ನೀಡಲ್ಪಟ್ಟ ಹಕ್ಕನ್ನು ಚಲಾಯಿಸದೇ ಬಿಟ್ಟಲ್ಲಿ ನಾವು ದೊಡ್ಡ ಮೂರ್ಖರಾಗುತ್ತೇವೆ. ಮತದಾನವು ನಮಗೆ ಸಂವಿಧಾನದ ಹಕ್ಕನ್ನು ನೀಡುವುದ ರೊಂದಿಗೆ ಭಾದ್ಯತೆ ಕೂಡಾ ನೀಡುತ್ತದೆ. ನಾವು ದೇಶದ ನಿಜವಾದ ಪ್ರಜೆಗಳೇ ಆದರೆ ನಮ್ಮ ಹಕ್ಕು – ಬಾಧ್ಯತೆಗಳನ್ನು ಸರಿಯಾಗಿ ನಿರ್ವಹಿಸಬೇಕು. ಮತ ಚಲಾಯಿಸಲು ಉದಾಸೀನ ಮಾಡಿದರೆ ಅದು ನಮ್ಮ ದುರಂತದ ಸಂಗತಿ ಆಗುತ್ತದೆ.
– ಶೇಖ್‌ ಫರಾನ್‌ ಬಕಾರ್‌, ವಿದ್ಯಾ ನಿಕೇತನ ಪ್ರ. ದರ್ಜೆ ಕಾಲೇಜು, ಕಾಪು

ಅಭಿವೃದ್ಧಿಗಾಗಿ ಮತದಾನ ಚಲಾಯಿಸೋಣ
ಮತದಾನವು ಅಮೂಲ್ಯವಾದದ್ದು ಆರಿಸಿದ ವ್ಯಕ್ತಿ ಸದನದಲ್ಲಿ ದನಿ ಎತ್ತಿ ಆಯಾಯ ಕ್ಷೇತ್ರದ ಜನ ಸಾಮಾನ್ಯರ ಸಮಸ್ಯೆಗಳಿಗೆ ಉತ್ತರ ದೊರಕಿಸಿ ಕೊಳ್ಳುವವರೆಗೆ ಹೋರಾಟ ನಡೆಸುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ರಾಷ್ಟ್ರ ರಾಜಕಾರಣಕ್ಕೆ ಆಯ್ಕೆ ಮಾಡುವುದು ಸೂಕ್ತ. ಆಯ್ಕೆ ಮಾಡಿ ಆರಿಸಿದ ವ್ಯಕ್ತಿ ಅಭಿವೃದ್ಧಿಯ ಹರಿಕಾರರಾಗಿರಬೇಕು.
– ದಿವ್ಯಾ ಡಿ. ಶೆಟ್ಟಿ, ವೈಕುಂಠ ಬಾಳಿಗ ಲಾ ಕಾಲೇಜು, ಉಡುಪಿ

ಮತ ನನ್ನ ಹಕ್ಕಿನ ಹೆಗ್ಗುರುತು
ಮತದಾನದ ಗುರುತು ಬರೀ ಶಾಯಿಯ ಗುರುತಲ್ಲ. ಇದು ನನ್ನ ಹಕ್ಕಿನ ಹೆಗ್ಗುರುತು. ಪ್ರಜಾಪ್ರಭುತ್ವ ತತ್ವಗಳನ್ನು ಗೌರವಿಸುವ, ದೇಶ ರಕ್ಷಣೆಯ ಹೊಣೆಯನ್ನು ನಿಭಾಯಿಸುವ, ಭಾರತದ ಹಿರಿಮೆಯನ್ನು ಕಾಪಾಡುವ, ಜಾತಿ ಮತ – ಪಂಥಗಳ ಗಡಿಯನ್ನು ಮೀರಿ ವಿಶ್ವಮಾನವ ತತ್ವವನ್ನು ತುಂಬಿಕೊಂಡಿರುವ ಭ್ರಷ್ಟಾಚಾರ, ನಿರುದ್ಯೋಗದಂತಹ ಸಮಸ್ಯೆ ನಿವಾರಿಸಬಲ್ಲಂತಹ ಯೋಗ್ಯ ನಾಯಕರ ಆಯ್ಕೆಗೆ ನಾವು ಮತ ಚಲಾಯಿಸಬೇಕು.
– ವಿನುತಾ, ಸರಕಾರಿ ಪ್ರ. ದರ್ಜೆ ಕಾಲೇಜು, ಶಂಕರನಾರಾಯಣ

ಯೋಚಿಸಿ ಅರ್ಹರಿಗೆ ಮತ ಹಾಕಿ
ಪ್ರಥಮ ಮತದಾನವಾಗಿರುವುದರಿಂದ ಮತ ಚಲಾಯಿಸುವಾಗ ಯೋಚಿಸ ಬೇಕಾದ ಅನೇಕ ವಿಚಾರಗಳಿವೆ. ಮುಂದಿನ ಭವಿಷ್ಯ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ನಿಷ‌Rಳಂಕ ನಿಸ್ವಾರ್ಥ ಸೇವೆಯ ಯೋಗ್ಯ ಸಮರ್ಥ ವ್ಯಕ್ತಿಗೆ ಮತ ಚಲಾಯಿಸುವುದು ನಮ್ಮ ಹಕ್ಕು ಹಾಗೂ ಕರ್ತವ್ಯ. ಅರ್ಹರಿಗೆ ಮತ ಚಲಾಯಿಸುವುದು ಸೂಕ್ತ.
– ಸ್ವಾತಿ ಎಂ., ಸ. ಪದವಿ ಕಾಲೇಜು, ಕೋಟೇಶ್ವರ

ಮತದಾನ ಸಂವಿಧಾನ ನೀಡಿರುವ ಪ್ರಬಲ ಅಸ್ತ್ರ
ನಾವು ಮತದಾನದಿಂದ ತೃಪ್ತಿಯಾಗಬೇಕೇ ಹೊರತು ಪಶ್ಚಾತ್ತಾಪ ಪಡುವಂತಾಗಬಾರದು.ಜನಪ್ರತಿನಿಧಿಗಳನ್ನು ಯೋಗ್ಯ ರೀತಿಯಲ್ಲಿ ಚುನಾಯಿಸಿ ಗೆಲ್ಲಿಸುವುದು ನಿಜವಾದ ಜಾಣತನ. ಮತದಾನ ಮತ್ತು ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಭಾರತದ ಸಂವಿಧಾನ ನೀಡಿರುವ ಪ್ರಬಲ ಅಸ್ತ್ರ.
– ನಿಶಾ ಶೆಟ್ಟಿ, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ

ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ
ಮತದಾರ ಮತದಾನವೊಂದು ಅವಶ್ಯವಸ್ತು ಎಂದು ನೋಡದೆ ಅದೊಂದು ಜವಾ‌ಬ್ದಾರಿ ಎಂದು ತಿಳಿಯಬೇಕು. ಹೀಗಾದರೆ ಮಾತ್ರ ಸಕ್ರಿಯ ಪಾಲ್ಗೊಳ್ಳುವಿಗೆ ಸಾಧ್ಯ. ನಾವು ಮತದಾನ ಮಾಡಬೇಕಾಗಿದೆಯೇ ಹೊರತು ಆಶ್ವಾಸನೆ ಪ್ರಣಾಳಿಕೆ ಭಾಷಣಗಳನ್ನು ಕೇಳಿ ನಮ್ಮ ಮತ ಚಲಾಯಿಸಿವುದಲ್ಲ.
– ಗುರುರಾಜ ಆಚಾರ್ಯ, ಮಂಜುನಾಥ ಪೈ ಮೆಮೊರಿಯಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ

100 ಶೇ. ಮತದಾನವಾಗಲಿ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭವ್ಯಭಾರತದ ಉಜ್ವಲ ಭವಿಷ್ಯ ಅಡಕವಾಗಿ ರುವುದು ಮತದಾನದಲ್ಲಿ. ನಮ್ಮ ದೇಶದ ಸುಭದ್ರ ಆಡಳಿತಕ್ಕಾಗಿ ನಾವೇನು ಮಾಡಬಹುದು? ನಾವೇನು ಕೊಡಬಹುದು? ಎಂಬು ದಕ್ಕೆ ಉತ್ತರ ಮತದಾನ. ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಜತೆಗೆ ಇದುವರೆಗೆ ಆಗದ 100 ಶೇ. ಮತದಾನವನ್ನು ಮುಂಬರುವ ದಿನಗಳಲ್ಲಿ ಸಾಧಿಸೋಣ.
– ನಳಿನಿ, ಜಾರ್ಕಳ ಮುಂಡ್ಲಿ, ಎಸ್‌.ವಿ. ಮಹಿಳಾ ಕಾಲೇಜು , ಕಾರ್ಕಳ

ನಮ್ಮ ಮತ ಉತ್ತಮ ನಾಯಕನಿಗೆ; ಪಕ್ಷಕ್ಕಲ್ಲ
ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಸಿಕ್ಕ ಮತದಾನ ಎನ್ನುವ ಅವಕಾಶವನ್ನು ಆಮಿಷಗಳಿಗೆ ಒಳಪಟ್ಟು ಪೂರ್ವಾಗ್ರಹ ಪೀಡಿತರಾಗಿ ದುರುಪಯೋಗಪಡಿಸಿ ಕೊಳ್ಳಬಾರದು. ನಮ್ಮ ಮತ ಉತ್ತಮ ನಾಯಕನಿಗೆ ಇರಬೇಕೇ ಹೊರತು ಪಕ್ಷಕ್ಕಲ್ಲ. ನಮ್ಮ ದೇಶವನ್ನು ಆಳುವ ನಾಯಕನನ್ನು ಆರಿಸುವ ಸದಾವಕಾಶ ನಮ್ಮ ಬೆರಳ ತುದಿಯಲ್ಲಿಯೇ ಇದೆ.
– ಶ್ರೀನಿಧಿ ಯು. ರಾವ್‌, ಅಂಡಾರು ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ

ಮತದಾನ ನಮ್ಮ ಧ್ವನಿ
ಭಾರತವನ್ನು ಸುರಕ್ಷಿತವಾಗಿರ ಬೇಕೆಂದು ನಾವು ಬಯಸುವುದಾದರೆ, ನಮ್ಮ ವಿಷಯದಲ್ಲಿ ನಮ್ಮ ಧ್ವನಿಯನ್ನು ಕೇಳುವುದಕ್ಕೆ ಪ್ರಮುಖವಾದ ಮಾರ್ಗವೇ ಮತದಾನ ಪ್ರಕ್ರಿಯೆ. ಇದು ನಮ್ಮ ನಿರ್ಧಾರದ ಭಾಗವಾಗಿರಲು ನಮಗೆ ಅವಕಾಶವನ್ನು ನೀಡುತ್ತದೆ ನಾವು ಮತ ಚಲಾಯಿಸಿದಾಗ ದೇಶದ ದೊಡ್ಡ ಚಿತ್ರದ ಭಾಗವಾಗಿ ಬಿಡುತ್ತೇವೆ ಎಂದು ತಿಳಿದುಕೊಳ್ಳಬೇಕು. ನಮ್ಮ ಮತ ಚಲಾವಣೆಯಾಗಬೇಕಿದೆ.
– ಕಾವ್ಯಾ, ಯು.ಜಿ. ವಿದ್ಯಾರ್ಥಿ, ಮಣಿಪಾಲ

ಸಮರ್ಥರಿಗೆ ಮತ ನೀಡಿದಲ್ಲಿ ಭದ್ರ ಬುನಾದಿಯ ಸರಕಾರ
ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಮತದಾನವು ಪ್ರತಿಯೋರ್ವರು ಹಕ್ಕು ಹಾಗೂ ಕರ್ತವ್ಯವಾಗಿದೆ. ಹೆಣ ಹೆಂಡ ಆಮಿಷಕ್ಕೆ ಬಲಿಯಾಗದೇ ಮತದಾನದ ಮಹತ್ವ ಅರಿತು ಸಮರ್ಥರಿಗೆ ಮತ ಚಲಾಯಿಸಿದಲ್ಲಿ ಭದ್ರ ಬುನಾದಿಯ ಸರಕಾರ ನಿರ್ಮಾಣ ಸಾಧ್ಯ. ನಮ್ಮ ನೈತಿಕ ಜವಾಬ್ದಾರಿಗಳನ್ನು ಪೂರೈಸಬೇಕು. ಅದಕ್ಕಾಗಿ ನಮ್ಮ ಮತ ಚಲಾವಣೆಯಾಗಬೇಕಿದೆ.
– ಪ್ರತಿಮಾ, ಸರಕಾರಿ ಪದವಿ ಕಾಲೇಜು, ಕೋಟೇಶ್ವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ