ಕೊರಗ ಕಾಲನಿಯ ಆಶಾಕಿರಣ ಜಲ್‌ಶಕ್ತಿ ಅಭಿಯಾನ್‌

ಕೇರಳದಲ್ಲಿ ಪ್ರಪ್ರಥಮ ಬಾರಿಗೆ ನೂತನ ಯೋಜನೆಗೆ ಚಾಲನೆ

Team Udayavani, Sep 10, 2019, 5:09 AM IST

ಬದಿಯಡ್ಕ : ಸತತವಾದ ಪರಿಸರ ನಾಶ, ಕಟ್ಟಡಗಳ ನಿರ್ಮಾಣ, ಪ್ಲಾಸ್ಟಿಕ್‌ ತ್ಯಾಜ್ಯಗಳಿಂದಾಗಿ ಭೂಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ನೀರಿಂಗಿಸಿ ಭೂಗರ್ಭದಲ್ಲಿ ಜಲಮಟ್ಟವನ್ನು ಸಂರಕ್ಷಿಸಬೇಕಾದ ಅನಿವಾರ್ಯ ಇದೆ. ಅದಕ್ಕೆ ಪೂರಕವಾದ ಹಲವಾರು ಯೋಜನೆಗಳು ಕಾರ್ಯಗತವಾಗುತ್ತಿರುವುದು ಕಂಡು ಬರುತ್ತದೆ. ಇಂಗು ಗುಂಡಿಗಳ ಮೂಲಕ ನೀರಿಂಗಿಸುವುದು, ಬಾವಿಗಳಿಗೆ ಮಳೆ ನೀರಿನ ಮರುಪೂರಣ ಮುಂತಾದ ಸೂತ್ರಗಳಲ್ಲದೆ ರಾಜ್ಯಾದ್ಯಂತ ಬಿದಿರಿನ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೂ ಚಾಲನೆ ನೀಡಲಾಗಿದೆ.

ಬಿದಿರಿನ ಬೇರುಗಳು ಹರಡುವ ಮೂಲಕ ಮಣ್ಣಿನ ಕೊರೆತವನ್ನು ತಡೆಗಟ್ಟುವುದಲ್ಲದೆ ನೀರಿಂಗಲೂ ಸಹಕರಿಸುತ್ತವೆ. ಅದರೊಂದಿಗೆ ಜಲ್‌ಶಕ್ತಿ ಅಭಿಯಾನ್‌ ಹೊಸ ಸಾಧ್ಯತೆಗಳತ್ತ ಮುಖ ಮಾಡಿರುವುದು ಜನರಲ್ಲಿ ಭರವಸೆಯನ್ನು ಮೂಡಿಸಿದೆ. ಇದರ ಭಾಗವಾಗಿ ಫಲವೃಕ್ಷಗಳಾದ ಹಲಸು, ಮಾವು, ಗೇರು ಮಾತ್ರವಲ್ಲದೆ ಬಹುಪಯೋಗಿ ಕಾಡುಬಳ್ಳಿ ಕುಕ್ಕುಸನ (ತುಳುವಿನ ಇಂಜಿರ, ಮಲಯಾಳಂನ ಪುಲ್ಲಾಂಜಿ) ಗಿಡವನ್ನು ಕಾಲನಿಗಳಲ್ಲಿ ನೆಟ್ಟು ಬೆಳೆಸುವ ಯೋಜನೆಗೆ ಚಾಲನೆ ನೀಡಲಾಗಿದೆ.

ಪುಲ್ಲಾಂಜಿ ಅಥವಾ ಕುಕ್ಕುಸನ ಬಳ್ಳಿ
ಕೊರಗ ಸಮುದಾಯದ ಕುಲಕಸುಬು ಬುಟ್ಟಿ ಹೆಣೆಯುವುದು. ಈ ಬುಟ್ಟಿಗಳನ್ನು ಕುಕ್ಕುಸನ ಬಳ್ಳಿಯಿಂದ ತಯಾರಿಸಲಾಗುತ್ತದೆ. ಕಾಡಲ್ಲಿ ಬೆಳೆಯುವ ಈ ಬಳ್ಳಿಗಳನ್ನು ಸಂಗ್ರಹಿಸಲು ಜಿಲ್ಲೆಯ ಕೊರಗ ಕಾಲನಿಗಳ ಸಮುದಾಯದವರು ಸುಳ್ಯ, ಪುತ್ತೂರು ಸೇರಿದಂತೆ ಕರ್ನಾಟಕ ಗಡಿಭಾಗದ ಕಾಡುಗಳತ್ತ ತೆರಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಜಲ್‌ಶಕ್ತಿ ಯೋಜನೆಯು ಸಹಕಾರಿಯಾಗಿದೆ. ಈ ಯೋಜನೆಯಂತೆ ನೀರಿಂಗಿಸುವ ಗುಣ ಹೊಂದಿರುವ ಪ್ರಾಕೃತಿಕವಾಗಿ ಲಭಿಸುವ ಕುಕ್ಕುಸನ ಬಳ್ಳಿಗಳನ್ನು ನಾಡಿನಲ್ಲೂ ಬೆಳೆಸಬಹುದೆಂದು ಸಂಶೋಧನೆಗಳಲ್ಲಿ ಸಾಬೀತಾಗಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಬೆಳೆದು ಉಪಯೋಗಕ್ಕೆ ಲಭ್ಯವಾಗುವ ಪುಲ್ಲಾಂಜಿ ಬಡವರ ಪಾಲಿನ ಆಶಾಕಿರಣವಾಗಿದೆ.

ಈ ಬಳ್ಳಿಗಳನ್ನು ಬುಟ್ಟಿ ಮುಂತಾದ ನಿತ್ಯೋಪಯೋಗಿ ವಸ್ತುಗಳ ತಯಾರಿಯಲ್ಲಿ ಮಾತ್ರವಲ್ಲದೆ ಆಲಂಕಾರಿಕ ವಸ್ತುಗಳ ತಯಾರಿಗೂ ಬಳಸಬಹುದು. ಆಕರ್ಷಣೀ ಯವಾದ ಕರಕುಶಲ ವಸ್ತುಗಳಿಗೆ, ವಿಶಿಷ್ಟ ಕಲಾಕೃತಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದ್ದು ಇದರಿಂದ ಕೊರಗ ಸಮುದಾಯದ ಆರ್ಥಿಕತೆಯನ್ನೂ ಬಲಗೊಳಿಸಲು ಸಾಧ್ಯ. ಕಾಲನಿಯ ಸುತ್ತಲಿನ ಪ್ರದೇಶಗಳಲ್ಲಿ ಕುಕ್ಕುಸನ ಬಳ್ಳಿಗಳಲ್ಲದೆ ಹಲಸು, ಮಾವು ಮುಂತಾದ ಫಲ ನೀಡುವ ಗಿಡ‌ಗಳನ್ನು ನೆಟ್ಟು ಆಹಾರ ಭದ್ರತೆಯನ್ನು ಒದಗಿಸಿ ಈ ಜನಾಂಗದ ಹಸಿವನ್ನು ಕಾಲನಿ ನಿವಾಸಿಗಳ ಜೀವನೋಪಾಯಕ್ಕಾಗಿ ಹಮ್ಮಿಕೊಂಡ ಈ ಯೋಜನೆಯನ್ನು ಸಮಗ್ರ ನಿರ್ವಹಣೆಯ ಮೂಲಕ ಯಶಸ್ವಿ ಗೊಳಿಸುವ ತನ್ಮೂಲಕ ಇಲ್ಲಿನ ಜನತೆಯು ಹೆಚ್ಚಿನ ಆದಾಯವನ್ನು ಗಳಿಸಿ ಇವರ ಜೀವನದಲ್ಲಿ ಬದಲಾವಣೆಯನ್ನು ಕಾಣಲು ಸಾಧ್ಯ.

ಕಾಲನಿಗಳಿಗೆ ಸಸಿಗಳ ವಿತರಣೆ
ಕೃಷಿ ಇಲಾಖೆ, ಕೃಷಿಕರ ಅಭಿವೃದ್ಧಿ ಇಲಾಖೆ ಹಾಗೂ ಬದಿಯಡ್ಕ ಗಾ.ಪಂ. ನೇತƒತ್ವದಲ್ಲಿ ಜಲ್‌ಶಕ್ತಿ ಅಭಿಯಾನ್‌ ಅಂಗವಾಗಿ ನೀರ್ಚಾಲು ಸಮೀಪದ ಮಾಡತ್ತಡ್ಕ ಕೊರಗ ಕೊಲನಿ ನಿವಾಸಿಗಳಿಗೆ ಫಲವೃಕ್ಷಗಳ ಗಿಡಗಳನ್ನು ಹಾಗೂ ಕುಕ್ಕುಸನ ಬಳ್ಳಿಗಳ ವಿತರಣೆಯನ್ನು ಜಿಲ್ಲಾಧಿಕಾರಿ ಜೀವನ್‌ಬಾಬು ನೆರವೇರಿಸಿದರು.

ಇಲ್ಲಿನ 9 ಕುಟುಂಬಗಳು ತಮ್ಮ ಜೀವನೋಪಾಯಕ್ಕೆ ದೂರದ ಕರ್ನಾಟಕದಿಂದ ಕಾಡುಬಳ್ಳಿಗಳನ್ನು ತರಬೇಕಾದ ಅನಿವಾರ್ಯತೆ ಇದೆ. ಇದನ್ನು ಮನಗಂಡು ಸಂಶೋಧನೆಗಳ ಮೂಲಕ ಕುಕ್ಕುಸನ (ಇಂಜಿರ)ವೆಂಬ ಕಾಡುಬಳ್ಳಿಯನ್ನು ವೈಜ್ಞಾನಿಕ ರೀತಿಯಲ್ಲಿ ಕೃಷಿಯ ಮಾಡುವ ಯೋಜನೆಗೆ ಚಾಲನೆ ನೀಡಲಾಯಿತು. ಇದಲ್ಲದೆ ಇಲ್ಲಿ ಕರಕುಶಲ ವಸ್ತುಗಳ ನಿರ್ಮಾಣಕ್ಕೆ ತರಬೇತಿಯನ್ನೂ ನೀಡುವ ಮೂಲಕ ಇವರ ಸಮಗ್ರ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಸಭೆಯ ಅಧ್ಯಕ್ಷತೆ. ವಹಿಸಿದ್ದರು. ಕೃಷಿ ಇಲಾಖೆಯ ಉಪನಿರ್ದೇಶಕ ಜೋನ್‌ ಜೋಸೆಫ್‌ ಮಾತನಾಡಿದರು. ಬದಿಯಡ್ಕ ಗ್ರಾ.ಪಂ. ವಾರ್ಡ್‌ ಸದಸ್ಯ ಡಿ. ಶಂಕರ, ಜಿಲ್ಲಾ ಕೃಷಿ ಅಧಿಕಾರಿ ಮಧು ಜೋರ್ಜ್‌, ಬದಿಯಡ್ಕ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಕಾರ್ಯದರ್ಶಿ ಪ್ರದೀಪ್‌, ಸದಸ್ಯರಾದ ಜಯಶ್ರೀ, ಪ್ರೊಮೋಟರ್‌ ಗೋಪಾಲನ್‌, ಸಹಾಯಕ ಕೃಷಿ ಅಧಿಕಾರಿ ಜಯರಾಂ ಮತ್ತಿತರರು ಪಾಲ್ಗೊಂಡಿದ್ದರು. ಕೃಷಿ ಇಲಾಖೆಯ ಸಹಾಯಕ ಉಪನಿರ್ದೇಶಕ ಆನಂದ ಕೆ. ಸ್ವಾಗತಿಸಿ, ಬದಿಯಡ್ಕ ಕೃಷಿಭವನದ ಅಧಿಕಾರಿ ಮೀರಾ ವಂದಿಸಿದರು.

ಸಮಗ್ರ ಅಭಿವೃದ್ಧಿ
ಮಾಡತ್ತಡ್ಕ ಕೊರಗ ಕಾಲನಿಯ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯ ಲ್ಲಿಟ್ಟುಕೊಂಡು ಅವರ ಆಹಾರ ಭದ್ರತೆ ಹಾಗೂ ಆದಾಯವನ್ನು ಹತ್ತು ಪಟ್ಟು ಹೆಚ್ಚಳಗೊಳಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕುಲಕಸುಬಾದ ಬುಟ್ಟಿಹೆಣೆಯುವ ವೃತ್ತಿಗೆ ಅನುಕೂಲವಾಗುವಂತೆ ಕಾಡುಬಳ್ಳಿಗಳು ಸ್ಥಳದಲ್ಲೇ ಲಭ್ಯವಾಗುವಂತೆ ಅಗತ್ಯವುಳ್ಳ ಸೌಲಭ್ಯವನ್ನು ಒದಗಿಸಲಾಗುವುದು. ಕೊರಗ ಸಮುದಾಯವು ಎಲ್ಲ ಪಂಗಡಗ ಳಂತೆ ಮುಖ್ಯವಾಹಿನಿಗೆ ಬರಬೇಕು.
– ಡಾ| ಡಿ. ಸಜಿತ್‌ ಬಾಬು,
ಕಾಸರಗೋಡು ಜಿಲ್ಲಾಧಿಕಾರಿ

-  ಅಖೀಲೇಶ್‌ ನಗುಮುಗಂ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ