ಕೇರಳದಲ್ಲಿ ಮೆಟ್ರೋ ಬದಲು ಸ್ಕೈಬಸ್‌ನತ್ತ ಕೇಂದ್ರದ ಒಲವು

ರಾಜ್ಯ ಸರಕಾರದ ಆಸಕ್ತಿ ಮೇಲೆ ಅವಲಂಬಿತ

Team Udayavani, Jun 20, 2019, 5:59 AM IST

ಕಾಸರಗೋಡು: ಕೇರಳದಲ್ಲಿ ಮೆಟ್ರೋ ಬದಲು ಸ್ಕೈಬಸ್‌ ಯೋಜನೆ ಸಾಕಾರ ಗೊಳಿಸಲು ಕೇಂದ್ರ ಸರಕಾರ ಆಸಕ್ತಿಯನ್ನು ವ್ಯಕ್ತಪಡಿ ಸಿದೆ. ಮೆಟ್ರೋ ರೈಲ್ವೇ ಯೋಜನೆಗೆ ಅಗತ್ಯವಿರುವ ಮೊತ್ತಕ್ಕಿಂತ ನಾಲ್ಕನೇ ಒಂದಷ್ಟರಷ್ಟು ಮೊತ್ತ ಸಾಕು ಸ್ಕೈಬಸ್‌ಗೆ. ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶ ದಿಂದ ಕೇರಳದಲ್ಲಿ ಮೆಟ್ರೋ ರೈಲಿಗೆ ಬದಲಿಯಾಗಿ ಸ್ಕೈಬಸ್‌ ಸಾಕಾರಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಈ ಬಗ್ಗೆ ಕೇರಳ ಸರಕಾರ ಆಸಕ್ತಿಯ ಮೇಲೆ ಕೇರಳದಲ್ಲಿ ಸ್ಕೈಬಸ್‌ ಸಾಕಾರಗೊಳ್ಳಲಿದೆ.

ಮೆಟ್ರೋ ರೈಲ್ವೇಯನ್ನು ತುಲನೆ ಮಾಡಿದರೆ ಸ್ಕೈಬಸ್‌ ಯೋಜನೆ ವೆಚ್ಚ ಬಹಳಷ್ಟು ಕಡಿಮೆ. ಅಲ್ಲದೆ ಮೆಟ್ರೋಕ್ಕಿಂತ ಉತ್ತಮ ನಿರ್ವಹಣೆಯನ್ನು ನಿರೀಕ್ಷಿಸಬಹುದು. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮೆಟ್ರೋಕ್ಕಿಂತ ಸ್ಕೈಬಸ್‌ ಹೆಚ್ಚು ಪ್ರಯೋಜನಕಾರಿ ಎಂಬುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ದೇಶದ 18 ನಗರ ಪ್ರದೇಶಗಳಲ್ಲಿ ಸ್ಕೈಬಸ್‌ ಆರಂಭಿಸಲು ಆಯಾಯ ರಾಜ್ಯ ಸರಕಾರ ಕೇಂದ್ರ ಸರಕಾರವನ್ನು ವಿನಂತಿಸಿದೆ. ಇದೇ ರೀತಿ ಕೇರಳವೂ ಸ್ಕೈಬಸ್‌ ಆರಂಭಿಸಲು ಮುಂದಾದರೆ ಎಲ್ಲ್ಲ ನೆರವು ನೀಡಲು ಕೇಂದ್ರ ಸರಕಾರ ಸಿದ್ಧ ಎಂದು ಗಡ್ಕರಿ ಹೇಳಿದ್ದಾರೆ.

ಮೆಟ್ರೋ ರೈಲ್ವೇ ಯೋಜನೆಯನ್ನು ಸಾಕಾರ ಗೊಳಿಸಲು ಒಂದು ಕಿಲೋ ಮೀಟರ್‌ ದೂರದ ನಿರ್ಮಾಣಕ್ಕೆ 350 ಕೋಟಿ ರೂ. ವೆಚ್ಚವಾಗುವುದು. ಆದರೆ ಅದೇ ಸಂದರ್ಭದಲ್ಲಿ ಸ್ಕೈಬಸ್‌ ಯೋಜನೆಗೆ ಒಂದು ಕಿಲೋ ಮೀಟರ್‌ ದೂರಕ್ಕೆ ತಗಲುವ ವೆಚ್ಚ ಕೇವಲ 50 ಕೋಟಿ ರೂಪಾಯಿಯಾಗಿದೆ. ಸಣ್ಣ ಸ್ಕೈಬಸ್‌ ಏಕ ಕಾಲದಲ್ಲಿ 300ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ನಿರ್ಮಾಣ ವೆಚ್ಚವೂ ಬಹಳಷ್ಟು ಕಡಿಮೆ. ಇದಕ್ಕಾಗಿ ಡಬಲ್ ಡೆಕ್ಕರ್‌ ಸ್ಕೈಬಸ್‌ಗಳನ್ನು ದೇಶದಲ್ಲಿ ನಿರ್ಮಿಸಲು ಯೋಜನೆ ಸಿದ್ಧವಾಗುತ್ತಿದೆ.

ಪಿಲ್ಲರ್‌ಗಳಲ್ಲಿ ಆಗಸದಲ್ಲಿ ನಿಂತಿರುವ ಹಳಿಯಲ್ಲಿ ಸಾಗುವ ಡಬಲ್ ಡೆಕ್ಕರ್‌ ಸ್ಕೈಬಸ್‌ಗಳು ಲಾಭದಾಯಕವಾಗಿವೆ. ಭೂಸ್ವಾಧೀನವೂ ಕಡಿಮೆಯಾಗಿದೆ. ಪಿಲ್ಲರ್‌ಗಳನ್ನು ಸ್ಥಾಪಿಸಲು ರಸ್ತೆಯ ಮಧ್ಯ ಭಾಗದಲ್ಲಿ ಅಲ್ಪ ಸ್ಥಳ ಸಾಕು. ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗಳಲ್ಲಿ ಪಿಲ್ಲರ್‌ಗಳನ್ನು ಸ್ಥಾಪಿಸಬಹುದು. ಎರಡನೇ ಯಾದಿಯಲ್ಲಿರುವ ನಗರ ಪ್ರದೇಶಗಳಲ್ಲಿ ಸ್ಕೈಬಸ್‌ ಹೆಚ್ಚು ಪ್ರಯೋಜನಕಾರಿಯಾಗಿದ್ದು, ಮೆಟ್ರೋ ರೈಲ್ವೇ ಅಥವಾ ಲೈಟ್ ಮೆಟ್ರೋ ನಿರ್ಮಾಣಕ್ಕೆ ತಗಲುವ ಒಟ್ಟು ವೆಚ್ಚದ ನಾಲ್ಕನೇ ಒಂದು ಪಾಲಿನ ವೆಚ್ಚದಲ್ಲಿ ಸ್ಕೈಬಸ್‌ ಯೋಜನೆಯನ್ನು ಜಾರಿಗೆ ತರಬಹುದು.

ಸಸ್ಪೆಂಡೆಡ್‌ ರೈಲ್
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಬಳಸುವ ತಾಂತ್ರಿಕತೆಯಾಗಿದೆ ಸಸ್ಪೆಂಡೆಡ್‌ ರೈಲ್. ಮೋನೋ ರೈಲ್ವೇಯ ಇನ್ನೊಂದು ರೂಪವಾಗಿದೆ. ಆಗಸದಲ್ಲಿ ಹಳಿಯಲ್ಲಿ ತೂಗುವ ರೀತಿಯಲ್ಲಿ ಇದರ ಪ್ರಯಾಣ ನಡೆಯಲಿದೆ. ಟ್ರಾಫಿಕ್‌ ಹೆಚ್ಚಿರುವ ಸ್ಥಳಗಳಲ್ಲಿ ಇದರ ಪ್ರಯೋಜನ ಅಧಿಕವಾಗಿದೆ. ಪಿಲ್ಲರ್‌ಗಳಲ್ಲಿ ಕಾರ್ಯಾಚರಿಸುತ್ತಿರುವುದರಿಂದ ಅಧಿಕ ಸ್ಥಳದ ಅಗತ್ಯವಿಲ್ಲ ಎಂಬುದು ಇದರ ವಿಶೇಷತೆಯಾಗಿದೆ. ರಸ್ತೆಗಳ ಮೇಲ್ಭಾಗದಲ್ಲಿ ರೈಲು ಹಳಿಯನ್ನು ನಿರ್ಮಿಸಲು ಸಾಧ್ಯವಾಗುವುದು ಕೂಡ ಇದರ ಇನ್ನೊಂದು ವಿಶೇಷವಾಗಿದೆ.

ಸಕಲ ನೆರವಿಗೆ ಸಿದ್ಧ

ಕೇರಳ ಸರಕಾರ ಆಸಕ್ತಿಯಿಂದ ಮುಂದೆ ಬಂದರೆ ಕೇರಳದಲ್ಲಿ ಮೆಟ್ರೋ ರೈಲು ಬದಲಿಯಾಗಿ ಸ್ಕೈಬಸ್‌ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಇದಕ್ಕೆ ಅಗತ್ಯದ ಎಲ್ಲ ನೆರವನ್ನು ನೀಡಲಾಗುವುದು. ದೇಶದ 18 ನಗರಗಳಲ್ಲಿ ಸ್ಕೈಬಸ್‌ ಯೋಜನೆಯನ್ನು ಸಾಕಾರಗೊಳಿಸಲಾಗುವುದು. ಕೇರಳದಲ್ಲೂ ಸ್ಕೈಬಸ್‌ ಸ್ಥಾಪಿಸಿಲು ಕೇಂದ್ರ ಸರಕಾರ ಉತ್ಸುಕವಾಗಿದೆ.
– ನಿತಿನ್‌ ಗಡ್ಕರಿ

ಕೇಂದ್ರ ಸಾರಿಗೆ ಸಚಿವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ