ತಲಪಾಡಿ ದಾಟಿದರೆ ಅಪಾಯಕಾರಿ ಹೊಂಡಗುಂಡಿ ರಸ್ತೆ

ಕೇರಳಕ್ಕೆ ಸ್ವಾಗತಿಸುವ ಹದಗೆಟ್ಟ ರಸ್ತೆ

Team Udayavani, Jul 13, 2019, 5:54 AM IST

ಕಾಸರಗೋಡು: ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ರಾಜ್ಯಗಳಲ್ಲಿ ಪೂರ್ಣಗೊಂಡಿದೆ. ಕರ್ನಾಟಕದಲ್ಲೂ ಬಹುತೇಕ ಪೂರ್ಣಗೊಂಡಿದೆ. ಆದರೆ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಇನ್ನೂ ಚಾಲನೆ ಲಭಿಸಿಲ್ಲ. ಈ ಬಗ್ಗೆ ಹೆಚ್ಚಿನ ಪ್ರಕ್ರಿಯೆಯೂ ನಡೆದಿಲ್ಲ. ಶೀಘ್ರವೇ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದೆಂದು ಕೇರಳ ರಾಜ್ಯ ಸರಕಾರ ಹಲವು ಬಾರಿ ಘೋಷಣೆ ಮಾಡಿದ್ದರೂ, ಇನ್ನೂ ಕೂಡ ಕಾಮಗಾರಿ ಆರಂಭಗೊಂಡಿಲ್ಲ. ಹೆಚ್ಚೇಕೆ ಪ್ರಾಥಮಿಕ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

ಮಂಗಳೂರಿನಿಂದ ಕಾಸರಗೋಡಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪಾಡಿಯಲ್ಲಿರುವ ಟೋಲ್‌ ಗೇಟ್‌ ಕಳೆದು ಕೇರಳಕ್ಕೆ ಪ್ರವೇಶಿಸುತ್ತಿದ್ದಂತೆ ಕೇರಳದ ರಸ್ತೆಯ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಸಿಗುತ್ತದೆ. ಕೇರಳದ ಪ್ರದೇಶದಲ್ಲಿ ತಲಪಾಡಿ ಬಸ್‌ ತಂಗುದಾಣದಿಂದ ಕೆಲವೇ ಅಂತರದಲ್ಲಿ ಮುಂದೆ ಸಾಗಿದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಬೃಹತ್‌ ಹೊಂಡ ಪ್ರಯಾಣಿಕರನ್ನು, ವಾಹನಗಳನ್ನು ಸ್ವಾಗತಿಸುತ್ತವೆ. ತಲಪಾಡಿ ಪ್ರವೇಶಿಸುವಾಗಲೇ ಕರ್ನಾಟಕ ಮತ್ತು ಕೇರಳದ ರಾಷ್ಟ್ರೀಯ ಹೆದ್ದಾರಿಯ ಬಗ್ಗೆ ಇರುವ ಗುಣಮಟ್ಟದ ಅಂತರವನ್ನು ಸೂಚಿಸುತ್ತದೆ. ತಲಪಾಡಿಯಿಂದ ಮಂಗಳೂರಿನ ವರೆಗೆ ಚತುಷ್ಪಥ ರಸ್ತೆ ಪೂರ್ಣಗೊಂಡು ವರ್ಷಗಳೇ ಸಂದರೂ, ಕೇರಳದ ತಲಪಾಡಿಯ ದಕ್ಷಿಣಕ್ಕೆ ರಾ. ಹೆದ್ದಾರಿಯ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಅಗಲ ಕಿರಿದಾದ ರಸ್ತೆ. ಜತೆಯಲ್ಲಿ ರಸ್ತೆಯ ಅಲ್ಲಲ್ಲಿ ಹೊಂಡಗುಂಡಿಗಳು ಎದುರಾಗುತ್ತವೆ. ತಲಪಾಡಿಯಲ್ಲಂತೂ ಬೃಹತ್‌ ಗಾತ್ರದ ಹೊಂಡ ಬಿದ್ದು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಸರಕಾರ ಹಾಗೂ ಸ್ಥಳೀಯಾಡಳಿತೆ ಸಂಸ್ಥೆಗಳು ರಸ್ತೆ ದುರಸ್ತಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಎಲ್ಲಿ ರಸ್ತೆ ದುರಸ್ತಿಯಾಗಿದೆ, ಎಷ್ಟು ಸಮರ್ಪಕವಾಗಿ ನಡೆದಿದೆ ಎಂಬುದರ ಬಗ್ಗೆ ಪಟ್ಟಿ ತಯಾರಿಸ ಹೊರಟರೆ ರಸ್ತೆ ದುರಸ್ತಿಯಾದದ್ದು, ರಸ್ತೆ ದುರಸ್ತಿಯಾಗಿದ್ದರೂ ಕೆಲವೇ ದಿನಗಳಲ್ಲಿ ಕೆಟ್ಟು ಹೋಗಿ ಮತ್ತೆ ಅದೇ ಹಳೆಯ ಸ್ಥಿತಿಗೆ ತಲುಪಿರುವ ಬಗ್ಗೆ ಮಾಹಿತಿಯೇ ಲಭಿಸುವುದಿಲ್ಲ. ಅಂದರೆ ರಸ್ತೆ ದುರಸ್ತಿ ಮತ್ತು ನವೀಕರಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸರಕಾರದ ಖಜಾನೆಯಿಂದ ಖಾಲಿಯಾಗಿರುತ್ತದೆ. ಆದರೆ ಹಣ ಎಲ್ಲಿಗೆ ಹೋಯಿತು. ಯಾರ ಕೈಗೆ ಸೇರಿತು ಎಂಬ ಬಗ್ಗೆ ಎಲ್ಲವೂ ನಿಗೂಢವಾಗಿರುತ್ತದೆ.

ಇಂತಹ ಪರಿಸ್ಥಿತಿ ಕಾಸರಗೋಡು ಜಿಲ್ಲೆಯಲ್ಲೂ ಹಲವು ನಡೆದಿವೆೆ. ಈ ಬಗ್ಗೆ ಯಾರೂ ತಲೆಕೆಡಿಸಿ ಕೊಂಡಂತಿಲ್ಲ. ಕಾಸರಗೋಡಿನಿಂದ ಮಂಗಳೂರಿನ ತನಕ ರಾಷ್ಟ್ರೀಯ ಹೆದ್ದಾರಿ ಪದೇ ಪದೆ ದುರಸ್ತಿಯಾಗುತ್ತಲೇ ಇರುತ್ತದೆ. ಕೆಲವೆಡೆ ನವೀಕರಣವಾಗುತ್ತದೆ. ಆದರೆ ಮತ್ತೆ ಕೆಲವು ದಿನಗಳಲ್ಲೇ ಹಳೆಯ ಸ್ಥಿತಿಗೆ ತಲುಪುತ್ತಿದೆ. ಇದೇ ರೀತಿಯಲ್ಲಿ ಕಾಸರಗೋಡು ಜಿಲ್ಲೆಯ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳು ಇದೇ ಪರಿಸ್ಥಿತಿಗೆ ಬಂದಿದೆ. ರಸ್ತೆಯಲ್ಲಿ ಸೃಷ್ಟಿಯಾಗಿರುವ ಭೀಮ ಗಾತ್ರದ ಹೊಂಡ ಅಪಾಯವನ್ನು ಕೈಬೀಸಿ ಕರೆಯುತ್ತಿದೆ.

ಸಂಭವನೀಯ ದುರಂತವನ್ನು ತಪ್ಪಿಸಲು ಸಂಬಂಧ‌ಪಟ್ಟವರು ಶೀಘ್ರವೇ ರಸ್ತೆ ದುರಸ್ತಿಗೆ ಮುಂದಾಗಬೇಕಾಗಿದೆ. ರಸ್ತೆಯ ಹೊಂಡ ಮುಚ್ಚಿ ಹೊಂಡಕ್ಕೆ ಬೀಳುವ ವಾಹನಗಳನ್ನು ರಕ್ಷಿಸಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸುವರೇ ?

ದುರಸ್ತಿ ಎಂದು?
ರಸ್ತೆಯಲ್ಲೇ ನಿರ್ಮಾಣವಾಗಿರುವ ಬೃಹತ್‌ ಹೊಂಡದಿಂದಾಗಿ ಪದೇ ಪದೇ ವಾಹನ ಅಪ ಘಾತ ಸಂಭವಿಸುತ್ತಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಸುಗಮವಾಗಿ ವಾಹನ ಸಾಗಲು ಸಾಧ್ಯವಾಗದೆ ರಸ್ತೆ ತಡೆ, ವಾಹನ ದಟ್ಟಣೆಗೂ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಅಡ್ಡಾ ದಿಡ್ಡಿಯಾಗಿ ನಿಂತಿರುವ ವಾಹನಗಳ ಮಧ್ಯೆ ನುಸುಳಿ ಸಾಗುತ್ತಿವೆ. ಇದೂ ಅಪಘಾತಕ್ಕೆ ಪ್ರಮುಖ ಕಾರಣವಾಗುತ್ತಿದೆ. ರಸ್ತೆಯ ಡಾಮರು ಕಿತ್ತುಹೋಗಿ ಜಲ್ಲಿ ಮೇಲೆದ್ದು, ಬೃಹತ್‌ ಗಾತ್ರದ ಹೊಂಡ ಸೃಷ್ಟಿಯಾಗಿದೆ. ಹೊಂಡದಿಂದಾಗಿ ವಾಹನ ಸಾಗುವಾಗ ಜಲ್ಲಿ ಸಿಡಿದು ರಸ್ತೆ ಬದಿ ತೆರಳುವ ಪಾದಚಾರಿ ಗಳಿಗೂ ಬಡಿದು ಹಲವಾರು ಮಂದಿ ಗಾಯ ಗೊಂಡಿದ್ದಾರೆ. ದಿನದಿಂದ ದಿನಕ್ಕೆ ಈ ಹೊಂಡ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇನ್ನಷ್ಟು ಅಪಾಯಕಾರಿಯಾಗಿ ಮುನ್ನುಗುತ್ತಿದೆ. ಜನ ದಟ್ಟಣೆಯ ಪ್ರದೇಶವಾಗಿರುವ ಹೆದ್ದಾರಿಯ ಪರಿಸ್ಥಿತಿಯೇ ಹೀಗಾದರೆ ಇನ್ನಿತರ ರಸ್ತೆಗಳ ಸ್ಥಿತಿ ಹೇಗಿರಬೇಕು ಎಂಬುದು ಊಹಿಸುವುದೂ ಕಷ್ಟ.


ಚಿತ್ರ: ಶ್ರೀಕಾಂತ್‌ ಕಾಸರಗೋಡು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ