ಜನರಲ್‌ ಆಸ್ಪತ್ರೆ: ಆ್ಯಂಬುಲೆನ್ಸ್‌  ಸಾಗಲು ದಾರಿಯಿಲ್ಲ

Team Udayavani, Sep 6, 2019, 5:41 AM IST

ಜನರಲ್‌ ಆಸ್ಪತ್ರೆಗೆ ಸಾಗಲು ತೆರಳಲು ರಸ್ತೆಯಲ್ಲಿ ಅಡ್ಡಾದಿಡ್ಡಿ ಸಾಗುವ ವಾಹನಗಳು.

ಕಾಸರಗೋಡು: ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗುತ್ತಿದ್ದರೂ ಕಾಸರಗೋಡು ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಮಿತಿ ಮೀರುತ್ತಿದೆ.

ಆದರೆ ವಾಹನಗಳಿಗೆ ಸುಗಮವಾಗಿ ಸಾಗಲು ವ್ಯವಸ್ಥಿತವಾಗಿ ರಸ್ತೆಯಾಗಲಿ, ಪೊಲೀಸ್‌ ಸೇವೆಯಾಗಲಿ ಲಭ್ಯವಿಲ್ಲ. ಅಲ್ಲದೆ ವಾಹನ ಚಾಲಕರೂ ಟ್ರಾಫಿಕ್‌ ನಿಯಮ ಉಲ್ಲಂಘಿಸುತ್ತಿರುವುದು ಇಲ್ಲಿ ಸಾಮಾನ್ಯವಾಗಿದೆ. ಇದರಿಂದಾಗಿ ನಿಗದಿತ ಸಮಯಕ್ಕೆ ತಲುಪಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂಬುದು ಅಷ್ಟೇ ಸತ್ಯ. ರೋಗಿಗಳನ್ನು ಸಾಗಿಸುವ ಆ್ಯಂಬುಲೆನ್ಸ್‌ ಗಳು ವಾಹನ ದಟ್ಟಣೆಯಿಂದ ರಸ್ತೆ ಮಧ್ಯೆ ಸಿಲುಕಿಕೊಳ್ಳುವುದು ಸಾಮಾನ್ಯವಾಗಿದೆ. ಈ ಕಾರಣದಿಂದ ಆ್ಯಂಬುಲೆನ್ಸ್‌ ನಲ್ಲಿರುವ ರೋಗಿಗಳನ್ನು ಕ್ಷಿಪ್ರವಾಗಿ ಆಸ್ಪತ್ರೆಗಳಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ವಾಹನ ದಟ್ಟಣೆಯ ಪರಿಣಾಮವಾಗಿ ಕಾಸರಗೋಡು ನಗರದಲ್ಲಿರುವ ಜನರಲ್‌ ಆಸ್ಪತ್ರೆಗೆ ರೋಗಿಗಳನ್ನು ಹೊತ್ತು ತರುವ ಆ್ಯಂಬುಲೆನ್ಸ್‌ಗಳಿಗೆ ಆಸ್ಪತ್ರೆಗೆ ತಲುಪಲು ಸುಲಭ ಸಾಧ್ಯವಾಗುವುದಿಲ್ಲ. ಇಲ್ಲಿಂದ ಮಂಗಳೂರಿಗೋ ಅಥವಾ ಇತರ ಆಸ್ಪತ್ರೆಗಳಿಗೋ ಸಾಗಿಸಲು ಬಹಳಷ್ಟು ಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ.

ಕಾಸರಗೋಡು ನಗರದ ಪ್ರಮುಖ ಸರಕಾರಿ ಆಸ್ಪತ್ರೆಯಾಗಿರುವ ಜನರಲ್‌ ಆಸ್ಪತ್ರೆಗೆ ಸಾಗಲು ಮೊದಲೇ ರಸ್ತೆ ಅಗಲ ಕಿರಿದಾಗಿದೆ. ಈ ರಸ್ತೆಯಲ್ಲಿ ಸಾಗುವ ವಾಹನಗಳು ಅಡ್ಡಾದಿಡ್ಡಿಯಾಗಿ ಸಾಗುತ್ತಿರುವುದರಿಂದ ಆ್ಯಂಬುಲೆನ್ಸ್‌ ಗಳಿಗೆ ಆಸ್ಪತ್ರೆಯಿಂದ ಹೊರ ಹೋಗಲು ಅಥವಾ ಆಸ್ಪತ್ರೆಗೆ ರೋಗಿಗಳನ್ನು ಸುಗಮವಾಗಿ ತರಲು ಸಾಧ್ಯವಾಗುತ್ತಿಲ್ಲ. ಕೆಲವರಂತೂ ಆಸ್ಪತ್ರೆಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ಪಾರ್ಕ್‌ ಮಾಡುವುದೂ ಇದೆ. ಇದರಿಂದಾಗಿ ಆ್ಯಂಬುಲೆನ್ಸ್‌ ಸಾಗಲು ಸಾಧ್ಯವಾಗುತ್ತಿಲ್ಲ. ಆ್ಯಂಬುಲೆನ್ಸ್‌ ಚಾಲಕರು ವಾಹನವನ್ನು ಆಸ್ಪತ್ರೆಯಿಂದ ರಸ್ತೆಗೆ ಇಳಿಸಬೇಕಾದರೆ ಸರಸಾಹಸ ಮಾಡಬೇಕಾದ ಪರಿಸ್ಥಿತಿ ಇದೆ.

ಆಸ್ಪತ್ರೆ ರಸ್ತೆಯ ಮಹಾದ್ವಾರದಿಂದ ಆಸ್ಪತ್ರೆ ವರೆಗಿನ ರಸ್ತೆ ಬದಿಯಲ್ಲಿ ಖಾಸಗಿ ವ್ಯಕ್ತಿಗಳು ವಾಹನಗಳನ್ನು ಪಾರ್ಕ್‌ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪಾರ್ಕ್‌ ಮಾಡುವ ವ್ಯಕ್ತಿಗಳಲ್ಲಿ ರಸ್ತೆ ಬಿಟ್ಟು ಪಾರ್ಕ್‌ ಮಾಡುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ ಈ ಮಾತಿಗೆ ಬೆಲೆಯೇ ಇಲ್ಲದಂತೆ ಮತ್ತೆ ಮತ್ತೆ ರಸ್ತೆ ಬದಿಯಲ್ಲೇ ವಾಹನ ಪಾರ್ಕ್‌ ಮಾಡುತ್ತಿದ್ದಾರೆ. ಇದರಿಂದಾಗಿ ಆ್ಯಂಬುಲೆನ್ಸ್‌ ನಲ್ಲಿರುವ ರೋಗಿಗಳನ್ನು ಜನರಲ್‌ ಆಸ್ಪತ್ರೆಗೆ ಸಾಗಿಸಲು ಹರಸಾಹಸ ಮಾಡಬೇಕಾಗುತ್ತದೆ. ಅಲ್ಲದೆ ಜನರಲ್‌ ಆಸ್ಪತ್ರೆಯಿಂದ ರೋಗಿಗಳನ್ನು ಮಂಗಳೂರಿಗೋ ಅಥವಾ ಇತರ ಆಸ್ಪತ್ರೆಗಳಿಗೋ ಸಾಗಿಸಲು ಚಾಲಕರು ಆ್ಯಂಬುಲೆನ್ಸ್‌ನ್ನು ಆಸ್ಪತ್ರೆಯಿಂದ ಹೊರ ತರಲು ಕಷ್ಟ ಪಡುತ್ತಿರುವುದನ್ನು ಕಾಣಬಹುದು.

ಸಂಕಷ್ಟ
ಜನರಲ್‌ ಆಸ್ಪತ್ರೆಯಿಂದ ಆ್ಯಂಬುಲೆನ್ಸ್‌ನ್ನು ಕಷ್ಟಪಟ್ಟು ಹೊರತಂದು ಮುಖ್ಯ ರಸ್ತೆಗೆ ಸಾಗಿದರೂ ಈ ರಸ್ತೆಯಲ್ಲೂ ವಾಹನ ದಟ್ಟಣೆಯಿಂದಾಗಿ ಸುಗಮ ವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಇದೀಗ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ತಲಪಾಡಿಯ ವರೆಗಿನ ರಸ್ತೆಯಲ್ಲಿ ಸೃಷ್ಟಿಯಾಗಿರುವ ಬೃಹತ್‌ ಗಾತ್ರದ ಹೊಂಡಗಳಿಂದಾಗಿ ಆ್ಯಂಬುಲೆನ್ಸ್‌ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ರೋಗಿಗಳ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಜೀವಕ್ಕೂ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಆ್ಯಂಬುಲೆನ್ಸ್‌ ನಲ್ಲಿ ಮಹಿಳೆಯರನ್ನು ಹೆರಿಗೆಗಾಗಿ ಸಾಗಿಸುವಾಗ ಇನ್ನಷ್ಟು ಅಪಾಯಕಾರಿ ಯಾಗಿರುತ್ತದೆ. ರಸ್ತೆಯ ಹೊಂಡಗಳಲ್ಲಿ ಬಿದ್ದು, ಎದ್ದು ಹೋಗುವಾಗ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆಯಾದರೂ ಅಚ್ಚರಿಯಿಲ್ಲ ಎಂದು ಆ್ಯಂಬುಲೆನ್ಸ್‌ ಚಾಲಕರೇ ಹೇಳುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ