ಆಫ್ರಿಕನ್‌ ಬಸವನ ಹುಳು ಪತ್ತೆ

ಮೀಂಜ, ಪೈವಳಿಕೆ ಗ್ರಾಮ ಪಂಚಾಯತ್‌ ವ್ಯಾಪ್ತಿ

Team Udayavani, Aug 17, 2019, 5:35 AM IST

ಕಾಸರಗೋಡು: ಮಂಜೇಶ್ವರ ತಾಲೂಕಿನ ಮೀಂಜ, ಪೈವಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೃಹತ್‌ ಗಾತ್ರದ ಆಫ್ರಿಕನ್‌ ಬಸವನ ಹುಳುಗಳು (ಅಚಟಿನಾ ಫುಲಿಕಾ) ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮೀಂಜ ಗ್ರಾಮ ಪಂಚಾಯತ್‌ನಲ್ಲಿ ನಡೆದ ತಿಳಿವಳಿಕೆ ಶಿಬಿರದಲ್ಲಿ ಬಸವನ ಹುಳುಗಳ ಉಪಟಳವನ್ನು ತಪ್ಪಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೇರಾ ಗಾಂವ್‌, ಮೇರಾ ಗೌರವ್‌ (ನನ್ನ ಊರು, ನನ್ನ ಹೆಮ್ಮೆ) ಯೋಜನೆಯಡಿ ಐಸಿಎಆರ್‌- ಸಿಪಿಸಿಆರ್‌ಐ ವಿಜ್ಞಾನಿಗಳ ತಂಡವು ಸ್ಥಳೀಯ ಕೃಷಿಕರು ಸಹಿತ ಜನಸಾಮಾನ್ಯರಿಗೆ ಕೃಷಿಗೆ ರೋಗ ಬಾಧೆಯನ್ನು ತಡೆಯುವ ನಿಟ್ಟಿನ ಮಾಹಿತಿಯನ್ನು ನೀಡಿತು.

ಕೃಷಿ ಇಲಾಖೆ ಅಧೀನದಲ್ಲಿ ನಡೆದ ಸಭೆಯಲ್ಲಿ ಸಿಪಿಸಿಆರ್‌ಐ ಮುಖ್ಯ ವಿಜ್ಞಾನಿ ಡಾ| ಸಿ ತಂಬಾನ್‌ ಬೃಹತ್‌ ಆಫ್ರಿಕನ್‌ ಬಸವನ ಹುಳು ಉಪಟಳವನ್ನು ತಡೆಯುವ ಬಗ್ಗೆ ಮಾಹಿತಿ ನೀಡಿದರು. ಡಾ| ಕೆ.ಬಿ ಹೆಬ್ಟಾರ್‌, ಡಾ| ವಿನಾಯಕ ಹೆಗ್ಡೆ, ಡಾ| ಎಂ.ಕೆ ರಾಜೇಶ್‌, ಡಾ| ಪಿ.ಎಸ್‌ ಪ್ರತಿಭಾ, ಡಾ| ಎಸ್‌. ನೀನು, ಆತ್ಮಾ ಯೋಜನಾ ನಿರ್ದೇಶಕಿ ಸುಷ್ಮಾ, ಆತ್ಮಾ ಉಪ ನಿರ್ದೇಶಕ ಕೆ.ಸಜೀವ ಕುಮಾರ್‌, ಮೀಂಜ ಗ್ರಾ.ಪಂ. ಸದಸ್ಯೆ ಶಾಲಿನಿ ಶೆಟ್ಟಿ, ಮೀಂಜ ಕೃಷಿ ಭವನದ ಕೃಷಿ ಅಧಿಕಾರಿ ಸಜು, ಪೈವಳಿಕೆ ಕೃಷಿ ಭವನದ ಕೃಷಿ ಅಧಿಕಾರಿ ಅಂಜನಾ ಇದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿವಿಧ ತಂಡಗಳನ್ನು ರಚಿಸಿ ಕ್ಷೇತ್ರ ವೀಕ್ಷಣೆ ಮಾಡಲಾಯಿತು. ಕೃಷಿ ಅಧಿಕಾರಿ ಸಜು ಸ್ವಾಗತಿಸಿದರು. ಸಿಪಿಸಿಆರ್‌ಐ ನ ಮುಖ್ಯಸ್ಥ ಡಾ|ಕೆ.ಬಿ ಹೆಬ್ಟಾರ್‌ ವಂದಿಸಿದರು.

ಅಪಾಯಕಾರಿ ಹುಳು
ಆಫ್ರಿಕನ್‌ ಬಸವನ ಹುಳುಗಳು ಕೃಷಿ ಸಹಿತ ಮಾನವನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಇದರ ದೇಹ ರಚನೆಯು ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ. ಬೆಳೆದ ಬಸವನ ಹುಳು 5 ರಿಂದ 20 ಸಿ.ಎಂ. ತನಕ ಉದ್ದವಿರುತ್ತವೆ. ಮಳೆಗಾಲ ಸಂದರ್ಭ ಒಂದು ಹುಳು ಸುಮಾರು 500 ರಷ್ಟು ಮೊಟ್ಟೆಯಿಡುತ್ತವೆ. 6 ರಿಂದ 12 ತಿಂಗಳ ಕಾಲ ಕಾಣಿಸಿಕೊಳ್ಳುವ ಆಫ್ರಿಕನ್‌ ಬಸವನ ಹುಳುಗಳು ಐದರಿಂದ ಹತ್ತು ವರ್ಷಗಳ ಕಾಲ ಬದುಕುತ್ತವೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ವಸಂತ ಸುಪ್ತಿ ಮತ್ತು ಶಿಶಿರ ಸುಪ್ತಿ – ನಿದ್ರೆಗೆ ಜಾರುವ ಬಸವನ ಹುಳುಗಳು ಹಲವು ಸಮಯದವರೆಗೆ ಕಾಣಿಸಿಕೊಳ್ಳುವುದಿಲ್ಲ. ಮಳೆಗಾಲದಲ್ಲಿ ತೇವದ ಪ್ರದೇಶ, ಕೊಳೆ ತಿನಿಗಳು, ಕಾಂಪೌಂಡ್‌ ಗೋಡೆ, ರಬ್ಬರ್‌, ತೆಂಗು ತೋಟ, ತೆಂಗಿನ ಬುಡ, ರಾಶಿ ಹಾಕಲ್ಪಟ್ಟ ಮರದ ಹೊಟ್ಟಿನಲ್ಲಿರುತ್ತವೆ. 500 ಕ್ಕೂ ಹೆಚ್ಚಿನ ಕೃಷಿಯನ್ನು ನಾಶಪಡಿಸುವ ಬೃಹತ್‌ ಬಸವನ ಹುಳುಗಳು ತೆಂಗು, ಕಂಗು, ಭತ್ತದ ಸಹಿತ ಹಲವು ಕೃಷಿ ಸಸ್ಯಗಳ ಎಸಳುಗಳನ್ನು ಅಪರಿಮಿತವಾಗಿ ತಿನ್ನುತ್ತವೆ. ನೆಮಟೋಡ್‌ ಎಂಬ ಪ್ಯಾರಸೈಟ್‌ ಹೊತ್ತೂಯ್ಯುವ ಆಫ್ರಿನ್‌ ಬಸವನ ಹುಳುಗಳು ಮನುಷ್ಯರಲ್ಲಿ ತುರಿಕೆ,ಚರ್ಮ ರೋಗವನ್ನು ಹರಡುತ್ತವೆ.

ಬಸವನ ಹುಳು ಬಾಧೆ ತಡೆ ವಿಧಾನ
ಆಫ್ರಿಕನ್‌ ಬಸವನ ಹುಳುಗಳ ಸಂಖ್ಯೆ ಹೆಚ್ಚಿದ್ದಲ್ಲಿ ಗೋಣಿ ಚೀಲದಲ್ಲಿ ಪಪ್ಪಾಯಿ ಎಲೆಗಳು ಅಥವಾ ಹೂಕೋಸು ಎಲೆಗಳನ್ನು ಇರಿಸಿ ಸಂಜೆ ವೇಳೆ ಹುಳುಗಳನ್ನು ಆಕರ್ಷಿಸಿ ಅನಂತರ ಉಪ್ಪಿನ ದ್ರಾವಣವನ್ನು ಸಿಂಪಡಿಸುವುದರ ಮೂಲಕ ನಾಶಪಡಿಸಬಹುದು. ಬೃಹತ್‌ ಆಫ್ರಿಕನ್‌ ಬಸವನ ಹುಳು ಕೃಷಿಗೆ ನೀಡುವ ಉಪಟಳವನ್ನು ಮಟ್ಟ ಹಾಕಲು ಸಾಮೂಹಿಕ ಕ್ರಿಯಾತ್ಮಕತೆಯ ಆವಶ್ಯಕತೆ ಇದೆ. ಕೃಷಿಕರು ಸಾಮಾಜಿಕ ಸಂಘಟನೆಗಳು, ಕೃಷಿ ಇಲಾಖೆ ಸಹಿತ ಸ್ಥಳೀಯಾಡಳಿತ, ಮಹಿಳಾ ಸ್ವಯಂ ಸೇವಾ ಸಂಘಟನೆಗಳು, ಕೃಷಿಕರ ಸಂಘಟನೆಗಳ ಪರಸ್ಪರ ನೆರವಿನೊಂದಿಗೆ ಹೆಚ್ಚಿದ ಆಫ್ರಿಕನ್‌ ಬಸವನಹುಳುಗಳ ಉಪಟಳವನ್ನು ತಪ್ಪಿಸಿಕೊಳ್ಳಬಹುದು.

ಇತರೆ ವಿಧಾನ
·  ಬಸವನ ಹುಳು ಹೆಚ್ಚಾಗಿ ಕಂಡು ಬರುವ ಆವಾಸ ಸ್ಥಳಗಳನ್ನು ನಾಶಪಡಿಸುವುದು. ಚಳಿ, ಬೇಸಿಗೆ ಕಾಲದಲ್ಲಿ ಸುಪ್ತ ನಿದ್ರೆಗೆ ಜಾರುವ ಬಸವನ ಹುಳುಗಳಿರುವ ಕೊಳೆ ತಿನಿಸು, ಮರದ ದಿಮ್ಮಿ, ಮರದ ಹೊಟ್ಟಿರುವ ಪ್ರದೇಶಗಳನ್ನು ಗೊತ್ತುಪಡಿಸುವುದು.
·  ಸಂಜೆ ಸಮಯದಲ್ಲಿ ಆಫ್ರಿಕನ್‌ ಬಸವನ ಹುಳುಗಳಿರುವ ಸ್ಥಳಗಳಲ್ಲಿ ಉಪ್ಪನ್ನು ಸಿಂಪಡಿಸುವುದು ಮತ್ತು ಬಸವನ ಹುಳುಗಳ ಮೇಲ್ಭಾಗದಲ್ಲಿ ಉಪ್ಪನ್ನು ಹಾಕಿ ನಿರ್ಮೂಲನೆ ಮಾಡುವುದು.
·  ಒಂದು ಲೀಟರ್‌ ನೀರಿಗೆ ಮೈಲು ತುತ್ತು (60 ಗ್ರಾಂ) ಮತ್ತು ತಂಬಾಕು ಮಿಶ್ರಣ(25 ಗ್ರಾಂ) ಕದಡಿಸಿ ಸಿಂಪಡಿಸುವುದು.
·  ವಸತಿ ಪ್ರದೇಶಗಳ ಸಮೀಪ ಬಸವನ ಹುಳುಗಳು ಬಾರದಂತೆ ಬೋರಾಕ್ಸ್‌ ಪೌಡರ್‌, ಸಾಮಾನ್ಯ ಉಪ್ಪು, ತಂಬಾಕು ಮಿಶ್ರಣ ಸಿಂಪಡನೆ.
·  ಕೃಷಿ ಸಸ್ಯ ಎಸಳುಗಳ ಮೇಲೆ ಬೇವಿನ ಎಣ್ಣೆ ಮತ್ತು ಬೆಳ್ಳುಳ್ಳಿ ಮಿಶ್ರಿತ ಎಣ್ಣೆ ಸಿಂಪಡನೆ ಮಾಡುವುದರಿಂದ ಆಫ್ರಿಕನ್‌ ಬಸವನ ಹುಳು ಸಮೀಪ ಸುಳಿಯುದಿಲ್ಲ.
·  ತರಕಾರಿ ಮತ್ತು ಭತ್ತ ಗದ್ದೆಗಳಿಗೆ ಬೋರೆxಕ್ಸ್‌ ಮಿಶ್ರಣದ ಸಿಂಪಡಣೆಯಿಂದ ಬಸವನ ಹುಳುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ