‘ವಿಷು’ ಸ್ವಾಗತಕ್ಕೆ ರಾರಾಜಿಸುತ್ತಿರುವ ‘ಬಂಗಾರದ ಹೂ’

Team Udayavani, Apr 13, 2018, 9:05 AM IST

ಕಾಸರಗೋಡು: ಮತ್ತೆ ಬಂದಿದೆ ಸಮೃದ್ಧಿ, ಸಂಕಲ್ಪದ ದಿನ ವಿಷು. ವಿಷು ಹೊಸ ವರುಷದ ಆರಂಭ. ಹೊಸ ವರ್ಷದ ಆರಂಭವನ್ನು ಸ್ವಾಗತಿಸಲು ಎಲ್ಲೆಡೆ ರಾರಾಜಿಸುತ್ತಿದೆ ಬಂಗಾರದ ಹೂ’ ಕೊನ್ನೆ. ಕೊನ್ನೆ ಹೂವಿಗೂ ವಿಷುಹಬ್ಬಕ್ಕೂ ಅವಿನಾಭಾವ ಸಂಬಂಧವಿದೆ. ಎಲ್ಲೆಡೆ ಕೊನ್ನೆಹೂವು ಅರಳಿನಿಂತಿದೆ. ಹಸಿರು ಮರದ ಕೊಂಬೆಲ್ಲಾ ಈ ಬಂಗಾರದ ಹೂವು ನಳನಳಿಸುತ್ತಿದೆ. ಅಂತೂ ವಿಷು ಹಬ್ಬ ಬಂದಿದೆ.

ಸ್ವರ್ಣ ಪುಷ್ಪ
ಮಾರ್ಚ್‌ – ಮೇ ತಿಂಗಳಲ್ಲಿ ಹಳದಿ ಬಣ್ಣದ ಹೂವನ್ನು ಗೊಂಚಲು ಗೊಂಚಲಾಗಿ ಮರ ತುಂಬಾ ಬಿಟ್ಟು ಮೈಮನ ಪುಳಕಗೊಳಿಸುವ ಕೊನ್ನೆ ಹೂ ಎಂಬ ಹೆಸರಿನಿಂದ ಕರೆಯಲ್ಪಡುವ ಕಕ್ಕೆ ಅಥವಾ ಸ್ವರ್ಣ ಪುಷ್ಪವನ್ನು ಇಂಗ್ಲಿಷ್‌ ಭಾಷೆಯಲ್ಲಿ ಗೋಲ್ಡನ್‌ ಶವರ್‌ ಟ್ರೀಸ್‌ ಎಂದೇ ಕರೆಯಲ್ಪಟ್ಟಿದೆ. ಇದು ಥೈಲ್ಯಾಂಡ್‌ ದೇಶದ ರಾಷ್ಟ್ರೀಯ ಪುಷ್ಪ. ಕೇರಳ ರಾಜ್ಯದ ರಾಜ್ಯ ಪುಷ್ಪವಾಗಿದೆ. ತಮಿಳಿನಲ್ಲಿ ಈ ಹೂವನ್ನು ಕೊಂಡ್ರೈ ಎಂದು ಕರೆಯುತ್ತಾರೆ. ಫಬಸಿಯ ಕುಟುಂಬಕ್ಕೆ ಸೇರಿದ ಕಾಸಿಯ ಫಿಸ್ಟೂಲ ಎಂಬುದು ಸಸ್ಯಶಾಸ್ತ್ರೀಯ ಹೆಸರು. ಸಂಸ್ಕೃತದಲ್ಲಿ ಸುವರ್ಣಕ, ಮಲಯಾಳದಲ್ಲಿ ‘ಕೊನ್‌’ ಮುಂತಾದ ಹೆಸರಿದೆ. ಇಂಡಿಯಾನಾ ಲಬರ್ನಮ್‌ ಎಂಬ ಹೆಸರಿನಿಂದಲೂ ಕರೆಯಲ್ಪಡುವುದಿದೆ.

ಹಳದಿ ಬಣ್ಣದ ಹೂಗಳು ಅಂದವಾಗಿ ಕಾಣುತ್ತಾ ಕಣ್ಣಿಗೆ ಹೊಸ ಆನಂದವನ್ನು ನೀಡುವ ಕೊನ್ನೆ ಹೂ ಗಳನ್ನು ಅಲಂಕಾರಕ್ಕೆ ಬೆಳೆಸುತ್ತಾರೆ. ಕಾಯಿ ಹಾಗೂ ಹೂ ಆಯುರ್ವೇದ ಔಷಧಿಗಳಲ್ಲಿ ಬಳಕೆಯಾಗುತ್ತಿದೆ. ಮುಖ್ಯವಾಗಿ ವಾತ ಸಂಬಂಧಿ ಔಷಧಗಳಲ್ಲಿ ಉಪಯೋಗಿಸುತ್ತಾರೆ. ಚಿಗುರಿನೊಂದಿಗೇ ಉದ್ದನೆ ಜೋಲಾಡುವ ಹಳದಿ ಬಣ್ಣದ ಹೂಗೊಂಚಲುಗಳು ಆಕರ್ಷಣೀಯವಾಗಿ ಕಾಣಿಸುತ್ತವೆ. ಕಾಯಿಗಳು ಎರಡು ಮೀಟರ್‌ ಉದ್ದವಿದ್ದು ಕಂದು ಬಣ್ಣದಲ್ಲಿ ನೇತಾಡುತ್ತಿರುತ್ತವೆ. ಈ ಮರದ ಒಣ ತೊಗಟೆಯನ್ನು ಚರ್ಮ ಹದಮಾಡಲು ಉಪಯೋಗಿಸುತ್ತಾರೆ.

ವಿಷು ದಿನ ಕಣಿಯ ಪ್ರಥಮ ದರ್ಶನ
ವರುಷದ ಆರಂಭದಲ್ಲಿ ಮೊದಲ ನೋಟಕ್ಕೆ ಆರಾಧ್ಯ ದೇವರನ್ನು ನೋಡುವ ಕ್ರಮವನ್ನು ಕಣಿ ಕಾಣುವುದು ಎನ್ನಲಾಗುತ್ತದೆ. ಕಣಿ ಎಂದರೆ ಶ್ರೇಯಸ್ಸು, ಶಕುನ, ಭವಿಷ್ಯ ಎಂಬ ಅರ್ಥಗಳೂ ಇವೆ. ಮನೆಯನ್ನು ಸಿಂಗರಿಸಿ ಹಿಂದಿನ ದಿನ ರಾತ್ರಿಯೇ ದೇವರ ವಿಗ್ರಹದ ಜತೆಗೆ ಕಣಿಯ ಸಾಮಗ್ರಿಗಳನ್ನು ಇರಿಸಲಾಗುತ್ತದೆ. ನವ ಧಾನ್ಯಗಳು, ಬಟ್ಟೆಬರೆ, ಬಂಗಾರದ ಆಭರಣ. ಫಲವಸ್ತುಗಳು ಇತ್ಯಾದಿಗಳೊಂದಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಪಾತ್ರೆಯಲ್ಲಿ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ ಮತ್ತು ಕನ್ನಡಿ ಇರಿಸಲಾಗುತ್ತದೆ. ಕಣಿ ಸಿದ್ಧಪಡಿಸುವ ಸಂದರ್ಭದಲ್ಲಿ ಬಂಗಾರದ ಹೂ ಕೊನ್ನೆ ಹೂಗಳನ್ನು ಜೋಡಿಸುತ್ತಾರೆ. ಎಲ್ಲರೂ ಬೆಳಗಿನ ಜಾವವೇ ಎದ್ದು, ಮಿಂದು ಹೊಸಬಟ್ಟೆ ಧರಿಸಿ ಗುರುಹಿರಿಯರಿಗೆ ವಂದಿಸಿ ನಂತರ ಕಣಿ ಕಾಣುತ್ತಾರೆ. ಕಣಿ ಕಂಡ ತತ್‌ಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನೇ ನೋಡಿಕೊಳ್ಳಬೇಕು ಎಂದೂ ಸಾಂಪ್ರದಾಯಿಕ ಹೇಳಿಕೆಯೊಂದಿದೆ. ಇದರಿಂದ ಆಯುರಾರೋಗ್ಯ, ಐಶ್ವರ್ಯಗಳ ಸಮೃದ್ಧಿಯಾಗುವುದು ಎಂಬ ಆಶಯ ಅಡಗಿದೆ ಎಂದು ಹಿರಿಯರು ಹೇಳುತ್ತಾರೆ. ಒಕ್ಕಲುಗಳ ಕಾಲದಲ್ಲಿ ಒಕ್ಕಲಿನಲ್ಲಿ ಇದ್ದವರು ದನಿಗಳಿಗೆ ‘ಬಿಸುಕಾಣಿಕೆ’ ಕೊಡುವ ಒಂದು ಸಂಪ್ರದಾಯವಿತ್ತು. ಆದರೆ ಅದು ಈಗ ತುಂಬಾ ಕಡಿಮೆಯಾಗಿದೆ.

— ಪ್ರದೀಪ್‌ ಬೇಕಲ್‌ ; ಚಿತ್ರ: ಶ್ರೀಕಾಂತ್‌ ಕಾಸರಗೋಡು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ