ಹೈಸ್ಕೂಲ್‌-ಹೈಯರ್‌ ಸೆಕೆಂಡರಿ ವಿಲೀನ: ಕನ್ನಡ ಮಾಧ್ಯಮ ಅಧ್ಯಾಪಕರ ಭಡ್ತಿಗೆ ಅಡ್ಡಿ

Team Udayavani, May 22, 2019, 6:12 AM IST

ಕಾಸರಗೋಡು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲೇ ಖಾದರ್‌ ಕಮಿಷನ್‌ ವರದಿ ಆಧಾರದಲ್ಲಿ ಹೈಸ್ಕೂಲ್‌-ಹೈಯರ್‌ ಸೆಕೆಂಡರಿ ವಿಲೀನಗೊಳಿಸುವ ಸಿದ್ಧತೆಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ.

ಇದರ ಮೊದಲ ಹಂತವಾಗಿ ಪ್ರಸ್ತುತ ಡಿಪಿಐ, ಹೈಯರ್‌ ಸೆಕೆಂಡರಿ ನಿರ್ದೇಶನಾಲಯ, ವಿ.ಎಚ್‌.ಎಸ್‌.ಇ. ಗಳನ್ನು ವಿಲೀನಗೊಳಿಸಿ ಸಾರ್ವಜನಿಕ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ತರುವ ಕ್ರಮ ಪೂರ್ತಿಯಾಗಿದೆ.

ಪ್ರಸ್ತುತ ಇರುವ ವಿಎಚ್‌ಎಸ್‌ಇ ಹೈಯರ್‌ ಸೆಕೆಂಡರಿ ವಲಯ ಕಚೇರಿಗಳು ಇಲ್ಲದಾಗುವುದು. ಬದಲು ಹೈಯರ್‌ ಸೆಕೆಂಡರಿ ವಿಭಾಗ ಸಹಿತ ಶಾಲೆಗಳಲ್ಲಿರುವ ಡಿಡಿಇ ಕಚೇರಿಯ ವ್ಯಾಪ್ತಿಯಲ್ಲಿ ಬರುವುದು. ಇದಕ್ಕಾಗಿ ವಲಯ ಕಚೇರಿಗಳನ್ನು ಮುಚ್ಚಿ ಅವುಗಳನ್ನು ಡಿಡಿಇ ಕಚೇರಿಗೆ ಬದಲಾಯಿಸಲಾಗುವುದು. ಆದರೆ ಡಿಇಒ ಕಚೇರಿಗಳನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡುವುದಿಲ್ಲ. ಇಲ್ಲಿ ಹೈಸ್ಕೂಲ್‌ ಸಂಬಂಧಪಟ್ಟ ಕೆಲಸಗಳಲ್ಲದೇ ಹೈಯರ್‌ ಸೆಕೆಂಡರಿ ವಿಭಾಗಗಳನ್ನು ಸಹ ಆರಂಭಿಸುವುದು.

ರಾಜ್ಯದಲ್ಲಿ ಶೇ. 7.25ರಷ್ಟು ಇಡಿಒ ಹುದ್ದೆಗಳನ್ನು ತಾತ್ಕಾಲಿಕವಾಗಿ ಪ್ರಾಂಶುಪಾಲರಿಗೆ ನೀಡಲಾಗು ವುದು. ಇದರಲ್ಲಿ ಶೇ.10 ಹುದ್ದೆಯನ್ನು ತಾತ್ಕಾಲಿಕವಾಗಿ ಸೃಷ್ಟಿಸಲಾಗು ತ್ತದೆ. ಇನ್ನು ಮುಂದೆ ಹೈಯರ್‌ ಸೆಕೆಂಡರಿಯ ಪ್ರಾಂಶುಪಾಲರು ಹೈಸ್ಕೂಲ್‌ಗ‌ಳ ಮುಖ್ಯಸ್ಥರೂ ಆಗಿರುತ್ತಾರೆ. ಮುಖ್ಯ ಶಿಕ್ಷಕರ ಹುದ್ದೆ ಇಲ್ಲದಾಗುವುದು. ಶಾಲಾ ಕಟ್ಟಡಗಳು, ಇತರ ಭೌತಿಕ ಸೌಲಭ್ಯಗಳು ಪ್ರಾಂಶುಪಾಲರ ಅನುಪಸ್ಥಿತಿಯಲ್ಲಿ ಅಕಾಡೆಮಿಕ್‌ ಮುಖ್ಯಸ್ಥರ ಹೊರತು ಪಡಿಸಿದ ಅಧಿಕಾರವು ಉಪಪ್ರಾಂಶುಪಾಲರಿಗೆ ಆಗಿರುತ್ತದೆ. ಅಲ್ಲದೇ ಹೈಸ್ಕೂಲ್‌ ಅಕಾಡೆಮಿ, ಮಧ್ಯಾಹ್ನದೂಟ ಸಹಿತ ಎಲ್ಲ ಅಧಿಕಾರಗಳು ಉಪ ಪ್ರಾಂಶುಪಾಲರಿಗೆ ಆಗಿರುತ್ತವೆೆ.

ನೌಕರರ ನೇಮಕಾತಿ ಪ್ರಾಂಶುಪಾಲರ ಅಧಿಕಾರವಾದರೆ, ಹಾಜರಿ, ರಜೆ ಮುಂತಾ ದವುಗಳ ನಿಯಂತ್ರಣ ಉಪ ಪ್ರಾಂಶುಪಾಲರ ವ್ಯಾಪ್ತಿಗೆ ಬರುತ್ತದೆ. ಇದರ ಬಗ್ಗೆ ಅಂತಿಮ ಚರ್ಚೆ ಇನ್ನೂ ನಡೆಯುತ್ತದೆ.

ಕ್ಲರ್ಕ್‌, ಗುಮಾಸ್ತ ಮುಂತಾದವು ನೌಕರ ನಿಯಂತ್ರಣ ಪ್ರಾಂಶುಪಾಲರಿಗೆ ನೀಡಿದರೂ, ಅವರು ಈಗಲೂ ಮಾಡುತ್ತಿದ್ದ ಕೆಲಸ ಮಾತ್ರ ಮಾಡಿದರೆ ಸಾಕಾಗುವುದು. ಮುಂದಿನ ದಿನಗಳಲ್ಲಿ ಶಾಲೆಗಳ ಅಸೆಂಬ್ಲಿಗಳು ಜೊತೆಯಾಗಿ ನಡೆಯುವುದು. ಹೈಸ್ಕೂಲ್‌ ಮತ್ತು ಹೈಯರ್‌ ಸೆಕೆಂಡರಿ ವಿದ್ಯಾರ್ಥಿಗಳನ್ನು ಜತೆಯಾಗಿ ಸಾಮರಸ್ಯ ದಿಂದ ನಡೆಸಿಕೊಂಡು ಬರುವುದೇ ಇದರ ಗುರಿಯಾಗಿದೆ. ಉಳಿದಂತೆ ವಿದ್ಯಾರ್ಥಿ ಪೊಲೀಸ್‌ ಕೆಡೆಟ್‌, ಎನ್ನೆಸ್ಸೆಸ್‌ ಇತರ ಕ್ಲಬ್‌ಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.

ಇದಕ್ಕೆ ಅಂತಿಮ ರೂಪ ನೀಡುವುದಕ್ಕಾಗಿ ಅಧ್ಯಾಪಕರ ಸಂಘಟನೆಗಳ ಸಭೆಯು ಮುಖ್ಯಮಂತ್ರಿಗಳ ಅಧ್ಯಕ್ಷ ತೆಯಲ್ಲಿ ನಡೆಯಲಿದೆ. ಆ ಬಳಿಕವಷ್ಟೆ ಆದೇಶ ಹೊರಡಿಸುವುದು.

ಭಡ್ತಿಗೆ ಅಡ್ಡಿ
ನೂತನವಾಗಿ ಹೈಸ್ಕೂಲ್‌ ಮತ್ತು ಹೈಯರ್‌ ಸೆಕೆಂಡರಿ ವಿಭಾಗಗಳನ್ನು ವಿಲೀನಗೊಳಿಸುವ ಸಂದರ್ಭದಲ್ಲಿ ಜಿಲ್ಲೆಯ ಭಾಷಾ ಅಲ್ಪಸಂಖ್ಯಾಕರಾದ ಕನ್ನಡ ಬಲ್ಲ ಅಧ್ಯಾಪಕರ ಭಡ್ತಿಗೆ ಅಡ್ಡಿಯಾಗಲಿದೆ. ಪ್ರಸ್ತುತ ಕನ್ನಡ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಕನ್ನಡ ಅಧ್ಯಾಪಕರಿಗೆ ಭಡ್ತಿ ನೀಡಬೇಕೆಂಬ ಆದೇಶವಿದೆ. ಅಲ್ಲದೇ ಸಹಾಯಕ ಶಿಕ್ಷಣಾಧಿ ಕಾರಿ, ಜಿಲ್ಲಾ ಶಿಕ್ಷಣಾಧಿಕಾರಿಗಳಾಗಿ ಕನ್ನಡಿಗರನ್ನೆ ನೇಮಿಸುವ ಭಡ್ತಿ ಆದೇಶಕ್ಕೆ ಪೆಟ್ಟು ಬೀಳಲಿದೆ. ಮುಂದೆ ಹೈಸ್ಕೂಲ್‌-ಹೈಯರ್‌ ಸೆಕೆಂಡರಿ ವಿಲೀನಗೊಳ್ಳುವ ಸಂದರ್ಭದಲ್ಲಿ ಕನ್ನಡ ಬಲ್ಲ ಅಧ್ಯಾಪಕರಿಗೆ ಲಭಿಸುತ್ತಿರುವ ಹುದ್ದೆಗಳು ಇಲ್ಲದಾಗಿ ಮುಂದೆ ಅದು ಸಾಮಾನ್ಯ ಆಯ್ಕೆ ನಡೆಯುವುದರಿಂದ ಕನ್ನಡಿಗರಿಗೆ ಕೈತಪ್ಪುವುದು. ಇದೀಗ ಕೇವಲ 10 ವರ್ಷದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರಿಗೂ ಮುಖ್ಯ ಶಿಕ್ಷಕರಾಗಿ ಭಡ್ತಿ ಲಭಿಸುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರಾಂಶುಪಾಲ ಹುದ್ದೆಗೆ ಯಾವುದೇ ಮೀಸಲಾತಿ ಇರುವುದಿಲ್ಲ. ಕನ್ನಡ ಮಾಧ್ಯಮ ಅಧ್ಯಾಪಕರ ವಿಶೇಷ ಭಡ್ತಿ ಅವಕಾಶಗಳು ಇಲ್ಲದಾಗುವುದು. ಇದೀಗ ಕಾಸರಗೋಡು ಜಿಲ್ಲೆಯ ಅನುದಾನಿತ ಹಾಗೂ ಸರಕಾರಿ ಶಾಲೆಗಳಲ್ಲಿನ ಅಧಿ ಕ ಪ್ರಾಂಶುಪಾಲರು ಮಲಯಾಳಿಗಳೇ ಆಗಿರುತ್ತಾರೆ. ಇಲ್ಲಿ ಮಾಧ್ಯಮಗಳ ಪ್ರಶ್ನೆಯೇ ಬರುವುದಿಲ್ಲ.

ಕಾಮನ್‌ಪೂಲ್‌ನಿಂದ ಆಯ್ಕೆಯಾಗುವ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ವಿಶೇಷ ಭಡ್ತಿ ಇದರೊಂದಿಗೆ ಕೊನೆಗೊಳ್ಳಲಿದೆ. ಈಗಾಗಲೇ ಕನ್ನಡಿಗರೇ ಆಡಳಿತ ಹೊಂದಿರುವ ಅನುದಾನಿತ ಶಾಲೆಗಳ ಹೈಯರ್‌ ಸೆಕೆಂಡರಿಯಲ್ಲಿ ಮಲಯಾಳ ಬಲ್ಲ ಅಧ್ಯಾಪಕರೇ ಹೆಚ್ಚಾಗಿ ನೇಮಕ ಗೊಂಡಿರುವುದರಿಂದ ಕನ್ನಡಿಗ ಅಧ್ಯಾಪಕರಿಗೆ ಅಲ್ಲೂ ಭಡ್ತಿಗೆ ಅವಕಾಶವಿರುವುದಿಲ್ಲ. ಇದು ಕನ್ನಡ ಅಧ್ಯಾಪಕರ ಮೇಲೆ ಮಾತ್ರವಲ್ಲ, ಕನ್ನಡ ಶಾಲೆಗಳ, ಕನ್ನಡ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುವುದು.

ಬೇಡಿಕೆಗಳನ್ನು ಮಂಡಿಸಲು ಸಕಾಲ
ಈಗಾಗಲೇ ಹೈಸ್ಕೂಲ್‌-ಹೈಯರ್‌ಸೆಕೆಂಡರಿ ವಿಲೀನ ಪ್ರಕ್ರಿಯೆ ನಡೆಯುತ್ತಿರು ವಾಗ ಕನ್ನಡ ಮಾಧ್ಯಮ ಅಧ್ಯಾಪಕರ ಬೇಡಿಕೆಗಳನ್ನು ಸರಕಾರದ ಮುಂದಿಡಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ತುರ್ತು ಸ್ಪಂದಿಸಬೇಕು.

ಹೈಯರ್‌ ಸೆಕೆಂಡರಿ ತನಕ ಕನ್ನಡ ಕಲಿತ ಅಧ್ಯಾಪಕರನ್ನೆ ನೇಮಿಸಬೇಕೆಂಬ ಬೇಡಿಕೆಯನ್ನು ಮುಂದಿಡಬೇಕು. ಭಾಷಾ ಅಲ್ಪಸಂಖ್ಯಾತ ಪ್ರದೇಶದ ಕನ್ನಡ ಶಾಲೆಗಳ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಡಿಡಿಇ ಕನ್ನಡಿಗರಾಗಿರಬೇಕು ಎಂಬ ಬಗ್ಗೆಯೂ ಬೇಡಿಕೆಯನ್ನು ಮುಂದಿಡಬೇಕು. ಈ ಮೂಲಕ ಕನ್ನಡ ಯುವಜನತೆ, ಉದ್ಯೋಗಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅಧ್ಯಾಪಕರಾಗುವವರಿಗೆ, ಇದೀಗ ಅಧ್ಯಾಪಕರಾಗಿರುವವರಿಗೆ ಪ್ರಯೋಜನವಾಗುವ ರೀತಿಯಲ್ಲಿ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಇದಕ್ಕೆ ಕನ್ನಡ ಮಾಧ್ಯಮ ಅಧ್ಯಾಪಕ ಸಂಘಟನೆಗಳು, ಕನ್ನಡ ಹೋರಾಟ ಸಮಿತಿಗಳ ನೇತೃತ್ವದಲ್ಲಿ ತತ್‌ಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ