ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Team Udayavani, Jul 13, 2019, 5:52 AM IST

ತಂಡದಿಂದ ಯುವಕನಿಗೆ ಹಲ್ಲೆ
ಕಾಸರಗೋಡು: ಕೀಯೂರು ಚೆಂಬರಿಕ ನಿವಾಸಿ ಎ.ಎಂ ಅಶ್ರಫ್‌(38) ಅವರಿಗೆ ತಂಡವೊಂದು ಹಲ್ಲೆ ಮಾಡಿದ ಘಟನೆ ನಡೆದಿದೆ.

ಜು. 11ರಂದು ರಾತ್ರಿ ಕೀಯೂರು ಟೌನ್‌ ಜುಮಾ ಮಸೀದಿಯಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಅಶ್ರಫ್‌ ಸಹೋದರನ ಪುತ್ರನಾದ ಒಂಬತ್ತರ ಹರೆಯದ ಬಾಲಕನೊಂದಿಗೆ ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದರು. ದಾರಿ ಮಧ್ಯೆ ವ್ಯಕ್ತಿಯೋರ್ವ ಕೈಕಾಣಿಸಿದ್ದು, ಇದರಿಂದ ಅಶ್ರಫ್‌ ಬೈಕ್‌ ನಿಲ್ಲಿಸಿದ್ದರು. ಇದೇ ವೇಳೆ ಅಲ್ಲಿ ಅವಿತುಕೊಂಡಿದ್ದ ಮೂರು ಮಂದಿಯ ತಂಡ ಅಶ್ರಫ್‌ ಅವರಿಗೆ ಕಬ್ಬಿಣದ ಸರಳು, ಆಣಿ ಬಡಿದ ಮರದ ತುಂಡಿನಿಂದ ಹಲ್ಲೆ ಮಾಡಿ ಪರಾರಿಯಾಗಿದೆ. ಗಾಯಾಳುವನ್ನು ಕಾಸರಗೋಡಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಗಾಯಾಳು ಶುಕ್ರವಾರ ಮಧ್ಯಾಹ್ನ ಕೊಲ್ಲಿಗೆ ತೆರಳು ತಯಾರಿಸಿದ್ದರು. ಆದರೆ ಹಲ್ಲೆಯ ಹಿನ್ನೆಲೆಯಲ್ಲಿ ಕೊಲ್ಲಿ ಪ್ರಯಾಣ ಮೊಟಕುಗೊಂಡಿದೆ.

ವಿಷ ಸೇವನೆ : ವಿದ್ಯಾರ್ಥಿ ಅಸ್ವಸ್ಥ
ಬದಿಯಡ್ಕ: ಪೆರಡಾಲ ಬಳಿಯ ಮುಚ್ಚಿರಕವೆ ನಿವಾಸಿ ಬಾಬು ಅವರ ಪುತ್ರ, ಬದಿಯಡ್ಕ ಕಾಲೇಜೊಂದರ ವಿದ್ಯಾರ್ಥಿ ರಾಜಾರಾಂ (18) ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು ಕಾಸರಗೋಡಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಬೈಕ್‌ ಢಿಕ್ಕಿ : ಮಹಿಳೆಗೆ ಗಾಯ
ಕಾಸರಗೋಡು: ನಯಾಬಜಾರ್‌ನಲ್ಲಿ ಬೈಕ್‌ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಪಾರ್ಟ್‌ಟೈಂ ಸ್ವೀಪರ್‌ ತ್ರಿಕರಿಪುರ ನಿವಾಸಿ ಪ್ರೇಮಜ (44) ಗಾಯಗೊಂಡಿದ್ದಾರೆ. ಗಾಯಾಳುವನ್ನು ಕಾಸರಗೋಡಿನ ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಸಂಬಂಧ ಬೈಕ್‌ ಸವಾರನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮಟ್ಕಾ: ಮೂವರ ಬಂಧನ
ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಬದಿಯಡ್ಕದ ರವೀಂದ್ರ (47), ದಿನೇಶ್‌(58) ಮತ್ತು ಮುಳ್ಳೇರಿಯದ ಸುನಿಲ ಕುಮಾರ್‌(27)ನನ್ನು ಬಂಧಿಸಿದ ಬದಿಯಡ್ಕ ಪೊಲೀಸರು ಇವರಿಂದ 2,120 ರೂ. ವಶಪಡಿಸಿಕೊಂಡಿದ್ದಾರೆ.

ಮದ್ಯ ಸೇವನೆ: ಆಟೋ ಚಾಲಕ ಸೆರೆ
ಕಾಸರಗೋಡು: ಮದ್ಯ ಸೇವಿಸಿ ಆಟೋ ರಿಕ್ಷಾ ಚಲಾಯಿಸುತ್ತಿದ್ದ ಮಂಜತ್ತಡ್ಕ ಪಳ್ಳದ ಮೊಹಮ್ಮದ್‌ ರಫೀಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮನ್ನಿಪ್ಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸಿದರು.

ಪಾನ್‌ ಮಸಾಲೆ ಸಹಿತ ಬಂಧನ
ಕಾಸರಗೋಡು: ಹದಿನಾರು ಕಟ್ಟ ಪಾನ್‌ ಮಸಾಲೆ ಸಹಿತ ಉಳಿಯತ್ತಡ್ಕ ನೂರ್‌ ಮಂಜಿಲ್‌ನ ಅಬ್ದುಲ್‌ ಖಾದರ್‌(63)ನನ್ನು ಅಣಂಗೂರಿನಿಂದ ಪೊಲೀಸರು ಬಂಧಿಸಿದ್ದಾರೆ.

ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ
ಬದಿಯಡ್ಕ: ಮಗುವಿನ ನಾಮಕರಣ ಕಾರ್ಯಕ್ರಮದ ಹಿಂದಿನ ದಿನದಂದು ನಿಗೂಢವಾಗಿ ನಾಪತ್ತೆಯಾಗಿದ್ದ ತಳಿಪರಂಬ ಕರಿಂಬ ನಿವಾಸಿ, ಕನ್ಯಪ್ಪಾಡಿ ಬಳಿಯ ಪಾಡ್ಲಡ್ಕದ ಪತ್ನಿ ಮನೆಯಲ್ಲಿ ವಾಸಿಸುತ್ತಿದ್ದ ಸಜೇಶ್‌ (38)ನನ್ನು ತಳಿಪರಂಬದಲ್ಲಿ ಪತ್ತೆಹಚ್ಚಲಾಗಿದೆ. ಈತನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಬದಿಯಡ್ಕ ಪೊಲೀಸರು ತಳಿಪರಂಬಕ್ಕೆ ತೆರಳಿದ್ದಾರೆ.

ಸೋಮವಾರ ಮಗುವಿನ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಾಮಕರಣದ ಹಿಂದಿನ ದಿನ ಅಂದರೆ ರವಿವಾರ ಸಜೇಶ್‌ ನಾಪತ್ತೆಯಾಗಿದ್ದ. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು.

ಲಾರಿಯ ಚಕ್ರ ಕಳವು
ಕಳ್ಳರ ದೃಶ್ಯ ಸಿಸಿ ಟಿವಿಯಲ್ಲಿ ಪತ್ತೆ
ಕಾಸರಗೋಡು: ಚೆರ್ವತ್ತೂರು ರಾ.ಹೆದ್ದಾರಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯ ಚೇಸ್‌ನಿಂದ ನಾಲ್ಕು ಚಕ್ರಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಕಳ್ಳರ ದೃಶ್ಯ ಸಿ.ಸಿ. ಟಿ.ವಿ.ಯಲ್ಲಿ ಪತ್ತೆಯಾಗಿದೆ. ಲಾರಿಯ ಚಕ್ರ ಕಳಚುವ ದೃಶ್ಯ ಕಂಡು ಬಂದಿದ್ದು, ಕಳ್ಳರನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಳ್ಳರನ್ನು ಶೀಘ್ರವೇ ಬಂಧಿಸಲು ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗುವಿನ ಕೊಲೆ: ವಿಚಾರಣೆ ಆರಂಭ
ಕಾಸರಗೋಡು: 2018 ಜುಲೈ 18 ರಂದು ಒಂದೂವರೆ ವರ್ಷದ ಮಗುವನ್ನು ಮನೆ ಪಕ್ಕದ ಬಾವಿಗೆಸೆದು ಕೊಲೆಗೈದ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ)ದಲ್ಲಿ ಆರಂಭಗೊಂಡಿತು. ಕೂಡ್ಲು ಬಾಲಡ್ಕ ಎರಿಯಾಲ್‌ ಅಕ್ಕರಕುನ್ನು ಹೌಸ್‌ನ ಅಹಮ್ಮದ್‌ ಅವರ ಪತ್ನಿ ನಸೀಮಾ (41) ಆರೋಪಿಯಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ