ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Team Udayavani, Aug 3, 2019, 5:13 AM IST

ಕಣ್ಣೂರು ವಿಮಾನ ನಿಲ್ದಾಣದಲ್ಲಿ
ಮತ್ತೆ ವಿದೇಶಿ ಕರೆನ್ಸಿ ವಶಕ್ಕೆ
ಕಾಸರಗೋಡು: ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮತ್ತು ಪ್ರಯಾಣಿಕರಿಂದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊ ಳ್ಳ‌ಲಾಗಿದೆ.

ಕಲ್ಲಿಕೋಟೆ ಕುರುವಂದೇರಿ ನಿವಾಸಿ ಅಬ್ದುಲ್ಲ ಕುಣಿಯಿಲ್‌(36) ಮತ್ತು ಪತ್ನಿ ಅಸ್ಲಾಮಿ (26) ಅವರಿಂದ 75,000 ಯು.ಎ.ಇ. ದಿರಂ ವಶಪಡಿಸಲಾಗಿದೆ. ಇದರ ಒಟ್ಟು ಮೌಲ್ಯ 13.61 ಲಕ್ಷ ರೂ. ಆಗಿದೆ. ಗೋ ಏರ್‌ನಲ್ಲಿ ದುಬಾೖಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಬ್ದುಲ್ಲ ಅವ‌ರಿಂದ 50 ಸಾವಿರ, ಅಸ್ಲಾಮಿಯಿಂದ 25 ಸಾವಿರ ದಿರಂ ಪತ್ತೆಯಾಯಿತು.

ಸಿ.ಐ.ಎಸ್‌.ಎಫ್‌ ಮತ್ತು ಕಸ್ಟಂಸ್‌ ಅಧಿಕಾರಿಗಳು ನಡೆಸಿದ ತಪಾಸಣೆಯ ಸಂದರ್ಭದಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ವಶಪಡಿಸಲಾಗಿದೆ. ಈ ಸಂಬಂಧ ಇವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಮೂರು ದಿನಗಳಿಂದ ಐದು ಪ್ರಕರಣಗಳು ದಾಖಲಾಗಿದ್ದು, 29.30 ಲಕ್ಷ ರೂ. ಯ ವಿದೇಶಿ ಕರೆನ್ಸಿಯನ್ನು ವಶಪಡಿಸಲಾಗಿದೆ.

ಮನೆಯಿಂದ ಚಿನ್ನಾಭರಣ ಕಳವು
ಕಾಸರಗೋಡು: ಹೊಸದುರ್ಗ ಮಾಣಿಕೋತ್ತ್ನ ಜನವಾಸವಿಲ್ಲದ ಮನೆಯಿಂದ 25 ಪವನ್‌ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.

ಕೊಲ್ಲಿ ಉದ್ಯೋಗಿ ಅರವಿಂದನ್‌ ಅವರ ಮನೆಯಿಂದ ಕಳವು ನಡೆದಿದ್ದು, ಅವರ ತಂದೆ ಅಪ್ಪಕುಂಞಿ ಅವರು ಹೊಸದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ.

2011ರಲ್ಲಿ ಅರವಿಂದನ್‌ ಕೊಲ್ಲಿಗೆ ಹೋಗಿದ್ದರು. ಅಂದಿನಿಂದ ಅವರ ಮನೆಗೆ ಬೀಗ ಜಡಿಯಲಾಗಿದೆ. ಮನೆಯ ಹಿಂಬದಿಯ ಕಿಟಕಿ ಸರಳನ್ನು ಮುರಿದು ಕಳ್ಳರು ಒಳ ಪ್ರವೇಶಿಸಿ ಕಳವು ಮಾಡಲಾಗಿದೆ.

ಲಾಟರಿ ಸ್ಟಾಲ್‌ಗೆ ಬೆಂಕಿ
ಉಪ್ಪಳ: ಇಲ್ಲಿನ ಬಸ್‌ ನಿಲ್ದಾಣದ ಶೌಚಾಲಯದ ಬಳಿ ಇರುವ ಲಾಟರಿ ಸ್ಟಾಲ್‌ಗೆ ಬೆಂಕಿ ಹಚ್ಚಲಾಗಿದೆ. ಸ್ಟಾಲ್‌ ಉರಿಯುತ್ತಿರುವುದನ್ನು ಕಂಡು ಪರಿಸರದ ವ್ಯಾಪಾರಿಗಳು ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ಆರಿಸಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

17 ಬಾಟ್ಲಿ ಮದ್ಯ ವಶಕ್ಕೆ
ಅಡೂರು: ಇಲ್ಲಿನ ನಾಗತ್ತಮೂಲೆಯ ಮನೆಯೊಂದ ರಿಂದ 180 ಮಿ.ಲೀ. ನ 17 ಬಾಟ್ಲಿ ವಿದೇಶಿ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ನಾಗತ್ತ ಮೂಲೆಯ ಚಂದ್ರ (30) ವಿರುದ್ಧ ಕೇಸು ದಾಖಲಿಸಲಾಗಿದೆ.

ನಕಲಿ ದಾಖಲೆ ನೀಡಿ ಬ್ಯಾಂಕ್‌ನಿಂದ
ಸಾಲ: ಕೇಸು ದಾಖಲು
ಕಾಸರಗೋಡು: ಸೊತ್ತಿನ ದಾಖಲೆಗಳ ನಕಲು ಪ್ರತಿ ಗ ಳನ್ನು ತೋರಿಸಿ ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದ ವ್ಯಕ್ತಿಯ ವಿರುದ್ಧ ನಗರಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ.

ಕರಂದಕ್ಕಾಡ್‌ನ‌ ಎಸ್‌ಬಿಐ ಬ್ಯಾಂಕ್‌ನ ಮ್ಯಾನೇಜರ್‌ ಪ್ರದೀಪ್‌ ಕುಮಾರ್‌ ದೂರು ನೀಡಿದ್ದು, ಬದಿಯಡ್ಕ ಬಳಿಯ ಕಜಂಪಾಡಿ ನಿವಾಸಿ ಅಚ್ಯುತ ಭಟ್‌ ಅವರ ಪುತ್ರ ಕೆ. ಸಂತೋಷ್‌(33) ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈತ 2014ರ ಸೆ. 19ರಿಂದ ವಿವಿಧ ದಿನಗಳಲ್ಲಾಗಿ ನಕಲಿ ದಾಖಲೆಪತ್ರ ತೋರಿಸಿ 11 ಲಕ್ಷ ರೂ. ವರೆಗೆ ಸಾಲ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಳವು : ಮೂವರ ಬಂಧನ
ಕಾಸರಗೋಡು: ಎರಡು ಅಂಗಡಿಗಳಿಗೆ ನುಗ್ಗಿ ಅಡಿಕೆ, ನಗದು ಇತ್ಯಾದಿಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಪುಲಿಕುರಂಬದ ತೊರಪ್ಪನ್‌ ಸಂತೋಷ್‌ (34), ಕಣ್ಣೂರು ಇರಿಟ್ಟಿಯ ಅಚ್ಚಾನ್‌ ಕುನ್ನಿನ ಮುನೀರ್‌ ಯಾನೆ ಬಾಬು (27) ಮತ್ತು ಕಣ್ಣೂರು ಅರಳಂನ ರಂಜು ರಾಜನ್‌ (24)ನನ್ನು ರಾಜಪುರಂ ಪೊಲೀಸರು ಬಂಧಿಸಿದ್ದಾರೆ.

2019ರ ಜೂ. 24ರಂದು ರಾಜಪುರಂ ಒಡಯಂಚಾಲ್‌ನ ಅಯರಾಟ್‌ ಬಾಲನ್‌ ಅವರ ಅಂಗಡಿಯಿಂದ ನಾಲ್ಕುವರೆ ಕಿಲೋ ಅಡಿಕೆ, ಒಂದೂವರೆ ಕ್ವಿಂಟಾಲ್‌ ಕಾಳು ಮೆಣಸು ಮತ್ತು ಒಂದು ಲಕ್ಷ ರೂ. ಕಳವು ಮಾಡಿದ ಮತ್ತು ಅಲ್ಲೇ ಪಕ್ಕದ ಜೋಸೆಫ್‌ ಅವರ ಅಂಗಡಿಯಿಂದ ದಿನಸಿ ಸಾಮಗ್ರಿಗಳನ್ನು ಕಳವು ಮಾಡಿದ ಪ್ರಕರಣದ ಆರೋಪಿಗಳಾಗಿದ್ದಾರೆ.

ಕೊಲೆ: ದೋಷಾರೋಪ ಪಟ್ಟಿ ಸಲ್ಲಿಕೆ
ಕಾಸರಗೋಡು: ಮೂಲತಃ ಮೊಗ್ರಾಲ್‌ ಪುತ್ತೂರು ಬಳ್ಳಿàರ್‌ ನಿವಾಸಿ ಹಾಗೂ ತೆಕ್ಕಿಲ್‌ ಬೇವಿಂಜೆ ಸ್ಟಾರ್‌ ನಗರದಲ್ಲಿ ವಾಸಿಸುತ್ತಿದ್ದ ಮೊಹಮ್ಮದ್‌ ಕುಂಞಿ (32) ಅವರನ್ನು ಕುತ್ತಿಗೆ ಬಿಗಿದು ಕೊಲೆಗೈದು ಮೃತದೇಹವನ್ನು ಹೊಳೆಗೆಸೆದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಡಿ.ಸಿ.ಆರ್‌.ಬಿ. ಡಿವೈಎಸ್‌ಪಿ ಜೈಸನ್‌ ಅಬ್ರಹಾಂ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ (1)ಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಕೊಲೆಗೈಯ್ಯಲ್ಪಟ್ಟ ಮೊಹಮ್ಮದ್‌ ಕುಂಞಿಯ ಪತ್ನಿ ಬೇವಿಂಜೆ ಸ್ಟಾರ್‌ನಗರ ನಿವಾಸಿ ಸಕೀನಾ (35) ಮತ್ತು ಆಕೆಯ ಸ್ನೇಹಿತ ಆಸ್ತಿ ಬ್ರೋಕರ್‌ ಮೂಲತಃ ಮುಳಿಯಾರು ಬೋವಿಕ್ಕಾನ ಆಲನಡ್ಕ ನಿವಾಸಿ ಎನ್‌.ಎ. ಉಮ್ಮರ್‌ (41) ಮತ್ತು ಸಕೀನಾಳ 16 ವರ್ಷ ಪ್ರಾಯದ ಪುತ್ರ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ.

ಪುತ್ರ ಅಪ್ರಾಪ್ತ ವಯಸ್ಕನಾಗದ ಕಾರಣ ಆತನ ಮೇಲಿನ ಕೇಸನ್ನು ಪ್ರತ್ಯೇಕಿಸಿ ಜುವೆನೈಲ್‌ ನ್ಯಾಯಾಲಯಕ್ಕೆ ವಹಿಸಲಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ