ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Team Udayavani, Aug 15, 2019, 5:35 AM IST

ಹಲ್ಲೆಮಾಡಿ ದರೋಡೆ ಪ್ರಕರಣ : ಇನ್ನೋರ್ವನ ಬಂಧನ
ಕಾಸರಗೋಡು: ಖಾಸಗಿ ಬಸ್‌ ಸಿಬಂದಿ, ಮಧೂರು ಪಟ್ಲ ರಸ್ತೆ ಬಳಿ ನಿವಾಸಿ ನವೀನ್‌ ಕುಮಾರ್‌(26) ಅವರಿಗೆ ಹಲ್ಲೆ ಮಾಡಿ 5,000 ಸಾವಿರ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿಯತ್ತಡ್ಕ ನ್ಯಾಶನಲ್‌ ನಗರದ ಮೊಹಮ್ಮದ್‌ ಸುಹೈಲ್‌ ಯಾನೆ ಇಕ್ಕು(22) ನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

ಜಾನುವಾರು ಸಾಗಾಟಗಾರರ ದರೋಡೆ ಪ್ರಕರಣ : ಇಬ್ಬರ ಬಂಧನ
ಬದಿಯಡ್ಕ: ಜಾನುವಾರು ಸಾಗಾಟ ನಡೆಸುತ್ತಿದ್ದ ಇಬ್ಬರನ್ನು ತಡೆದು ನಿಲ್ಲಿಸಿ 50 ಸಾವಿರ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡ್ಯನಡ್ಕ ನಿವಾಸಿಗಳಾದ ಗಣೇಶ್‌(25) ಮತ್ತು ರಾಗೇಶ್‌(21)ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

2019ರ ಜೂನ್‌ 24ರಂದು ಪಿಕ್‌ಅಪ್‌ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಪುತ್ತೂರು ನಿವಾಸಿ ಹಂಸ ಹಾಗು ಸಂಬಂಧಿಕ ಅಲ್ತಾಫ್‌ ಅವರನ್ನು ಅಡ್ಯನಡ್ಕ ಮಂಜನಡ್ಕದಲ್ಲಿ ತಡೆದು ನಿಲ್ಲಿಸಿ ಅವರ ಕೈಯಲ್ಲಿದ್ದ 50 ಸಾವಿರ ರೂ. ದರೋಡೆಗೈದು ಜಾನುವಾರುಗಳನ್ನು ವಶಪಡಿಸಿಕೊಂಡಿದ್ದರೆಂದು ದೂರು ನೀಡಲಾಗಿತ್ತು. ಅದರಂತೆ ಬಂಧಿಸಲಾಗಿದೆ.

ವಂಚನೆ ಪ್ರಕರಣ : ಬಂಧನ
ಕಾಸರಗೋಡು: ಖ್ಯಾತ ಕಂಪೆನಿಗಳ ಇಲೆಕ್ಟೊÅàನಿಕ್ಸ್‌ ಸಾಮಾಗ್ರಿಗಳನ್ನು ಕಡಿಮೆ ಬೆಲೆಗೆ ತಲುಪಿಸುವುದಾಗಿ ನಂಬಿಸಿ ಹಲವರಿಂದ ಮುಂಗಡ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಿತ್ತಾರಿಕ್ಕಲ್‌ ಮಾನಂತವಾಡಿ ಕಾಪಾಟ್‌ಮಲೆ ನಿವಾಸಿ ಬೆನ್ನಿ(38)ಯನ್ನು ಚಿತ್ತಾರಿಕ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಹಲವರಿಂದ 500 ರೂ.ಯಿಂದ 2000 ರೂ. ತನಕ ಪಡೆದು ವಂಚಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಮದ್ದು ಗುಂಡು ಪತ್ತೆಯಾದ ಮನೆ ಮಾಲಕನಿಗಾಗಿ ಶೋಧ
ಮಂಜೇಶ್ವರ: ಬದಿಯಡ್ಕ ಸಮೀಪದ ಚರ್ಲಡ್ಕ ಗೋಳಿಯಡಿ ನಿವಾಸಿ ಅಬ್ದುಲ್ಲ ಅವರ ಪುತ್ರ ಸಿರಾಜುದ್ದೀನ್‌(40) ಅವರಿಗೆ ಗುಂಡೆಸೆದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಪ್ರಸ್ತುತ ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿರಾಜುದ್ದೀನ್‌ನಿಂದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕಾರಿನಿಂದ ಇಳಿದು ಅಂಗಡಿಯೊಂದಕ್ಕೆ ಪ್ರವೇಶಿಸುತ್ತಿದ್ದಂತೆ ಗುಂಡು ತಗಲಿದೆ ಎಂದೂ, ಆದರೆ ಅದು ಎಲ್ಲಿ ಎಂಬುವುದು ನೆನಪಿಲ್ಲವೆಂದು ಸಿರಾಜುದ್ದೀನ್‌ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮೀಯಪದವು ಅಡ್ಕತ್ತಗುರಿ ನಿವಾಸಿ ಅಬ್ದುಲ್‌ ರಹ್ಮಾನ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಬ್ದುಲ್‌ ರಹ್ಮಾನ್‌ನ ಮನೆಗೆ ಆ.8 ರಂದು ರಾತ್ರಿ ಮಂಜೇಶ್ವರ ಪೊಲೀಸರು ದಾಳಿ ನಡೆಸಿದ್ದು, ಮನೆಯ ಬೆಡ್‌ ರೂಂನ ಮಂಚದಡಿ ಬಚ್ಚಿಡಲಾಗಿದ್ದ 20 ಗುಂಡುಗಳನ್ನು ಹಾಗು 14 ಗುಂಡುಗಳ ಖಾಲಿ ಕವಚವನ್ನು ವಶಪಡಿಸಿಕೊಂಡಿದ್ದರು. ಆದರೆ ರಿವಾಲ್ವರ್‌ ಪತ್ತೆಯಾಗಿರಲಿಲ್ಲ.

ಗಾಂಜಾ ಸೇದುತ್ತಿದ್ದ ಇಬ್ಬರ ಬಂಧನ
ಮಂಜೇಶ್ವರ: ಗಾಂಜಾ ಸೇದುತ್ತಿದ್ದ ಪತ್ವಾಡಿಯ ಕಲಂದರ್‌ ಮಂಜಿಲ್‌ನ ಕಲಂದರ್‌ ಮೊಹಮ್ಮದ್‌ ಶಾ(34) ಮತ್ತು ಉಪ್ಪಳ ಸಫೀನ ಮಂಜಿಲ್‌ನ ಮೊಹಮ್ಮದ್‌ ಯು.ಐ(42)ನನ್ನು ಮಂಜೇಶ್ವರ ಪೊಲೀಸರು ಹಿದಾಯತ್‌ನಗರದ ಬಸ್‌ ನಿಲ್ದಾಣ ಪರಿಸರದಿಂದ ಬಂಧಿಸಿದ್ದಾರೆ.

ಲೈಂಗಿಕ ಕಿರುಕುಳ ಯತ್ನ: ವೃದ್ಧ ತಪ್ಪಿತಸ್ಥ
ಕಾಸರಗೋಡು: ಎಂಟು ವರ್ಷದ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಡಿ ಕಿಳಕ್ಕೆಮೂಲೆ ಹೌಸ್‌ನ ಕುಂಞಿಕಣ್ಣ ಪೂಜಾರಿ (79) ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (1) ತೀರ್ಪು ನೀಡಿದೆ. 2015ರ ಅ. 21 ಮತ್ತು 22ರಂದು ಮೂರನೇ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾಗಿ ವಿದ್ಯಾನಗರ ಪೊಲೀಸರು ವೃದ್ಧನ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಕೇಸು ದಾಖಲಿಸಿದ್ದರು.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ