ವಿರಾಟ್‌ ಹಿಂದೂ ಸಮಾಜೋತ್ಸವ: ಉಕ್ಕಿ  ಹರಿಯಿತು ಜನಸಾಗರ  

Team Udayavani, Dec 17, 2018, 1:01 PM IST

ಕಾಸರಗೋಡು: ಕಣ್ಣು ಹಾಯಿಸಿದಷ್ಟು ದೂರಕ್ಕೂ ಕೇಸರಿ ಧ್ವಜಧಾರಿಗಳು, ದಶದಿಕ್ಕುಗಳಲ್ಲಿಯೂ ಉತ್ಸಾಹ, ಜೈಕಾರ, ಉದ್ಘೋಷದೊಂದಿಗೆ ಹರಿದು ಬಂದ ಜನಸಾಗರ ವಿದ್ಯಾನಗರದ ಕಾಸರಗೋಡು ಮುನ್ಸಿಪಲ್‌ ಸ್ಟೆಡೀಯಂನಲ್ಲಿ ಸಂಗಮಿಸಿತು. ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸಿದ ಜನರ ಹಿಂದೂ ಪರ ಘೋಷಣೆ ಮುಗಿಲು ಮುಟ್ಟಿತು.

ಹಿಂದೂ ಸಮಾಜೋತ್ಸವ ಸಮಿತಿ ಆಯೋಜಿಸಿದ ಕಾಸರಗೋಡು ಜಿಲ್ಲಾ ಮಟ್ಟದ ಹಿಂದೂ ಸಮಾವೇಶಕ್ಕೂ ಮುನ್ನ ಬೃಹತ್‌ ಶೋಭಾಯಾತ್ರೆ ಅಣಂಗೂರು ಹಾಗು ಬಿ.ಸಿ.ರೋಡ್‌ ಜಂಕ್ಷನ್‌ನಿಂದ ವಿದ್ಯಾನಗರ ಸ್ಟೇಡಿಯಂ ವರೆಗೆ ಸಾಗಿ ಬಂತು. ಮಧ್ಯಾಹ್ನ 2.30 ಕ್ಕೆ ಮೆರವಣಿಗೆ ಈ ಎರಡೂ ಕೇಂದ್ರಗಳಿಂದ ಆರಂಭಗೊಂಡು ಸುಮಾರು 3.30 ಕ್ಕೆ ಸ್ಟೇಡಿಯಂಗೆ ತಲುಪಿತ್ತು. ಸಭಾ ಕಾರ್ಯಕ್ರಮ ಆರಂಭವಾದ ಅನಂತರವೂ ಮೆರವಣಿಗೆ ಬರುತ್ತಲೇ ಇತ್ತು. ಸಾವಿರಾರು ಜನರು ಶೋಭಾಯಾತ್ರೆಯಲ್ಲಿ ಸಾಗಿಬಂದರು. ಶೋಭಾಯಾತ್ರೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರು ಮೆರವಣಿಗೆಯನ್ನು ವೀಕ್ಷಿಸಿದರು. ಶೋಭಾ ಯಾತ್ರೆ ಸಾಗಿಬಂದ ಹಾದಿಯುದ್ದಕ್ಕೂ ಹಿಂದೂ ಪರ ಘೋಷಣೆಗಳು, ಭಾರತ್‌ ಮಾತಾಕೀ ಜೈ ಮೊದಲಾದ ಉದ್ಘೋಷ ಮುಗಿಲು ಮುಟ್ಟಿತು. ಶೋಭಾ ಯಾತ್ರೆ ಸಾಗಿ ಬರುತ್ತಿದ್ದ ದಾರಿಯುದ್ದಕಕ್ಕೂ ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಶುಭಾಶಯಗಳನ್ನು ಕೋರಿ ಬ್ಯಾನರ್‌ಗಳು, ಬಂಟಿಂಗ್‌ಗಳು, ಬೃಹತ್‌ ಗಾತ್ರದ ಫ್ಲೆಕ್ಸ್‌ ಗಳು, ಕಟೌಟ್‌ಗಳು ರಾರಾಜಿಸುತ್ತಿತ್ತು. ಅಂದರೆ ಕಾಸರಗೋಡು ನಗರ ಕೇಸರಿಮಯವಾಗಿತ್ತು.

ಎಲ್ಲೆಡೆ ಸ್ವಾಗತ
ಮಕ್ಕಳು, ಮಹಿಳೆಯರು ಸಹಿತ ಸಾವಿರಾರು ಮಂದಿ ಭಾಗವಹಿಸಿದ ವರ್ಣರಂಜಿತ ಶೋಭಾಯಾತ್ರೆಗೆ ಚೆಂಡೆ ಮೇಳ ಸ್ತಬ್ಧ ಚಿತ್ರಗಳು, ಭಜನ ತಂಡಗಳು, ಕೇಸರಿ ಬಟ್ಟೆ ತೊಟ್ಟ ಮಹಿಳೆಯರು, ಯುವಕರು ರಾಷ್ಟ್ರಪ್ರೇಮ ಬಿಂಬಿಸುವ ವೇಷಭೂಷಣಗಳು ಮೆರುಗನ್ನು ನೀಡಿತು. ಶೋಭಾಯಾತ್ರೆಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದುಕೊಂಡು ಕೇಸರಿ ಮಯವಾಗಿದ್ದು ಹೊಸ ಕಳೆಯನ್ನೇ ನೀಡಿತು. ಭಾರತ್‌ ಮಾತಾಕಿ ಜೈ ಎನ್ನುವ ಮುಗಿಲು ಮುಟ್ಟುವ ಘೋಷಣೆಗಳು ಮೊಳಗಿತು. ಶೋಭಯಾತ್ರೆ ಸಾಗಿ ಬಂದ ರಸ್ತೆಯುದ್ದಕ್ಕೂ ಮಾತೆಯರು ಪುಷ್ಪಾರ್ಚನೆಗೈದರು. ಮಕ್ಕಳು ಮಹಿಳೆಯರು ವೃದ್ಧರು ಎನ್ನದೇ ರಸ್ತೆಯುದ್ದಕ್ಕೂ ಜಯಘೋಷ ಮೊಳಗಿಸಿದರು. ಎಲ್ಲೆಡೆ ಭವ್ಯವಾದ ಸ್ವಾಗತವನ್ನೂ ನೀಡಲಾಯಿತು.

ವಿಶೇಷತೆ
ಸಾವಿರಾರು ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು. ಉಳಿದ ಮಂದಿಗೆ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದ ಅಚ್ಚುಕಟ್ಟು ನಿರ್ವಹಣೆಗೆ 2,000ಕ್ಕೂ ಅಧಿಕ ಮಂದಿ ಸ್ವಯಂಸೇವಕರ ತಂಡ ರೂಪಿತಗೊಂಡಿತ್ತು, ಪಾನೀಯಗಳನ್ನು ವಿತರಿಸಲು ಮಾತೃ ಮಂಡಳಿ, ವಿವಿಧ ಸಂಘಟನೆಗಳ ಕಾರ್ಯಕರ್ತರು ಶ್ರಮಿಸಿದರು.

 ವ್ಯವಸ್ಥಿತ ಪಾರ್ಕಿಂಗ್‌
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಪುತ್ತಿಗೆ, ಬದಿಯಡ್ಕ, ಕುಂಬ್ಡಾಜೆ, ಎಣ್ಮಕಜೆ ಪಂ.ಗಳಿಂದ ಬಂದ ವಾಹನಗಳು ಜನರನ್ನು ಬಿ.ಸಿ. ರೋಡ್‌ ನಲ್ಲಿ ಇಳಿಸಿ ಉದಯಗಿರಿ ವಿಷ್ಣುಮೂರ್ತಿ ಕ್ಷೇತ್ರ ಪರಿಸರದಲ್ಲಿ ವಾಹನ ಪಾರ್ಕಿಂಗ್‌ ಮಾಡಲಾಗಿತ್ತು. ಕಾರ್ಯಕ್ರಮದ ಆನಂತರ ಸೀತಾಂಗೋಳಿ ದಾರಿಯಾಗಿ ಊರಿಗೆ ತೆರಳಲು ವ್ಯವಸ್ಥೆಗೊಳಿಸಲಾಗಿತ್ತು. ಮಂಜೇಶ್ವರ, ವರ್ಕಾಡಿ, ಮೀಂಜ, ಪೈವಳಿಕೆ, ಮಂಗಲ್ಪಾಡಿ, ಕುಂಬಳೆ ಕಡೆಗಳಿಂದ ಬಂದ ವಾಹನಗಳು ಅಣಂಗೂರಿನಲ್ಲಿ ಪ್ರಯಾಣಿಕರನ್ನು ಇಳಿಸಿ ಉದಯಗಿರಿ ಕ್ಷೇತ್ರ ಪರಿಸರದಲ್ಲಿ ವಾಹನ ನಿಲುಗಡೆ ಮಾಡಲಾಗಿತ್ತು. ಸೀತಾಂಗೋಳಿ ದಾರಿಯಾಗಿ ಊರಿಗೆ ತೆರಳಲು ವ್ಯವಸ್ಥೆ ಮಾಡಲಾಗಿತ್ತು. ಮೊಗ್ರಾಲ್‌ ಪುತ್ತೂರು, ಮಧೂರು ಪಂಚಾಯತ್‌ಗಳು ಮತ್ತು ಕಾಸರಗೋಡು ನಗರಸಭೆಯ ವಾಹನಗಳು ಅಣಂಗೂರಿನಲ್ಲಿ ಪ್ರಯಾಣಿಕರನ್ನು ಇಳಿಸಿ ಪಾರೆಕಟ್ಟೆಯ ಎ.ಆರ್‌. ಕ್ಯಾಂಪ್‌ ರಸ್ತೆಯ ಪಕ್ಕದಲ್ಲಿ ವಾಹನ ನಿಲುಗಡೆ ಮಾಡಲಾಗಿತ್ತು. ಪಾರೆಕಟ್ಟೆ ದಾರಿಯಾಗಿ ಮಧೂರು ರಸ್ತೆ ಮೂಲಕ ಊರಿಗೆ ತೆರಳಲು ಅನುವು ಮಾಡಲಾಯಿತು.

ದೇಲಂಪಾಡಿ, ಬೆಳ್ಳೂರು, ಕಾರಡ್ಕ, ಮುಳಿಯಾರು, ಅಡೂರು, ಚೆಂಗಳ ಕಡೆಯಿಂದ ಬರುವ ಪ್ರಯಾಣಿಕರು ಬಿ.ಸಿ. ರೋಡ್‌ನ‌ಲ್ಲಿ ಜನರನ್ನು ಇಳಿಸಿ ವಾಹನಗಳನ್ನು ಬಿ.ಸಿರೋಡ್‌ ನಿಂದ ಸಿವಿಲ್‌ ಸ್ಟೇಶನ್‌ನ ಮುಂಭಾಗದ ರಸ್ತೆ ಮೂಲಕ ಸಾಗಿ (ಪನ್ನಿಪಾರೆ ರಸ್ತೆ) ಸ್ಟೇಡಿಯಂನ ಉತ್ತರದ ಹೊರ ವಲಯದಲ್ಲಿ ನಿಲುಗಡೆ ಮಾಡಲಾಗಿತ್ತು. ಬಂದ ಮಾರ್ಗ ದಲ್ಲೇ ಚೆರ್ಕಳ ದಾರಿಯಾಗಿ ಮರಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ವಿದ್ಯಾನಗರ- ಸೀತಂಗೋಳಿ ರಸ್ತೆಯಲ್ಲಿರುವ ಗೋಪಾಲಕೃಷ್ಣ ಮರದ ಮಿಲ್‌ನ ಆವರಣದೊಳಗೆ ಬೈಕ್‌ ಗಳನ್ನು ನಿಲುಗಡೆಗೊಳಿಸಲಾಗಿತ್ತು.

ಎಲ್ಲೆಲ್ಲೂ ಬಂದೋಬಸ್ತು 
ಬೃಹತ್‌ ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಎರಡೂ ಕಡೆಯಿಂದ ಹರಿದು ಬಂದ ಶೋಭಾಯಾತ್ರೆಯ ಸಂದರ್ಭದಲ್ಲೂ ವ್ಯಾಪಕ ಪೊಲೀಸ್‌ ಭದ್ರತೆ ನೀಡಲಾಗಿತ್ತು. ಸಮಾಜೋತ್ಸವವನ್ನು ಆಯೋಜಿಸಿದ ವಿದ್ಯಾನಗರದ ಕಾಸರಗೋಡು ಮುನ್ಸಿಪಲ್‌ ಸ್ಟೇಡಿಯಂನಲ್ಲಿ ಮತ್ತು ಹೊರ ವಲಯದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

ಆಬಾಲವೃದ್ಧರ ಉತ್ಸಾಹ, ಉಲ್ಲಾಸ 
ಶೋಭಾಯಾತ್ರೆಯಲ್ಲಿ ಯುವಕ, ಯುವತಿಯರೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಕ್ಕಳು, ಹಿರಿಯರು ಸೇರಿದಂತೆ ಬಹುತೇಕ ಎಲ್ಲ ವಯೋಮಾನದವರೂ ಶೋಭಾಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳೆಯರ ಸಂಖ್ಯೆಯೂ ಅಧಿಕವಾಗಿತ್ತು. ಹಿಂದುತ್ವದ ಘೋಷಣೆ ದಟ್ಟವಾಗಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ