ಕಾಸರಗೋಡು ಜಿಲ್ಲಾ ಆಸ್ಪತ್ರೆ ದೇಶಕ್ಕೆ ಪ್ರಥಮ

1.20 ಕೋಟಿ ರೂ. ನಗದು ಬಹುಮಾನ

Team Udayavani, Nov 14, 2019, 5:40 AM IST

ಕಾಸರಗೋಡು: ಕಾಂಞಂಗಾಡ್‌ನ‌ಲ್ಲಿರುವ ಕಾಸರಗೋಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ನ್ಯಾಶನಲ್‌ ಕ್ವಾಲಿಟಿ ಅಶ್ಯೂರೆನ್ಸ್‌ ಸ್ಟಾಂಡರ್ಡ್ಸ್‌ ಸರ್ಟಿಫಿಕೇಟ್‌ ಲಭ್ಯವಾಗಿದ್ದು, ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಅರ್ಹತಾ ಪತ್ರದ ಜತೆಗೆ 1.20 ಕೋಟಿ ರೂ. ನಗದು ಬಹುಮಾನವೂ ಇದೆ.

ಜಿಲ್ಲಾ ಆಸ್ಪತ್ರೆಗಾಗಿ ಜಿಲ್ಲಾ ಪಂಚಾಯತ್‌ ಅನೇಕ ಯೋಜನೆಗಳನ್ನು ರಚಿಸಿ ಜಾರಿಗೊಳಿಸಿದೆ. ಅತ್ಯುತ್ತಮ ಶುಚಿತ್ವ, ಉತ್ತಮ ಆರೋಗ್ಯ ಸೌಲಭ್ಯಕ್ಕಾಗಿ 2017ರಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಈ ಸಂಬಂಧ ಕಾಯಕಲ್ಪ ಪ್ರಶಸ್ತಿಯನ್ನೂ ಗಳಿಸಿತ್ತು. 2018ರಲ್ಲಿ ಎರಡನೇ ಸ್ಥಾನಕ್ಕೇರಿತ್ತು. 2019ನೇ ಸಾಲಿನಲ್ಲಿ ದೇಶಕ್ಕೇ ಪ್ರಥಮ ಬಹುಮಾನವನ್ನು ಈ ಆಸ್ಪತ್ರೆ ಪಡೆದುಕೊಂಡಿದೆ.

ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್‌ ಅರ್ಹತಾಪತ್ರ ಪ್ರದಾನ ಮಾಡಿದ್ದಾರೆ. ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್‌ ನೇತೃತ್ವದಲ್ಲಿ ಆಸ್ಪತ್ರೆಯ ಸಿಬಂದಿ ಪಡೆದುಕೊಂಡಿದ್ದಾರೆ.

2019 ಮೇ ತಿಂಗಳಲ್ಲಿ ಮೂರು ದಿನಗಳ ಕಾಲ ಪರಿಣತರಾದ ಮೂವರು ವೈದ್ಯರ ಸಹಿತ ಕೇಂದ್ರ ತಪಾಸಣೆ ತಂಡ ಇಲ್ಲಿಗೆ ಆಗಮಿಸಿ ಗುಣಮಟ್ಟದ ತಪಾಸಣೆ ನಡೆಸಿ ಅರ್ಹತಾ ಪತ್ರಕ್ಕೆ ಶಿಫಾರಸು ಮಾಡಿತ್ತು. ಮುಂದಿನ ಜನವರಿಯಲ್ಲಿ ಇಲ್ಲಿ ಕ್ಯಾತ್‌ಲ್ಯಾಬ್‌ ಸೌಲಭ್ಯ ಆರಂಭಗೊಳ್ಳಲಿದ್ದು, ಜಿಲ್ಲೆಯ ಹೃದ್ರೋಗಿಗಳಿಗೆ ವರದಾನವಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ