ಜಲಶಕ್ತಿ ಅಭಿಯಾನದಲ್ಲಿ ಕಾಸರಗೋಡು ಜಿಲ್ಲೆ ಸೇರ್ಪಡೆ

Team Udayavani, Jul 3, 2019, 5:57 AM IST

ಕಾಸರಗೋಡು: ದೇಶದ ಗ್ರಾಮೀಣ ಪ್ರದೇಶ ಸಹಿತ ಹಲವು ಭಾಗಗಳಲ್ಲಿ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹ ಉದ್ದೇಶವನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರ ಆಯೋಜಿಸಿದ ಜಲಶಕ್ತಿ ಅಭಿಯಾನದಲ್ಲಿ ಕೇರಳ ರಾಜ್ಯದ ಕಾಸರಗೋಡು ಮತ್ತು ಪಾಲ್ಗಾಟ್ ಜಿಲ್ಲೆಯನ್ನು ಸೇರ್ಪಡೆಗೊಳಿಸಲಾಗಿದೆ.

ಈಗಾಗಲೇ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಸೋಮವಾರ ‘ಜಲ ಶಕ್ತಿ ಅಭಿಯಾನ’ಕ್ಕೆ ಚಾಲನೆ ನೀಡಿದ್ದು, ಈ ಅಭಿಯಾನದ ಮೂಲಕ ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು, ಸಾಂಪ್ರದಾಯಿಕ ಮತ್ತು ಇತರ ಜಲಮೂಲಗಳ ಪುನಃಶ್ಚೇತನ, ನೀರಿನ ಮರುಬಳಕೆ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ ನಡೆಯಲಿದೆ. ಸೆ. 15ರ ವರೆಗೆ ದೇಶದ 256 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದರಲ್ಲಿ ಕಾಸರ ಗೋಡು ಮತ್ತು ಪಾಲ್ಗಾಟ್ ಜಿಲ್ಲೆ ಒಳಗೊಂಡಿದೆ.

ಐಎಎಸ್‌ ಅಧಿಕಾರಿಗಳಿಗೆ ಹೊಣೆಗಾರಿಕೆ

ಈ ಯೋಜನೆಯನ್ನು ಸಾಕಾರಗೊಳಿಸಲು ಜಾಯಿಂಟ್ ಸೆಕ್ರೆಟರಿ ರ್‍ಯಾಂಕ್‌ನಲ್ಲಿರುವ 256 ಐ.ಎ.ಎಸ್‌. ಉದ್ಯೋಗಸ್ಥರಿಗೆ ಜವಾಬ್ದಾರಿ ವಹಿಸಿಕೊಡಲಾಗಿದೆ. ಜಲ ಸಂಪನ್ಮೂಲ ವಿನಿಯೋಗ ಉದ್ಯೋಗಸ್ಥರು, ವಿಜ್ಞಾನಿಗಳು, ಕೇಂದ್ರ ಸರಕಾರದ ಉದ್ಯೋಗಸ್ಥರು ಜಂಟಿಯಾಗಿ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಪ್ರದೇಶಗಳಲ್ಲಿ ಜಲ ಸಂರಕ್ಷಣೆಗೆ ಅಗತ್ಯವಾದ ಕ್ರಮಗಳ ಬಗ್ಗೆ ಅವಲೋಕನ ನಡೆಸಲಿದ್ದಾರೆ. ವಾರದಲ್ಲಿ ಮೂರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಗಳ ನಿರ್ವಹಣೆಯ ಬಗ್ಗೆ ಅವಲೋಕಿಸುವರು. ಅತೀ ತೀವ್ರ ಮಟ್ಟದಲ್ಲಿ ಜಲ ಕ್ಷಾಮ ಉಂಟಾಗಿರುವ ಜಿಲ್ಲೆಗಳಲ್ಲಿ ನವಂಬರ್‌ 30ರ ವರೆಗೆ ಈ ಯೋಜನೆ ಮುಂದುವರಿಯಲಿದೆ. ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯದ ಕೆಲವು ಜಿಲ್ಲೆಗಳೂ ಈ ಯೋಜನೆಯಲ್ಲಿ ಸೇರ್ಪಡೆಗೊಂಡಿದೆ.

ಜಿಲ್ಲಾಡಳಿತದಿಂದ ಇಬ್ಭರು ಸದಸ್ಯರು

ಕಾಸರಗೋಡು ಜಿಲ್ಲೆಯ ಉಸ್ತುವಾರಿ ವಹಿಸಿರುವ ಅಧಿಕಾರಿಗಳಿಗೆ ನೆರವಾಗಲು ಆಯಾ ಜಿಲ್ಲಾಡಳಿತ ಕೂಡ ಇಬ್ಬರು ಸದಸರ್ಯನ್ನು ಈ ಕೆಲಸಕ್ಕೆ ನೇಮಕ ಮಾಡಬೇಕಾಗಿದೆ. ಈ ಇಬ್ಬರು ಸದಸ್ಯರು ಕೇಂದ್ರ ತಂಡದೊಂದಿಗೆ ಕೈಜೋಡಿಸಲಿದ್ದಾರೆ.

ಪ್ರಧಾನಿಯಾಗಿ ಎರಡನೇ ಭಾರಿ ಅಧಿಕಾರ ವಹಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗುವಂತೆ ದೇಶದ ಜನತೆಗೆ ಕಳೆದ ರವಿವಾರವಷ್ಟೇ ಕರೆ ನೀಡಿದ್ದರು.

ನೀರಿಗಾಗಿ ಹಾಹಾಕಾರ

256 ಜಿಲ್ಲೆಗಳ 1,598 ವಲಯಗಳನ್ನು ಕೇಂದ್ರೀಕರಿಸಿ ಜಲ ಸಂರಕ್ಷಣೆ ಕೈಗೊಳ್ಳುವ ಯೋಜನೆಯಾಗಿರುವ ಜಲಶಕ್ತಿ ಅಭಿಯಾನದಿಂದ ದೇಶದಲ್ಲಿ ತೀವ್ರವಾಗಿ ನೀರಿನ ಅಭಾವ ಎದುರಿಸುತ್ತಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಅಗತ್ಯದ ಕ್ರಮ ಸಾಕಾರಗೊಳ್ಳಲಿದೆ. ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ನೀರಿನ ಸಮಸ್ಯೆ ತೀವ್ರ ಬಿಗಡಾಯಿಸಿದ್ದು, ನೀರಿಗಾಗಿ ಹಾಹಾಕಾರವಿದೆ. ಈ ವರ್ಷ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಭಾರೀ ಕುಸಿದಿದ್ದು, ಕಳೆದ ವರ್ಷ ಈ ಕಾಲಘಟ್ಟದಲ್ಲಿ ಲಭಿಸಿದ ಮಳೆಯ ಶೇ.30 ಕೂಡಾ ಈ ಬಾರಿ ಲಭಿಸಿಲ್ಲ ಎಂದು ಅಂದಾಜಿಸಲಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ