ಸಾಧನೆಗೆ ನಿರಂತರ ಅಧ್ಯಯನ ಅಗತ್ಯ: ಸಂಜೀವ ರೈ

Team Udayavani, Jun 11, 2019, 5:00 AM IST

ಕಾಟುಕುಕ್ಕೆ: ಇಂದಿನ ವಿದ್ಯಾರ್ಥಿಗಳು ಬಹಳ ಪ್ರತಿಭಾವಂತರು. ಆದರೆ ಓದುವ ಹವ್ಯಾಸ ಕಡಿಮೆಯಾಗಿರುವುದು ಬಹಳ ಆತಂಕಕಾರಿಯಾದ ವಿಷಯ. ಅದೇ ರೀತಿ ಸಾಮಾಜಿಕ ಜಾಲತಾಣದ ದುರುಪ ಯೋಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ವ್ಯತಿರಿಕ್ತವಾಗಿ ಬಾಧಿಸಲಿದೆ ಎಂದು ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್‌ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸಂಜೀವ ರೈ ಅಭಿಪ್ರಾಯ ಪಟ್ಟರು. ಅವರು ಶಾಲಾ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಶೀಲರಾಗಿ ತಮ್ಮ ಜ್ಞಾನವನ್ನು ಓದುವಿಕೆಯ ಮೂಲಕ ಹೆಚ್ಚಿಸಿ ಕೊಳ್ಳುವುದು, ಅದರೊಂದಿಗೆ ಅಧ್ಯಾಪಕರು ಸೂಕ್ತವಾದ ಮಾರ್ಗ ದರ್ಶನವನ್ನು ನೀಡುವುದು, ಹೆತ್ತವರು ತಮ್ಮ ಮಗು ಏನು ಮಾಡುತ್ತಿದೆ ಎಂಬ ಗಮನವಿರಿಸುವುದು ವಿದ್ಯಾರ್ಥಿಗಳ ಗುರಿ ತಲುಪುವುದಕ್ಕೆ ಸಹಕಾರಿಯಾಗುವುದು ಎಂದು ಅವರು ತಿಳಿಸಿದರು. ಅವರು ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭಕೋರಿದರು.

ಪ್ರಿನ್ಸಿಪಾಲ್‌ ಪದ್ಮನಾಭ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿನಿಂದ ಕಲಿಯಬೇಕು. ಯಾವಾಗ ವಿದ್ಯಾಭ್ಯಾಸ ಶಿಸ್ತಿನಿಂದ ಕೂಡಿರುತ್ತದೆಯೋ ಅಂದು ಅದು ಅರ್ಥಪೂರ್ಣ ವಾಗುತ್ತದೆ ಎಂದು ಅವರು ತಿಳಿಸಿದರು. ಅವರು ಶೇಕಡಾ 100 ಫಲಿತಾಂಶ ಪಡೆದ ಹೈಸ್ಕೂಲು ವಿಭಾಗ ಹಾಗೂ ಅತ್ಯುತ್ತಮ ಸಾಧನೆ ಮಾಡಿದ ಹೈ. ಸೆಕೆಂಡರಿ ವಿದ್ಯಾರ್ಥಿಗಳನ್ನು ಗೌರವಿಸಿದರು. ಪಿ.ಟಿ.ಎ. ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ ಮಾತನಾಡಿ ಕಾಟುಕುಕ್ಕೆಯ ಈ ವಿದ್ಯಾಸಂಸ್ಥೆ ಇನ್ನಷ್ಟು ಪ್ರತಿಭೆಗಳನ್ನು ಸಮಾಜಕ್ಕೆ ನೀಡಲಿ ಎಂದು ಶುಭ ಹಾರೈಸಿದರು.

ಪ್ರವೇಶೋತ್ಸವದ ಮುಖ್ಯಮಂತ್ರಿಯ ಸಂದೇಶವನ್ನು ಮುಖ್ಯೋಪಾಧ್ಯಾಯ ಸುಧೀರ್‌ ಕುಮಾರ್‌ ರೈ ವಾಚಿಸಿದರು. ಹೈಸ್ಕೂಲ್‌ ಹಾಗೂ ಹೈಯರ್‌ ಸೆಕೆಂಡರಿ ವಿಲೀನದ ಬಗ್ಗೆ ಸಂದೀಪ್‌ ಕುಮಾರ್‌ ಮಾಹಿತಿ ನೀಡಿದರು. ಶೇಕಡಾ ನೂರು ಫಲಿತಾಂಶ ಪಡೆದ ಜಿಲ್ಲಾ ಪಂಚಾಯತ್‌ ಸ್ಮರಣಿಕೆಯನ್ನು ಅಧ್ಯಕ್ಷರು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ರಾಜೇಶ್‌ ಸಿ.ಎಚ್‌. ಕಾರ್ಯಕ್ರಮ ನಿರೂಪಿಸಿ ದರು. ಲೋಕನಾಥ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ