ಕಾಸರಗೋಡಿನ ಕಳೆಂಜನ ಗುಂಡಿಯಲ್ಲಿ ನೀರಿಲ್ಲ…. ಬರಲಿದೆಯೇ ಬರಗಾಲ….!?

Team Udayavani, May 16, 2019, 3:45 PM IST

ಬದಿಯಡ್ಕ: ನಮ್ಮ ನಂಬಿಕೆ ವಿಶ್ವಾಸಗಳನ್ನು ಜೀವಂತವಾಗಿರಿಸುವ ಹಲವಾರು ವೈಚಿತ್ರ್ಯಗಳು ಪ್ರಕೃತಿಯಲ್ಲಿ ಸದಾ ಜೀವಂತವಾಗಿದೆ. ಅವುಗಳಿಗೊಂದು ಜ್ವಲಂತ ಉದಾಹರಣೆ ಚೆಂಡೆತ್ತಡ್ಕ. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹಾ ಪ್ರವೇಶ, ವರ್ಷ ಪೂರ್ತಿ ನೀರು ನಿಡುವ ಕಳಂಜನ ಗುಂಡಿಗಳು ಚೆಂಡೆತ್ತಡ್ಕದಲ್ಲಿವೆ. ಕೇರಳ, ಕರ್ನಾಟಕ ಗಡಿ, ಉಭಯ ರಾಜ್ಯಗಳ ರಕ್ಷಿತಾರಣ್ಯ ವಲಯದಲ್ಲಿರುವ ಈ ಪ್ರದೇಶವು ಹಲವು ಪ್ರಾಕೃತಿಕ ವೈಶಿಷ್ಟ್ಯತೆಗಳಿಂದ ಮತ್ತು ಐತಿಹಾಸಿಕ ಹಿನ್ನಲೆಗಳಿಂದ ಕೂಡಿ ಪ್ರಕೃತಿ ರಮಣೀಯವಾಗಿದ್ದು ಕಣ ಕಣದಲ್ಲೂ ನಂಬಿಕೆಗೆ ಇಂಬು ಕೊಡುವ ಒಂದೊಂದು ಕಥೆಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿದೆ.

ಬತ್ತದ ಗುಂಡಿಯಲ್ಲಿ ನೀರಿಲ್ಲ!
ಸದಾ ಹಸಿರು ಗಿಡ ಮರ, ಹುಲ್ಲುಗಾವಲು, ಬೆಟ್ಟ ಗುಡ್ಡ, ಬಂಡೆ ಕಲ್ಲುಗಳಿಂದ ಕೂಡಿದ ಪ್ರದೇಶ ಚೆಂಡೆತ್ತಡ್ಕ ಬಳಿಯ ಕಳಂಜನ ಗುಂಡಿ ವರ್ಷಪೂರ್ತಿ ನೀರಿನ ಒರತೆ ಹೊಂದಿರುವ ಹಾಗೂ ಬತ್ತಿದ ಇತಿಹಾಸವಿಲ್ಲದ ಒಂದುವರೆ ಅಡಿ ಆಳದ ನೀರಿನ ಸಣ್ಣ ಕೂಪ. ಹಿಂದೆ ಹಳ್ಳಿ ಪ್ರದೇಶಗಳಲ್ಲಿ ಮುಳಿಹುಲ್ಲು ಹಾಸಿನ ಮನೆಗಳಿದ್ದವು. ಆಸುಪಾಸಿನ ಸ್ಥಳೀಯರ ಬಾಯಾರಿಕೆ ತಣಿಸಲು ಕಳೆಂಜನ ಗುಂಡಿಯನ್ನು ಆಶ್ರಯಿಸಿದ್ದರು. ಮಳೆ ಸುರಿದು ಜಾಂಬ್ರಿ ಕೆರೆ ತುಂಬಿದಲ್ಲಿ ಕಳೆಂಜನ ಗುಂಡಿ ತುಂಬುತ್ತಿತ್ತು. ಹಾವು, ಮುಂಗುಸಿ ಇತರ ಸಣ್ಣ ಪುಟ್ಟ ಪ್ರಾಣಿ, ಪಕ್ಷಿಗಳಿಗೆ ಜೀವ ಜಲವಾಗಿದ್ದ ಕಳೆಂಜನ ಗುಂಡಿ ಇದೀಗ ಒರತೆಯನ್ನು ನಿಲ್ಲಿಸಿದ್ದು ಜೀವರಾಶಿಗಳ ಉಳಿವಿಗೆ ಸಂಚಕಾರ ಉಂಟಾಗಿದೆ. ಕಳೆಂಜನ ಗುಂಡಿಯಲ್ಲಿ ಅಭೂತಪೂರ್ವ ಎಂಬಂತೆ ನೀರಿಲ್ಲದಾಗಿದೆ.

ಐತಿಹ್ಯ
ತುಳುನಾಡಿನ ಕರ್ಕಾಟಕ ಮಾಸ (ಆಟಿ ತಿಂಗಳು) ಮನೆಗಳಿಗೆ ತೆರಳಿ ಕಷ್ಟಗಳನ್ನು ಕಳೆಯುವ (ಹೋಗಲಾಡಿಸುವ) ಆಟಿ ಕಳಂಜ ಕೈ ತುಂಬಾ ದಾನ ಧರ್ಮಗಳನ್ನು ಪಡೆದು ಆಟಿ ತಿಂಗಳು ಕಳೆದು ಸಿಂಹ ಸಂಕ್ರಾಂತಿ (ಸೋಣ ತಿಂಗಳು) ಬಂದರೂ ಅದರ ಪರಿವೇ ಇಲ್ಲದೆ ಯಾತ್ರೆ ಮುಂದುವರಿಸುತ್ತಾನೆ. ಸಿಂಹ ಮಾಸದಲ್ಲಿ ಧರ್ಮ ಬೇಡುವುದು ನಿಷಿದ್ಧವಾದರೂ ಕಟ್ಟಳೆಯನ್ನು ಮೀರಿ ಸಿಂಹ ಮಾಸದ ಮೊದಲ ದಿನ ಚೆಂಡೆತ್ತಡ್ಕ ಜಾಂಬ್ರಿ ಗುಹೆ ಸಮೀಪ ಬಂದಾಗ ಅದೃಶ್ಯನಾಗುತ್ತಾನೆ. ಈ ಪ್ರದೇಶ ಕಳೆಂಜನ ಗುಂಡಿ ಎಂದು ಪ್ರಸಿದ್ಧಿ ಪಡೆದಿದೆ. ಕಳೆಂಜನ ಗುಂಡಿ ಸಮೀಪ, ಕಳೆಂಜ ತನ್ನ ಒಲಿಯ ಕೊಡೆಯನ್ನು ಊರಿದ ಸ್ಥಳವೆಂದು ನಂಬಲಾದ ಚಿಕ್ಕ ರಂಧ್ರವಿದೆ.

ಇದು ಅಪಾಯದ ಸೂಚನೆಯೇ?
ಇಲ್ಲಿನ ಜಲಾಶಯಗಳೆಲ್ಲವೂ ಬತ್ತಿಹೋದರೂ ಈ ತನಕ ಬತ್ತದ ಕಳೆಂಜನ ಬಾವಿಯೂ ನೀರಿಲ್ಲದೆ ಒಣಗಿ ಹೋಗಿರುವುದು ಮುಂದೆ ಎದುರಿಸಬೇಕಾದ ಬರ ಪರಿಸ್ಥಿತಿಯ ಸೂಚನೆಯಾಗಿದೆ ಎಂಬ ಆತಂಕ ಊರಜನರನ್ನು ಕಾಡಲಾರಂಭಿಸಿದೆ. ಎರಡು ವರ್ಷ ಹಿಂದಿನ ಮೇ 2 ರಂದು ಜಾಂಬ್ರಿ ಮಹೋತ್ಸವ ಜರುಗಿದ ಸಂದರ್ಭ ಕಳೆಂಜನ ಗುಂಡಿ ನೀರಿನಿಂದ ತುಂಬಿತ್ತು. ಜೀವ ಸಂಕುಲಗಳಿಗೆ ನೀರುಣಿಸುತ್ತಿದ್ದ ಗುಂಡಿ ಬತ್ತಿರುವುದು ಪ್ರಕೃತಿ ನಮಗೆ ನೀಡುವ ಬರಗಾಲದ ಸೂಚನೆ. ಬೇಸಗೆ ಮಳೆ ಸುರಿಯದಿರುವುದು, ಎಲ್ಲೆಂದರಲ್ಲಿ ಕೊಳವೆ ಬಾವಿ ನಿರ್ಮಾಣ ಕಳೆಂಜನ ಗುಂಡಿ ಒರತೆ ನಿಲ್ಲಲು ಕಾರಣ. ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ನೀರಿಗಾಗಿ ಹೋರಾಡುವ ಸ್ಥಿತಿ ಬರಬಹುದು.ಅತಿ ಆಸೆ ಗತಿ ಕೇಡು ಎನ್ನುವಂತೆ ಅಭಿವೃದ್ಧಿಯ ನೆಪದಲ್ಲಿ ಪ್ರಕೃತಿಯ ಮೇಲೆ ಎರಗುವ ದಬ್ಟಾಳಿಕೆಗೆ ಪ್ರಕೃತಿಯೇ ಉತ್ತರಿಸಲಾರಂಭಿಸಿದೆ.

ಕಳಂಜನ ಗುಂಡಿ ಬತ್ತಿರುವುದು ಯಾವುದೋ ವಿನಾಶದ ಸೂಚನೆಯೇ ಎಂಬ ಭಯ ಜನರನ್ನು ಕಾಡುತ್ತಿದೆ. ಭೂಮಿಯ ಮೇಲೆ ನಡೆಯುವ ದೌರ್ಜನ್ಯ ಮತ್ತು ಪ್ರಕೃತಿ ನಾಶವೇ ಇದಕ್ಕೆ ಕಾರಣ. ಮನುಷ್ಯನ ಸ್ವಾರ್ಥ ಅವನ ಬದುಕನ್ನೇ ಕತ್ತಲೆಗೆ ಕೊಂಡೊಯ್ಯುತ್ತಿರುವುದು ಕಣ್ಣಿದ್ದೂ ಕಾಣದೆ ಹೋಗುವುದು ಈ ಕಾಲದ ದೌರ್ಭಾಗ್ಯ.

ಹಲವಾರು ಪ್ರಕೃತಿ ವೈಶಿಷ್ಟ್ಯಗಳಲ್ಲಿ ಕಳಂಜನ ಗುಂಡಿಯೂ ಒಂದು. ಎರಡು ವರ್ಷ ಹಿಂದಿನ ಮೇ 2 ರಂದು ಜಾಂಬ್ರಿ ಮಹೋತ್ಸವ ಜರುಗಿದ ಸಂದರ್ಭ ಕಳೆಂಜನ ಗುಂಡಿ ನೀರಿನಿಂದ ತುಂಬಿತ್ತು. ಚಿಕ್ಕ ಪುಟ್ಟ ಜೀವ ಸಂಕುಲಗಳಿಗೆ ನೀರುಣಿಸುತ್ತಿದ್ದ ಕೂಪ ಇತಿಹಾಸದಲ್ಲಿ ಪ್ರಥಮ ಬಾರಿ ಎಂಬಂತೆ ಇಂದು ಬತ್ತಿರುವುದು ಪ್ರಕೃತಿ ನಮಗೆ ನೀಡುವ ಬರಗಾಲದ ಸೂಚನೆ. ಬೇಸಗೆ ಮಳೆ ಸುರಿಯದಿರುವುದು, ಎಲ್ಲೆಂದರಲ್ಲಿ ಕೊಳವೆ ಬಾವಿ ನಿರ್ಮಾಣ ಕಳೆಂಜನ ಗುಂಡಿ ಒರತೆ ನಿಲ್ಲಲು ಕಾರಣ. ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ಬರಬಹುದು.
– ಮಹಾಬಲೇಶ್ವರ ಭಟ್‌, ಗಿಳಿಯಾಲು, ಸ್ಥಳೀಯರು.

ವರದಿ: ಅಖೀಲೇಶ್‌ ನಗುಮುಗಂ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ