ಎ. 14ರಂದು ಯಕ್ಷನುಡಿ ಸರಣಿ ತಾಳಮದ್ದಳೆ ಮನೆಮನೆ ಅಭಿಯಾನ ಪ್ರಾರಂಭ

Team Udayavani, Apr 13, 2018, 9:10 AM IST

ಕಾಸರಗೋಡು: ಕಾಸರಗೋಡು ಕೇರಳದ ಭಾಗವಾದ ಮೇಲೆ ಆಡಳಿತ ಭಾಷೆಯ ದಟ್ಟ ಪ್ರಭಾವವು ಸಹಜವಾಗಿ ಕಾಸರಗೋಡನ್ನು ವ್ಯಾಪಿಸಿದ ಪರಿಣಾಮ, ಜಾಗತೀಕರಣದ ಬಲವಂತದ ಒತ್ತಡ, ಆಧುನಿತೆಯ ಶೋಕಿ ಬದುಕಿನ ಪ್ರಭಾವಕ್ಕೆ ಮಣಿಯುವ ಜನರ ಬದಲಾದ ಮನಃಸ್ಥಿತಿ, ವ್ಯಾವಹಾರಿಕ ಮನೋಭಾವನೆಗಳಿಂದಾಗಿ ಉಂಟಾಗುವ ಪರಿಸರ ದೌರ್ಜನ್ಯ ಈ ಮುಂತಾದವುಗಳು ಪಾರಂಪರಿಕ ಮೌಲ್ಯಗಳಿಗೆ ಸಡ್ಡು ಹೊಡೆಯುವ, ಮಣ್ಣಿನ ಭಾಷೆ ಸಂಸ್ಕೃತಿಗೆ ಸವಾಲಾಗುವ ಪರಿಸ್ಥಿತಿ ಉಂಟಾಗಿದೆ.

ಇಂದಿನ ಪರಿಸ್ಥಿತಿಯಲ್ಲಿ ನೆಲದ ಭಾಷೆ ಮತ್ತು ನೆಲದ ಕಲೆಯು ಸೊರಗುವಾಗ ಯುವಜನತೆಯು ಎಚ್ಚೆತ್ತುಕೊಂಡು ಕೈಲಾದ ಸೇವೆಗೈಯುವುದು ಅನಿವಾರ್ಯವೂ ಅತ್ಯವಶ್ಯಕವಾದುದೂ ಹೌದು. ಈ ದೃಷ್ಟಿಯಿಂದ ರೂಪುಗೊಂಡ ಕನ್ನಡ ಯುವಬಳಗವು ಈಗಾಗಲೇ ಸಮಾಜಕ್ಕೆ ಅಗತ್ಯವೆನಿಸುವ ಕೆಲವೊಂದು ಕೆಲಸಕಾರ್ಯಗಳನ್ನು ಮಾಡುತ್ತಾ ಮುಂದುವರಿಯುತ್ತಿದೆ. ಮಣ್ಣಿನ ಭಾಷೆ, ಕಲೆ, ಸಂಸ್ಕೃತಿಯ ಉಳಿವು ಬೆಳವಣಿಗೆ, ಭಾಷಾ ಬಾಂಧವ್ಯ, ಬಹುತ್ವ ಪ್ರಜ್ಞೆ,  ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ, ಶೈಕ್ಷಣಿಕ, ಔದ್ಯೋಗಿಕ ಮತ್ತು ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಕಾರ್ಯ ಮುಂತಾದ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಬಳಗವು ಕಾರ್ಯಾಚರಿಸುತ್ತಿದೆ.

‘ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನ’ದ ಮೂಲಕ ಧಾರ್ಮಿಕ, ಸಾಮಾಜಿಕ ಮತ್ತು ಮಾನವೀಯ ಜಾಗೃತಿ ಮೂಡಿಸುವ ಕಾರ್ಯದ ಜತೆಜತೆಗೆ ಈ ಮಣ್ಣಿನ ಭಾಷೆ, ಸಂಸ್ಕೃತಿಯ ಮಹತ್ವ ವನ್ನು ತಿಳಿಸುವ, ಮುಖ್ಯವಾಗಿ ಸಂವಿಧಾನಬದ್ಧ ಹಕ್ಕುಗಳ ಬಗೆಗೆ ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ. ಮಣ್ಣಿನ ಭಾಷೆ, ಕಲೆ ಉಳಿಯಬೇಕಿದ್ದರೆ ಇಲ್ಲಿನ ಸರಕಾರಿ ವಿದ್ಯಾಸಂಸ್ಥೆಗಳು ಅಥವಾ ಸರಕಾರದ ಅನುದಾನದಿಂದ ನಡೆಯುತ್ತಿರುವ ವಿದ್ಯಾಸಂಸ್ಥೆಗಳು ಉಸಿರಾಡಬೇಕು. ಆ ಮೂಲಕ ಹೊಸ ತಲೆಮಾರು ಈ ಮಣ್ಣಿನ ಭಾಷೆಯ, ಸಂಸ್ಕೃತಿಯ ಅಭಿಮಾನಿಗಳಾಗಬೇಕು. ಆದರೆ ಶೋಕಿ ಬದುಕು ಮತ್ತು ಅಂಧಾನು ಕರಣೆಯಿಂದಾಗಿ ವಿದ್ಯಾವಂತರೂ ಇಲ್ಲಿನ ಭಾಷೆಯಿಂದ ಬದುಕು ಕಟ್ಟಿಕೊಂಡವರೂ ತಮ್ಮ ಮಕ್ಕಳನ್ನೂ ಈ ಮಣ್ಣಿನ ಭಾಷೆಯಿಂದ ವಿಮುಖರಾಗಿಸುವ ಪ್ರಣವತೆ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ‘ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನ’ವು ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಪ್ರೇರಣೆಯನ್ನು ನೀಡಬಲ್ಲುದು ಎಂಬ ನಂಬಿಕೆ ಯುವಬಳಗದ್ದು.

ಎ. 14ರಂದು ಅಪರಾಹ್ನ 1.30ರಿಂದ ಮುಳ್ಳೇರಿಯಾ ಸಮೀಪದ ಮವ್ವಾರು ಬಳಿಯ ಮಲ್ಲಮೂಲೆ ಕೌಸ್ತುಭ ನಿವಾಸದಲ್ಲಿ ಯಕ್ಷನುಡಿ ಸರಣಿ ತಾಳಮದ್ದಳೆ ಮನೆ ಮನೆ ಅಭಿಯಾನವನ್ನು ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಸುಂದರ ರಾವ್‌ ಉದ್ಘಾಟಿಸಲಿರುವರು. ಯಕ್ಷಗಾನ ಕಲಾವಿದ ಹಾಗೂ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ದಿಕ್ಸೂಚಿ ಭಾಷಣ ಮಾಡುವರು. ಕಾಸರ‌ಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಮಾಜಿ ಶಾಸಕ ಸಿ.ಎಚ್‌. ಕುಂಞಂಬು, ಕಾಸರಗೋಡು ಜಿ.ಪಂ. ಸದಸ್ಯ ಶ್ರೀಕಾಂತ್‌ ಕೆ., ಕರ್ನಾಟಕ ಯಕ್ಷಗಾನ ಸದಸ್ಯ ದಾಮೋದರ ಶೆಟ್ಟಿ ಭಾಗವಹಿಸುವರು. ಕುಂಬಾrಜೆ ಗ್ರಾ.ಪಂ. ಅಧ್ಯಕ್ಷೆ ಫಾತಿಮತ್‌ ಝುಹರ, ವಾರ್ಡ್‌ ಸದಸ್ಯ ರವೀಂದ್ರ ರೈ ಗೋಸಾಡ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ನಿಕಟಪೂರ್ವ ಅಧ್ಯಕ್ಷ ಜಯರಾಮ ಎಡನೀರು, ಹಿರಿಯ ರಂಗಕರ್ಮಿ, ಸಾಹಿತಿ ಥೋಮಸ್‌ ಡಿ’ಸೋಜಾ, ವಿಶ್ರಾಂತ ಉಪನೊಂದಾವಣಾಧಿಕಾರಿ ಮಹಮ್ಮದಾಲಿ ಪೆರ್ಲ, ಕವಿ, ಸಾಹಿತಿ ಸುಂದರ ಬಾರಡ್ಕ, ಸವಾಕ್‌ ಕಾರ್ಯ ದರ್ಶಿ ಸುಶ್ಮಿತಾ ಆರ್‌., ವಿಶ್ರಾಂತ ಸೈನಿಕ ಕೃಷ್ಣ ಮಣಿಯಾಣಿ ಮಲ್ಲಮೂಲೆ ಶುಭನುಡಿಗಳನ್ನಾಡುವರು. ಯುವಬಳಗದ ಮಾರ್ಗ ದರ್ಶಕ ಡಾ| ರತ್ನಾಕರ ಮಲ್ಲಮೂಲೆ, ಯುವಬಳಗದ ಪದಾಧಿಕಾರಿಗಳಾದ ರಕ್ಷಿತ್‌ ಪಿ.ಎಸ್‌., ಪ್ರಶಾಂತ ಹೊಳ್ಳ ಎನ್‌., ಸೌಮ್ಯಾ ಪ್ರಸಾದ್‌, ರಾಜೇಶ್‌ಎಸ್‌.ಪಿ., ವಿನೋದ್‌ ಕುಮಾರ್‌ ಸಿ.ಎಚ್‌. ಈ ಮುಂತಾದವರು ಉಪಸ್ಥಿತರಿರುವರು.

ಬಳಿಕ ನಾಟ್ಯಗುರು ದಿವಾಣ ಶಿವಶಂಕರ ಅವರ ಮಾರ್ಗದರ್ಶನದಲ್ಲಿ, ಯುವ ಬಳಗದ ಸದಸ್ಯರಿಂದ ಕರ್ಣಾರ್ಜುನ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್‌ ಪುಣಿಂಚತ್ತಾಯ ಪೆರ್ಲ, ಚೆಂಡೆಯಲ್ಲಿ ರಾಘವ ಬಲ್ಲಾಳ್‌, ಮದ್ದಳೆಯಲ್ಲಿ  ಶ್ರೀ ಸ್ಕಂದ ದಿವಾಣ ಸಹಕರಿಸುವರು. ಮುಮ್ಮೇಳದಲ್ಲಿ ದಿವಾಕರ ಬಲ್ಲಾಳ್‌ ಎ.ಬಿ., ನವೀನ ಕುಂಟಾರು, ಪ್ರಶಾಂತ ಪಡ್ರೆ, ಮನೋಜ್‌ಎಡನೀರು, ಶಶಿಧರ ಕುದಿಂಗಿಲ, ಮಣಿಕಂಠ ಪಾಂಡಿಬಯಲು, ಶ್ರದ್ಧಾ ಭಟ್‌ ಪಾಲ್ಗೊಳ್ಳುವರು.

‘ಕಾಸರಗೋಡಿನ ಪ್ರತಿಯೊಂದು ಮನೆಯ ಬಾಗಿಲು ತಟ್ಟಿದರೂ ಅಲ್ಲಿಂದೊಬ್ಬ ಯಕ್ಷಗಾನ ಕಲಾವಿದನೆದ್ದು ಬರುತ್ತಾನೆ’ ಎಂಬ ಮಾತು ಸರ್ವವಿದಿತ. ಜಾಗತಿಕತೆಯ ಪ್ರಭಾವ, ಆಧುನಿಕ ತಂತ್ರಜ್ಞಾನದ ಭರಾಟೆಯೆಡೆಯಲ್ಲಿ ಬದುಕಿಗೆ ಅರ್ಥನೀಡುವ ಮಣ್ಣಿನ ಕಲೆಗಳ ಸೊಗಸು ಕ್ಷೀಣವಾಗಿ ಆ ಸ್ಥಾನವನ್ನು ಅರ್ಥಹೀನ ನಡೆನುಡಿಗಳು ಆಕ್ರಮಿಸುವಾಗ, ಮಣ್ಣಿನ ಕಲೆ, ಸರ್ವಾಂಗೀಣ ಕಲೆಯಾದ ಯಕ್ಷಗಾನವು, ಒಳಿತಿನ ಹಿರಿಮೆಯನ್ನು, ಮಾನವೀಯತೆಯ ಅರ್ಥವನ್ನು ವಿಸ್ತರಿಸಿ ಹೇಳುತ್ತದೆ.ಇದರಲ್ಲಿ ನುಡಿಗೆ ಒತ್ತುಕೊಟ್ಟು  ಬೌದ್ಧಿಕ ಪರಿಜ್ಞಾನ ಮತ್ತು ತಾತ್ವಿಕತೆಯ ಒಳನೋಟದ ಮಹತ್ವವನ್ನು ತಿಳಿಸುವ “ತಾಳಮದ್ದಳೆ’ ಪ್ರಕಾರವನ್ನು ತಿಂಗಳಿಗೊಂದರಂತೆ ಮನೆ ಮನೆಯ ಮನಸ್ಸುಗಳಿಗೆ ತಲುಪಿಸುವ ನೂತನಯೋಜನೆ “ಯಕ್ಷನುಡಿ ಸರಣಿ ಮನೆ ಮನೆ ಅಭಿಯಾನ’ ವನ್ನು ಕನ್ನಡ ಯುವಬಳಗವು ಕೈಗೆತ್ತಿಕೊಂಡಿದೆ. ಪ್ರಾಧ್ಯಾಪಕ ಡಾ| ರತ್ನಾಕರ ಮಲ್ಲಮೂಲೆ ಮತ್ತು ಯಕ್ಷಗಾನ ಗುರುಗಳಾದ ಶಿವಶಂಕರ ದಿವಾಣರ ಗರಡಿಯಿಂದ ಹೊರಬಿದ್ದ ಒಂದಷ್ಟು ಶಿಷ್ಯರು ಈಗ ನಾಡಿನ ಬೇರೆ ಬೇರೆ ಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಈ ಅಭಿಯಾನದ ಮೂಲಕ ಅವರು ಮತ್ತೆ ಒಂದಾಗುವ ಸಂದರ್ಭ ಸನ್ನಿಹಿತವಾಗುತ್ತಿದೆ. ಈ ಮೂಲಕ ಕಾಸರಗೋಡಿನ ಸಾಂಸ್ಕೃತಿಕ ವರ್ತುಲದಲ್ಲಿ ಒಂದು ವಿನೂತನ ಹೆಜ್ಜೆ ಮೂಡಿಬರಲಿದೆ.

ಈಗಾಗಲೇ ಒಂದು ವರುಷದ ತಾಳಮದ್ದಳೆ ಕಾರ್ಯಕ್ರಮವು ನಿಗದಿಯಾಗಿದ್ದು ಪ್ರತಿ ತಿಂಗಳು ಆಯ್ಕೆಯಾದ ಜಿಲ್ಲೆಯ ವಿವಿಧ ಮನೆಗಳಲ್ಲಿ ಕನ್ನಡ ಯುವ ಬಳಗದ ಕಲಾವಿದರು ತಾಳಮದ್ದಳೆಯನ್ನು ನಡೆಸುವರು. ಜತೆಗೆ ಕನ್ನಡ ಜಾಗೃತಿಯೂ ನಡೆಯಲಿದೆ.  ಸೂರಂಬೈಲು ಸಮೀಪದ ನೂಚನಗುಳಿ, ಮುಳಿಯಾರು ಸಮೀಪದ  ಬಳ್ಳಮೂಲೆ, ಕೂಡ್ಲು ಸಮೀಪದ ಪಾರೆಕಟ್ಟೆ, ಮುಳ್ಳೇರಿಯಾದ ಭಾಗ್ಯಶ್ರೀ ನಿಲಯ, ಅನಂತಪುರದ ಶ್ರೀಕೃಪಾ ನಿವಾಸ, ವಾಣಿನಗರದ ಪಡ್ರೆ, ಎಡನೀರಿನ ಬನದಡಿ, ಉಪ್ಪಳದ ಅಗರ್ತಿಮೂಲೆ, ಅಮೈ ಕೃಷ್ಣನಗರ, ಎಡನೀರಿನ ನರಿಕಡಪ್ಪು, ಕಾಸರಗೋಡಿನ ಕೋಟೆಕಣಿ, ಪಾಣಾಜೆಯ ಕೆದಂಬಾಡಿ ಹಾಗೂ ಯಕ್ಷ ಬೊಂಬೆಮನೆ ಪಿಲಿಕುಂಜೆ ಈ ಮುಂತಾದ ಕಡೆ ಕ್ರಮವಾಗಿ ಸರಣಿ ಕಾರ್ಯಕ್ರಮ ನಡೆಯಲಿದೆ. ಸರಣಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕನ್ನಡ ಯುವಬಳಗವು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ