ತಲಪಾಡಿ ಕಾಸರಗೋಡು ಹೆದ್ದಾರಿ: ಮತ್ತೆ ಹೊಂಡ

Team Udayavani, Nov 3, 2019, 3:47 AM IST

ಕುಂಬಳೆ: ತಲಪಾಡಿ ಕಾಸರಗೋಡು ಹೆದ್ದಾರಿ ಮತ್ತೆ ಹೊಂಡಗುಂಡಿಗಳಿಂದ ತುಂಬಿದೆ. ಪ್ರತಿವರ್ಷದಂತೆ ಮುಂಗಾರಿನಿಂದ ಹಿಂಗಾರು ಮಳೆಯ ತನಕ ರಸ್ತೆಪೂರ್ತಿ ಹೊಂಡ ಸೃಷ್ಟಿಯಾಗಿ ರಸ್ತೆಯಲ್ಲಿ ವಾಹನಗಳು ಜೋಕಾಲಿಯಂತೆ ಸಂಚರಿಸಬೇಕಾಯಿತು.

ಬಳಿಕ ಮಳೆ ಅಲ್ಪ ವಿರಳವಾದ ರಸ್ತೆಗೆ ಒಂದಿಷ್ಟು ಪ್ಯಾಚ್‌ ವರ್ಕ್‌ ಮೂಲಕ ತೇಪೆ ಹಚ್ಚಲಾಯಿತು.ದೊಡ್ಡ ಹೊಂಡಗಳಿಗೆ ಅಲ್ಪ ಡಾಮರು ಸುರಿದು ಇದರ ಮೇಲೆ ಜಲ್ಲಿ ಹಾಕಿ ರೋಲರ್‌ ಚಲಿಸಿ ಹೊಂಡ ಮುಚ್ಚಲಾಯಿತು. ಇದು ಮತ್ತೆ ಮಳೆ ಸುರಿದಾಗ ಎದ್ದು ಹಿಂದಿನಂತೆ ಹೊಂಡವಾಗಿ ಪರಿಣಮಿಸಿದೆ. ಲಕ್ಷಗಟ್ಟಲೆ ವ್ಯಯಿಸಿದ ರಸ್ತೆ ದುರಸ್ತಿ ಕಾಮಗಾರಿ ವ್ಯರ್ಥವಾಗಿದೆ. ಹೊಂಡಗಳ ಪ್ಯಾಚ್‌ ವರ್ಕಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಯಿಂದ ಸುಮಾರು 14 ಲಕ್ಷ ವೆಚ್ಚವಾಗಿದೆಯಂತೆ. ಆದರೆ ಇಷ್ಟೊಂದು ಮೊತ್ತದ ಕಾಮಗಾರಿ ನಡೆದಿಲ್ಲವೆಂಬ ಆರೋಪ ಸಾರ್ವಜನಿಕರದು.ಇದೀಗ ಕಾಸರಗೋಡಿನಿಂದ ಕುಂಬಳೆ ತನಕ ಬಳಿಕ ಕುಂಬಳೆ ಆರಿಕ್ಕಾಡಿ ಮೊಗ್ರಾಲ್‌,ಉಪ್ಪಳದಿಂದ ಮಂಜೇಶ್ವರ ತಲಪ್ಪಾಡಿ ತನಕ ರಸ್ತೆಯಲ್ಲಿ ಭಾರೀ ಹೊಂಡಗಳು ಸೃಷ್ಟಿಯಾಗಿದೆ.ಕೊಪ್ಪರ ಬಜಾರ್‌ ಎಂಬಲ್ಲಿ ದೊಡ್ಡ ಹೊಂಡದಿಂದ ರಸ್ತೆ ಅಪಘಾತವಾಗದಂತೆ ವಾಹನಗಳಿಗೆ ಎಚ್ಚರಿಕೆಗಾಗಿ ಸ್ಥಳೀಯರು ಬಾಳೆ ಇನ್ನಿತರ ಸಸಿಗಳನ್ನು ನೆಟ್ಟಿರುವರು.

ರಸ್ತೆ ಹೊಂಡಗಳಿಂದ ವಾಹನಗಳಿಗೆ ರಸ್ತೆಯಲ್ಲಿ ಸುಗಮವಾಗಿ ಸಂಚರಿಸಲು ತೊಡಕಾಗಿದೆ.ಇದರಿಂದ ರಸ್ತೆಯಲ್ಲಿ ಗಂಟೆಗಟ್ಟಲೆ ವಾಹನಗಳ ಸಾಲು ಉದ್ದಕ್ಕೆ ಬೆಳೆಯುವುದು.ಖಾಸಗೀ ಬಸ್‌ಗಳಿಗೆ ಸಮಯ ಪಾಲಿಸಲಾಗದೆ ಅರ್ಧದಿಂದ ಸಂಚಾರ ಮೊಟಕುಗೊಳಿಸಬೇಕಾಗಿದೆ. ಪ್ರಯಾಣಿಕರಿಂದ ಬೈಗಳನ್ನು ಕೇಳಬೇಕಾಗಿದೆ.ಇಂದನ ಹೆಚ್ಚು ವ್ಯಯವಾಗುವುದಲ್ಲದೆ ವಾಹನಗಳ ಬಿಡಿಭಾಗ ಕೆಟ್ಟು ಹೋಗುವುದು.

ಹೆದ್ದಾರಿ ರಿಪೇರಿಗೆ 204 ಕೋಟಿ ನಿಧಿ : ಹೆದ್ದಾರಿ ದುರಸ್ತಿಗೆ ಕೇಂದ್ರ ಸರಕಾರ 204 ಕೋಟಿ ನಿಧಿ ಮಂಜೂರುಗೊಂಡಿರುವು ದಾಗಿ ಕೇರಳ ರಾಜ್ಯ ಸರಕಾರದ ಲೋಕೋ ಪಯೋಗಿ ಇಲಾಖೆಯ ಸಚಿವ ಜಿ. ಸುಧಾಕರನ್‌ ಹೇಳಿದ್ದಾರೆ.ಕಾಮಗಾರಿಗೆ ಮಳೆ ಅಡ್ಡಿಯಾಗಿದ್ದು ಮಳೆ ದೂರವಾದ ಬಳಿಕ ಕಾಮಗಾರಿ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ. ಆದರೆ ಇಷ್ಟೊಂದು ನಿಧಿಯಲ್ಲಿ ರಸ್ತೆಗೆ ಎಷ್ಟು ನಿಧಿ ವಿನಿಯೋಗವಾಗಲಿದೆ? ಯಾರ್ಯಾರ ಜೇಬಿಗೆ ಎಷ್ಟು ಸೇರಲಿದೆ ಎಂಬುದಾಗಿ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

ಚತುಷ್ಪಥ ರಸ್ತೆ ವಿಳಂಬ
ಕರ್ನಾಟಕ ಗಡಿಭಾಗವಾದ ತಲಪ್ಪಾಡಿ ತನಕ ಚತುಷ್ಪಥ ರಸ್ತೆ 60 ಮೀಟರ್‌ ಅಗಲದಲ್ಲಿ ಪೂರ್ಣಗೊಂಡಿದೆ.ಆದರೆ ಬಳಿಕ ಕೇರಳದಲ್ಲಿ 40 ಮೀಟರ್‌ ಅಗಲದ ಚತುಷ್ಪಥ ರಸ್ತೆಗೆ ಇನ್ನೂ ಕಾಲಕೂಡಿ ಬಂದಿಲ್ಲ. ರಾಜ್ಯವನ್ನಾಳುವ ಎಡಬಲ ಉಭಯ ರಂಗಗಳ ಆಡಳಿತೆಯ ಸರಕಾರದ ನಿಧಾನವೇ ಪ್ರಧಾನ ನಿಲುವು ಯೋಜನೆಗೆ ತಡೆಯಾಗಿದೆ.ರಾಜ್ಯ ಸರಕಾರ ಸ್ಥಳ ಸ್ವಾಧೀನ ಪಡಿಸಿ ಕೊಡದ ಕಾರಣ ಪ್ರಥಮ ಹಂತದ ಟೆಂಡರ್‌ ರದ್ದಾಗಿದೆ.ಸಂತ್ರಸ್ತರಿಗೆ ಸ್ಥಳಕ್ಕೆ ನಿಗದಿ ಪಡಿಸಿದ ದುಪ್ಪಟ್ಟು ,ತ್ರಿಪ್ಪಟ್ಟು ಪರಿಹಾರ ಧನ ಮಂಜೂರುಗೊಳಿಸಿದರೂ ಆಮೆ ನಡಿಗೆಯಲ್ಲಿ ಸ್ಥಳ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.ಆದುದರಿಂದ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನಷ್ಟು ವಿಳಂಬವಾಗಲಿದೆ.

ಎಂದೋ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದಲ್ಲಿ ರಸ್ತೆ ಹೊಂಡದ ಸಮಸ್ಯೆಗೆ ಪರಿಹಾರವಾಗುತ್ತಿತ್ತು.ಆದರೆ ರಾಜ್ಯ ಸರಕಾರ ಈ ಯೋಜನೆ ನಿರ್ವಹಣೆಗೆ ಕೇಂದ್ರ ಸರಕಾರದತ್ತ ಆರೋಪ ಹೊರಿಸುತ್ತಿದೆ.ಆದುದರಿಂದ ಯೋಜನೆ ಇನ್ನಷ್ಟು ವಿಳಂಬವಾಗಲಿದೆ.

ಕ್ರಮ ಕೈಗೊಳ್ಳಲಾಗುವುದು
ಹೆದ್ದಾರಿ ಹೊಂಡಗಳನ್ನು ತಕ್ಷಣ ಮುಚ್ಚಲು ರಾಜ್ಯ ಸರಕಾರದ ಲೊಕೋಪಯೋಗಿ ಇಲಾಖೆಯ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಎ.ಎಂ. ಸಿದ್ಧಿಖ್‌ ರಹ್ಮಾನ್‌, ಅಧ್ಯಕ್ಷರು ಮೊಗ್ರಾಲ್‌  ದೇಶೀಯವೇದಿ ಸಂಘಟನೆ

ತಕ್ಷಣ ದುರಸ್ತಿ
ಹೆದ್ದಾರಿ ಕಾಮಗಾರಿ ದುರವಸ್ಥೆ ಕುರಿತು ಕೇರಳದ ರಾಜ್ಯಪಾಲರಿಗೆ ತಾನು ದೂರು ನೀಡಿದುದಕ್ಕೆ ರಾಜ್ಯಪಾಲರು ಹೆದ್ದಾರಿ ದುರಸ್ತಿ ಕಾಮಗಾರಿ ತಕ್ಷಣ ನಡೆಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ ಆದೇಶ ನೀಡಿರುವ ಲಿಖೀತ ಉತ್ತರವನ್ನು ತನಗೆ ಕಳುಹಿಸಿರುವರು.
– ಶ್ರೀನಂದ ಕುಮಾರ್‌, ಸಾಮಾಜಿಕ ಕಾರ್ಯಕರ್ತ ಹೊಸಂಗಡಿ

-  ಅಚ್ಯುತ ಚೇವಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ