ಖಾಯಂ ವೈದ್ಯರಿಲ್ಲ ,ಆರೋಗ್ಯ ಸೇವೆಯಿಂದ ವಂಚಿತರಾದ ಎಂಡೋ ಪೀಡಿತರು 

Team Udayavani, Jul 27, 2018, 6:40 AM IST

ಬದಿಯಡ್ಕ: ಎಂಡೋಸಲ್ಫಾನ್‌ ಪೀಡಿತರ ತವರೂರು ಎಣ್ಮಕಜೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಸಹಿತ ಮಳೆಗಾಲದ ರೋಗಗಳಿಂದ ನರಳುತ್ತಿರುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.ಐವತ್ತಕ್ಕಿಂತಲೂ ಹೆಚ್ಚು ಎಂಡೋ ಪೀಡಿತರಿರುವ ಈ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ ಯಾದರೂ ವೈದ್ಯರ ಅನುಪಸ್ಥಿತಿಯಿಂದಾಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ.

ದಶಕಗಳ ಹಿಂದೆ ದಿನ‌ಕ್ಕೆ  50ರಿಂದ 60ರಷ್ಟು ಹೊರ ರೋಗಿಗಳು ಇಲ್ಲಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಪರಿಸ್ಥಿತಿ ಹದಗೆಟ್ಟಿದೆ.

ಕೋಯಿಕ್ಕೋಡ್‌ ಮೂಲದ ವೈದ್ಯರು ವಾರದಲ್ಲಿ ಒಂದೆರಡು ಬಾರಿ ಮಾತ್ರವೇ  ಇಲ್ಲಿ ಲಭ್ಯರಿರುತ್ತಾರೆ. ಇಲ್ಲಿಗೆ ಬರುವ ರೋಗಿಗಳು ವೈದ್ಯರಿಲ್ಲದ ಕಾರಣ ಹಲವು ಬಾರಿ ಇತರ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡ ಉದಾಹರಣೆಗಳಿವೆ.  

ಈಗ ಬೆರಳೆಣಿಕೆ ರೋಗಿಗಳು!
ಮೂರು ತಿಂಗಳುಗಳಿಂದ ಐದಾರು ರೋಗಿಗಳು ಮಾತ್ರವೇ ಇಲ್ಲಿಂದ ಚಿಕಿತ್ಸೆ ಪಡೆದಿರುತ್ತಾರೆ. ಆದರೆ ಸರಕಾರದ ಕಣ್ಣಿಗೆ ಮಣ್ಣೆರಚುವ ಕೆಲಸ ಇಲ್ಲಿ ನಡೆಯುತ್ತಿದ್ದು,ದಾಖಲೆಯಲ್ಲಿ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸಿ,ಕೆಲವು ಸಿಬಂದಿ ಹಾಜರಾತಿಯಲ್ಲೂ ತಿದ್ದುಪಡಿ ಮಾಡುತ್ತಿರುವುದು ಕಂಡುಬರುತ್ತದೆ. 

ಈ ಬಗ್ಗೆ  ಇತರ ಸಿಬಂದಿ ಪ್ರಶ್ನಿಸಿದಾಗ ಮೇಲಧಿಕಾರಿಗಳಿಗೆ ಹುಸಿದೂರು ನೀಡಿ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ದೂರು ಕೇಳಿಬರುತ್ತಿದೆ.

ನೇಮಕಾತಿ ಆಗಿಲ್ಲ 
ವಾಣಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಪ ಶಸ್ತ್ರ ಚಿಕಿತ್ಸಕ ದರ್ಜೆಯ ವೈದ್ಯಾಧಿಕಾರಿ, ದ್ವಿತೀಯ ಶ್ರೇಣಿಯ ದಾದಿ ಹಾಗೂ ಫಾರ್ಮಸಿಸ್ಟ್‌, ಗುಮಾಸ್ತ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಆದ್ದರಿಂದ ಕುಂಬಾxಜೆ  ಕೇಂದ್ರದ ದಾದಿ ಹಾಗೂ ಬೆಳ್ಳೂರು ಕೇಂದ್ರದ ಗುಮಾಸ್ತ ವಾರದ ಕೆಲವು ದಿನ ಹೆಚ್ಚುವರಿಯಾಗಿ ಇಲ್ಲಿ ಕೆಲಸ ಮಾಡುತ್ತಾರೆ.

ಜೀವ ಕಳಕೊಂಡ ಮಹಿಳೆ 
ಕಳೆದ ವಾರ ಇಲಿ ಜ್ವರ ಬಾಧಿತರೆಂದು ಸಂಶಯಿಸಲಾದ ಶಾಂಭವತಿ ರೈ ಅವರು ಮೆದುಳು ಹಾಗೂ ಕರುಳು ರೋಗದಿಂದ ಮರಣ ಹೊಂದಿದ್ದರು. ಹಲವು ಬಾರಿ ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯರಿಲ್ಲದ ಕಾರಣ ಚಿಕಿತ್ಸೆ ಪಡೆಯದೆ ಹಿಂದಿರುಗಿದ್ದರು. ರೋಗ ಉಲ್ಬಣಿಸಿ ಪುತ್ತೂರು, ಮಂಗಳೂರಿನ  ಆಸ್ಪತ್ರೆಗೆ ದಾಖಲಿಸುವಂತಾಗಿತ್ತು. ಈಗ ಅವರ ಮಗನೂ ಜ್ವರದಿಂದ ಬಳಲುತ್ತಿದ್ದು ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೋರಿ ಎಣ್ಮಕಜೆ ಗ್ರಾ.ಪಂ.ಅದ್ಯಕ್ಷರು,ಜನಪ್ರತಿನಿಧಿಗಳು, ಶಾಲಾ ಪ್ರಾಂಶುಪಾಲರು ಹಾಗೂ ಊರವರು ಸೇರಿ ಸಾಮೂಹಿಕ ದೂರು ಸಲ್ಲಿಸಿರುತ್ತಾರೆ. ಆದರೆ ಪ್ರಯೋಜನವೇನೂ ದೊರೆತಿಲ್ಲ. ಹಿಂದಿನ ಸಮಸ್ಯೆಗಳು ಯಥಾ ಸ್ಥಿತಿಯಲ್ಲಿದ್ದು, ಅವುಗಳ ಸಾಲಿಗೆ ಮತ್ತೆ ಕೆಲವು ಸೇರುತ್ತಿವೆ.
 
ವಸತಿಗೃಹವೂ ಖಾಲಿ 
ಕೈ ತುಂಬಾ ಸಂಬಳ, ಉಚಿತ ವಸತಿಗೃಹದ ವ್ಯವಸ್ಥೆಗಳಿದ್ದರೂ ಅದನ್ನು ಉಪಯೋಗಿಸದೆ ಪ್ರತಿನಿತ್ಯ ದೂರದ ಊರಿಗೆ ತೆರಳುವ ಅಧಿಕಾರಿಗಳಿಂದಾಗಿ ವಸತಿ ಗೃಹವೂ ಖಾಲಿ ಬಿದ್ದಿದೆ. 

ಹೊರ ಜಿಲ್ಲೆಗಳಿಂದ ಸಿಬಂದಿ ನೇಮಿಸುವುದೇ ಎಲ್ಲ ಸಮಸ್ಯೆಗಳಿಗೂ ಪ್ರಧಾನ ಕಾರಣ.ದಿನದಿಂದ ದಿನಕ್ಕೆ ದೂರುಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಥಳೀಯರ ಸಹಿ ಸಂಗ್ರಹಿಸಿ ಸಂಬಂಧ ಪಟ್ಟ ಇಲಾಖೆಗೆ ದೂರು ಸಲ್ಲಿಸಲಾಗಿದೆ. 
– ರೂಪವಾಣಿ ಆರ್‌.ಭಟ್‌, ಎಣ್ಮಕಜೆ ಗ್ರಾ. ಪಂ. ಅಧ್ಯಕ್ಷರು 

ಜ್ವರ ಬಾಧಿಸಿದ ಮಗಳನ್ನು ಆರೋಗ್ಯ ಕೇಂದ್ರಕ್ಕೆ ಪರಿಶೀಲನೆಗೆ ಕೊಂಡೊಯ್ದಾಗ ಅಲ್ಲಿ ವೈದಾಧಿಕಾರಿ ಇರಲಿಲ್ಲ. ಸಿಬಂದಿ ಔಷಧ ನೀಡಿದರಾದರೂ ಟೋಕನ್‌ನಲ್ಲಿ ರುಜು ದಾಖಲಿಸಲಾಗಲಿಲ್ಲ. ಆದರೆ ಕೆಲವು ದಿನಗಳ ಬಳಿಕ ಆರೋಗ್ಯ ಕೇಂದ್ರದ ಹೊರರೋಗಿ ದಾಖಲಾತಿ ಪಟ್ಟಿಯಲ್ಲಿ ವೈದ್ಯರು ಪರಿಶೀಲಿಸಿರುವುದಾಗಿ ರುಜು ದಾಖಲಿಸಲಾಗಿದೆ.
– ನರಸಿಂಹ ಎಸ್‌.ಬಿ.ವಾಣಿನಗರ ಮಾಜಿ ಪಂ.ಸದಸ್ಯರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ