‘ಪೂಕಳಂ’ ರಚನೆಗೆ ವಿವಿಧ ಹೂಗಳ ರಾಶಿ ರಾಶಿ

Team Udayavani, Sep 11, 2019, 5:28 AM IST

ಕಾಸರಗೋಡು : ಕೇರಳೀಯರು ನಾಡಹಬ್ಬವಾಗಿಯೂ, ರಾಷ್ಟ್ರೀಯ ಹಬ್ಬವಾ ಗಿಯೂ ಆಚರಿಸುವ ಓಣಂ ದಿನಗಳೆಂದರೆ ಸಡಗರ, ಸಂಭ್ರಮದ ಕ್ಷಣಗಳು. ಸುಖ, ಶಾಂತಿ, ನೆಮ್ಮದಿ ಮತ್ತು ಭಾವೈಕ್ಯ, ಸಾಮರಸ್ಯದ ಸಂದೇಶವನ್ನು ಸಾರುವ ಓಣಂ ಹಬ್ಬ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದೆ. ಓಣಂ ಹಬ್ಬದಂಗವಾಗಿ ವಿಶೇಷವಾಗಿ ವೈವಿಧ್ಯಮಯವಾಗಿ ರೂಪು ಪಡೆಯುವ ಹೂವಿನ ರಂಗೋಲಿ ‘ಪೂಕಳಂ’ ರಚಿಸಿ ‘ಮಾವೇಲಿ’ಯನ್ನು ಬರಮಾಡಿಕೊಳ್ಳುತ್ತಾರೆ. ಮನೆ, ಮಠ, ದೇವಸ್ಥಾನ, ದೈವಸ್ಥಾನ, ತರವಾಡು ಮನೆಗಳಲ್ಲಿ ಪೂಕಳಂ ರಚಿಸಿ ಸಂಭ್ರಮಿಸುತ್ತಾರೆ.

ಪ್ರಜೆಗಳ ಸಂಕಷ್ಟ ನಿವಾರಿಸಲು ಮಾವೇಲಿ ರಾಜ (ಮಹಾಬಲಿ ಚಕ್ರವರ್ತಿ) ವರ್ಷ ಕ್ಕೊಮ್ಮೆ ಭೂಮಿಗೆ ಬರುತ್ತಾನೆ ಎಂಬುದು ಕೇರಳೀಯರ ನಂಬಿಕೆ. ಈ ನಂಬಿಕೆಯ ಹಿನ್ನೆಲೆಯಲ್ಲಿ ಆಚರಿಸುವ ಓಣಂ ಹಬ್ಬದ ದಿನಗಳಲ್ಲಿ ಮಾವೇಲಿಯನ್ನು ಸ್ವಾಗತಿಸಲು ಹೂಗಳ ರಂಗೋಲಿ ‘ಪೂಕಳಂ’ ಚಿತ್ತಾರ ರಂಗೇರುತ್ತದೆ. ವಿವಿಧ ಗಾತ್ರ ಮತ್ತು ಆಕೃತಿ ಗಳಲ್ಲಿ ರಚಿಸಲು ಪೂಕಳಂ ಕಳತುಂಬಲು ಕರ್ನಾಟಕದ ಹೂ ಬೇಕೇ ಬೇಕು.

ಕೇರಳೀಯರಿಗೆ ಓಣಂ ಬಂತೆಂದರೆ ಕರ್ನಾಟಕದ ಹೂ ಬೆಳೆಗಾರರಿಗೆ, ವ್ಯಾಪಾರಿ ಗಳಿಗೆ ಸಂತಸ. ಇಲ್ಲಿ ರಚಿಸುವ ಪೂಕಳಂ ಚಿತ್ತಾರದ ಕಳಗಳನ್ನು ತುಂಬಲು ಹೂಗಳ ಅಗತ್ಯವಿದೆ. ಕೇರಳದಲ್ಲಿ ಹೂ ಬೆಳೆಯುವುದು ಕಡಿಮೆ. ಈ ಹಿನ್ನೆಲೆಯಲ್ಲಿ ರಾಶಿ ರಾಶಿ ಹೂ ಅಗತ್ಯವಾಗಿದ್ದು ಕೇರಳೀಯರ ಬೇಡಿಕೆ ಗಳನ್ನು ಕರ್ನಾಟಕ ಈಡೇರಿಸುತ್ತದೆ. ಕೋಟ್ಯಂತರ ರೂಪಾಯಿಯ ಹೂ ಕೇರಳಕ್ಕೆ ಬಂದಿವೆ. ತಮಿಳುನಾಡಿನಿಂದಲೂ ಹೂಗಳು ಬರುತ್ತಿವೆ. ಇಲ್ಲಿನ ಪ್ರಧಾನ ಆಕರ್ಷಣೆ ಹೂವಿನ ರಂಗೋಲಿ ಪೂಕಳಂ. ಇದಕ್ಕಾಗಿ ಮಕ್ಕಳು ಓಣಂ ಪಾಟನ್ನು (ಹಾಡು) ಹಾಡುತ್ತಾ ಹೂಗಳನ್ನು ಕೊಯ್ದು ತರುತ್ತಾರೆ. ಬಳಿಕ ಮನೆಯ ಮುಂಭಾಗದಲ್ಲಿ ಪೂಕಳಂ ರಚಿಸಲಾಗುತ್ತದೆ. ಇದರಲ್ಲೂ ಎರಡು ರೀತಿ ಇದೆ. ಒಂದು ಸಾಧಾರಣ ಪೂಕಳಂ. ಇನ್ನೊಂದು ವಾಮನನ ಪ್ರತಿರೂಪವಾದ ತ್ರಿಕ್ಕಾಕ್ಕರೆಯಪ್ಪನನ್ನು ಹೂ ರಂಗೋಲಿಯ ಮಧ್ಯದಲ್ಲಿ ಸ್ಥಾಪಿಸಲಾಗುತ್ತದೆ.

ಲಕ್ಷಾಂತರ ರೂ. ಹೂಗಳು

ಕಾಸರಗೋಡು ಜಿಲ್ಲೆಗೆ ಕರ್ನಾಟಕದಿಂದ ಲಕ್ಷಾಂತರ ರೂ. ಮೌಲ್ಯದ ಹೂಗಳು ಬಂದಿವೆ. ಜಿಲ್ಲೆಯ ಹೊಸಂಗಡಿ, ಮಂಜೇಶ್ವರ, ಕುಂಬಳೆ, ಉಪ್ಪಳ, ಕಾಸರ ಗೋಡು, ಕಾಂಞಂಗಾಡ್‌, ಉದುಮ, ಪಾಲಕುನ್ನು, ಬದಿಯಡ್ಕ, ಮುಳ್ಳೇರಿಯ, ಪೆರ್ಲ ಮೊದಲಾದೆಡೆಗಳಿಗೆ ಹಾಸನ, ಮೈಸೂರು, ಚಿಕ್ಕಮಗಳೂರು ಮೊದಲಾ ದೆಡೆಗಳಿಂದ ಹೂವಿನ ರಾಶಿಯೇ ಬಂದಿವೆೆ. ಕಾಸರಗೋಡು ಜಿಲ್ಲೆಗೆ ಹಲವು ವರ್ಷಗಳಿಂದ ತಂಡತಂಡವಾಗಿ ಬರುತ್ತಿರುವ ಹೂ ವ್ಯಾಪಾರಿಗಳು ಕೆಲವೊಮ್ಮೆ ಕೈ ಸುಟ್ಟು ಕೊಳ್ಳುವುದೂ ಇದೆ. ಈ ವರ್ಷ ತೊಂದರೆ ಇಲ್ಲ ಎಂಬುದಾಗಿ ಹೂ ಮಾರಾಟಗಾರರಾದ ರಂಗಸ್ವಾಮಿ ‘ಉದಯವಾಣಿ’ಗೆ ತಿಳಿಸಿ ದ್ದಾರೆ. ಹಾಸನದಿಂದ ತಿಮ್ಮಯ್ಯ, ಕಿಟ್ಟಿ ಮೊದಲಾದವರನ್ನೊಳಗೊಂಡ ತಂಡ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಹೂವಿನ ರಾಶಿ ಹಾಕಿದ್ದು, ಈ ಬಾರಿ ಮಳೆ ಇಲ್ಲದಿರುವು ದರಿದ ವ್ಯಾಪಾರ ಪರವಾಗಿಲ್ಲ ಎನ್ನುತ್ತಾರೆ. ಈ ತಂಡವೇ ಸುಮಾರು 30 ಲಕ್ಷ ರೂ. ಮೌಲ್ಯದ ಹೂಗಳನ್ನು ಹಾಸನದಿಂದ ತಂದಿದೆೆ.

ಒಂದು ಮೊಳ ಹೂವಿಗೆ 10 ರಿಂದ 30 ರೂ. ತನಕ ವಸೂಲಿ ಮಾಡಲಾಗುತ್ತಿದೆ. ಸಂಜೆಯಾಗುತ್ತಿದ್ದಂತೆ ಹೂವಿನ ಧಾರಣೆ ಕುಸಿಯುತ್ತದೆ. ಈ ತಂಡ ಕಳೆದ ಹದಿನಾಲ್ಕು ವರ್ಷಗಳಿಂದ ಕಾಸರಗೋಡಿನಲ್ಲಿ ಹೂ ವ್ಯಾಪಾರ ಮಾಡುತ್ತಿದ್ದಾರೆ. ಟೆಂಪೋ ವೊಂದರಲ್ಲಿ ಹೂ ತುಂಬಿ ಇಲ್ಲಿಗೆ ತರಲಾಗಿದೆ. ಇನ್ನೂ ಕೆಲವರು ಬಸ್‌ಗಳಲ್ಲೂ ಹೂವಿನ ರಾಶಿ ತಂದು ಹೊಸ ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ ಹೀಗೆ ಸಿಕ್ಕ ಸ್ಥಳಗಳಲ್ಲಿ ಹೂವಿನ ರಾಶಿ ಹರಡಿ ಗ್ರಾಹಕರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಕೆಲವು ತಂಡಗಳು ಕಳೆದ 25 ವರ್ಷಗಳಿಂದ ಹೂಗಳ ರಾಶಿಯೇ ತಂದು ವ್ಯಾಪಾರ ಮಾಡುತ್ತಿದ್ದಾರೆ. ವಿವಿಧ ಬಣ್ಣಗಳ ಗೊಂಡೆ, ಜೀನಿಯಾ, ಸೇವಂತಿಗೆ, ವಾಡಾರ್‌ಮಲ್ಲಿ, ಕಾಕಡ, ಕೋಳಿ ಜುಟ್ಟು, ಗುಲಾಬಿ ಮೊದಲಾದ ಹೂಗಳನ್ನು ಮಾರಾಟ ಮಾಡಲಾಗುತ್ತಿದೆ.

ಸಾಂಪ್ರದಾಯಿಕವಾಗಿ ರಚಿಸುತ್ತಿದ್ದ ಪೂಕಳಂ ರಚನೆಯಲ್ಲೂ ವೈವಿಧಯ ಬಂದಿದೆ. ಮನೆ ಪರಿಸರದಲ್ಲಿ ಬೆಳೆಯುವ ಹೂಗಳಿಗೆ ಬದಲಾಗಿ ಸೇವಂತಿಗೆ, ಮಲ್ಲಿಗೆ, ಗುಲಾಬಿ, ಜೀನಿಯಾ ಮೊದಲಾದ ಹೂ ಗಳು ಪೂಕಳಂನಲ್ಲಿ ಸ್ಥಾನ ಪಡೆದಿವೆೆ. ಕಾಲ ಬದಲಾದಂತೆ ಪೂಕಳಂನಲ್ಲಿ ಬದಲಾಗಿದೆ. ಹಾಗಾಗಿ ಕರ್ನಾಟಕದ ಹೂಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಪೂಕಳಂ ವೈವಿಧ್ಯತೆ

ವಿವಿಧ ಬಣ್ಣಗಳ, ವೈವಿಧ್ಯಮಯವಾದ ಹೂಗಳ ಪಕಳೆಗಳಿಂದ ಹೂವಿನ ರಂಗೋಲಿ ‘ಪೂಕಳಂ’ ಅತ್ಯಾಕರ್ಷಕವಾಗಿ ರೂಪುಗೊಳ್ಳುತ್ತದೆ. ಆರಂಭದಲ್ಲಿ ಆಕೃತಿಯನ್ನು ರಚಿಸಿ, ಆ ಬಳಿಕ ಕಳಗಳಲ್ಲಿ ಒಂದ ಕ್ಕೊಂದು ಪೂರಕವಾಗುವ ವಿವಿಧ ಬಣ್ಣಗಳ ಹೂಗಳ ಪಕಳೆಗಳನ್ನು ತುಂಬಲಾಗುತ್ತದೆ. ವಿವಿಧ ಆಕೃತಿ, ಗಾತ್ರಗಳ‌ಲ್ಲಿ ಕಂಗೊಳಿಸುವ ಪೂಕಳಂ ಇಂದು ವಾಣಿಜ್ಯ ರೂಪವನ್ನು ಪಡೆದುಕೊಂಡಿದೆ. ಅಲ್ಲಲ್ಲಿ ನಡೆಯುವ ಪೂಕಳಂ ಸ್ಪರ್ಧೆಗಳಿಗೆ ಕಲಾವಿದರನ್ನು ಆಯ್ಕೆ ಮಾಡಿಕೊಂಡು ಅವರಿಂದ ಪೂಕಳಂ ರಚಿಸಿ ಬಹುಮಾನಗಳನ್ನು ಪಡೆಯುವಷ್ಟರ ಮಟ್ಟಿಗೆ ಮುಂದುವರಿದಿದೆ. ಇಂದು ಪೂಕಳಂ ರಚನೆ ಪ್ರತಿಷ್ಠೆ ಎಂಬಂತಾಗಿದೆ. ಎಲ್ಲ ಮನೆಗಳಲ್ಲಿ ಪೂಕಳಂ ರಚಿಸುತ್ತಾರೆ. ಪರಿಸರದ ಸಂಘಸಂಸ್ಥೆಗಳು ಪೂಕಳಂ ರಚಿಸಿದ ಮನೆಗಳಿಗೆ ತೆರಳಿ ಅಂಕಗಳನ್ನು ನೀಡುತ್ತಾರೆ. ಅತೀ ಹೆಚ್ಚಿನ ಅಂಕಗಳನ್ನು ಪಡೆಯುವ ಪೂಕಳಂ ಬಹುಮಾನಕ್ಕೆ ಅರ್ಹತೆ ಪಡೆಯುತ್ತದೆ. ಸ್ಪರ್ಧೆ ನಡೆ ಯುವುದ ರಿಂದಾಗಿ ಎಲ್ಲೆಡೆ ಪೂಕಳಂ ರಚಿಸ ಲಾಗುತ್ತದೆ. ಆರ್ಥಿಕ ಪರಿಸ್ಥಿತಿಯ ಮೇಲೆ ಹೂಗಳ ಖರೀದಿಯಾಗುತ್ತದೆ. ಸ್ಪರ್ಧೆಗಾಗಿ ರಚಿಸುವ ಪೂಕಳಂಗೆ ಸಾವಿರಾರು ರೂ.ಹೂ ಖರೀದಿಸುವುದಿದೆ. ಒಟ್ಟಾರೆ ಹೂವಿನ ಹಬ್ಬವೆಂದೇ ಗುರುತಿಸಿಕೊಂಡಿರುವ ಓಣಂ ಎಂದರೆ ಕೇರಳಾದ್ಯಂತ ಸಂಭ್ರಮ ಸಡಗರ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ