ಮತ್ತಷ್ಟು ವ್ಯಾಪಿಸುತ್ತಿದೆ ಪಚ್ಚನಾಡಿ ತ್ಯಾಜ್ಯ ರಾಶಿ

ಮನೆ ಖಾಲಿ ಮಾಡಿದ ಮಂದಾರ ಜನತೆ

Team Udayavani, Aug 14, 2019, 5:00 AM IST

ಮಹಾನಗರ: ಪಚ್ಚನಾಡಿಯ ತ್ಯಾಜ್ಯ ರಾಶಿ ಜಾರಿಕೊಂಡು ಕುಡುಪು ಸಮೀಪದ ಮಂದಾರ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿ ಮನೆ- ಮರ ಗಳನ್ನು ಆಹುತಿ ತೆಗೆದುಕೊಳ್ಳುತ್ತಿರುವ ಸನ್ನಿವೇಶ ಇನ್ನೂ ನಿಲ್ಲುವ ಹಂತದಲ್ಲಿಲ್ಲ.

ನೂರಾರು ಎಕ್ರೆ ಅಡಿಕೆ ತೋಟವನ್ನು ಮತ್ತು ಮೂರು ಮನೆಗಳನ್ನು ಕೆಡವಿ ಮುನ್ನು ಗ್ಗಿದ್ದ ತ್ಯಾಜ್ಯರಾಶಿ ಮಂಗಳ ವಾರವೂ ಮತ್ತೆ ಸುಮಾರು 15 ಮೀಟರ್‌ನಷ್ಟು ಮುಂದೆ ಬಂದಿದೆ. ಈ ಮೂಲಕ ಒಂದು ವಾರದಿಂದ ಮಂದಾರವೆಂಬ ಊರು ತ್ಯಾಜ್ಯದೊಳಗೆ ಬಂಧಿಯಾಗುತ್ತಲೇ ಇದೆ.

ಅಪಾಯದಲ್ಲಿರುವ ಮನೆ ಮಂದಿ ಈಗ ತ್ಯಾಜ್ಯ ರಾಶಿಯ ರೌದ್ರಾವತಾರಕ್ಕೆ ಬೆದರಿ ಮನೆ ಖಾಲಿ ಮಾಡಿದ್ದು, ಯಾವಾಗ ತಮ್ಮ ಮನೆ ತ್ಯಾಜ್ಯ ರಾಶಿಯೊಳಗೆ ಬಿದ್ದುಹೋಗುವುದೋ ಎಂಬ ಭಯದಲ್ಲಿದ್ದಾರೆ. ಸಾವಿರಾರು ಅಡಿಕೆ ತೋಟಗಳನ್ನು ಕಳೆದುಕೊಂಡ ಸ್ಥಳೀಯರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಶಾಸಕ ಯು.ಟಿ. ಖಾದರ್‌ ಸಹಿತ ಜನಪ್ರತಿನಿಧಿಗಳು ಮಂಗಳವಾರ ಮಂದಾರ ತ್ಯಾಜ್ಯರಾಶಿಯ ಪರಿಸರಕ್ಕೆ ಭೇಟಿ ನೀಡಿದ್ದಾರೆ. ತ್ಯಾಜ್ಯದ ಭಯಭೀತ ದೃಶ್ಯಗಳನ್ನು ಕಂಡು ಅವರೂ ಹೌಹಾರಿದ್ದಾರೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಡಾ|ವೈ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ಸಹಿತ ಹಲವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ರಾಶಿ ನಡೆಸಿದ ಆಟಾಟೋಪವನ್ನು ಕಂಡು ಮೂಕವಿಸ್ಮಿತರಾಗಿದ್ದಾರೆ.

ತ್ಯಾಜ್ಯದ ರಾಶಿಯು ಸರಿಸುಮಾರು ಎರಡು ಕಿ.ಮೀ. ನಷ್ಟು ಉದ್ದಕ್ಕೆ ಜಾರಿಬಂದ ಕಾರಣದಿಂದ ಮಂದಾರ ವ್ಯಾಪ್ತಿಯ ಮನೆಗಳ ನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದು-ಸುದೀರ್ಘ‌ ವರ್ಷದಿಂದ ನೆಲೆಸಿದ್ದ ಮನೆಯನ್ನೇ ಖಾಲಿ ಮಾಡಿದ್ದಾರೆ. ಮೂರು ಮನೆಗಳು ತ್ಯಾಜ್ಯ ರಾಶಿಯೊಳಗೆ ಮರೆಯಾಗಿದ್ದು, ಸುಮಾರು 5,000ಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ತ್ಯಾಜ್ಯ ರಾಶಿಗೆ ಆಹುತಿಯಾಗಿದೆ. ಒಂದು ವಾರದ ಹಿಂದೆ ತ್ಯಾಜ್ಯ ಜಾರಿ ಶುರುವಾದ ಅನಾಹುತ ಮಾತ್ರ ಇನ್ನೂ ಇಲ್ಲಿ ನಿಲ್ಲುವಂತೆ ಕಾಣುತ್ತಿಲ್ಲ.

ಬಿಕೋ ಎನ್ನುತ್ತಿದೆ ಮನೆಗಳು!
ತ್ಯಾಜ್ಯದ ಅಟ್ಟಹಾಸಕ್ಕೆ ಮನೆಬಿಟ್ಟ ಸುಮಾರು 23 ಮನೆಯವರಿಗೆ ಸದ್ಯ ಕುಲಶೇಖರದ ಬೈತುರ್ಲಿಯ ಗೃಹಮಂಡಳಿಯ ಫ್ಲ್ಯಾಟ್‌ನಲ್ಲಿ ಆಶ್ರಯ ನೀಡಲಾಗಿತ್ತು. ಆದರೂ ಆನಂದ್‌ ಬೆಳ್ಚಾಡ ಸಹಿತ ಒಂದೆರಡು ಮನೆಯವರು ತಾವಿರುವ ಮನೆ ಬಿಟ್ಟು ಎಲ್ಲೂ ಹೋಗಲ್ಲ ಎಂದು ಹಠ ಹಿಡಿದಿದ್ದರು.

ಮಂಗಳವಾರ ಅವರನ್ನು ಸಮಾಧಾನಿಸಿ ಆಶ್ರಯ ಕೇಂದ್ರಗಳಿಗೆ ಕಳುಹಿಸಲಾಗಿದೆ. ಹೀಗಾಗಿ ಸದ್ಯ ಮಂದಾರದಲ್ಲಿ ಮನೆಗೆ ಬೀಗ ಹಾಕಲಾಗಿದ್ದು, ತ್ಯಾಜ್ಯ ರಾಶಿ ಸರಿಯುವ ಶಬ್ಧ ಮಾತ್ರ ಇಲ್ಲಿ ಕೇಳಿಸುತ್ತಿದೆ.

ಮಂದಾರದಲ್ಲಿ ತ್ಯಾಜ್ಯ ವ್ಯಾಪಿಸಿದ ಪರಿಣಾಮ ಮುಖ್ಯ ತೋಡುಗಳಲ್ಲಿ ತ್ಯಾಜ್ಯ ನೀರೇ ಹರಿಯುತ್ತಿರುವುದು ಇನ್ನು ಕಡಿ ಮೆ ಯಾ ಗಿಲ್ಲ. ಇಲ್ಲಿನ ಮಳೆ ನೀರು ಹರಿಯುವ ತೋಡು ಈಗ ಸಂಪೂರ್ಣ ಗಲೀಜಿನಲ್ಲಿ ತುಂಬಿಕೊಂಡಿದೆ.

ಸುತ್ತಲೂ ತ್ಯಾಜ್ಯದ ಜತೆಗೆ ಕಲುಷಿತ ನೀರು
ಇಲ್ಲಿದ್ದ 3-4 ಬಾವಿಗಳು ತ್ಯಾಜ್ಯ ನೀರು ಹರಿದು ಸಂಪೂರ್ಣ ಹಾಳಾ ಗಿ ದೆ. ರವೀಂದ್ರ ಭಟ್‌ ಸಹಿತ ಹಲವರ ಮನೆಯ ಸುತ್ತಲೂ ತ್ಯಾಜ್ಯದ ಜತೆಗೆ ಕಲುಷಿತ ನೀರೇ ಆವರಿಸಿದೆ. ಹೀಗಾಗಿ ವಾಸನೆಯಿಂದ ಊರಿನಲ್ಲಿ ಕಾಲಿಡಲೂ ಆಗುತ್ತಿಲ್ಲ.

ಸಿಎಂ ಗಮನಿಸಲಿ
ಮಳೆಹಾನಿ ಆಗಿರುವಂತಹ ಪ್ರದೇಶಗಳಿಗಿಂತಲೂ ಅಧಿಕ ಮಟ್ಟಿನಲ್ಲಿ ಪ್ರಾಕೃತಿಕ ವಿಕೋಪ ಮಾದರಿಯ ದುರ್ಘ‌ಟನೆ ಮಂದಾರದಲ್ಲಿ ಸಂಭವಿಸಿದೆ. ಇದನ್ನು ಶಾಸಕರು-ಜಿಲ್ಲಾಧಿಕಾರಿ ಏನೂ ಮಾಡಲು ಆಗದು. ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು. ತ್ಯಾಜ್ಯ ರಾಶಿಯನ್ನು ತೆಗೆಯುವ ಸಂಬಂಧ ತತ್‌ಕ್ಷಣವೇ ನಗರಾಭಿವೃದ್ಧಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಮಂಗಳೂರಿಗೆ ಕಳುಹಿಸುವಂತೆ ಮುಖ್ಯಮಂತ್ರಿಗಳ ಸಲಹೆಗಾರರಿಗೆ ತಿಳಿಸಲಾಗಿದೆ. ಜತೆಗೆ, ಬಿಬಿಎಂಪಿಯ ತ್ಯಾಜ್ಯ ನಿರ್ವಹಣೆ ಮಾಡುವ ತಜ್ಞರನ್ನು ಕರೆಸುವಂತೆ ತಿಳಿಸಲಾಗಿದೆ.

– ಯು.ಟಿ. ಖಾದರ್‌,ಶಾಸಕ
ಚಿತ್ರ: ನಿತಿನ್‌ರಾಜ್‌ ಕೋಟ್ಯಾನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ